HomeದಿಟನಾಗರFact Check: ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಡಿವೈ ಚಂದ್ರಚೂಡ್ ನ್ಯಾಯಾಲಯದಿಂದ ಹೊರ...

Fact Check: ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಡಿವೈ ಚಂದ್ರಚೂಡ್ ನ್ಯಾಯಾಲಯದಿಂದ ಹೊರ ನಡೆದ್ರಾ?

- Advertisement -
- Advertisement -

ಚುನಾವಣಾ ಬಾಂಡ್‌ ಪ್ರಕರಣದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದ ಮಂಡಿಸುವಾಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನ್ಯಾಯಾಲಯದಿಂದ ಹೊರ ನಡೆದಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗ್ತಿದೆ.

ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ಅಜೀತ್ ಭಾರ್ತಿ ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋದ ಕೊನೆಯಲ್ಲಿ ಸಾಲಿಸಿಟರ್ ಜನರಲ್ ಮಾತನಾಡುವಾಗ ಸಿಜೆಐ ಚಂದ್ರಚೂಡ್ ಅವರು ಕುರ್ಚಿಯಿಂದ ಎದ್ದಂತೆ ಕಾಣುತ್ತದೆ. “ವಾವ್! ವಕೀಲರು ಮಾತು ಮುಂದುವರೆಸುತ್ತಿರುವಾಗಲೇ ಚಂದ್ರಚೂಡ್ ಅವರು ಏನೂ ಮಾತನಾಡದೆ ಎದ್ದು ಹೋದರು. ಕೌಟುಂಬಿಕ ಪ್ರತಿಭೆ ಮತ್ತು ನ್ಯಾಯಾಂಗದಲ್ಲಿ ಸರಿಯಾದ ಡಿಎನ್‌ಎ ಅನುಕ್ರಮವನ್ನು ಹೊಂದಿರುವ ನ್ಯಾಯಾಧೀಶರ ದುರಹಂಕಾರವು ಎಷ್ಟು ಉನ್ನತ ಮತ್ತು ಅಶ್ಲೀಲವಾಗಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಇದು ಸುಪ್ರೀಂ ಕೋರ್ಟ್, ಸರ್ವೋಚ್ಚ ನ್ಯಾಯಾಲಯ!”ಎಂದು ಅಜೀತ್ ಭಾರ್ತಿ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ. ಬಳಿಕ ಅವರು ಎಕ್ಸ್‌ನಿಂದ ಈ ಪೋಸ್ಟ್ ಡಿಲಿಟ್ ಮಾಡಿದ್ದಾರೆ.

“Boiled Anda'(@AmitLeliSlayer) ಮತ್ತೊಬ್ಬ ಎಕ್ಸ್ ಬಳಕೆದಾರ ಕೂಡ ವೈರಲ್ ವಿಡಿಯೋ ಹಂಚಿಕೊಂಡಿದ್ದು, “ಮುಖ್ಯ ನ್ಯಾಯಮೂರ್ತಿ ಓಡಿ ಹೋದರು” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

‘Jayesh Mehta’ ಎಂಬ ಮತ್ತೋರ್ವ ವೆರಿಫೈಡ್ (ಪ್ರಾಮಾಣಿಕೃತ) ಎಕ್ಸ್ ಬಳಕೆದಾರ ಕೂಡ ವೈರಲ್ ಹಂಚಿಕೊಂಡಿದ್ದು, “ಸಿಜೆಐ ಈ ವರ್ತಿಸಲು ಹೇಗೆ ಸಾಧ್ಯ? ಸಾಲಿಸಿಟರ್ ಜನರಲ್ ವಾದ ಮಂಡಿಸುತ್ತಿರುವಾಗ ವಿಚಾರಣೆ ಮುಂದೂಡದೆ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಾಧೀಶರು ಸುಮ್ಮನೆ ಹೊರ ನಡೆದಿದ್ದಾರೆ. ಇದು ಭಾರತ ಸರ್ಕಾರಕ್ಕೆ ಮಾಡಿದ ಘೋರ ಅವಮಾನ. ಸಿಜೆಐ ಚಂದ್ರಚೂಡ್ ಸೇರಿದಂತೆ ಎಲ್ಲಾ ನ್ಯಾಯಾಧೀಶರಿಂದ ರಾಷ್ಟ್ರಪತಿಗಳು ರಾಜೀನಾಮೆ ಪಡೆಯಬೇಕು. ಸ್ವಲ್ಪವೂ ಸೌಜನ್ಯವಿಲ್ಲದ ದುರಹಾಂಕಾರಿ ವ್ಯಕ್ತಿ ಚಂದ್ರಚೂಡ್. ಅವರು ಮತ್ತು ಇತರ ನ್ಯಾಯಾಧೀಶರು ಭಾರತ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ನ್ಯಾಯಾಧೀಶರ ಈ ವರ್ತನೆಯ ಹಿಂದಿನ ಕಾರಣಗಳನ್ನು ಪಟ್ಟಿ ಮಾಡುವ ಥ್ರೆಡ್ ಅನ್ನು ನಾನು ಶೀಘ್ರದಲ್ಲೇ ಪೋಸ್ಟ್ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಫೋಸ್ಟ್ ಲಿಂಕ್ ಇಲ್ಲಿದೆ 

ಫ್ಯಾಕ್ಟ್‌ಚೆಕ್ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಾಧೀಶರ ಕುರಿತು ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ವೈರಲ್ ವಿಡಿಯೋಗೆ ಸಂಬಂಧಿಸಿದ ವಿಚಾರಣೆಯ ಸಂಪೂರ್ಣ ವಿಡಿಯೋ ಸುಪ್ರೀಂ ಕೋರ್ಟ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿದೆ. ಮಾರ್ಚ್ 18ರಂದು ಅಪ್ಲೋಡ್ ಮಾಡಲಾದ 47 ನಿಮಿಷ 45 ಸೆಕೆಂಡ್‌ನ ವಿಡಿಯೋದಲ್ಲಿ 27 ನಿಮಿಷ 6 ಸೆಕೆಂಡ್‌ನಿಂದ ವೈರಲ್ ವಿಡಿಯೋದಲ್ಲಿರುವ ದೃಶ್ಯ ಕಾಣಬಹುದು. ಅಧಿಕೃತ ವಿಡಿಯೋದಲ್ಲಿರುವಂತೆ ಸಿಜೆಐ ಚಂದ್ರಚೂಡ್‌ ಅವರು ತಾವು ಕುಳಿತ ಕುರ್ಚಿಯಿಂದ ಒಮ್ಮೆ ಎದ್ದು ಸರಿಯಾಗಿ ಕುಳಿತಿದ್ದಾರೆಯೇ ಹೊರತು, ಅವರು ಎದ್ದು ಹೊರ ನಡೆದಿರುವುದು ಕಾಣುವುದಿಲ್ಲ.

ಹಾಗಾಗಿ, ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿರುವುದು ಖಚಿತವಾಗಿದೆ.

ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದ ಅಂಶವೆಂದರೆ, ವೈರಲ್ ವಿಡಿಯೋದಲ್ಲಿ ಸಿಜೆಐ ಎದ್ದು ಹೋಗಿದ್ದಾರೆ ಎಂದು ಪ್ರತಿಪಾದಿಸಲಾದ ದೃಶ್ಯ ಕೊನೆಯಲ್ಲಿದೆ. ಅಲ್ಲಿ ಸಿಜೆಐ ಎದ್ದಂತೆ ಕಾಣುತ್ತಿವೆಯೇ ಹೊರತು, ಅವರು ಎದ್ದು ಹೊರ ನಡೆದಿರುವ ದೃಶ್ಯವಿಲ್ಲ. ಸಿಜೆಐ ಎದ್ದು ಸರಿಯಾಗಿ ಕುಳಿತಿರುವುದನ್ನು, ಎದ್ದು ಹೊರ ನಡೆದಿದ್ದಾರೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

ಸಿಜೆಐ ಅವರು ತಮ್ಮ ಕುರ್ಚಿಯನ್ನು ಸರಿಪಡಿಸಿಕೊಂಡು ಮತ್ತೆ ಕುಳಿತ ನಂತರವೂ 20 ನಿಮಿಷಗಳ ಕಾಲ ವಿಚಾರಣೆಯಲ್ಲಿ ಭಾಗವಹಿಸಿದ್ದಾರೆ.

ಸಿಜೆಐ ವಿರುದ್ದ ಸುಳ್ಳು ಮಾಹಿತಿ ಹಂಚುವ ಅಗತ್ಯವೇನು?

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಭಾರತ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಂದರೆ, ಮೋದಿ ಸರ್ಕಾರದ ಪರ ಅವರು ವಾದ ಮಂಡಿಸುತ್ತಿದ್ದರು. ಇಲ್ಲಿ ತುಷಾರ್ ಮೆಹ್ತಾ ಅವರು ವಾದ ಮಂಡಿಸುವಾಗ ಸಿಜೆಐ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಿಜೆಐ ಮೋದಿ ಸರ್ಕಾರದ ವಿರುದ್ದ ಇದ್ದಾರೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಮೋದಿ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದ ಪೀಠ ರದ್ದುಗೊಳಿಸಿತ್ತು. ಇದರಿಂದ ಮೋದಿ ಸರ್ಕಾರ ತೀವ್ರ ಮುಖಭಂಗ ಅನುಭವಿಸಿತ್ತು. ಹಾಗಾಗಿ, ಬಲಪಂಥೀಯ ವ್ಯಕ್ತಿಗಳು ಸಿಜೆಐ ಮೋದಿ ಸರ್ಕಾರದ ವಿರುದ್ದ ಇದ್ದಾರೆ ಎಂಬ ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : Fact Check: ಬೆಂಗಳೂರಿನಲ್ಲಿ ನಮಾಝ್ ವೇಳೆ ಹನುಮಾನ್ ಚಾಲೀಸಾ ಹಾಕಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read