Homeಕರ್ನಾಟಕಅರಣ್ಯ ಕಾಯ್ದೆ ತಿದ್ದುಪಡಿ; ವಿನಾಶಕ್ಕೆ ಬರೆದ ಮುನ್ನುಡಿ

ಅರಣ್ಯ ಕಾಯ್ದೆ ತಿದ್ದುಪಡಿ; ವಿನಾಶಕ್ಕೆ ಬರೆದ ಮುನ್ನುಡಿ

- Advertisement -
- Advertisement -

ಭಾರತ ದೇಶದಷ್ಟು ವೈವಿಧ್ಯತೆ ಬಹುಶಃ ಪ್ರಪಂಚದ ಕೆಲವೇ ಕೆಲವು ದೇಶಗಳಲ್ಲಿ ಇರಬಹುದೇನೋ. ಈ ವೈವಿಧ್ಯತೆ ಭಾರತದ ಭೂಪ್ರದೇಶಕ್ಕೂ ಅನ್ವಯವಾಗುತ್ತದೆ. ಇಲ್ಲಿ ಎತ್ತರದ ಹಿಮಾಲಯದಿಂದ ಹಿಡಿದು ಮರುಭೂಮಿಯವರೆಗೆ, ಪಶ್ಚಿಮ ಘಟ್ಟದ ಮತ್ತು ಈಶಾನ್ಯ ಭಾರತದ ದಟ್ಟ ಮಳೆಕಾಡುಗಳಿಂದ ಹಿಡಿದು ದಖನ್ ಪ್ರಸ್ಥಭೂಮಿಯ ಹುಲ್ಲುಗಾವಲುಗಳವರೆಗೆ ಮತ್ತು ಕರಾವಳಿ ಪ್ರದೇಶ ಮತ್ತು ದ್ವೀಪ ಸಮೂಹಗಳನ್ನು ಒಳಗೊಂಡ ಸಾಗರೀಯ ಪರಿಸರ ವ್ಯವಸ್ಥೆಯು ಕಾಲಾಂತರದಲ್ಲಿ ವಿಕಸನಗೊಂಡಿದೆ. ಇವುಗಳಲ್ಲಿ ಪಶ್ಚಿಮ ಘಟ್ಟಗಳು, ಹಿಮಾಲಯದ ಪರ್ವತ ಶ್ರೇಣಿ ಮತ್ತು ಈಶಾನ್ಯ ಭಾರತದ ಇಂಡೋ ಬರ್ಮಾ ಅರಣ್ಯಪ್ರದೇಶಗಳು ವಿಶ್ವದ 36 ಜೀವ ವೈವಿಧ್ಯತೆಯ ತಾಣಗಳಲ್ಲಿ ಸ್ಥಾನ ಪಡೆದಿವೆ. ನಾವು ಕಳೆದ ನೂರು ವರ್ಷಗಳಲ್ಲಿ ಬೃಹತ್ ಪ್ರಮಾಣದ ಅರಣ್ಯಗಳನ್ನು ಕಳೆದುಕೊಂಡಿದ್ದರೂ, ಅಚ್ಚರಿ ಎನಿಸುವಂತೆ ಇನ್ನೂ ತಕ್ಕ ಮಟ್ಟಿಗೆ ನೈಸರ್ಗಿಕ ಅರಣ್ಯವನ್ನು ಉಳಿಸಿಕೊಂಡಿದ್ದೇವೆ. ಇಷ್ಟೆಲ್ಲಾ ಜನಸಂಖ್ಯೆ ಇದ್ದರೂ, ಪರಿಸರದ ಕುರಿತು ವಿಶೇಷ ಕಾರ್ಯನೀತಿಯನ್ನೇನೂ ಹೊಂದಿರದ ರಾಜಕೀಯ ಪಕ್ಷಗಳಿದ್ದರೂ ಹೇಗೆ ನಮ್ಮಲ್ಲಿ ಕಾಡು ಉಳಿದುಕೊಂಡಿದೆ ಎಂಬುದೇ ಅಚ್ಚರಿದಾಯಕ ವಿಷಯ. ಆದರೆ ಇದಕ್ಕೆ ಕಾರಣ ಪರಿಸರ ರಕ್ಷಣೆಗಾಗಿ ಭಾರತದಲ್ಲಿದ್ದ ಸಮರ್ಥ ಕಾನೂನುಗಳು. ಅಳಿದುಳಿದ ಕಾಡುಗಳನ್ನು ಮುಂದಿನ ಪೀಳಿಗೆಗೆ ಕಾಪಾಡಲು ಈ ಕಾನೂನುಗಳೇ ಪರಿಸರಾಸಕ್ತರಿಗೆ ದಾರಿಯಾಗಿದ್ದವು. ಇಂತಹ ಕಾನೂನುಗಳಲ್ಲಿ ಮುಖ್ಯವಾದದ್ದು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಕೂಡ ಒಂದು. ಈ ಕಾಯ್ದೆಯ ಮುಖ್ಯ ಉದ್ದೇಶ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶದ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಹೇರುವುದಾಗಿತ್ತು. ಇಂತಹ ಕಾಯ್ದೆಗಳು ಮತ್ತು ಭಾರತದ ಪ್ರಬುದ್ಧ ನ್ಯಾಯಾಂಗ ವ್ಯವಸ್ಥೆಯಿಂದಾಗಿ ಭಾರತದ ಕಾಡುಗಳನ್ನು ಸ್ವಲ್ಪ ಮಟ್ಟಿಗಾದರೂ ಉಳಿಸಿಕೊಳ್ಳಲು ಅವಕಾಶವಿತ್ತು. ಆದರೆ ಇದೇ ತಿಂಗಳು ಸಂಸತ್ತಿನ ಮುಂದೆ ಮಂಡಿಸಲಾದ ಅರಣ್ಯ ಕಾಯ್ದೆಯ ತಿದ್ದುಪಡಿಯು ಅರಣ್ಯ ಕಾಯ್ದೆಯ ಮೂಲ ಆಶಯವನ್ನೇ ಅದಲುಬದಲು ಮಾಡುವಂತಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲಗೊಳಿಸಿ, ಸಾಧ್ಯವಾದಷ್ಟು ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವಂತಿದೆ.

1980ರ ಅರಣ್ಯ ಕಾಯ್ದೆಯನ್ನು ಜಾರಿಗೊಳಿಸಿದ್ದರ ಮೂಲ ಉದ್ದೇಶ ಬರಿದಾಗುತ್ತಿರುವ ಭಾರತದ ಅರಣ್ಯ ಪ್ರದೇಶಗಳನ್ನು ಉಳಿಸುವುದಾಗಿತ್ತು. ಅರಣ್ಯಗಳೆಂದರೆ ಬರೀ ಗಿಡ ಮರಗಳಲ್ಲ, ಬದಲಿಗೆ ಅಲ್ಲಿರುವ ಜೀವ ವೈವಿಧ್ಯವನ್ನೂ ಮತ್ತು ಭೂಕುಸಿತ, ಮರುಭೂಮಿಕರಣ ಮುಂತಾದವುಗಳಿಂದ ನಮ್ಮ ದೇಶದ ಭೂಸಂಪತ್ತನ್ನು ರಕ್ಷಿಸುವುದೇ ಈ ಕಾಯ್ದೆಯ ಮುಖ್ಯ ಉದ್ದೇಶವಾಗಿತ್ತು. ನಮ್ಮ ದೇಶದಲ್ಲಿ ಸ್ವಾತಂತ್ರ್ಯಾನಂತರದ ಮೊದಲ 30 ವರ್ಷಗಳಲ್ಲಿ ಸುಮಾರು 4.2 ಮಿಲಿಯನ್ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಅರಣ್ಯ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸುಮಾರು 40 ವರ್ಷದವರೆಗೆ 1.5 ಮಿಲಿಯನ್ ಹೆಕ್ಟೇರ್ ಅರಣ್ಯವನ್ನು ಮಾತ್ರ ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಅಂಕಿ ಅಂಶವು ಅರಣ್ಯ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಇದ್ದ ಈ ಕಾಯ್ದೆಯ ಒಂದು ಮಟ್ಟದ ಸಮರ್ಥತೆಯನ್ನು ತಿಳಿಸುತ್ತದೆ.

ಆದರೆ ಅರಣ್ಯ ಪರಿಸರಗಳನ್ನು ಉಳಿಸಲು ಸಹಕರಿಸಿದ್ದ ಈ ಕಾಯ್ದೆಗಳನ್ನು ಕಳೆದ ಒಂದು ದಶಕದಲ್ಲಿ ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಅದರ ಅಂಗವಾಗಿಯೇ ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಗಳು ರೂಪುಗೊಂಡಿವೆ. ಈ ತಿದ್ದುಪಡಿ ಬರುವ ಮುಂಚೆಯೂ ಮೊದಲು ಇದ್ದ ಕಟ್ಟುನಿಟ್ಟಿನ ಕಾಯ್ದೆಯಡಿಯಲ್ಲಿಯೇ ಅರಣ್ಯ ಭೂಮಿಯನ್ನು ಪರಿವರ್ತಿಸುವ ಪ್ರಸ್ತಾವನೆಗಳಿಗೆ ತುಂಬಾ ಉದಾರವಾಗಿ ಅನುಮೋದನೆಗಳನ್ನು ಕೊಡಲಾಗಿದೆ. ಉದಾಹರಣೆಗೆ 2018ರಿಂದ 2022ರವರೆಗೆ ಸುಮಾರು 90000 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸಲಾಗಿದೆ, 2020ರಲ್ಲಿ ಸ್ವೀಕರಿಸಿದ ಎಲ್ಲ ಪ್ರಸ್ತಾವನೆಗಳಲ್ಲಿ ಕೇವಲ ಮೂರನ್ನು ತಿರಸ್ಕರಿಸಿ ಒಟ್ಟು 14855 ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಪರಿವರ್ತಿಸಲಾಗಿದೆ. ಇನ್ನು ಈ ಕಾಯ್ದೆಯನ್ನು ದುರ್ಬಲಗೊಳಿಸಿದ ಬಳಿಕ ಯಾವ ಪ್ರಮಾಣದಲ್ಲಿ ಅರಣ್ಯ ನಾಶ ಉಂಟಾಗಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. ಬಹುತೇಕ ಸಂದರ್ಭದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯ ಅವಶ್ಯಕತೆಯೇ ಇಲ್ಲವಾಗಿಸುವಂತೆ ಈ ಕಾಯ್ದೆಯನ್ನು ತಿದ್ದಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತ ಮತ್ತು ಹಿಮಾಲಯದ ಬೆಟ್ಟ ಪ್ರದೇಶಗಳು ಎಂದೂ ಕಾಣದ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ, ಅಲ್ಲದೆ ಬೇಸಿಗೆಯಲ್ಲಿಯೂ ಬಿಸಿಗಾಳಿಯ ಪ್ರಮಾಣವೂ ಏರುತ್ತಿದ್ದು, ಜಾಗತಿಕ ಹವಾಮಾನ ಬದಲಾವಣೆಯು ವರ್ಷವರ್ಷಕ್ಕೂ ತನ್ನ ಪರಿಣಾಮವನ್ನು ಹೆಚ್ಚಿಸುತ್ತಲೇ ಇದೆ. ಹೀಗಿದ್ದಾಗ ಯಾವುದೇ ಒಂದು ಪ್ರಬುದ್ಧ ದೇಶ ಅಥವಾ ಸಮಾಜವು ತನ್ನ ವ್ಯಾಪ್ತಿಗೆ ಬರುವ ಅರಣ್ಯಗಳನ್ನು ಸಂರಕ್ಷಿಸುವತ್ತ ಗಮನ ನೀಡಬೇಕಾಗುತ್ತದೆ; ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಮ್ಮ ದೇಶದಲ್ಲಿ ಅಳಿದುಳಿದ ಅರಣ್ಯಗಳನ್ನೇ ನಾಶ ಮಾಡುವಂತ ಕಾನೂನನ್ನು ರೂಪಿಸುತ್ತಿದ್ದೇವೆ. ಈ ಹೊಸ ತಿದ್ದುಪಡಿಗಳ ಅನ್ವಯ ದೇಶದ ಗಡಿಯ 100 ಕಿಮಿ ಅಂತರದಲ್ಲಿ ಯಾವುದೇ ರಸ್ತೆ, ರೈಲು, ಜಲ ವಿದ್ಯುತ್ ಅಥವಾ ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಅವಶ್ಯಕವಾದ ಯೋಜನೆಗಳನ್ನು ಹಮ್ಮಿಕೊಳ್ಳಲು ಯಾವುದೇ ಪರಿಸರ ಸಂಬಂಧಿ ಅನುಮತಿ ಬೇಕಾಗಿಲ್ಲ. ರೈಲು ಮತ್ತು ರಸ್ತೆ ಮಾರ್ಗದ ಸುತ್ತ ಇರುವ 10 ಹೆಕ್ಟೇರ್ ಪ್ರದೇಶದಲ್ಲಿ ಕೂಡ ಯಾವುದೇ ಅನುಮತಿಯ ಅಗತ್ಯ ಇಲ್ಲದೇ ಕಟ್ಟಡ ನಿರ್ಮಾಣ ಮಾಡಬಹುದು. ಅರಣ್ಯ ಭೂಮಿಯಲ್ಲಿ ಮೃಗಾಲಯ ಮತ್ತು ಪರಿಸರ ಪ್ರವಾಸೋದ್ಯಮದ ಕುರಿತ ನಿರ್ಮಾಣಕ್ಕೂ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ಇನ್ನೂ ಮುಂದುವರಿದು ಕೇಂದ್ರ ಸರ್ಕಾರ ಸೂಚಿಸುವ ಯಾವುದೇ ಯೋಜನೆಗಳಿಗೂ ಅನುಮತಿಯ ಅವಶ್ಯಕತೆ ಇಲ್ಲ ಎಂದು ನಿಯಮಗಳನ್ನು ಬದಲಿಸಲಾಗಿದೆ.

ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿರುವ INDIA ಒಕ್ಕೂಟದ ಸಂಸದರು

ಭಾರತದ ಗಡಿ ಪ್ರದೇಶದ 100 ಕಿಮೀ ಒಳಗೆ ಯಾವುದೇ ರೀತಿಯ ರಸ್ತೆ ರೈಲು ಅಥವಾ ದೇಶದ ಸುರಕ್ಷತೆಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬ ತಿದ್ದುಪಡಿಯ ಅನ್ವಯ ಈಶಾನ್ಯ ಭಾರತದ ರಾಜ್ಯಗಳು ಮತ್ತು ಉತ್ತರಾಖಂಡದ ಸಂಪೂರ್ಣ ಭೂಪ್ರದೇಶದಲ್ಲಿ, ಯಾವುದೇ ಪರಿಸರದ ಕುರಿತ ಅನುಮತಿಯಿಲ್ಲದೆ ಇಂತಹ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು. ಈಗಾಗಲೇ ಸೂಕ್ಷ್ಮ ಪರಿಸರ ಮತ್ತು ಭೌಗೋಳಿಕ ವ್ಯವಸ್ಥೆಯನ್ನು ಹೊಂದಿರುವ ಹಿಮಾಲಯದ ರಾಜ್ಯದಲ್ಲಿ ಚಾರ್ ಧಾಮ್ ರಸ್ತೆ ಯೋಜನೆ ಮತ್ತು ಸುರಂಗ ಮಾರ್ಗಗಳನ್ನು ಕೊರೆದಿದ್ದರ ಪರಿಣಾಮವಾಗಿ ಅಲ್ಲಿ ಭೂಕುಸಿತದಂತಹ ಘಟನೆಗಳು ಸಂಭವಿಸುತ್ತಿವೆ. ಕೆಲ ತಿಂಗಳ ಹಿಂದೆ ಜೋಶಿ ಮಠದಲ್ಲಿ ಭೂಕುಸಿತದ ಪರಿಣಾಮವಾಗಿ ಇಡೀ ಊರನ್ನೇ ಖಾಲಿ ಮಾಡಲಾಯಿತು. ಹಿಮಾಲಯ ಪ್ರದೇಶದಲ್ಲಿ ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರೆ ಅದು ಖಂಡಿತ ಪರಿಸರದೊಂದಿಗೆ ಆಡುವ ಜೂಜಾಟವೇ ಸರಿ.

ಬಹುತೇಕ ಪರಿಸರಾಸಕ್ತರಿಗೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಸುಪರಿಚಿತವಾದುದು 1996ರಲ್ಲಿ ಸರ್ವೋಚ್ಚ ನ್ಯಾಯಾಲಯ ಗೋದಾವರ್ಮನ್ ತಿರುಮಲಪಾದ್ ಪ್ರಕರಣದಲ್ಲಿ ಕೊಟ್ಟ ಐತಿಹಾಸಿಕ ತೀರ್ಪು. ಈ ತೀರ್ಪು ಅರಣ್ಯರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಈ ತೀರ್ಪಿನನ್ವಯ ಒಂದು ಪ್ರದೇಶವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಅರಣ್ಯ ಭೂಮಿ ಎಂದು ಘೋಷಣೆ ಮಾಡದಿದ್ದರೂ, ಅಲ್ಲಿ ಅರಣ್ಯದ ಗುಣಲಕ್ಷಣಗಳು ಇದ್ದರೆ ಆ ಪ್ರದೇಶವು ಕೂಡ ಕಾನೂನಿನ ಅನ್ವಯ ರಕ್ಷಣೆಗೆ ಒಳಪಡುತ್ತದೆ. ಕೇರಳದ ನೀಲಗಿರಿ ಅರಣ್ಯದಲ್ಲಿ ವ್ಯಾಪಕವಾದ ಅರಣ್ಯನಾಶದ ವಿರುದ್ಧ ಈ ತೀರ್ಪನ್ನು ಕೊಡಲಾಗಿತ್ತು. ಈಗ ಹೊಸ ತಿದ್ದುಪಡಿಯ ಅನ್ವಯ ಅರಣ್ಯಗಳ ವ್ಯಾಖ್ಯಾನವನ್ನೇ ಬದಲಾವಣೆ ಮಾಡಲಾಗಿದೆ; ಹೀಗಾಗಿ ಅರಣ್ಯದ ಗುಣಲಕ್ಷಣವಿದ್ದರೂ ಬಹುಪಾಲು ಭೂಪ್ರದೇಶಗಳು ಅರಣ್ಯದ ಪರಿಧಿಯಿಂದ ಹೊರಬರುತ್ತವೆ ಮತ್ತು ತಮಗಿದ್ದ ರಕ್ಷಣೆಯನ್ನೂ ಕಳೆದುಕೊಳ್ಳುತ್ತವೆ.

ಈ ತಿದ್ದುಪಡಿಯ ಇನ್ನೊಂದು ಮುಖ್ಯಾಂಶವೆಂದರೆ ಮೃಗಾಲಯಗಳಿಗೆ ಮತ್ತು ಪರಿಸರ ಪ್ರವಾಸೋದ್ಯಮದ ಯೋಜನೆಗಳಿಗೆ ಪರಿಸರ ಅನುಮತಿಯ ವಿನಾಯಿತಿ ನೀಡಿರುವುದು. ಇಂದು ನಾವು ನೋಡುತ್ತಿರುವ ಯಾವುದೇ ಹಸಿರು ಪ್ರವಾಸೋದ್ಯಮವು ಪರಿಸರ ಸ್ನೇಹಿಯಾಗಿಲ್ಲ. ಪರಿಸರದ ಅರಿವು ಮೂಡಿಸಬೇಕಿದ್ದ ಇದು ಕೇವಲ ಇನ್ಸ್ಟಾಗ್ರಾಮ್ ಪೋಸ್ಟ್ ಅಥವಾ ರೀಲುಗಳಿಗೆ ಸೀಮಿತವಾಗುತ್ತಿದೆ. ಅಷ್ಟೇ ಅಲ್ಲದೆ ಅದನ್ನು ನೋಡಿ ಮತ್ತೂ ಸಾವಿರಾರು ಜನ ಅಲ್ಲಿ ದಾಂಗುಡಿಯಿಟ್ಟು ಅರಣ್ಯದ ನೆಮ್ಮದಿಯನ್ನೇ ಕೆಡಿಸುತ್ತಿದ್ದಾರೆ. ಅವರ ಅನುಕೂಲಕ್ಕೆ ತಲೆಯೆತ್ತುವ ರೆಸಾರ್ಟ್‌ಗಳು ಹೋಟೆಲು ಮತ್ತಿತರ ಅಂಗಡಿಗಳು ಟನ್ನುಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿವೆ. ಹೀಗೆ ಎಲ್ಲೆಂದರಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಕಟ್ಟಡಗಳ ನಿರ್ಮಾಣ ಆರಂಭವಾದರೆ ಅದು ಹೊಸ ಸಮಸ್ಯೆಯನ್ನೇ ಸೃಷ್ಟಿಸಲಿದೆ. ಇತ್ತೀಚಿಗೆ ಜೋಗ ಜಲಪಾತದ ಸುತ್ತ ಪಂಚತಾರಾ ಹೋಟೆಲಿನ ನಿರ್ಮಾಣದ ಪ್ರಸ್ತಾಪನೆಯಿತ್ತು. ಇನ್ನು ಈ ತಿದ್ದುಪಡಿಯ ನಂತರ ಇಂತಹ ಅನೇಕ ಯೋಜನೆಗಳು ಪರಿಸರ ಪ್ರವಾಸದ ಸೋಗಿನಲ್ಲಿ ಅರಣ್ಯ ಪ್ರದೇಶದ ಸುತ್ತಮುತ್ತ ಎದ್ದರೆ ಅಚ್ಚರಿಯೇನಿಲ್ಲ. ಅಷ್ಟೇ ಅಲ್ಲದೆ ನಾವು ಯಾವತ್ತೂ ವನ್ಯಜೀವಿಗಳ ಸಂರಕ್ಷಣೆಯನ್ನು ಅವುಗಳ ನೈಸರ್ಗಿಕ ಆವಾಸದಲ್ಲಿಯೇ ಕೈಗೊಳ್ಳಬೇಕು ಮತ್ತು ಅವುಗಳ ಸಹಜ ಬದುಕಿಗೆ ಅಡ್ಡಿಯಾಗದಂತೆ ಅರಣ್ಯ ಪ್ರದೇಶಗಳನ್ನು ಉಳಿಸಬೇಕು; ಅದುಬಿಟ್ಟು ಅರಣ್ಯದ ಸುತ್ತ ಮೃಗಾಲಯಗಳನ್ನು ನಿರ್ಮಿಸಿ ಅಲ್ಲಿ ಪ್ರಾಣಿಗಳನ್ನು ಕೂಡಿಹಾಕಿದರೆ ಅದೆಂದೂ ವನ್ಯಜೀವಿ ಸಂರಕ್ಷಣೆ ಅನಿಸಿಕೊಳ್ಳಲಾರದು. ಈ ತಿದ್ದುಪಡಿಯಲ್ಲಿ ಅದೇಕೆ ಮೃಗಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದಾರೆ ಮತ್ತು ಅದು ಹೇಗೆ ಅರಣ್ಯ ಸಂರಕ್ಷಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದೇ ಅರ್ಥವಾಗದ ವಿಷಯ.

ಇಷ್ಟೆಲ್ಲಾ ಇದ್ದರೂ ಭಾರತವು 2070ರ ಹೊತ್ತಿಗೆ ಕಾರ್ಬನ್ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ತರಬೇಕು ಮತ್ತು ದೇಶದ ಹಸಿರು ಹೊದಿಕೆಯನ್ನು ಹೆಚ್ಚಿಸಬೇಕು ಎಂದು ಈ ಕರಡು ತಿದ್ದುಪಡಿಯು ಉಲ್ಲೇಖಿಸುತ್ತದೆ. ಇಷ್ಟೆಲ್ಲಾ ಅರಣ್ಯ ನಾಶವಾದರೆ ಅದು ಹೇಗೆ ಇಂಗಾಲದ ಹೊರಸೂಸುವಿಕೆ ನಿಲ್ಲುತ್ತದೆ ಎಂಬುದೇ ಮಹಾವೈರುಧ್ಯ. ಇಲ್ಲಿರುವ ಇನ್ನೊಂದು ಮೂಲ ಸಮಸ್ಯಾತ್ಮಕ ಅಂಶವೆಂದರೆ ನೈಸರ್ಗಿಕ ಅರಣ್ಯ ಪ್ರದೇಶ ಮತ್ತು ಕೃತಕ ನೆಡುತೋಪು- ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗಿರುವುದು. ಕೃತಕ ನೆಡುತೋಪು ಯಾವತ್ತೂ ನೈಸರ್ಗಿಕ ಅರಣ್ಯವನ್ನು ಸೃಷ್ಟಿಸಲಾರದು ಮತ್ತು ನೈಸರ್ಗಿಕ ಅರಣ್ಯದಂತೆ ಜೀವ ವೈವಿಧ್ಯತೆಯನ್ನು ಪೋಷಿಸಲಾರದು. ಅಷ್ಟೇ ಅಲ್ಲದೆ ನೈಸರ್ಗಿಕವಾದ ಕಾಡು ನೆಡುತೋಪಿಗಿಂತ 40% ಹೆಚ್ಚು ಇಂಗಾಲವನ್ನು ಹೀರಿಕೊಳ್ಳುತ್ತದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಹೀಗಿರುವಾಗ ಸಹಜ ಕಾಡನ್ನು ಕಳೆದುಕೊಂಡು ಅಲ್ಲಲ್ಲಿ ನೆಡುತೋಪನ್ನು ಸೃಷ್ಟಿಸಿದರೆ ನಾವೂ ಯಾವತ್ತೂ ಅರಣ್ಯ ಸಂವರ್ಧನೆಯ ಗುರಿಯನ್ನು ತಲುಪಲಾರೆವು.

ಹವಾಮಾನ ವೈಪರೀತ್ಯ ಹೆಚ್ಚಿದಂತೆ ನಾವು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪರಿಸರ ಮತ್ತು ಅರಣ್ಯ ಸಂಪತ್ತನ್ನು ಬರಗಾಲದಲ್ಲಿ ಕೂಡಿಟ್ಟ ಅಕ್ಕಿಯಂತೆ ತುಂಬಾ ಮುತುವರ್ಜಿಯಿಂದ ಬಳಸಬೇಕು, ಅದು ಬಿಟ್ಟು ಅಳಿದುಳಿದ ಧಾನ್ಯವನ್ನೆಲ್ಲ ಬಳಸಿ ಒಂದೇ ದಿನ ಮೃಷ್ಟಾನ್ನ ಭೋಜನವನ್ನು ಮಾಡಿದರೆ ಬರುವ ದಿನಗಳಲ್ಲಿ ಉಪವಾಸ ಬೀಳುವುದು ಖಂಡಿತ. ದೇಶದ ಸುರಕ್ಷತೆಯ ಕಾರಣಕ್ಕಾಗಿ ನಾವು ಮಾಡುತ್ತಿರುವ ಅರಣ್ಯನಾಶದಿಂದಾಗಿಯೇ ಒಂದು ದಿನ ದೇಶ ಸಂಕಟಕ್ಕೆ ಸಿಲುಕಿದರೆ ಅಚ್ಚರಿಯೇನಿಲ್ಲ, ಇದು ಚಿನ್ನದ ಮೊಟ್ಟೆಯ ಆಸೆಗೆ ಕೋಳಿಯನ್ನು ಕೊಯ್ದ ರೈತನ ಕಥೆಯಂತೆಯೇ ಆಗುತ್ತದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...