ಕೋವಿಡ್ ಕರಿನೆರಳಿನಿಂದ ಮುಕ್ತವಾಗಿ ಚಿತ್ರರಂಗ ಒಂದಿಷ್ಟು ಚೇತರಿಕೆಯನ್ನು ಕಂಡ ವರ್ಷವೆಂದೇ 2022 ಇಸವಿಯನ್ನು ಗುರುತಿಸಬಹುದು. ನಾವೀಗ ವರ್ಷಾಂತ್ಯದಲ್ಲಿದ್ದು, ಹೊಸ ವರ್ಷದ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಹಿಂದಣ ಹೆಜ್ಜೆಗಳನ್ನು ಮೆಲುಕು ಹಾಕುತ್ತಾ, ಪ್ರಗತಿಶೀಲ ಸಮಾಜವನ್ನು ಕಟ್ಟುವ ದಿಸೆಯಲ್ಲಿ ಸಾಗಬೇಕಿದೆ.
2022ನೇ ಇಸವಿಯಲ್ಲಿ “ಫ್ಯಾನ್ ಇಂಡಿಯಾ” ಖ್ಯಾತಿಗೆ ದಕ್ಷಿಣ ಭಾರತದ ಕೆಲವು ಸಿನಿಮಾಗಳು ಹೆಸರಾಗಿದ್ದುಂಟು. ಪ್ಯಾನ್ ಇಂಡಿಯಾದ ಮಾನದಂಡ, ಅಂತಹ ಸಿನಿಮಾಗಳ ಕತೆ, ಚಿತ್ರಕತೆ, ಸಂಭಾಷಣೆ ಸಮಸಮಾಜದ ಮೇಲೆ ಬೀರುವ ಪರಿಣಾಮ ಚರ್ಚಿತ ವಿಷಯ. ಪ್ಯಾನ್ ಇಂಡಿಯಾದಾಚೆಗೆ ಜನರ ಮೆಚ್ಚುಗೆಯನ್ನು ಪಡೆದ, ಸದಭಿರುಚಿಯ ಸಿನಿಮಾಗಳು ಈ ವರ್ಷ ತೆರೆಕಂಡಿವೆ. ಅಂಥವುಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಚಿತ್ರರಂಗದ ಕೆಲವು ಸಿನಿಮಾಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
- ಗಂದಧಗುಡಿ (ಕನ್ನಡ)
ಕರ್ನಾಟಕರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ, ‘ಡಾಕ್ಯೂ-ಡ್ರಾಮಾ’ ಎಂದೇ ಗುರುತಿಸಲಾಗಿರುವ ‘ಗಂಧದಗುಡಿ’ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು. ಕನ್ನಡ ನಾಡಿನ ವನ್ಯಜೀವಿ ಸಂಪತ್ತು, ವೈವಿಧ್ಯಮಯ ಜನ ಸಂಸ್ಕೃತಿಯನ್ನು ಪರಿಚಯಿಸಿದ ಈ ವಿನೂತನ ಡಾಕ್ಯೂಮೆಂಟರಿ ಪುನೀತ್ ಅವರಿದ್ದ ಕಾಳಜಿಯ ಪ್ರತಿರೂಪವೂ ಆಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಿಯಾಯಿತಿ ದರದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿ, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಡಾಕ್ಯೂಮೆಂಟರಿಯನ್ನು ವೀಕ್ಷಿಸಲು ಸಾಧ್ಯವಾಯಿತು. ನಮ್ಮ ನಾಡಿನ ಅಸ್ಮಿತೆ ವಿನೂತನವಾದದ್ದು ಎಂಬುದನ್ನು ಗಂಧದಗುಡಿ ಸಾರುತ್ತದೆ. ಭೌಗೋಳಿಕವಾಗಿ ವಿಶಿಷ್ಟವಾದ ರಾಜ್ಯ ಕರ್ನಾಟಕ ಎಂಬುದನ್ನು ಒಂದೂವರೆ ಗಂಟೆಯಲ್ಲಿ ಪರಿಚಯಿಸಿಕೊಡಲಾಗಿದೆ.
2. ಗುರುಶಿಷ್ಯರು (ಕನ್ನಡ)
‘ಜಂಟಲ್ ಮ್ಯಾನ್’ ಎಂಬ ಸದಭಿರುಚಿಯ ಸಿನಿಮಾ ನೀಡಿದ್ದ ನಿರ್ದೇಶಕ ಜಡೇಶ ಕೆ. ಹಂಪಿಯವರು ‘ಗುರು ಶಿಷ್ಯರು’ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು. ಮೂರರಲ್ಲಿ ಮತ್ತೊಂದು ಆಗದಂತಹ ಕ್ರೀಡಾ ಕಥೆಯನ್ನು ನೀಡಿದರು.
1981ರಲ್ಲಿ ಎಚ್.ಆರ್.ಭಾರ್ಗವ್ ಅವರು ನಿರ್ದೇಶಿಸಿದ ‘ಗುರುಶಿಷ್ಯರು’ ಸಿನಿಮಾವನ್ನು ಕನ್ನಡಿಗರು ಮರೆಯಲಾರರು. ಈ ಟೈಟಲ್ ಚಿರಪರಿಚಿತ. ಜಡೇಶ ನಿರ್ದೇಶನದ ‘ಗುರುಶಿಷ್ಯರು’ 2022ರ ಸಿನಿಮಾದರೂ ಕಥೆ ನಡೆಯುವುದು 1995ರ ಕಾಲಘಟ್ಟದಲ್ಲಿ. ‘ಜಂಟಲ್‌ಮ್ಯಾನ್’ ಸಿನಿಮಾದಂತೆಯೇ ‘ಗುರುಶಿಷ್ಯರು’ ಮೊದಲಾರ್ಧ ಭರಪೂರ ರಂಜನೆಯಾದರೆ, ದ್ವಿತೀಯಾರ್ಥ ಚಿಂತನೆಗೆ ಹೊರಳುತ್ತದೆ.
ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಲ್ಲಿ ಇರುವ ಸಾಮಾನ್ಯ ರೋಚಕತೆ ಇಲ್ಲಿಯೂ ಇದೆ. ವೈಯಕ್ತಿಕ ಸಾಧನೆಯ ಕಥಾ ಹಂದರವುಳ್ಳ ಸ್ಪೋರ್ಟ್ಸ್ ಡ್ರಾಮಾಗಳಿಗಿಂತ ಸಾಮಾಜಿಕ ವ್ಯವಸ್ಥೆಯೊಂದಿಗೆ ಬರೆತ ಕ್ರೀಡಾ ಕಥನಗಳಿಗೆ ಮಹತ್ವ ಇರುವುದನ್ನು ‘ಗುರು ಶಿಷ್ಯರು’ ಸಿನಿಮಾ ಮನಗಾಣಿಸಿದೆ. ಖೋ ಖೋ ಆಟಕ್ಕೆ ಹಾಗೂ ಖೋ ಖೋ ಆಟಗಾರರಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬ ಆಶಯವನ್ನು ಈ ಸಿನಿಮಾ ವ್ಯಕ್ತಪಡಿಸಿದೆ.
ಕಥಾನಾಯಕ ಮಹೋಹರ್ ಪಾತ್ರದಲ್ಲಿ ಶರಣ್, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿ ಸುರೇಶ್ ಹೆಬ್ಳೀಕರ್, ಖಳನಾಯಕನಾಗಿ ಅಪೂರ್ವ ಕಾಸರವಳ್ಳಿ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಶಿಷ್ಯರ ಪಾತ್ರದಲ್ಲಿ ನಟಿರುವ ಎಲ್ಲ ಮಕ್ಕಳೂ ಇಷ್ಟವಾಗುತ್ತಾರೆ. (ವಿಮರ್ಶೆ ಓದಿರಿ: ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’)
3. ನಕ್ಷತ್ತಿರಮ್ ನಗರ್ಗಿರದು (ತಮಿಳು)
ದೇವನೂರ ಮಹಾದೇವ ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ಮಹಿಳಾ ಪಾತ್ರಗಳು ಎಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ವಿತೀಯವಾಗಿ ನೆಲೆಸಿವೆ. ದಲಿತ ಕಥನಗಳಲ್ಲಿ ಬರುವ ಮಹಿಳೆಯರು, ಗಂಡಸರ ಮುಂದೆ ನಾಚುತ್ತಾ, ಹೆಬ್ಬೆರಳು ನೆಲಕ್ಕೆ ಸವರುತ್ತಾ, ಸೆರಗು ತಲೆಯ ಮೇಲೆ ಹಾಕಿಕೊಂಡು ನಿಲ್ಲುವುದಿಲ್ಲ. ಒಡಲಾಳದ ಸಾಕವ್ವನ ಲೋಕ, ಕುಸುಮಬಾಲೆಯ ಕೆಂಪಿ, ತೂರಮ್ಮ- ಹೀಗೆ ಈ ನೆಲದ ಗಟ್ಟಿಗಿತ್ತಿಯರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಿ.ಲಂಕೇಶರು ಕಂಡ ‘ಅವ್ವ’- ಈ ಮಣ್ಣಿನ ನಿಜದ ಹೆಣ್ಣಿನ ದರ್ಶನ. ‘ಆಕೆ- ಕಪ್ಪುನೆಲ, ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು, ಬನದ ಕರಡಿ, ಭಗವದ್ಗೀತೆಯಾಚೆಯ ಬದುಕು’. ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್ ಸೃಷ್ಟಿಸಿದ ಮಹಿಳಾ ಪಾತ್ರಗಳು ಕೂಡ ಇದಕ್ಕಿಂತ ಭಿನ್ನವೇನಲ್ಲ. ರಂಜಿತ್ ಸಿನಿಮಾಗಳಲ್ಲಿ ಪುರುಷ ಪಾತ್ರಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮಹಿಳಾ ಪಾತ್ರಗಳಿಗೂ ಇದೆ. ರಂಜಿತ್ ನಿರ್ದೇಶನದ, ಇತ್ತೀಚೆಗೆ ತೆರೆಕಂಡ ‘ನಕ್ಷತ್ತಿರಮ್ ನಗರ್ಗಿರದು’ ಸಿನಿಮಾ ಈ ಗಟ್ಟಿತನವನ್ನು ಮತ್ತಷ್ಟು ವಿಸ್ತರಿಸಿದೆ.
‘ನಚ್ಚತಿರಂ ನಗರ್ಗಿರದು’ (ನಕ್ಷತ್ರ ಚಲಿಸುತ್ತಿವೆ) ಎಂಬ ಹೆಸರು ರೂಪಕದಂತಿದೆ. ಇದೊಂದು ಆಶಾವಾದದ ಸಂಕೇತ. ಬೆಳಕಿನುಂಡೆಯೊಂದು ನೆಲವನ್ನು ಸ್ಪರ್ಶಿಸುವ ಕೌತುಕದ ಕ್ಷಣ. ಇಲ್ಲಿನ ಬಹುತೇಕ ಪಾತ್ರಗಳೂ ಆ ಚಲಿಸುವ ನಕ್ಷತ್ರಕ್ಕಾಗಿ ಧ್ಯಾನಿಸುತ್ತಿವೆ. ಪ್ರೀತಿಯ ಅನ್ವೇಷಣೆಯಲ್ಲಿ ತೊಡಗಿರುವ ಇಲ್ಲಿನ ಪ್ರತಿ ಪಾತ್ರಕ್ಕೂ ಮಹತ್ವವಿದೆ. ಆದರೆ ಆ ಕಥೆ ಚಲನೆ ಪಡೆಯುವುದು ರೆನೆ ಎಂಬ ದಲಿತ ಹುಡುಗಿಯ ಸುತ್ತ.
ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್, ಗಂಡು- ಹೆಣ್ಣಿನ ನಡುವಿನ ಸಂಬಂಧ- ಇದೆಲ್ಲವನ್ನೂ ಸಮಾಜ ಒಳಗೊಂಡಿದೆ ಎಂಬುದನ್ನು ಚಿತ್ರಿಸುತ್ತಲೇ, ಪ್ರಧಾನವಾಗಿ ರಂಜಿತ್ ಚರ್ಚಿಸಿರುವುದು ಜಾತಿ ಸುತ್ತಲಿನ ಪ್ರೀತಿಯ ಕುರಿತು. ಮರ್ಯಾದೆಗೇಡು ಹತ್ಯೆಗಳ ಸುತ್ತಲಿನ ರಾಜಕೀಯದ ಚರ್ಚೆ ನಡೆಸುತ್ತಲೇ ಇಲ್ಲಿನ ಸಂಪ್ರದಾಯವಾದಿ ಮನಸ್ಸುಗಳ ಪರಿವರ್ತನೆಗೆ ಅವಕಾಶ ನೀಡಬೇಕೆಂಬ ಆಶಯವನ್ನು ರಂಜಿತ್ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಮೂಲಭೂತವಾದಿಗಳಿಗೆ ‘ಗೂಸಾ’ ಕೊಡುವುದೂ ಅನಿವಾರ್ಯವೆಂದು ರಂಜಿತ್ ನಂಬಿದಂತಿದೆ. (ವಿಮರ್ಶೆ ಓದಿರಿ: ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್ ಪ್ರೇಮಲೋಕ)
4. ಠಾಣಾಕ್ಕಾರನ್ (ತಮಿಳು)
ಪೊಲೀಸ್ ತರಬೇತಿ ಪಡೆಯುತ್ತಿದ್ದ ಯುವಕರನ್ನು ಉತ್ತೇಜಿಸುವ ಸಲುವಾಗಿ ತರಬೇತಿ ಶಾಲೆಗಳಲ್ಲಿ ಅಧಿಕಾರಿಗಳು ಸ್ಪರ್ಧೆಗಳನ್ನು ಜಾರಿಗೆ ತಂದರು. ಗೆದ್ದವರಿಗೆ ಬಿರುದು ಹಾಗೂ ಗೌರವಗಳನ್ನು ನೀಡಲಾಯಿತು. ಸೋತವರಿಗೆ ತರಬೇತಿ ಅವಧಿಯನ್ನು ವಿಸ್ತರಿಸಲಾಯಿತು. ಪೊಲೀಸ್ ಪಡೆಯಲ್ಲಿ ಸೇರಿದ ಯುವಕರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಯೋಚಿಸದಂತೆ ನೋಡಿಕೊಳ್ಳಲಾಯಿತು. ತರಬೇತಿ ಆಧಾರಿತ ಸ್ಪರ್ಧಾತ್ಮಕತೆಯ ಬಗ್ಗೆ ಯೋಚಿಸುವಂತೆ ಪ್ರೊತ್ಸಾಹಿಸಲಾಯಿತು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಪೊಲೀಸ್ ಇಲಾಖೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು. ಆದರೆ ಇಂದಿಗೂ ಕೆಲವು ವಿಷಯಗಳು ಹಾಗೆಯೇ ಉಳಿದಿವೆ. ಅವುಗಳಲ್ಲಿ ಬ್ರಿಟಿಷ್ ಅವಧಿಯಲ್ಲಿ ರಚಿಸಲಾದ ತರಬೇತಿಗಳು ಹಾಗೂ ಸ್ಪರ್ಧೆಗಳು ಕೂಡ ಸೇರಿವೆ. ಇಂತಹ ವಿಷಯವನ್ನು ಒಳಗೊಂಡಿರುವ ಕಥೆಯೇ ‘ಠಾಣಾಕ್ಕರನ್’.
ತಮಿಳು ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂಡಿ ಬರುತ್ತಿರುವ ಪೊಲೀಸ್ ಕೇಂದ್ರಿತ ಕಥೆಗಳು ವಿಭಿನ್ನವಾಗಿವೆ. ಅಸಹಾಯಕರನ್ನು ರಕ್ಷಿಸುವ ‘ಹಿರೋಯಿಸಂ’ ಪ್ರಧಾನ ಪೊಲೀಸ್ ಕಥೆಗಳು ಒಂದು ಕಡೆಯಾದರೆ, ಪೊಲೀಸ್ ವ್ಯವಸ್ಥೆಯೊಳಗಿನ ಶ್ರೇಣಿಕೃತ ವ್ಯವಸ್ಥೆ, ಜಾತಿ ತಾರತಮ್ಯ, ಮೇಲಾಧಿಕಾರಿಗಳ ರಕ್ಷಣೆಗಾಗಿ ಅಮಾಯಕರ ಬಲಿ, ಒತ್ತಡ ಮೊದಲಾದ ವಿಷಯಗಳನ್ನು ಕೇಂದ್ರೀಕರಿಸಿರುವ ಸಿನಿಮಾಗಳು ಮತ್ತೊಂದು ಕಡೆ ಇವೆ.
ವೆಟ್ರಿಮಾರನ್ ನಿರ್ದೇಶನದ ‘ವಿಸಾರಣೈ’, ಟಿ.ಜೆ.ಜ್ಞಾನವೇಲ್‌ರವರ ‘ಜೈ ಭೀಮ್’, ಫ್ರಾಂಕ್ಲಿನ್ ಜಾಕಬ್ ನಿರ್ದೇಶಿಸಿದ ‘ರೈಟರ್’ ಎರಡನೇ ವರ್ಗಕ್ಕೆ ಸೇರಿವೆ. ಈ ಪರಂಪರೆಯನ್ನು ‘ಠಾಣಾಕ್ಕರನ್’ ಮುಂದುವರಿಸಿದೆ. ಖ್ಯಾತ ನಟ ‘ತಮಿಳ್’ ಅವರು ‘ಠಾಣಾಕ್ಕಾರನ್’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. (ವಿಮರ್ಶೆ ಓದಿರಿ: ಠಾಣಾಕ್ಕಾರನ್: ಬ್ರಿಟಿಷ್ ಕಾಲದ ಪೊಲೀಸ್ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ)
5. ಜನಗಣಮನ (ಮಲಯಾಳಂ)
“ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತ ಅಥವಾ ಬಹುಸಂಖ್ಯಾತದ ಕಾನೂನಿಗೆ ಜಾಗವಿಲ್ಲ” ಎಂದಿದ್ದರು ಮಹಾತ್ಮ ಗಾಂಧೀಜಿ. ಇಂದಿನ ರಾಜಕೀಯ, ಸಾಮಾಜಿಕ ವಾತಾವರಣವನ್ನು ನೋಡಿದರೆ ಗಾಂಧೀಜಿಯವರ ಮಾತನ್ನು ಮತ್ತೆ ಮತ್ತೆ ಮನನ ಮಾಡಬೇಕಾದ ತುರ್ತು ಸೃಷ್ಟಿಯಾಗಿದೆ ಎಂಬುದನ್ನು ‘ಜನಗಣಮನ’ ಮನಗಾಣಿಸಿದೆ.
ಪೃಥ್ವಿರಾಜ್ ಸುಕುಮಾರ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಜನ ಗಣ ಮನ’ (ಮಲಯಾಳಂ) ಸಿನಿಮಾ ಜನರ ಆತ್ಮಸಾಕ್ಷಿಯನ್ನು, ಸಮೂಹ ಸನ್ನಿಯ ಹಿಂದಿರುವ ತಪ್ಪು ಹೆಜ್ಜೆಗಳನ್ನು ದಟ್ಟವಾಗಿ ತೆರೆದಿಡುವ ಪ್ರಯತ್ನ ಮಾಡಿದೆ. ಮನರಂಜನಾ ಪರಿಭಾಷೆಗಳನ್ನು ಸಶಕ್ತಿಯವಾಗಿ ಬಳಸಿಕೊಂಡೇ ದೇಶದ ಹಲವು ಸಮಸ್ಯೆಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಹತ್ತಾರು ಘಟನೆಗಳನ್ನು ಕಥೆಯೊಳಗೆ ತಂದಿದ್ದರೂ ಯಾವುವೂ ಬಿಡಿಬಿಡಿ ಸಂಗತಿಗಳಾಗಿ ಉಳಿಯುವುದಿಲ್ಲ.
ವಿಶ್ವವಿದ್ಯಾನಿಲಯಗಳಿಗೆ ಮತೀಯವಾದಿಗಳ ಪ್ರವೇಶ, ಕೇಸರಿ ರಾಜಕಾರಣ, ಶಿಕ್ಷಣ ಮಾಫಿಯಾ, ಶೈಕ್ಷಣಿಕ ವ್ಯವಸ್ಥೆಯೊಳಗೆ ತುಂಬಿದ ತರತಮ, ಪ್ರಜಾತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ವಿದ್ಯಾರ್ಥಿಗಳಿಗೆ ದೇಶದ್ರೋಹದ ಪಟ್ಟ, ನ್ಯಾಯಾಧೀಶರಂತೆ ವರ್ತಿಸುವ ಮಾಧ್ಯಮಗಳು, ಬಹುಮತದ ಸನ್ನಿಯೊಳಗೆ ಕಳೆದು ಹೋದ ಸೂಕ್ಷ್ಮ ಪ್ರಜ್ಞೆ, ಭಾವನಾತ್ಮಾಕ ವಿಷಯಗಳನ್ನು ಎಳೆತಂದು ನಿಜ ಸಮಸ್ಯೆಗಳನ್ನು ಮರೆಮಾಚುವ ರಾಜಕಾರಣಿಗಳು, ಅಧಿಕಾರಶಾಹಿಯ ದರ್ಪ ಹಾಗೂ ಸುಳ್ಳುಗಳು, ಪ್ರಭತ್ವದ ಸುಳ್ಳುಗಳನ್ನು ಪ್ರಶ್ನಿಸಿದ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ಶಿಕ್ಷೆ- ಹೀಗೆ ಹಲವಾರು ಸಂಗತಿಗಳನ್ನು ಒಂದು ಕೋನದೊಳಗೆ ತರುವ ಪ್ರಯತ್ನವನ್ನು ನಿರ್ದೇಶಕ ಡಿಜೊ ಜೋಸ್ ಆಂಟೊನಿ ಸಶಕ್ತವಾಗಿ ಮಾಡಿದ್ದಾರೆ. (ವಿಮರ್ಶೆ ಓದಿರಿ: ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು)
6. ಮಲಯನ್‌ಕುಂಜು (ಮಲಯಾಳಂ)
ಮಹೇಶ್ ನಾರಾಯಣನ್ ಕತೆ, ಚಿತ್ರಕಥೆ ಬರೆದು, ಅದ್ಭುತವಾಗಿ ಛಾಯಾಗ್ರಹಣ ಮಾಡಿರುವ, ಸಾಜಿಮನ್ ಪ್ರಭಾಕರ್ ನಿರ್ದೇಶಿಸುವ ‘ಮಲಯನ್‌ಕುಂಜು’ ಸಿನಿಮಾ, ‘ಪ್ರಕೃತಿ’ ಮತ್ತು ‘ಮನುಷ್ಯನ ಸಂಕುಚಿತತೆ’ ಕುರಿತು ಚರ್ಚಿಸುತ್ತದೆ. ಫಹದ್ ಫಾಸಿಲ್ ಅವರ ಅಭಿನಯ ಇಡೀ ಚಿತ್ರದ ಜೀವಾಳ.
‘ಮಲಯನ್‌ಕುಂಜು’ ಸಿನಿಮಾವನ್ನು ಎರಡು ಭಾಗಗಳಾಗಿ ನೋಡುವ ಅಗತ್ಯವಿದೆ. ಮೊದಲಾರ್ಧ ಮನುಷ್ಯನ ಕ್ರಿಯೆಯಾದರೆ, ದ್ವಿತೀಯಾರ್ಧ ಪ್ರಕೃತಿಯ ಪ್ರತಿಕ್ರಿಯೆ ಎನ್ನಬಹುದು. ಕಥಾನಾಯಕನ ಸಂಕುಚಿತತೆ, ಮಡಿವಂತಿಕೆ, ದಲಿತರ ಬಗೆಗಿನ ಅಸಹನೆ ಎಲ್ಲವೂ ಪ್ರಕೃತಿಯ ವಿರಾಟ್ ರೂಪದ ಮುಂದೆ ಕ್ಷುಲ್ಲಕ ಎಂಬ ಸಂದೇಶವನ್ನು ದ್ವಿತೀಯಾರ್ಧದಲ್ಲಿ ನಿರೂಪಿಸಲಾಗಿದೆ. (ವಿಮರ್ಶೆ ಓದಿರಿ: ಫಾಸಿಲ್ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?)
7. ಪಡ (ಮಲಯಾಳಂ)
‘ಪ್ರಭುತ್ವ’ ಹಾಗೂ ‘ಆದಿವಾಸಿ’ ನಡುವಿನ ಸಂಘರ್ಷದ ನಿಜ ಘಟನೆ ಆಧಾರಿತ ಸಿನಿಮಾ- ‘ಪಡ’. ದೃಷ್ಟಿಕೋನ- ಭೂಮಿ ಹೋರಾಟ. ದೀರ್ಘಕಾಲ ಅಧಿಕಾರದಲ್ಲಿರುವ ಮೇಲ್ಜಾತಿ ಪ್ರಣೀತ ಎಡ-ಬಲ ಪಕ್ಷಗಳೆರಡೂ ಆದಿವಾಸಿಗಳನ್ನು ನಿರ್ಲಕ್ಷಿಸಿದ್ದನ್ನು, ಒಕ್ಕಲೆಬ್ಬಿಸಿದ್ದನ್ನು, ನಿರ್ಗತಿಕರನ್ನಾಗಿ ಮಾಡಿ ಪುನವರ್ಸತಿಗೆ ದೂಡಿದ್ದನ್ನು ‘ಪಡ’ ಚರ್ಚಿಸಿದೆ.
ಕೆ.ಎಂ.ಕಮಲ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಕುಂಚಾಕೊ ಬೋಬನ್, ವಿನಾಯಕನ್, ದಿಲೀಶ್ ಪೋತನ್ ಮತ್ತು ಜೋಜು ಜಾರ್ಜ್ ಥರದ ಪ್ರತಿಭಾವಂತ ನಟರು ಅಭಿನಯಿಸಿದ್ದಾರೆ. ಕ್ರಾಂತಿಯ ಮಾರ್ಗ ಹಿಡಿದವರ ಒತ್ತಾಯಗಳನ್ನು ಸರ್ಕಾರ ಒಪ್ಪಿತೆ? ಆದಿವಾಸಿಗಳ ಸ್ಥಿತಿ ಬದಲಾಯಿತೆ? – ಎಂಬ ಗಂಭೀರ ವಿಚಾರಗಳನ್ನು ಇಲ್ಲಿ ತೆರೆಗೆ ತರಲಾಗಿದೆ. (ವಿಮರ್ಶೆ ಓದಿರಿ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’)
8. ಸೀತಾರಾಮಂ (ತೆಲುಗು)
ಮಲಯಾಳಂನ ದುಲ್ಕರ್ ಸಲ್ಮಾನ್, ಹಿಂದಿಯ ಮೃಣಾಲ್ ಠಾಕೂರ್, ಕನ್ನಡದ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಹಲವು ನಟರು ಅಭಿನಯಿಸಿರುವ ಈ ಸಿನಿಮಾದ ನವಿರು ಪ್ರೇಮಕಥೆಗೆ ಎಲ್ಲ ಜನವರ್ಗದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲೂ ಸ್ಟ್ರೀಮಿಂಗ್ ಆಗುತ್ತಿರುವ ‘ಸೀತಾರಾಮಂ’, ಈ ಕಾಲಘಟ್ಟದ ಅನೇಕ ರಾಜಕೀಯ ಸೂಕ್ಷ್ಮಗಳನ್ನು ನಿಭಾಯಿಸಿರುವ ರೀತಿ ಅಚ್ಚರಿಯೇ ಸರಿ. ಯಾವುದೇ ಸಾಂಸ್ಕೃತಿಕ ಚಟುವಟಿಕೆಯು ಹಿಂದುತ್ವ ರಾಜಕಾರಣದ ವಿರೋಧವನ್ನು ಎದುರಿಸಬೇಕಾದ ವಿಚಿತ್ರ ಪರಿಸರ ಈಗ ನಿರ್ಮಾಣವಾಗಿರುವುದನ್ನು ದೇಶದ್ಯಾಂತ ಕಾಣುತ್ತಿದ್ದೇವೆ. ಹೀಗಾಗಿ ಸ್ವಲ್ಪ ಏರುಪೇರಾದರೂ ‘ಬಾಯ್ಕಾಟ್’ ಎನ್ನುತ್ತಾರೆ. ಇದೆಲ್ಲವನ್ನೂ ನಿಭಾಯಿಸಿ, ಯಾವುದೇ ವಿರೋಧಕ್ಕೆ ಆಸ್ಪದ ನೀಡದಂತೆ ಹೇಳಬೇಕಾದ ಮನುಷ್ಯ ಸಹಜ ಸತ್ಯಗಳನ್ನು ಚಿತ್ರಿಸುವುದು ಸವಾಲಿನ ಸಂಗತಿ. ಹೀಗಾಗಿ ರಾಜಕಾರಣದೊಂದಿಗೆ ಬೆರೆತ ಧರ್ಮಸೂಕ್ಷ್ಮಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿರುವ ಕಾರಣಕ್ಕೆ ‘ಹನುಮಂತರಾವ್ ರಾಘವಪುಡಿ’ ನಿರ್ದೇಶನದ ‘ಸೀತಾರಾಮಂ’ ಮುಖ್ಯವಾಗಿದೆ. (ವಿಮರ್ಶೆ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…)
9. ಝುಂಡ್ (ಹಿಂದಿ)
ಅಮಿತಾಬ್ ಬಚ್ಚನ್ ಪ್ರಧಾನ ಭೂಮಿಕೆಯಲ್ಲಿರುವ, ನಾಗರಾಜ್ ಮಂಜುಳೆಯವರು ನಿರ್ದೇಶಿಸಿರುವ ‘ಝುಂಡ್’ ಸಿನಿಮಾ ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.
ಒಲಿಂಪಿಕ್ಸ್, ಫುಟ್ಬಾಲ್ ವರ್ಡ್‌ಕಪ್ ನಡೆದಾಗಲೆಲ್ಲ- ಭಾರತವೇಕೆ ಈ ಕ್ಷೇತ್ರದಲ್ಲಿ ಪ್ರಜ್ವಲಿಸುವುದಿಲ್ಲ, ಸಣ್ಣಪುಟ್ಟ ರಾಷ್ಟ್ರಗಳೇ ಹಲವು ಚಿನ್ನದ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಮುಡಿಗೇರಿಸಿಕೊಳ್ಳುವಾಗ, 130 ಕೋಟಿ ಜನಸಂಖ್ಯೆಯ ಭಾರತವೇಕೆ ಪದಕಗಳನ್ನು ಗೆಲ್ಲುವುದಿಲ್ಲ? ನಾವೇಕೆ ಸಾಕರ್‌ನಂತಹ ವಿಶ್ವವಿಖ್ಯಾತ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿಲ್ಲ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಭಾರತದ ಜಾತಿ ವ್ಯವಸ್ಥೆಗೂ ಕ್ರೀಡೆಯಲ್ಲಿ ಭಾರತ ಹಿಂದುಳಿದಿರುವುದಕ್ಕೂ ಇಲ್ಲಿನ ರೋಗಗ್ರಸ್ತ ವ್ಯವಸ್ಥೆಗೂ ಕಾರಣಗಳಿರುವುದನ್ನು ಢಾಳಾಗಿ ಶೋಧಿಸುತ್ತದೆ ‘ಝುಂಡ್’.
‘ಸ್ಲಮ್ ಸಾಕರ್ ಇನ್ ಇಂಡಿಯಾ’ ಸ್ಥಾಪಕರಾದ ಸಾಮಾಜಿಕ ಕಾರ್ಯಕರ್ತ ವಿಜಯ್ ಬರ್ಸೆ ಅವರ ಜೀವನದಿಂದ ಪ್ರೇರಿತವಾದ ‘ಝುಂಡ್’ ವಿಜಯ್ ಬರ್ಸೆಯವರ ಜೀವನ ಕಥೆಯಾಗಿಯಷ್ಟೇ ಉಳಿಯುವುದಿಲ್ಲ. ಪೂರ್ಣ ಪ್ರಮಾಣದ ಕ್ರೀಡಾ ಕಥನವೂ ಅಲ್ಲ. ಭಾರತ ಸಾಮಾಜಿಕ ವ್ಯವಸ್ಥೆಯನ್ನು ಕ್ರೀಡೆಯ ನೆಪದಲ್ಲಿ ‘ಝುಂಡ್’ ಹೇಳಲು ಯತ್ನಿಸಿದೆ. ಪ್ರತಿಭೆಗಂಟಿರುವ ಅಸ್ಪೃಶ್ಯ ಜಗತ್ತನ್ನು ಬಿಚ್ಚಿಡುತ್ತದೆ. (ವಿಮರ್ಶೆ ಓದಿರಿ: ನಾಗರಾಜ್ ಮಂಜುಳೆಯ ‘ಝುಂಡ್’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’)
10. ಅನೇಕ್ (ಹಿಂದಿ)
ಅನುಭವ್ ಸಿನ್ಹಾ ನಿರ್ದೇಶನದ ‘ಅನೇಕ್’- ಈಶಾನ್ಯ ರಾಜ್ಯಗಳ ಬದುಕು, ಬಿಕ್ಕಟ್ಟು, ಹೋರಾಟಗಳ ಕುರಿತು ಬೆಳಕು ಚೆಲ್ಲುತ್ತದೆ. ಒಕ್ಕೂಟ ಸರ್ಕಾರ ಮತ್ತು ಈಶಾನ್ಯ ರಾಜ್ಯಗಳ ಹೋರಾಟಗಾರರ ನಡುವಿನ ಚರ್ಚೆಗಳು, ವೈವಿಧ್ಯತೆಯ ಸಂಬಂಧ ಕೇಂದ್ರ ಸರ್ಕಾರಕ್ಕಿರುವ ಒಲವು ನಿಲುವು ಇತ್ಯಾದಿಗಳನ್ನು ಒಳಗೊಂಡು ಸಾಗುವ ‘ಅನೇಕ್’ ಸಿನಿಮಾ “ಜನರು ಮೌನವಾಗಿರಬೇಕೋ ಅಥವಾ ಶಾಂತಿಯಿಂದರಬೇಕೋ” ಎಂಬ ಜಿಜ್ಞಾಸೆಯನ್ನು ನಮ್ಮ ಮುಂದೆ ಇಡುತ್ತದೆ. ನಟ ಆಯುಷ್ಮಾನ್ ಖುರಾನಾ ಅವರು ರಹಸ್ಯ ಏಜೆಂಟ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಭಾರತದ ಈಶಾನ್ಯ ರಾಜ್ಯದಲ್ಲಿನ ರಾಜಕೀಯ ಅಶಾಂತಿಯ ಮೇಲೆ ನಿಗಾ ಇಡುವುದು ಅವರ ಕೆಲಸ. ಅಲ್ಲಿನ ಜನರ ರಾಜಕೀಯ ಒಲುವು ನಿಲುವು, ರಾಷ್ಟ್ರೀಯತೆಯ ಪ್ರಶ್ನೆ- ಇತ್ಯಾದಿ ಗಂಭೀರ ಸಂಗತಿಗಳೊಂದಿಗೆ ‘ಅನೇಕ್’ ವ್ಯವಹರಿಸುತ್ತದೆ.


