HomeUncategorizedFact Check : ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆಯಾ?

Fact Check : ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆಯಾ?

- Advertisement -
- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸುವ ‘ಶಕ್ತಿ ಯೋಜನೆ’, ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರಿಗೆ ಮಾಸಿಕ 10 ಕೆ.ಜಿ ಅಕ್ಕಿ ವಿತರಿಸುವ ‘ಅನ್ನಭಾಗ್ಯ ಯೋಜನೆ’, ಮನೆಯ ಮಹಿಳಾ ಯಜಮಾನಿಗೆ ಮಾಸಿಕ 2 ಸಾವಿರ ರೂ. ಧನ ಸಹಾಯ ನೀಡುವ ‘ಗೃಹಲಕ್ಷಿ ಯೋಜನೆ’, 200 ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ ಯೋಜನೆ’ ಮತ್ತು ನಿರುದ್ಯೋಗಿ ಯುವಜನರಿಗೆ ಧನ ಸಹಾಯ ನೀಡುವ ‘ಯುವನಿಧಿ ಯೋಜನೆ’ ಪ್ರಸ್ತುತ ಜಾರಿಯಲ್ಲಿವೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಹಲವಾರು ಸುಳ್ಳು ಸುದ್ದಿಗಳು, ಊಹಾಪೋಹಗಳು ಪ್ರತಿದಿನ ಹರಿದಾಡುತ್ತಿರುತ್ತವೆ. ಈ ಕುರಿತು ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ಫ್ಯಾಕ್ಟ್‌ಚೆಕ್ : 1. ಜೂನ್ 11, 2023ರಂದು ರಾಜ್ಯ ಸರ್ಕಾರ ಮೊದಲ ಗ್ಯಾರಂಟಿ ಯೋಜನೆಯಾಗಿ ‘ ರಾಜ್ಯದ ಮಹಿಳೆಯರಿಗೆ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿತ್ತು.

ಯೋಜನೆ ಪ್ರಾರಂಭಗೊಂಡು ಎರಡು ತಿಂಗಳ ಬಳಿಕ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿತ್ತು. ಈ ಕುರಿತು ಆಗಸ್ಟ್ 16, 2023ರಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಸ್ಪಷ್ಟನೆ ಕೊಟ್ಟಿದ್ದರು. “ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ” ಎಂದಿದ್ದರು.

ಪ್ರಸ್ತುತ (ಏಪ್ರಿಲ್ 2024ರಲ್ಲಿ) ಶಕ್ತಿ ಯೋಜನೆ ಯಶಸ್ವಿಯಾಗಿ ಮುಂದುವರೆಯುತ್ತಿದೆ. ರಾಜ್ಯದ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

ಫೆಬ್ರವರಿ 16, 2024ರಂದು 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಈ ಪೈಕಿ ಶಕ್ತಿ ಯೋಜನೆಗೆ 5,015 ಕೋಟಿ ನೀಡಿದ್ದಾರೆ.

ಬಜೆಟ್ ಮಂಡನೆ ವೇಳೆ 2023-24ರಲ್ಲಿ ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಿದ ಹಣದ ಲೆಕ್ಕವನ್ನೂ ಸಿಎಂ ನೀಡಿದ್ದಾರೆ. ಆರಂಭದಲ್ಲಿ 2,800 ಕೋಟಿ ರೂಪಾಯಿ ಹಣವನ್ನು ಸರ್ಕಾರ ಶಕ್ತಿ ಯೋಜನೆಗೆ ಮೀಸಲಿಟ್ಟಿತ್ತು. ಅವೆಲ್ಲವೂ ಖರ್ಚಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದು ಮತ್ತು ಪ್ರಸ್ತುತ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಯೋಜನೆ ಸ್ಥಗಿತಗೊಳ್ಳಲಿದೆ ಎಂಬುವುದು ಸುಳ್ಳು ಎಂದು ಹೇಳಬಹುದು.

2. ಸರ್ಕಾರ ಎರಡನೆಯದಾಗಿ ಜಾರಿಗೊಳಿಸಿದ ಯೋಜನೆ ‘ಅನ್ನಭಾಗ್ಯ’

ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2013ರಲ್ಲಿ ಜಾರಿಗೆ ತಂದ ಜನಪ್ರಿಯ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌, ಅಂತ್ಯೋದ್ಯಯ) ಪಡಿತರ ಚೀಟಿದಾರರಿಗೆ 10 ಕೆ.ಜಿ ಉಚಿತ ಅಕ್ಕಿ ವಿತರಿಸಲಾಗುತ್ತದೆ.

2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ನಭಾಗ್ಯ ಯೋಜನೆಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು. ಆರಂಭದಲ್ಲಿ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಮುಂದಾಗಿದ್ದರು. ಆದರೆ, ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನು ಇದ್ದರೂ ನೀಡಿಲ್ಲ ಎಂದು ಆರೋಪಿಸಲಾಗಿದೆ. ಹಾಗಾಗಿ, 5 ಕೆ.ಜಿ ಅಕ್ಕಿ ಇನ್ನುಳಿದ 5 ಕೆ.ಜಿ ಬದಲು 170 ರೂ. ಹಣ ನೀಡಲು ಸರ್ಕಾರ ನಿರ್ಧಿರಿಸಿತ್ತು. ಅದರಂತೆ 5 ಕೆ.ಜಿ ಅಕ್ಕಿ ಮತ್ತು ಇನ್ನೈದು ಕೆ.ಜಿ ಅಕ್ಕಿಯ ಹಣ ನೀಡಲಾಗುತ್ತಿದೆ.

2024-25ನೇ ಸಾಲಿನ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಗೆ 8,079 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ. 2023-24ರಲ್ಲಿ ಯೋಜನೆಗೆ 2,900.12 ಕೋಟಿ ರೂಪಾಯಿ ಖರ್ಚಾಗಿದೆ (10,000 ಕೋಟಿ ಮೀಸಲು) (ಅಕ್ಕಿ ಕೊಡುವ ಪ್ಲ್ಯಾನ್ ಇತ್ತು. ಹೀಗಾಗಿ ಹಣ ನಿಗದಿ ಮಾಡಿರಲಿಲ್ಲ).

ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ 5 ಕೆ.ಜಿ ಕೇಂದ್ರ ಸರ್ಕಾರದ್ದು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈಗಲೂ ಹೇಳುತ್ತಿದ್ದಾರೆ.

ಈ ಹೇಳಿಕೆಗಳನ್ನು ಸಿಎಂ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದ್ದರೆ, ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

3. ಸರ್ಕಾರ ಮೂರನೆಯದಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ‘ಗೃಹಲಕ್ಷಿ. ಈ ಯೋಜನೆಯಡಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡಲಾಗ್ತಿದೆ.

ಈ ಯೋಜನೆ ಎರಡೇ ತಿಂಗಳಿಗೆ ಸ್ಥಗಿತಗೊಂಡಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿತ್ತು. ಸರ್ಕಾರದ ಯೋಜನೆಯನ್ನು ವ್ಯಂಗ್ಯವಾಡಿತ್ತು.

ಈ ಕುರಿತು ಅಕ್ಟೋಬರ್ 10, 2023ರಂದು ಸ್ಪಷ್ಟನೆ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಫಲಾನುಭವಿಗಳ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಹೆಸರಿನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಸಮಸ್ಯೆಯಾಗಿದೆ ಎಂದಿದ್ದರು. ಯೋಜನೆಯ ಫಲಾನುಭವಿಗಳ ಕುರಿತು ಮಾಹಿತಿ ನೀಡಿದ್ದರು. ಪ್ರಸ್ತುತ (2024, ಏಪ್ರಿಲ್) ಗೃಹಲಕ್ಷಿ ಯೋಜನೆ ಮುಂದುವರೆಯುತ್ತಿದೆ.

ಪ್ರತಿ ಮನೆಗೆ ಸುಮಾರು 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆ ಮತ್ತು ಪದವೀದರ ನಿರುದ್ಯೋಗಿ ಯುವ ಜನರಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೋಮಾ ಪದವೀದರರಿಗೆ ಮಾಸಿಕ 1,500 ನೀಡುವ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಎರಡೂ ಯೋಜನೆಗಳು ಪ್ರಸ್ತುತ ಜಾರಿಯಲ್ಲಿದೆ.

2024-25ನೇ ರಾಜ್ಯ ಬಜೆಟ್‌ನಲ್ಲಿ ಗೃಹಜ್ಯೋತಿ ಯೋಜನೆಗೆ 9,657 ಕೋಟಿ ರೂ. ಮತ್ತು ಯುವನಿಧಿ ಯೋಜನೆಗೆ 9,657 ಕೋಟಿ ರೂ. ಸರ್ಕಾರ ಮೀಸಲಿಟ್ಟಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಗೃಹಜ್ಯೋತಿ ಯೋಜನೆಗೆ 13,910 ಕೋಟಿ ರೂ. ಸರ್ಕಾರ ಮೀಸಲಿಟ್ಟಿತ್ತು. ಈ ಪೈಕಿ 2,900 ಕೋಟಿ ರೂ. ಖರ್ಚು ಮಾಡಿದೆ. ಯುವನಿಧಿ ಯೋಜನೆಗೆ 250 ಕೋಟಿ ರೂ. ಮೀಸಲಿಟ್ಟಿತ್ತು. ಈ ಯೋಜನೆಗೆ 2024ರ ಜನವರಿ 12ರಂದು ಚಾಲನೆ ನೀಡಿರುವ ಹಿನ್ನೆಲೆ ಹಣ ಖರ್ಚಾಗಿರಲಿಲ್ಲ.

ರಾಜ್ಯ ಸರ್ಕಾರದ ಗ್ಯಾರಂಟಿಗೆ ಕೇಂದ್ರ ಹಣ ನೀಡುತ್ತಿದೆಯಾ?

ರಾಜ್ಯ ಸರ್ಕಾರದ ಬಿಟ್ಟಿ ಭಾಗ್ಯಗಳಿಗೆ ಕೇಂದ್ರ ಹಣ ನೀಡಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಮಾತನಾಡುವಾಗ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, “ಗ್ಯಾರಂಟಿ ಜೊತೆಗೆ ನಿವೃತ್ತಿ ವೇತನ ಸೇರಿ ರೂ.11,200 ಕೋಟಿ ಹಣವನ್ನೂ ರಾಜ್ಯ ಸರ್ಕಾರವೇ ನೀಡುತ್ತಿದೆ. ಈ ಹಣದ ಪೈಕಿ ಕೇಂದ್ರ ಸರ್ಕಾರದ ಪಾಲು ರೂ. 550 ಕೋಟಿ ಮಾತ್ರ ಎಂದಿದ್ದಾರೆ.

ನಾವು ಈಗಾಗಲೇ ಹೇಳಿರುವಂತೆ 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ 52 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರ್ಥ ಗ್ಯಾರಂಟಿ ಯೋಜನೆಗಳ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದಾಗಿದೆ.

ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಸ್ಥಗಿತಗೊಳ್ಳಲಿದೆಯಾ? 

ಲೋಕಸಭೆ ಚುನಾವಣೆಯ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿದ್ದಾರೆ.

ಮಾರ್ಚ್ 13, 2024ರಂದು ಉಡುಪಿ ಜಿಲ್ಲೆಯ ಕುಂಜಿಬೆಟ್ಟುವಿನ ಲಕ್ಷ್ಮೀ ನಾರಾಯಣ ರಾವ್ ಕ್ರೀಡಾಂಗಣದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಬಿಜೆಪಿ ಅನಾವಶ್ಯಕ ಅಪಪ್ರಚಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ” ಎಂದಿದ್ದಾರೆ.

ಕೊನೆಯದಾಗಿ, ಜೂನ್ 11, 2023ರಲ್ಲಿ ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದ ಅನೇಕ ಬಾರಿ ಬಿಜೆಪಿ ನಾಯಕರು ಗ್ಯಾರಂಟಿಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಸ್ಥಗಿತಗೊಳ್ಳುವುದಿಲ್ಲ ಎಂದು ಸಿಎಂ ಆದಿಯಾಗಿ ಸರ್ಕಾರದ ಸಚಿವರೂ ಸ್ಪಷ್ಟನೆ ನೀಡುತ್ತಾ ಬಂದಿದ್ದಾರೆ. ಅದರಂತೆ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಾ ಬಂದರೂ, ಬಿಜೆಪಿ ನಾಯಕರು ಹೇಳಿದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಂಡಿಲ್ಲ. ಅಲ್ಲದೆ, ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ.

ಇದನ್ನೂ ಓದಿ : Fact Check: ಕರ್ನಾಟಕದ ಬರ ಪರಿಹಾರ ಕುರಿತು ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...