Homeಮುಖಪುಟಕೇಂದ್ರ ಸರ್ಕಾರದ ಧೋರಣೆಯಿಂದ ಬೇಸತ್ತು ದೇಶ ತೊರೆದ ಫ್ರೆಂಚ್ ಪತ್ರಕರ್ತೆ

ಕೇಂದ್ರ ಸರ್ಕಾರದ ಧೋರಣೆಯಿಂದ ಬೇಸತ್ತು ದೇಶ ತೊರೆದ ಫ್ರೆಂಚ್ ಪತ್ರಕರ್ತೆ

- Advertisement -
- Advertisement -

ಎರಡು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತೆಯಾಗಿ ಭಾರತದಲ್ಲಿದ್ದ ಫ್ರಾನ್ಸ್‌ನ ವನೆಸ್ಸಾ ಡೊನಾಕ್ ಅವರು ಶುಕ್ರವಾರ ಸ್ವದೇಶಕ್ಕೆ ಮರಳಿದ್ದಾರೆ. ಕೇಂದ್ರದ ಮೋದಿ ಸರ್ಕಾರದ ಧೋರಣೆಯಿಂದ ಬೇಸತ್ತು ತವರಿಗೆ ಮರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

‘ದುರುದ್ದೇಶಪೂರಿತ’ ವರದಿ ಮಾಡಿದ್ದಾರೆ ಎಂದು ಆರೋಪಿಸಿ, ನಿಮ್ಮ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್ ಏಕೆ ರದ್ದು ಮಾಡಬಾರದು? ಎಂದು ವನೆಸ್ಸಾ ಅವರಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಕಳೆದ ತಿಂಗಳು ನೋಟಿಸ್ ನೀಡಿತ್ತು. ಇದರಿಂದ ಬೇಸರಗೊಂಡ ವನೆಸ್ಸಾ ಭಾರತ ತೊರೆದಿದ್ದಾರೆ ಎನ್ನಲಾಗಿದೆ.

“ನಾನು 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿ ಬಂದು 23 ವರ್ಷಗಳ ಕಾಲ ಪತ್ರಕರ್ತೆಯಾಗಿ ಕೆಲಸ ಮಾಡಿದ ದೇಶವನ್ನು ತೊರೆಯುತ್ತಿದ್ದೇನೆ. ನನ್ನ ವಿರುದ್ದ ಆರೋಪಗಳು ಕೇಳಿ ಬಂದಿರುವ ಕಾರಣ ಇಲ್ಲಿ ಜೀವನ ಮುಂದುವರಿಸಲು ಸಾಧ್ಯವಾಗುತ್ತಿಲ್ಲ” ಎಂದು ಶುಕ್ರವಾರ ಭಾರತ ತೊರೆಯುವಾಗ ವನೆಸ್ಸಾ ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ತನ್ನನ್ನು ಬಲವಂತವಾಗಿ ದೇಶದಿಂದ ಹೊರದಬ್ಬಿದೆ ಎಂಬರ್ಥದಲ್ಲೇ ಅವರು ಹೇಳಿಕೆ ಕೊಟ್ಟಿದ್ದಾರೆ.

“ಒಂದು ವರ್ಷದ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಪತ್ರಕರ್ತೆಯಾಗಿ ಕೆಲಸ ಮಾಡುವ ನನ್ನ ಹಕ್ಕನ್ನು ನಿರಾಕರಿಸಿತ್ತು. ಅದಕ್ಕೆ ಯಾವುದೇ ಕಾರಣ ಅಥವಾ ಸಮರ್ಥನೆಗಳನ್ನು ನೀಡಿರಲಿಲ್ಲ. ಯಾವುದೇ ವಿಚಾರಣೆಯನ್ನೂ ನಡೆಸಿಲ್ಲ” ಎಂದು ವನೆಸ್ಸಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನನ್ನ ಪತ್ರಿಕಾ ವೃತ್ತಿಯ ಹಕ್ಕನ್ನು ನಿರಾಕರಿಸಿದ್ದನ್ನು ಮರು ಪರಿಶೀಲಿಸುವಂತೆ ಗೃಹ ಸಚಿವಾಲಯಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕೆಲಸ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಸಮರ್ಥ ವೇದಿಕೆಗಳ ಮುಂದೆ ಈ ಆರೋಪಗಳ ವಿರುದ್ಧ ಹೋರಾಡುತ್ತೇನೆ. ಕಾನೂನು ಪ್ರಕ್ರಿಯೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಒಂದಲ್ಲ ಒಂದು ದಿನ ಭಾರತಕ್ಕೆ ಮರಳುವ ಭರವಸೆಯಿದೆ. ಆದರೆ, ಅಲ್ಲಿಯವರೆಗೆ ಕಾಯಲು ಸಾಧ್ಯವಿಲ್ಲ. ನನ್ನ ಪತ್ರಿಕಾ ವೃತ್ತಿಯನ್ನು ಬದಲಾಯಿಸುವಂತೆ ಅಧಿಕಾರಿಗಳು ಒತ್ತಡ ಹೇರಿದ್ದರು. ಆದರೆ, ಅದು ನನಗೆ ಸಾಧ್ಯವಿಲ್ಲ. ನಾನು ಪತ್ರಕರ್ತೆ, ನನ್ನ ಮನಸ್ಸಿಗೆ ಪ್ರಿಯವಾದ ವೃತ್ತಿಯನ್ನು ಯಾವುದೇ ಆರೋಪಗಳು ಸಾಭೀತಾಗದೆ ತ್ಯಜಿಸಲು ನಾನು ಒಪ್ಪುವುದಿಲ್ಲ” ಎಂದು ವನೆಸ್ಸಾ ಹೇಳಿದ್ದಾರೆ.

ಕಳೆದ ತಿಂಗಳು ಗಣರಾಜ್ಯೋತ್ಸವದ ಆಚರಣೆಗಾಗಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಫ್ರಾನ್ಸ್ ಭಾರತದೊಂದಿಗೆ ವನೆಸ್ಸಾ ಅವರ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿತ್ತು. ಈ ವೇಳೆ ಭಾರತ, ಈ ಸಮಸ್ಯೆಯು ‘ದೇಶದ ನಿಯಮಗಳು ಮತ್ತು ನಿಬಂಧನೆಗಳ ಅನುಸರಣೆ’ಗೆ ಸಂಬಂಧಿಸಿದೆ. ಅಲ್ಲದೆ, ವನೆಸ್ಸಾ ಅವರ ಪತ್ರಿಕಾ ವೃತ್ತಿಗೆ ಸಂಬಂಧಿಸಿಲ್ಲ ಎಂದು ಫ್ರಾನ್ಸ್‌ಗೆ ತಿಳಿಸಿತ್ತು ಎಂದು ವರದಿಗಳು ಹೇಳಿವೆ.

ವನೆಸ್ಸಾ ಅವರು ಫ್ರಾನ್ಸ್, ಸ್ವಿಟ್ಜರ್‌ಲೆಂಡ್ ಮತ್ತು ಬೆಲ್ಜಿಯಂನ ಪತ್ರಿಕೆಗಳಿಗೆ ದಕ್ಷಿಣ ಏಷ್ಯಾದ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಭಾರತೀಯ ಪತ್ರಕರ್ತನನ್ನು ವಿವಾಹವಾಗಿರುವ ವನೆಸ್ಸಾ ಅವರು, 23 ವರ್ಷಗಳ ಪತ್ರಿಕಾ ವೃತ್ತಿಯಲ್ಲಿ ‘ಮಾವೋವಾದಿ ದಂಗೆ’ ಸೇರಿದಂತೆ ಹಲವು ಬರಹಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ದೆಹಲಿ: ಬಹುಮತವಿದ್ದರೂ ವಿಶ್ವಾಸಮತ ನಿಲುವಳಿ ಮಂಡಿಸಿದ ಅರವಿಂದ್ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...