Homeಮುಖಪುಟಯುಪಿ 4ನೇ ಹಂತದ ಚುನಾವಣೆ: ಲಖಿಂಪುರ್‌ಖೇರಿ ಪ್ರಾಂತ್ಯ ಬಿಜೆಪಿಗೆ ಬಿಸಿತುಪ್ಪ!

ಯುಪಿ 4ನೇ ಹಂತದ ಚುನಾವಣೆ: ಲಖಿಂಪುರ್‌ಖೇರಿ ಪ್ರಾಂತ್ಯ ಬಿಜೆಪಿಗೆ ಬಿಸಿತುಪ್ಪ!

- Advertisement -
- Advertisement -

ಲಕ್ನೋ: ಉತ್ತರ ಪ್ರದೇಶದ ನಾಲ್ಕನೇ ಹಂತದ ವಿಧಾನಸಭೆ ಚುನಾವಣೆಯು ಇಂದು ರಾಜಧಾನಿ ಲಕ್ನೋ ಮತ್ತು ಲಖಿಂಪುರ ಖೇರಿ ಸೇರಿದಂತೆ ಉತ್ತರ ಪ್ರದೇಶದ 59 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರಕೋಟೆಯಾದ ರಾಯ್‌ಬರೇಲಿಯ ಐದು ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿದೆ.

ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯಿ, ಉನ್ನಾವೋ, ಲಕ್ನೋ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ.

59 ಕ್ಷೇತ್ರಗಳ ಪೈಕಿ 2017ರಲ್ಲಿ ಬಿಜೆಪಿ 51 ಸ್ಥಾನಗಳನ್ನು ಗೆದ್ದುಕೊಂಡಿತು. ನಾಲ್ಕು ಸ್ಥಾನಗಳು ಸಮಾಜವಾದಿ ಪಕ್ಷಕ್ಕೆ, ಎರಡು ಸ್ಥಾನಗಳು ಕಾಂಗ್ರೆಸ್‌ಗೆ ಮತ್ತು ಎರಡು ಮಾಯಾವತಿಯ ಬಹುಜನ ಸಮಾಜ ಪಕ್ಷಕ್ಕೆ ಬಂದಿದ್ದವು. ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಒಂದು ಸ್ಥಾನವನ್ನು ಗಳಿಸಿತ್ತು.

ಲಖಿಂಪುರ್‌ ಖೇರಿ ಕುತೂಹಲಕಾರಿ: ಅಕ್ಟೋಬರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ನಾಲ್ವರು ರೈತರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆಶಿಶ್ ಮಿಶ್ರಾ (ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ) ಆರೋಪಿಯಾಗಿದ್ದಾರೆ. ಹೀಗಾಗಿ ರೈತರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಅಜಯ್‌ ಮಿಶ್ರಾ ಅವರಿಗೂ ಪ್ರತಿಷ್ಠೆಯ ಕಣವಾಗಿದೆ.

ರೈತರ ಮೇಲೆ ವಾಹನವನ್ನು ಹತ್ತಿಸಿ ನಾಲ್ಕು ಜನ ರೈತರ ಹತ್ಯೆಗೆ ಆಶಿಶ್ ಮಿಶ್ರಾ ಕಾರಣವಾಗಿದ್ದು, ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ಆಶಿಶ್ ಮಿಶ್ರಾ ಅವರಿಗೆ ದೊರೆತಿರುವ ಜಾಮೀನು ಪ್ರಶ್ನಿಸಿ ರೈತರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರದ ವಿವಾದಿತ ಕೃಷಿ ಕಾನೂನುಗಳಿಂದಾಗಿ ರೈತರಲ್ಲಿ ಅಸಮಾಧಾನವಿದೆ. ಕಾಯ್ದೆಗಳನ್ನು ರದ್ದು ಮಾಡಿದ ಬಳಿಕ, ಎಂಎಸ್‌ಪಿ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವೂ ರೈತರ ಕೋಪಕ್ಕೆ ಕಾರಣವಾಗಿದೆ.

ಲಖಿಂಪುರ್‌ ಖೇರಿಯ ಎಲ್ಲಾ 8 ಸ್ಥಾನಗಳಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಬಿಜೆಪಿ ಮತ್ತು ಎಸ್‌ಪಿ ಎರಡೂ ಪಕ್ಷಗಳು ಲಖಿಂಪುರ ನಗರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಪುನರಾವರ್ತಿಸಿವೆ. 2017ರ ಚುನಾವಣೆಯಲ್ಲಿ ಈ ಸ್ಥಾನವನ್ನು ಗೆದ್ದ ಬಿಜೆಪಿಯ ಯೋಗೇಶ್ ವರ್ಮಾ ಹಾಗೂ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಮಧುರ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರವಿಶಂಕರ್ ತ್ರಿವೇದಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿರಿ: ರಾಷ್ಟ್ರಧ್ವಜ ಕುರಿತ ಹೇಳಿಕೆ: ಈಶ್ವರಪ್ಪಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ರಾಜ್ಯದ ರಾಜಧಾನಿ ಲಕ್ನೋದ ಒಂಬತ್ತು ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಸರೋಜಿನಿ ನಗರ ಕ್ಷೇತ್ರದ ಚುನಾವಣೆ ಕುತೂಹಲ ಕೆರಳಿಸಿದೆ. ಅಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್, ಮಾಜಿ ಐಐಎಂ ಪ್ರೊಫೆಸರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಅಭಿಷೇಕ್ ಮಿಶ್ರಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ರಾಜ್ಯ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು ಲಕ್ನೋ ಕಂಟೋನ್ಮೆಂಟ್‌ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಎರಡು ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ ಅವರನ್ನು ಎದುರಿಸುತ್ತಿದ್ದಾರೆ. ರಾಜ್ಯ ಸಚಿವ ಅಶುತೋಷ್ ಟಂಡನ್ ಅವರು ಲಕ್ನೋ ಪೂರ್ವ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅನುರಾಗ್ ಬದೌರಿಯಾ ವಿರುದ್ಧ ಕಣದಲ್ಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಸಂಸದೀಯ ಸ್ಥಾನದ ಭಾಗವಾಗಿರುವ ರಾಯ್‌ಬರೇಲಿ ಸದರ್‌ನಲ್ಲಿ ಹಾಲಿ ಪಕ್ಷದ ಶಾಸಕಿ ಅದಿತಿ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಮನೀಶ್ ಚೌಹಾಣ್ ಅವರು ಅದಿತಿ ಸಿಂಗ್‌ ವಿರುದ್ಧ ಸ್ಪರ್ಧಿಸಿದ್ದಾರೆ. ಅದಿತಿ ಸಿಂಗ್ ಕ್ಷೇತ್ರದ ಐದು ಬಾರಿ ಶಾಸಕರಾಗಿದ್ದ ದಿವಂಗತ ಅಖಿಲೇಶ್ ಸಿಂಗ್ ಅವರ ಪುತ್ರಿ. ಸಮಾಜವಾದಿ ಪಕ್ಷ ಆರ್ ಪಿ ಯಾದವ್ ಅವರನ್ನು ಕಣಕ್ಕಿಳಿಸಿದೆ.

ಮಹಿಳಾ ಮತದಾರರನ್ನು ಪ್ರೇರೇಪಿಸಲು, ರಾಜ್ಯ ಪೊಲೀಸರು 137 “ಪಿಂಕ್ ಬೂತ್‌ಗಳನ್ನು” ರಚಿಸಿದ್ದಾರೆ, ಇವುಗಳನ್ನು ಮಹಿಳಾ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಲಕ್ನೋದ ಕ್ರೈಸ್ಟ್ ಚರ್ಚ್ ಕಾಲೇಜು, ಮತ ಚಲಾಯಿಸುವ ಪೋಷಕರ ಮಕ್ಕಳಿಗೆ 10 ಅಂಕಗಳನ್ನು ನೀಡುವುದಾಗಿ ಘೋಷಿಸಿದೆ.

ಏಳು ಹಂತದ ಯುಪಿ ಚುನಾವಣೆಯಲ್ಲಿ ಉಳಿದ ಮೂರು ಹಂತಗಳಿಗೆ ಫೆಬ್ರವರಿ 27, ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.


ಇದನ್ನೂ ಓದಿರಿ: ತಮಿಳುನಾಡು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆಗೆ ಭರ್ಜರಿ ಮುನ್ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...