ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಮೂರ್ತಿ, ಕರ್ನಾಟಕದ ಮಾಜಿ ಲೋಕಾಯುಕ್ತ ಎನ್.ವೆಂಕಟಾಚಲ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದ ಅವರು ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದು ರಾಮಯ್ಯ ಸ್ಮಾರಕ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. “ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲಾಗಿಲ್ಲ. ಬೆಳಗ್ಗೆ 7 ಗಂಟೆಗೆ ಅವರು ಮೃತಪಟ್ಟಿದ್ದಾರೆ” ಎಂದು ಆಸ್ಪತ್ರೆಯ ಅಧ್ಯಕ್ಷ ನರೇಶ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಜುಲೈ 3, 1930 ರಂದು ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಮಿತ್ತೂರು ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ. ಮತ್ತು ಬಿ.ಎಲ್. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದರು. 1955 ರಲ್ಲಿ ಮೈಸೂರಿನ ಹೈಕೋರ್ಟ್‌ನಲ್ಲಿ (ಈಗ ಕರ್ನಾಟಕ) ವಕೀಲರಾಗಿ ಸೇವೆ ಪ್ರಾರಂಭಿಸಿದ ಅವರು, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಬೆಂಗಳೂರಿನ ಹೈಕೋರ್ಟ್ ಮತ್ತು ಅದರ ಅಧೀನ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.
ವೆಂಕಟಾಚಲ ಅವರು ನವೆಂಬರ್ 28, 1977 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಸೆಪ್ಟೆಂಬರ್ 8, 1978 ರಂದು ಖಾಯಂ ನ್ಯಾಯಾಧೀಶರಾದರು. 1967, 1990 ರ ಅವಧಿಯಲ್ಲಿ ಅವರು ಕಾನೂನುಬಾಹಿರ ಚಟುವಟಿಕೆಗಳ-ತಡೆಗಟ್ಟುವಿಕೆ-ಕಾಯ್ದೆಯ ಅಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ನ್ಯಾಯಮಂಡಳಿಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೇ 1992 ರಲ್ಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಜುಲೈ 1, 1992 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಮೂರ್ತಿಯಾಗಿ ಅವರು ನೇಮಕವಾಗಿದ್ದರು ಮತ್ತು ಜುಲೈ 1995 ರಲ್ಲಿ ನಿವೃತ್ತರಾದರು.
ಅವರು ಜುಲೈ 3, 2001 ರಿಂದ ಜುಲೈ 2, 2006 ರವರೆಗೆ ರಾಜ್ಯದ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಮೃತರ ಅಂತಿಮ ಸಂಸ್ಕಾರ ಗುರುವಾರದಂದು ಹೆಬ್ಬಾಳ ಚಿತಾಗಾರದಲ್ಲಿ ನೆರವೇರಲಿದೆ ಎಂದು ದಿ ಹಿಂದೂ ವರದಿ ಮಾಡಿದೆ.