Homeಕರ್ನಾಟಕದಲಿತ ಯುವ ಹೋರಾಟಗಾರ ಸಂದೇಶ್ ವಿರುದ್ಧ ಎಫ್‌ಐಆರ್‌; ಬಂಧನ

ದಲಿತ ಯುವ ಹೋರಾಟಗಾರ ಸಂದೇಶ್ ವಿರುದ್ಧ ಎಫ್‌ಐಆರ್‌; ಬಂಧನ

- Advertisement -
- Advertisement -

ಕೋಲಾರ ಜಿಲ್ಲೆಯ ಯುವ ದಲಿತ ಹೋರಾಟಗಾರ, ಡಾ.ಅಂಬೇಡ್ಕರ್‌ ಸೇವಾ ಸಮಿತಿ ಕರ್ನಾಟಕ (ಎಎಸ್‌ಎಸ್‌ಕೆ) ಸಂಘಟನೆಯ ಅಧ್ಯಕ್ಷ ಕೆ.ಎಂ.ಸಂದೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ದಲಿತರ ಮೇಲಾಗುವ ದೌರ್ಜನ್ಯಗಳ ಸಂದರ್ಭದಲ್ಲಿ ಸ್ಥಳಕ್ಕೆ ಹಾಜರಾಗಿ ಸಂತ್ರಸ್ತರ ಪರ ನಿಲ್ಲುವ ಮೂಲಕ ಗಮನ ಸೆಳೆಯುತ್ತಿರುವ ಸಂದೇಶ್‌ ಅವರ ಮೇಲೆ ಬೇಕಂತಲೇ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್‌ಎಸ್‌ಕೆ ಕಾರ್ಯಕರ್ತರು ದೂರಿದ್ದಾರೆ.

“ದಲಿತ ಹೆಣ್ಣುಮಗಳೊಬ್ಬಳಿಗೆ ಸವರ್ಣೀಯ ಜಾತಿಯ ಹುಡುಗ ಮೋಸ ಮಾಡಿದ್ದನ್ನು ಕೇಳಿ, ಆಕೆಯ ನೆರವಿಗೆ ಸಂದೇಶ್ ಧಾವಿಸಿದ್ದರು. ಮೋಸ ಮಾಡಿದ್ದ ಹುಡುಗನನ್ನು ಕರೆದುಕೊಂಡು ಬಂದು, ಸಂಧಾನ ನಡೆಸಿದ್ದರು. ಹುಡುಗ- ಹುಡುಗಿ ಇಬ್ಬರೂ ಮದುವೆಯಾಗುವುದಾಗಿ ಒಪ್ಪಿಕೊಂಡರು. ಆದರೆ ನಂತರದಲ್ಲಿ ಅಪಹರಣದ ಆರೋಪ ಹೊರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ” ಎಂದು ಎಎಸ್‌ಎಸ್‌ಕೆಯ ಕಾರ್ಯಕರ್ತರೊಬ್ಬರು ‘ನಾನುಗೌರಿ.ಕಾಂ’ಗೆ ತಿಳಿಸಿದ್ದಾರೆ.

ದೊಡ್ಡ ಬಳ್ಳಾಪುರ ಸರ್ಕಲ್ ವ್ಯಾಪ್ತಿಯ ರಾಜಾನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನೊಂದ ದಲಿತರ ಪರವಾಗಿ ಹೋರಾಟ ಮಾಡುತ್ತಾ, ಸಂದೇಶ್ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅವರನ್ನು ತೊಂದರೆ ಸಿಲುಕಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

“ಹುಡುಗನನ್ನು ಅಪಹರಣ ಮಾಡಲಾಗಿದೆ ಎಂಬುದು ಸುಳ್ಳು. ದಲಿತ ಹೆಣ್ಣುಮಗಳಿಗೆ ನ್ಯಾಯ ದೊರಕಿಸಬೇಕೆಂದು ಸಂದೇಶ್‌ ಮುಂದಾಗಿದ್ದರು. ವಂಚನೆ ಮಾಡಲು ಯತ್ನಿಸಿದ್ದ ನವೀನ್‌ನನ್ನು ಯಲಹಂಕ ತಾಲ್ಲೂಕಿನ ರಾಜನಕುಂಟೆಯಿಂದ ಕರೆದುಕೊಂಡು ಬಂದಿದ್ದರು. ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನವೀನ್‌ ಆಗಮಿಸಿದ್ದರು. ಆದರೆ ನವೀನ್ ಸ್ನೇಹಿತರು ದೂರು ನೀಡಿದ್ದಾರೆಂದು ಪೊಲೀಸರು ಎಫ್‌ಐಆರ್‌ ಮಾಡಿದ್ದಾರೆ. ನವೀನ್ ವಿಚಾರವಾಗಿ ಕರೆ ಮಾಡಿದಾಗ ಸಂದೇಶ್ ಸ್ವಲ್ಪ ಖಾರವಾಗಿ ಮಾತನಾಡಿದ್ದರು. ಇದರಿಂದ ಪೊಲೀಸರು ಸಿಟ್ಟಿಗೆಟ್ಟು ಈ ರೀತಿಯಲ್ಲಿ ಸಿಲುಕಿಸಿದ್ದಾರೆ” ಎಂದೂ ದೂರಲಾಗುತ್ತಿದೆ.

ದೂರಿನಲ್ಲಿ ಏನಿದೆ?

ದಿನಾಂಕ 13.02.2023 ರಂದು ಬೆಳಗಿನ ಜಾವ 4.00 ಗಂಟೆಗೆ ಮಲಪ್ಪ ಪೂಜಾರ್ ಎಂಬವರು ಠಾಣೆಗೆ ಹಾಜಾರಾಗಿ ದೂರು ನೀಡಿದ್ದು ಅದರನ್ವಯ ಸಂದೇಶ್ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಮಲ್ಲಪ್ಪ ಅವರು ರಘುನಾಥಪುರದಲ್ಲಿರುವ ಎಲ್ & ಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕಂಪನಿಯವರು ಕೊಟ್ಟಿರುವ ರೂಮ್‌ನಲ್ಲಿ ಮಲ್ಲಪ್ಪ ಪೂಜಾರ್‌, ಸಂತೋಷ, ರಾಮು, ವಾಸು ಹಾಗೂ ಶ್ರೀಶೈಲಾ ಒಟ್ಟಿಗೆ ವಾಸವಿದ್ದರು. ದಿನಾಂಕ 12/02/2023 ರಂದು ಭಾನುವಾರವಾಗಿದ್ದರಿಂದ ಕೆಲಸಕ್ಕೆ ರಜೆ ಇತ್ತು. ಮಲ್ಲಪ್ಪ ಮನೆಯಲ್ಲಿಯೇ ಇದ್ದರು. ಸಂತೋಷ, ರಾಮು, ವಾಸು ಹಾಗೂ ಶ್ರೀಶೈಲಾ ಅವರು ಸಂಜೆ 5-00 ಗಂಟೆಗೆ ರಾಜಾನುಕುಂಟೆಯ ಪಿ.ಕೆ. ಮೆನ್ಸ್‌ವೇರ್‌ನಲ್ಲಿ ಬಟ್ಟೆ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದರು.

ಸಂತೋಷ ಲವ್ ಮಾಡುತ್ತಿದ್ದ ಹುಡುಗಿಯು ಇಬ್ಬರು ವ್ಯಕ್ತಿಗಳೊಂದಿಗೆ ಅಂದು ಸಂಜೆ 6-00 ಗಂಟೆ ಸಮಯದಲ್ಲಿ ರೂಮಿನ ಬಳಿಗೆ ಬಂದು ಸಂತೋಷ ಎಲ್ಲಿ ಎಂದು ಕೇಳಿದರು. ಅದಕ್ಕೆ ಮಲ್ಲಪ್ಪ “ಸಂತೋಷ ರಾಜಾನುಕುಂಟೆಗೆ ಬಟ್ಟೆ ತೆಗೆದುಕೊಂಡು ಬರಲು ಹೋಗಿದ್ದಾನೆ” ಎಂದು ತಿಳಿಸಿದರು.

ಆಗ ಅವರು ಸಂತೋಷನನ್ನು ತೋರಿಸು ಎಂದು ಮಲ್ಲಪ್ಪನವರನ್ನು ಕರೆದುಕೊಂಡು ತಾವು ಬಂದಿದೆ XUV 500 ಕಾರಿನಲ್ಲಿ ಹೋದರು. ರಘುನಾಥಪುರ ಸರ್ಕಲ್‌ಗೆ ಬಂದಾಗ ಮತ್ತೊಬ್ಬ ವ್ಯಕ್ತಿ ಕಾರಿನಲ್ಲಿ, ಹತ್ತಿಕೊಂಡರು. ನಂತರ ಮಲ್ಲಪ್ಪ ಸೇರಿದಂತೆ 5 ಜನರು ಸಂಜೆ 7-00 ಗಂಟೆಗೆ ರಾಜಾನುಕುಂಟೆಯ ಪಿಕೆ ಮೆನ್ಸ್ ವೇರ್ ಬಳಿ ಬಂದರು.

“ಬಟ್ಟೆ ಅಂಗಡಿಯಲ್ಲಿದ್ದ ಸಂತೋಷನನ್ನು ಅವರಿಗೆ ತೋರಿಸಿದೆ. ಅಲ್ಲಿಗೆ ಆಗಲೇ ಬಂದಿದ್ದ ಮತ್ತಿಬ್ಬರು ವ್ಯಕ್ತಿಗಳು ಸೇರಿ ನನಗೆ ನಾವು ದೊಡ್ಡಬಳ್ಳಾಪುರ ಪೊಲೀಸರು. ಸಂತೋಷನನ್ನು, ಯಾವುದೋ ಕೇಸಿನಲ್ಲಿ ವಿಚಾರಣೆ ಮಾಡಬೇಕಾಗಿದ್ದು, ಕರೆದುಕೊಂಡು ಹೋಗುತ್ತೇವೆ ಎಂದು ಸಂತೋಷನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೊರಟು ಹೋದರು” ಎಂದು ಮಲ್ಲಪ್ಪ ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

“ಅವರಲ್ಲಿದ್ದ ಒಬ್ಬ ವ್ಯಕ್ತಿಯ ಹೆಸರು ಸಂದೇಶ್ ಅಂತ ಗೊತ್ತಾಯಿತು. ನಾವು ಬೆಳಗಿನ ಜಾವ 1-00 ಗಂಟೆಯವರೆಗೆ ನನ್ನ ಸ್ನೇಹಿತ ಸಂತೋಷನ ಮೊಬೈಲ್ ಫೋನ್ ನಂಬರ್‌ಗೆ ಫೋನ್ ಮಾಡಿದೆವು. ಸಂತೋಷ್‌ ಪೋನ್ ತೆಗೆಯದ ಕಾರಣ ದೊಡ್ಡಬಳಾಪುರ ಪೊಲೀಸ್ ಠಾಣೆಗೆ ಹೋಗಿ ವಿಚಾರ ಮಾಡಿದೆವು. ಪೊಲೀಸಿನವರು ಸಂತೋಷನನ್ನು ಕರೆದುಕೊಂಡು ಬಂದಿರುವುದಿಲ್ಲ ಎಂದು ತಿಳಿಸಿ ರಾಜಾನುಕುಂಟೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿದರು. ಪೊಲೀಸರೆಂದು ಹೇಳಿಕೊಂಡು ನನ್ನ ಸ್ನೇಹಿತ ಸಂತೋಷನನ್ನು XUV 500 ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುವ ಸಂದೇಶ್‌ ಮತ್ತು ಇತರರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು” ಎಂದು ಮಲ್ಲಪ್ಪ ಹೇಳಿದ್ದಾರೆಂಬುದು ಎಫ್‌ಐಆರ್‌ನ ಸಾರಾಂಶ. ದೂರಿನ ಅನ್ವಯ ಐಪಿಸಿ ಕಲಂ 419,363 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಸಂದೇಶ್ ಅವರನ್ನು ಬಂಧಿಸಲಾಗಿದೆ.

ನಿರಂತರದ ಹೋರಾಟದಲ್ಲಿ ಸಂದೇಶ್ ಭಾಗಿ

ದಲಿತರ ಮೇಲೆ ಹಲ್ಲೆ, ದೌರ್ಜನ್ಯಗಳಾದಾಗ ಅಲ್ಲಿ ಹಾಜರಾಗುವ ಮೂಲಕ ಸಂದೇಶ್ ಗಮನ ಸೆಳೆಯುತ್ತಿದ್ದಾರೆ. ಅವರ ಫೇಸ್‌ಬುಕ್‌ ಖಾತೆಯನ್ನು ಪರಿಶೀಲಿಸಿದರೆ ಇಂತಹ ಸಾಕಷ್ಟು ಹೋರಾಟಗಳಲ್ಲಿ ಸಂದೇಶ್‌ ಮುಂಚೂಣಿಯಲ್ಲಿರುವುದು ತಿಳಿಯುತ್ತದೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆ ಭೂತಮ್ಮನ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಗುಜ್ಜಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲು ಸಂದೇಶ್ ಕಾರಣವಾಗಿದ್ದರು.

ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಅಂಬೇಡ್ಕರ್‌ ಸೇವಾ ಸಮಿತಿ ಕರ್ನಾಟಕ (ಎಎಸ್‌ಎಸ್‌ಕೆ) ಸಂಘಟನೆಯ  ಯುವಕರು, ಕುಟುಂಬಕ್ಕೆ ಅರಿವು ಮೂಡಿಸಿದ್ದರು. “ನಿಮ್ಮ ಮನೆಯಲ್ಲಿ ಇರಬೇಕಾದದ್ದು ಈ ದೇವರ ಫೋಟೋಗಳಲ್ಲ. ನಿಮಗೆ ನ್ಯಾಯ ದೊರಕಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ” ಎಂದು ಹೇಳಿದ್ದರು. ಮನೆಯಲ್ಲಿದ್ದ ವೆಂಕಟೇಶ್ವರನ ಫೋಟೋಗಳನ್ನು ತೆಗೆದ ಶೋಭಾ ದಂಪತಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಭಾವಚಿತ್ರ ಇಟ್ಟರು. ಜೊತೆಗೆ ಬುದ್ಧನ ವಿಗ್ರಹವನ್ನು ಪಕ್ಕದಲ್ಲಿ ಇರಿಸಿದ್ದರು. ಫೋಟೋ ತೆರವಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...