Homeಅಂಕಣಗಳುಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’

ಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’

- Advertisement -
- Advertisement -

ಈದೇಶದಲ್ಲಿ ಪ್ರೊಪೋಗಾಂಡಾ ಸಿನಿಮಾಗಳಗೆ ಬರವೇನಿಲ್ಲ. ನ್ಯಾಷನಲಿಸಂಅನ್ನು ಉದ್ದೀಪಿಸುವ, ಕಾರ್ಪೊರೆಟ್ ಸಂಸ್ಕೃತಿಯನ್ನು ದೈವೀಕರಿಸಿ ಅಸಮಾನತೆಯ ಯಥಾಸ್ಥಿತಿಯನ್ನು ಪೋಷಿಸುವಂತೆ ಮಾಡುವ, ಮೆರಿಟ್ ಎಂಬ ಮಿಥ್‌ಅನ್ನು ಬಿತ್ತುವ ಅಸಂಖ್ಯಾತ ಸಿನಿಮಾಗಳು ಕಾಲದ ಪ್ರವಾಹದಲ್ಲಿ ಬಂದುಹೋಗಿವೆ. ಆದರೆ ಅವುಗಳಲ್ಲಿ ತಮ್ಮ ಆ ರಾಜಕೀಯ ಅಜೆಂಡಾವನ್ನು ಬಹಳ ನಾಜೂಕಾಗಿ ಅಳವಡಿಸಿಕೊಂಡಂತಹ ಚಲನಚಿತ್ರಗಳೇ ಹೆಚ್ಚು. ಆದರೆ ಇತ್ತೀಚೆಗೆ ರಾಜಕೀಯ ಪ್ರೊಪೋಗಾಂಡಾವನ್ನೇ ಪ್ರಧಾನ ವಸ್ತುವನ್ನಾಗಿಸಿಕೊಂಡು, ಅದನ್ನೇ ಸೃಜನಶೀಲ ಸ್ವಾತಂತ್ರ್ಯ ಎಂದು ಕರೆದುಕೊಂಡು ಸಿನಿಮಾಗಳನ್ನು ಮಾಡುವ ಮಟ್ಟಕ್ಕೆ ಬೆಳೆದಿರುವುದು ಯುಗಧರ್ಮದ ಪ್ರತೀಕ. ಕಳೆದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಇಸ್ರೇಲಿ ನಿರ್ದೇಶಕ ನದಾವ್ ಲ್ಯಾಪಿಡ್ ಸ್ಪರ್ಧೆಯಲ್ಲಿದ್ದ ’ದ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ’ವಲ್ಗರ್ ಪ್ರೊಪೋಗಾಂಡಾ ಸಿನಿಮಾ’ ಎಂದು ಕರೆದಾಗ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯ ಸಂಘಟನೆ ಮತ್ತು ವ್ಯಕ್ತಿಗಳಿಂದ ಅವರು ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ತೀವ್ರ ಬಲಪಂಥೀಯ ರಾಜಕಾರಣ ತನ್ನ ಪೀಕ್‌ನಲ್ಲಿರುವ ಪ್ರಚಲಿತ ಸಮಯದಲ್ಲಿ ಇಂತಹ ಸಿನಿಮಾಗಳ ನಿರ್ಮಾಣ ಮತ್ತು ಬಿಡುಗಡೆ ಅತಿ ಹೆಚ್ಚು ಅಚ್ಚರಿಯನ್ನುಂಟುಮಾಡದೇಹೋದರೂ, ಅವುಗಳ ಬಿಡುಗಡೆಯ ನಂತರ ನಡೆಯುವ ಸಂಭ್ರಮಾಚರಣೆಗಳು, ಅಂತಹ ಸಿನಿಮಾಗಳನ್ನು ವಿಮರ್ಶಿಸುವವರ ಮೇಲೆ ನಡೆಸುವ ದಾಳಿಗಳು ಕಳವಳಿಕಾರಿಯಾದದ್ದು. ಅಂತಹ ಮತ್ತೊಂದು ಸಿನಿಮಾ ಬಿಡುಗಡೆಯಾಗಿ ಚರ್ಚೆಯಲ್ಲಿದೆ. ಅದುವೇ ’ದ ಕೇರಳ ಸ್ಟೋರಿ’. ಕರ್ನಾಟಕದ ವಿಧಾನಸಭಾ ಚುನಾವಣೆ 2023ರ ರ್‍ಯಾಲಿಯೊಂದರಲ್ಲಿ ಪ್ರಧಾನ ಮಂತ್ರಿಯವರು ಮಾತನಾಡುತ್ತಾ, “’ದ ಕೇರಳ ಸ್ಟೋರಿ’ ಭಯೋತ್ಪಾದನೆಯ ಪಿತೂರಿಯ ಬಗೆಗಿನ ಚಲನಚಿತ್ರ. ಭಯೋತ್ಪಾದನೆ ಬಗ್ಗೆ ಮಾಡಿರುವ ಈ ಸಿನಿಮಾವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಮತ್ತು ಭಯೋತ್ಪಾದಕ ಪ್ರವೃತ್ತಿಯ ಜೊತೆಗೆ ಅವರು ನಿಂತಿದ್ದಾರೆ. ವೋಟ್ ಬ್ಯಾಂಕ್‌ಗೋಸ್ಕರ ಕಾಂಗ್ರೆಸ್ ಭಯೋತ್ಪಾದನೆಯನ್ನು ರಕ್ಷಿಸುತ್ತಿದೆ” ಎಂದು ತಮ್ಮ ರಾಜಕೀಯ ಲಾಭಕ್ಕಾಗಿ ಮಾತನಾಡಿರುವುದು ವರದಿಯಾಗಿದೆ.

ಈ ಪೀಠಿಕೆಯಿಂದ ಇಷ್ಟು ಹೊತ್ತಿಗೆ ಸ್ಪಷ್ಟವಾಗಿರಬಹುದು; ’ದ ಕೇರಳ ಸ್ಟೋರಿ’ಯ ಪ್ರೊಪೊಗಾಂಡದ ವಿಷಯ ’ಇಸ್ಲಮಾಫೋಬಿಯಾ’ ಎಂಬುದು. ಇತ್ತೀಚಿನ ಕೆಲವು ವರ್ಷಗಳಿಂದ ಬಲಪಂಥೀಯ ಎಕೋಸಿಸ್ಟಮ್ ಹಬ್ಬಿಸಿ ನಂಬಿಸಲು ಪ್ರಯತ್ನಿಸುತ್ತಿರುವ ಆರೋಪಿತ ’ಲವ್ ಜಿಹಾದ್’ ಅಪಾಯಗಳ ಸುತ್ತ ಸಿನಿಮಾ ಸುತ್ತುತ್ತದೆ. ವಿಶ್ವಸಂಸ್ಥೆಯ ಸೆರೆಮನೆಯೊಂದರಲ್ಲಿ ಫಾತಿಮಾ (ಅಧಾ ಶರ್ಮಾ) ಎಂಬ ಐಎಸ್‌ಐಎಸ್ ಭಯೋತ್ಪಾದಕ ಸಂಸ್ಥೆಯ ಸದಸ್ಯೆ, ತಾನು ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಗ್ಗೆ ಮತ್ತು ಐಎಸ್‌ಐಎಸ್ ಸಂಪರ್ಕಕ್ಕೆ ಬಂದ ಬಗೆಗಿನ ಕಥೆ ಹೇಳುವುದರಿಂದ ಸಿನಿಮಾ ಪ್ರಾರಂಭವಾಗುತ್ತದೆ. ಆರಂಭದಲ್ಲಿಯೇ, ಅಲ್ಲಿನ ಯುಎನ್ ವಿಚಾರಕರಿಗೆ ಆಕೆ, ’ಕೇರಳ ಇಸ್ಲಾಮಿಕ್ ಸ್ಟೇಟ್ ಆಗಬಿಡುತ್ತದೆ, ದಯವಿಟ್ಟು ತಡೆಯಿರಿ ಎಂದು ಬಡಬಡಾಯಿಸುವ’ ಸಂಭಾಷಣೆಯೊಂದಿಗೇ ನಿರ್ದೇಶಕ ಸುದೀಪ್ತೋ ಸೇನ್ ತಾನು ’ಎಂತಹ’ ಸಿನಿಮಾ ಮಾಡಿದ್ದೇನೆಂಬ ಸುಳಿವನ್ನು ಕೊಡುತ್ತಾನೆ.

ಶಾಲಿನಿ ಉನ್ನಿಕೃಷ್ಣನ್ (ಅಧಾ ಶರ್ಮಾ) ಬ್ರಾಹ್ಮಣ ಕುಟುಂಬಕ್ಕೆ ಸೇರಿದ ತಿರುವನಂತಪುರಂ ಯುವತಿ, ಉನ್ನತ ವ್ಯಾಸಂಗಕ್ಕಾಗಿ ಕಾಸರಗೋಡಿಗೆ ಬರುತ್ತಾಳೆ. ಅಲ್ಲಿ ಹಾಸ್ಟೆಲ್‌ನಲ್ಲಿ ಮೂವರು ಸಹಪಾಠಿಗಳನ್ನು ಭೇಟಿಯಾಗುತ್ತಾಳೆ. ಅದರಲ್ಲಿ ಒಬ್ಬಾಕೆ ನೀಮಾ; ಕ್ರಿಶ್ಚಿಯನ್-ಕ್ಯಾಥಲಿಕ್ ಧರ್ಮೀಯಳು. ಮತ್ತೊಬ್ಬಳು ಗೀತಾಂಜಲಿ; ಕಮ್ಯುನಿಸ್ಟ್ ಪೋಷಕರ ಸಲುವಾಗಿ ನಾಸ್ತಿಕರಾಗಿರುವವಳು. ಮತ್ತೊಬ್ಬಳು ಆಸಿಫಾ; ಐಎಸ್‌ಐಎಸ್‌ಗೆ ಸದಸ್ಯರನ್ನು ಸೆಳೆಯುವ ಸಲುವಾಗಿ ಇಸ್ಲಾಂಅನ್ನು ಜನಪ್ರಿಯವಾಗಿ ಬೋಧಿಸುವಾಕೆ! ಆಸಿಫಾ ಉಳಿದ ಮೂವರನ್ನು ಮತಾಂತರಗೊಳಿಸಲು ಏನೆಲ್ಲಾ ಮಾಡುತ್ತಾಳೆ ಮತ್ತು ಅದರಲ್ಲಿ ಎಷ್ಟು ಯಶಸ್ವಿಯಾಗುತ್ತಾಳೆಂಬ ಕಥಾನಕ, ಫಾತಿಮಾ ಆಗಿ ಬದಲಾಗಿರುವ ಶಾಲಿನಿ ಆಫ್ಘಾನಿಸ್ಥಾನ ಮತ್ತು ಸಿರಿಯಾ ಗಡಿಯಲ್ಲಿ ಸಿಲುಕಿಕೊಂಡು ಪಡುವ ಪಾಡಿನ ಕಥೆಯ ಜೊತೆಗೆ ಬೆರೆತ ನಿರೂಪಣೆಯೊಂದಿಗೆ ಸಿನಿಮಾ ಸಾಗುತ್ತದೆ.

ಇದನ್ನೂ ಓದಿ: 32,000 ಮಹಿಳೆಯರು ಐಎಸ್‌ಐಎಸ್ ಸೇರಿದ್ದಾರೆಂಬ ಟೀಸರ್‌ ತೆರವು ಮಾಡಲಾಗುವುದು: ‘ದಿ ಕೇರಳ ಸ್ಟೋರಿ’ ನಿರ್ಮಾಪಕ

ಸಿನಿಮಾದ ಪ್ರಾರಂಭದಲ್ಲಿಯೇ ಟೈಟಲ್ ಕಾರ್ಡ್‌ಗೂ ಮುಂಚಿತವಾಗಿ ಇದು ನಿಜಘಟನೆಗಳ ಆಧಾರಿತ ಎಂಬ ಟಿಪ್ಪಣಿಯನ್ನು ಹಾಕಲಾಗುತ್ತದೆ. ಅದನ್ನು ನಂಬಿಕೊಂಡು ಕೂರುವ ಪ್ರೇಕ್ಷಕನಿಗೂ, ಶಾಲಿನಿ ಎಂಬ ಬ್ರಾಹ್ಮಣ ಹುಡುಗಿಯನ್ನು ಮೋಸದ ಪ್ರೀತಿಯ ಮೂಲಕ ಮತಾಂತರ ಮಾಡುವ ಪ್ರಕ್ರಿಯೆ ಎಲ್ಲಿಯೂ ಕನ್ವಿನ್ಸ್ ಆಗುವಂತೆ ಕಥೆಯನ್ನು ಹೆಣೆದಿಲ್ಲ. ಶಾಲಿನಿ ಹಿಜಾಬ್ ಹಾಕುವಂತೆ ಮಾಡಲು ಆಡುವ ನಾಟಕವಾಗಲೀ, ಪ್ರೀತಿ ಮಾಡಿ ಮೋಸ ಮಾಡಿ ಮತಾಂತರಿಸುವ ಪ್ರಕ್ರಿಯೆಗಳನ್ನು ಚಿತ್ರಿಸುವಾಗಾಗಲೀ, ಎಲ್ಲಿಯೂ ಮನುಷ್ಯನ ಅಂತರಂಗದ ಭಾವನೆಗಳನ್ನು ಶೋಧಿಸುವ ಕೆಲಸಕ್ಕೆ ನಿರ್ದೇಶಕ ಮುಂದಾಗಿಲ್ಲ. ’ಲವ್ ಜಿಹಾದ್’ ಎಂಬ ಭೀಕರ ಮತ್ತು ವಿಸ್ತೃತ ಜಾಲಕ್ಕೆ ಇಡೀ ಕೇರಳ ರಾಜ್ಯವೇ ತುತ್ತಾಗುತ್ತಿದೆಯೆಂಬ ಆತಂಕವನ್ನು ಸೃಷ್ಟಿ ಮಾಡುವ ರಾಜಕೀಯ ಧ್ಯೇಯೋದ್ದೇಶದಿಂದ ಮಾಡಿರುವ ಚಿತ್ರಕಥೆಯಲ್ಲಿ ಸರಳ ಭಾವನೆಗಳ ಸೂಕ್ಷ್ಮ ಚಿತ್ರಣದ ಅವಶ್ಯಕತೆಯೇ ಬಿದ್ದಿಲ್ಲ! ಒಂದು ಸಂಘರ್ಷವೇ ಹುಟ್ಟದಂತೆ ಸಿನಿಮಾದ ಮುಖ್ಯ ಕಾನ್ಫ್ಲಿಕ್ಟ್‌ಅನ್ನು ರಿಸಾಲ್ವ್ ಮಾಡುವ ರೀತಿ, ಇಸ್ಲಮಾಫೋಬಿಯಾದ ಅಜೆಂಡಾವನ್ನು ತುರುಕುವ ನಿರ್ದೇಶಕನ ಆತುರವನ್ನು ಮನದಟ್ಟು ಮಾಡುತ್ತದೆ.

ಸುದೀಪ್ತೋ ಸೇನ್

ನಾಸ್ತಿಕ ಧೋರಣೆಯ ಗೀತಾಂಜಲಿ (ಸಿದ್ಧಿ ಇದ್ನಾನಿ) ಕೂಡ ಇದೇ ಖೆಡ್ಡಾಕ್ಕೆ ಸುಲಭವಾಗಿ ಬಿದ್ದುಬಿಡುತ್ತಾಳೆ. ತನ್ನ ತಂದೆ ಸಾವಿನ ದವಡೆಯಲ್ಲಿದ್ದಾಗಲೂ ’ಮತಾಂತರ’ಗೊಂಡಿರುವ ಈಕೆ ಆತನನ್ನು ಕಂಡು, ಡೆತ್‌ಬೆಡ್ ಮೇಲೆಯೇ ಆತನ ಮುಖಕ್ಕೆ ಉಗಿಯುವಷ್ಟು ಕ್ರೂರವಾಗಿಬಿಟ್ಟಿದ್ದಾಳೆ! ಆಮೇಲೆ ಕೆಲವು ದಿನಗಳ ನಂತರ ’ಮಾಂತ್ರಿಕವಾಗಿ’ (ಸಿನಿಮಾ ನಿರೂಪಣೆ ಮಾಂತ್ರಿಕವಾಗಿಲ್ಲ) ಈ ಪಿತೂರಿ ಜಾಲದ ಅರಿವಾಗಿ ಬದುಕುಳಿದ ತನ್ನ ತಂದೆಯ ಜೊತೆಗೆ ಒಂದಾಗುತ್ತಾಳೆ. ಆದರೆ, ’ವಿದೇಶಿಯಿಂದ ಆಮದಾದ ಕಮ್ಯುನಿಸ್ಟ್ ಸಿದ್ಧಾಂತದಿಂದ ತನ್ನನ್ನು ಬೆಳೆಸಿದ್ದಕ್ಕೆ ಹಾಗೂ ನೆಲದ ಸಂಸ್ಕೃತಿಯನ್ನು ತನಗೆ ಬೋಧಿಸದೆಹೋದ ಕಾರಣಕ್ಕೆ’ ಈ ಅವಾಂತರಕ್ಕೆ ತಾನು ಒಳಗಾಗಬೇಕಾಯತೆಂದು ತನ್ನ ತಂದೆಯನ್ನು ಕೌಂಟರ್ ಮಾಡುತ್ತಾಳೆ. ಆಕೆಯ ತಂದೆ ಗೋಣು ಅಲ್ಲಾಡಿಸುತ್ತಾರೆ. ಇವು ಪ್ರಜ್ಞಾವಂತ ವೀಕ್ಷಕರು ಹೊಟ್ಟೆ ತುಂಬಾ ನಕ್ಕು ಮರೆತುಬಿಡಬಹುದಾದ ದೃಶ್ಯಾವಳಿಗಳಾಗಿದ್ದರೂ, ನಿರ್ದೇಶಕ ಎಷ್ಟು ಅಸೂಕ್ಷ್ಮ ಮತ್ತು ಪೆದ್ದುತನದ ವಾದಗಳಿಂದ ತನ್ನ ಅಜೆಂಡಾವನ್ನು ತುರುಕಲು ತಂದಿದ್ದಾರೆಂಬುದನ್ನು ಮನದಟ್ಟು ಮಾಡಿಕೊಡುತ್ತವೆ.

ಮತ್ತೊಂದು ದೃಶ್ಯ ಪೊಲೀಸ್ ಠಾಣೆಯಲ್ಲಿ ನಡೆಯುವಂಥದ್ದು; ತಾನೂ ಗಟ್ಟಿ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದ ಕಾರಣ ಕ್ಯಾಥಲಿಕ್ ಸಂಪ್ರದಾಯದ ನೀಮಾ (ಯೋಗಿತಾ ಬಿಹಾನಿ) ಮತಾಂತರದಿಂದ ತಪ್ಪಿಸಿಕೊಂಡಿರುತ್ತಾಳೆ. ಆದರೆ ತನ್ನ ಮೇಲಾಗಿರುವ ದೌರ್ಜನ್ಯಗಳಿಂದ ಜರ್ಜರಿತರಾಗಿರುತ್ತಾಳೆ. ಆಕೆ ಪೊಲೀಸರ ಮುಂದೆ ’ಕೇರಳದ 50 ಸಾವಿರಕ್ಕೂ ಹೆಚ್ಚು ಹುಡುಗಿಯರು ಕಿಡ್ನಾಪ್ ಆಗಿದ್ದಾರೆ. ಅವರುಗಳಲ್ಲಿ ಬಹುತೇಕರು ಮತಾಂತರ ಆಗಿದ್ದಾರೆ. ಕೇರಳ ಇಸ್ಲಾಮಿಕ್ ಸ್ಟೇಟ್ ಆಗುತ್ತದೆಂದು ಹಿಂದಿನ ಮುಖ್ಯಮಂತ್ರಿ ಹೇಳಿದ್ದಾರೆ’ ಎಂಬ ರೀತಿಯ ಸಂಭಾಷಣೆ ನಿರ್ದೇಶಕನಿಗೆ ವಾಸ್ತವ ದಾಖಲೆ ಮತ್ತು ಅಂಕಿಅಂಶಗಳಿಗಿಂತಲೂ ಪ್ರೊಪೋಗಾಂಡಾದ ಮೇಲಿರುವ ಆಸ್ತೆಯನ್ನು ಎತ್ತಿತೋರಿಸುತ್ತದೆ. ಅಲ್ಲಿ ಪೊಲೀಸ್ ಅಧಿಕಾರಿ ಇದಕ್ಕೆ ದಾಖಲೆ ಇಲ್ಲವೆಂದು ಕೌಂಟರ್ ಮಾಡಿದರೂ ಕೂಡ, ಸಂತ್ರಸ್ತೆಯ ಪಾತ್ರದ ಕೈಲಿ ಹೇಳಿಸುವ ಸಂಭಾಷಣೆ ಮೇಲುಗೈ ಪಡೆಯುವಂತೆ ಮಾಡುತ್ತಾನೆ ನಿರ್ದೇಶಕ.

ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಅಶ್ಲೀಲ ಚಿತ್ರ; ನಾದವ್ ಲ್ಯಾಪಿಡ್ ಹೇಳಿಕೆ ಬೆಂಬಲಿಸಿದ ಸಹ ತೀರ್ಪುಗಾರರು

ಕೇರಳದಲ್ಲಿ ಬೆರಳೆಣಿಕೆಯಷ್ಟು ಒತ್ತಾಯದ ಮತಾಂತರಗಳು ನಡೆದಿರಬಹುದು. ಅದರಲ್ಲಿ ಕೆಲವು ಹೆಣ್ಣುಮಕ್ಕಳನ್ನು ಐಸಿಸ್ ಸೆಕ್ಸ್ ಸ್ಲೇವ್ಸ್‌ಆಗಿ ಸಿರಿಯಾ ದೇಶಕ್ಕೆ ರವಾನಿಸಿರಲೂಬಹುದು. ಅಂತಹ ಕಥೆಯನ್ನು ಖಂಡಿತಾ ಹೇಳಬೇಕು. ಆದರೆ ಸೃಜನಶೀಲ ನಿರ್ದೇಶಕ ಎಂದು ಹೇಳಿಕೊಳ್ಳುವವನು ಇಡೀ ಇಸ್ಲಾಂ ಸಮುದಾಯವೇ ಮೂಲಭೂತವಾದದ ಹಿಂದೆ ಬಿದ್ದಿದೆ ಎಂಬ ನಿರ್ಣಯವನ್ನು ಮಾಡುವಂತೆ ’ಇಸ್ಲಮಾಫೋಬಿಕ್’ ನಿಲುವನ್ನು ಪ್ರತಿಧ್ವನಿಸುವುದು ಕಳವಳಕಾರಿ ಸಂಗತಿ. ಹಿಂದೂ ಧರ್ಮದಲ್ಲಿ ಹಿಂದೂ ಮೂಲಭೂತವಾದವನ್ನು ವಿರೋಧಿಸುವವರು ಇರುವಂತೆಯೇ ಇಸ್ಲಾಂ ಧರ್ಮವನ್ನು ಅನುಕರಿಸುವವರಲ್ಲಿ ಕೂಡ ಅಲ್ಲಿನ ಮೂಲಭೂತವಾದವನ್ನು ವಿರೋಧಿಸುವ, ಐಸಿಸ್ ಭಯೋತ್ಪಾದನೆಯನ್ನು ತಿರಸ್ಕರಿಸುವ ಲಕ್ಷಾಂತರ ಸಹನಾಗರಿಕರು ಸಿಕ್ಕಾರು. ಅಂತಹ ಒಂದು ಪಾತ್ರವನ್ನು ನೆಪಮಾತ್ರಕ್ಕೂ ಸೃಷ್ಟಿಸದ ನಿರ್ದೇಶಕ ಅಮಾಯಕ ಬ್ರಾಹ್ಮಣ ಹುಡುಗಿ ಮತ್ತು ಕ್ರೂರ ’ಅನ್ಯ’ರನ್ನು ಬೈನರಿಯಾಗಿ ಕಟ್ಟಿಕೊಡುತ್ತಾರೆ. ಅಲ್ಲಿಯೂ ಪಾತ್ರಗಳ ಒಳತುಮುಲಗಳನ್ನು ಶೋಧಿಸದೆ, ತಮ್ಮ ಅಜೆಂಡಾಗ ಬೇಕಾದಂತೆ ಓತಪ್ರೇತವಾಗಿ ಕಥೆಯನ್ನು ಮುಂದುವರಿಸುತ್ತಾರೆ. ಆ ನಿಟ್ಟಿನಲ್ಲಿ ಬಹಳ ಡಲ್ ಆದ ಸಿನಿವಾವೊಂದನ್ನು ತಮ್ಮ ತಿರುಚಿದ ವಾಸ್ತವವನ್ನು ಕಟ್ಟಿಕೊಡುವುದಕ್ಕಾಗಿ ಬಳಸಿ ಜನರ ಮುಂದಿಟ್ಟಿದ್ದಾರೆ.

ಇನ್ನು ಮುಂದಕ್ಕೆ, ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ಪರ್ವ ಪ್ರಾರಂಭವಾಗಬಹುದು. ಭಾರತದಲ್ಲಿ ನಡೆಯುವ ಮುಂದಿನ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಇದು ಪ್ರವೇಶ ಪಡೆಯಬಹುದು. ಕೆಲವು ಪ್ರಶಸ್ತಿಗಳನ್ನು ಕೂಡ ಗಿಟ್ಟಿಸಿಕೊಳ್ಳಬಹುದು. ಪ್ರಧಾನ ಮಂತ್ರಿಯವರೇ ಚುನಾವಣಾ ಭಾಷಣವೊಂದರಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಿ ವಿಪಕ್ಷಗಳನ್ನು ಹಳಿಯಲು ಇದನ್ನು ಬಳಸಿಕೊಂಡಿದ್ದಾರೆಂದರೆ ಇವ್ಯಾವುವೂ ಅಸಾಧ್ಯ ಸಂಗತಿಗಳೇನಲ್ಲ. ವಾಸ್ತವ ಅಂಕಿಅಂಶಗಳಿಗೆ ಬೆಲೆಕೊಡದೆ, ಮನುಷ್ಯ ಸಂಬಂಧಗಳ ಶೋಧಕ್ಕೆ ಪ್ರಯತ್ನಿಸದೆ ಒಂದು ಅಲ್ಪಸಂಖ್ಯಾತ ಧರ್ಮದವರನ್ನು ರಾಕ್ಷಸೀಕರಿಸುವ ಈ ಸಿನಿಮಾ ’ಭಯೋತ್ಪಾದನೆ’ಯ ಇತಿಹಾಸವನ್ನಾದರೂ ಅವಲೋಕಿಸಬೇಕಿತ್ತು ಎಂದು ನಿರೀಕ್ಷಿಸುವುದು ಅತಿಯಾದೀತೇನೋ! ಇನ್ನು ಈ ಸಿನಿಮಾವನ್ನು ನಿಷೇಧಿಸಿ ಎಂಬ ಕೂಗು ಕೂಡ ಮನ್ನಣೆ ಪಡೆಯುವುದು ಅಸಾಧ್ಯವಾದ ಸಂಗತಿ. ಇಂತಹ ಸನ್ನಿವೇಶದಲ್ಲಿ ಇಂತಹ ಪ್ರೊಪೋಗಾಂಡಾ ಸಿನಿಮಾಗಳ ಬಗ್ಗೆ ಜಾಗೃತಿ ಮೂಡಿಸಿಕೊಂಡು ಅದನ್ನು ಪಸರಿಸುವುದೇ ನಮಗುಳಿದಿರುವ ಆಯ್ಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾನೂನುಬಾಹಿರ ಹತ್ಯೆ ಆರೋಪ : ಸಿಆರ್‌ಪಿಎಫ್ ಅಧಿಕಾರಿಗೆ ಶೌರ್ಯ ಚಕ್ರ ನೀಡಿರುವುದನ್ನು ಖಂಡಿಸಿದ ಕುಕಿ-ಝೋ ಗುಂಪುಗಳು

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ತಮ್ಮ ಸಮುದಾಯದ ಹತ್ತು ಪುರುಷರ "ಕಾನೂನುಬಾಹಿರ ಹತ್ಯೆ"ಯಲ್ಲಿ ಭಾಗಿಯಾಗಿದ್ದಾರೆ ಎಂದು ಮಣಿಪುರದ ಕುಕಿ-ಝೋ ಸಂಘಟನೆಗಳು ಸೋಮವಾರ (ಜ.26) ಆರೋಪಿಸಿದ್ದು, ಆ ಅಧಿಕಾರಿಗೆ ಶೌರ್ಯ ಚಕ್ರ...

ಉತ್ತರ ಪ್ರದೇಶ: ಸೋನಭದ್ರಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು 

ಸೋನಭದ್ರ: ರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರವಾರ್ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ರಾವರ್ ಗ್ರಾಮದ ಪಂಚಾಯತ್ ಕಟ್ಟಡದ ಬಳಿ...

ಬುಡಕಟ್ಟು ರೈತರ ಬೃಹತ್ ಮೆರವಣಿಗೆ: ಬೇಡಿಕೆಗಳ ಕುರಿತು ಸಿಪಿಐ(ಎಂ)-ಎಐಕೆಎಸ್ ನಿಯೋಗದೊಂದಿಗೆ ಮುಖ್ಯಮಂತ್ರಿ ಫಡ್ನವೀಸ್ ಮಾತುಕತೆ

ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ)-ಎಐಕೆಎಸ್ ನೇತೃತ್ವದಲ್ಲಿ ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ನಡೆಸಿದ ದೀರ್ಘ ಮೆರವಣಿಗೆ ಇಂದು ಜನವರಿ 27 ರಂದು ಮುಂಬೈನ ಮಂತ್ರಾಲಯ...

‘ಭಾರತದಲ್ಲಿ ಬಿಜೆಪಿ ದಾಳಿಯನ್ನು ಎದುರಿಸಲು ‘ದೀದಿ’ಗೆ ಮಾತ್ರ ಸಾಧ್ಯ’: ಅಖಿಲೇಶ್ ಯಾದವ್ 

ಕೋಲ್ಕತ್ತಾ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ "ಬಿಜೆಪಿಯ ದಾಳಿಯನ್ನು ಎದುರಿಸುವಲ್ಲಿನ ಧೈರ್ಯ"ಕ್ಕಾಗಿ ಟಿಎಂಸಿ ಮುಖ್ಯಸ್ಥೆಯನ್ನು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ...

ಬದರಿನಾಥ್-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಸಾಧ್ಯತೆ

ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶ ಅನುಮತಿಸಬಹುದು. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು...

ವಿಬಿ-ಜಿ ರಾಮ್ ಜಿ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ (ಜ.27) ಬೆಂಗಳೂರಿನ ಫ್ರೀಡಂ...

ಯುಸಿಸಿಯಲ್ಲಿ 18 ಬದಲಾವಣೆ ಮಾಡಿದ ಉತ್ತರಾಖಂಡ್ ಸರ್ಕಾರ; ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ

ವಿವಾಹ, ವಿಚ್ಛೇದನ, ಲಿವ್-ಇನ್ ಸಂಬಂಧಗಳು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಸುಮಾರು ಹದಿನೆಂಟು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಹಲವಾರು ನಿಬಂಧನೆಗಳನ್ನು ಮಾರ್ಪಡಿಸಲು ಉತ್ತರಾಖಂಡ ಸರ್ಕಾರ...

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮಗಾಂಧಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೇಂದ್ರ ಸರ್ಕಾರ ನರೇಗಾ ಬದಲಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ದ ಬೆಂಗಳೂರಿನ ಸ್ವಾತಂತ್ರ್ಯ...

ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಗಿರಿದಿಹ್: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಪಿರ್ತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಲಾದಿಹ್ ಪ್ರದೇಶದಲ್ಲಿ ಈ ಘಟನೆ...

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ : ಪ್ರಬಲ ಜಾತಿಯವರಿಂದ ತೀವ್ರ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಪ್ರಬಲ ಜಾತಿಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊಸ ನಿಯಮಗಳ 'ಜಾತಿ ಆಧಾರಿತ ತಾರತಮ್ಯ' ಎಂಬುವುದರ...