Homeಮುಖಪುಟರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ಸಾವು

ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ಸಾವು

- Advertisement -
- Advertisement -

ಸರ್ವಾಧಿಕಾರಿ ಧೋರಣೆಯ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜಕೀಯ ಪ್ರತಿಸ್ಪರ್ಧಿ, ಕಳೆದ ಕೆಲ ದಶಕಗಳಲ್ಲಿ ರಷ್ಯಾ ಕಂಡಂತಹ ಅತ್ಯಂತ ಮಹತ್ವದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಆರ್ಕ್ಟಿಕ್ ಸರ್ಕಲ್ ಜೈಲಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಡು ವಿರೋಧಿಯಾಗಿದ್ದ ನವಾಲ್ನಿ ಅವರಿಗೆ ಉಗ್ರವಾದದ ಆರೋಪದ ಮೇಲೆ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದು ರಾಜಕೀಯವಾಗಿ ಪ್ರೇರಿತ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನವಾಲ್ನಿ ಅವರನ್ನು ರಷ್ಯಾದ ಅತ್ಯಂತ ಕಠಿಣ ಮಾಸ್ಕೋದ ಈಶಾನ್ಯಕ್ಕೆ ಸುಮಾರು 1,900 ಕಿ.ಮೀ ದೂರದ ಖಾರ್ಪ್ ನಗರದಲ್ಲಿರುವ ಐಕೆ-3 ಜೈಲಿನಲ್ಲಿ ಬಂಧಿಸಿಡಲಾಗಿತ್ತು.

ಜೈಲಿನ ಒಳಗೆ ದಿನ ನಿತ್ಯದಂತೆ ಶುಕ್ರವಾರ ಬೆಳಿಗ್ಗೆ ವಾಯುವಿಹಾರ ನಡೆಸಿದ ಬಳಿಕ ನವಾಲ್ನಿ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡರು. ತೀವ್ರ ಅಸ್ವಸ್ಥರಾಗಿದ್ದ ಅವರು ಚೇತರಿಸಿಕೊಳ್ಳಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.`ಜೈಲಿನ ವೈದ್ಯಕೀಯ ಸಿಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಆಂಬ್ಯುಲೆನ್ಸ್ ಕರೆಸಿಕೊಂಡರು. ಪ್ರಾಥಮಿಕ ಚಿಕಿತ್ಸೆ ಒದಗಿಸಿದರೂ ಫಲ ನೀಡಲಿಲ್ಲ. ಕೈದಿ ಮೃತಪಟ್ಟಿರುವುದಾಗಿ ಆಂಬ್ಯುಲೆನ್ಸ್ ನ ವೈದ್ಯರು ಘೋಷಿಸಿದರು. ಸಾವಿನ ಕಾರಣವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

ಪುಟಿನ್ ಆಡಳಿತದಿಂದ ಕೊಲೆ ಶಂಕೆ 

ನವಾಲ್ನಿ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಅವರ ಪತ್ನಿ ಯುಲಿಯಾ, ಪುಟಿನ್ ಆಡಳಿತವನ್ನು ಶಿಕ್ಷಿಸಲು ಸಹಾಯ ಮಾಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ನವಾಲ್ನಿ ಅವರ ಆಪ್ತ ಮಿತ್ರರಲ್ಲಿ ಒಬ್ಬರಾದ ಭ್ರಷ್ಟಾಚಾರ ವಿರೋಧಿ ಫೌಂಡೇಶನ್ ಮುಖ್ಯಸ್ಥ ಇವಾನ್ ಝ್ಡಾನೋವ್ ಅವರು, ನವಾಲ್ನಿಯ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ನವಾಲ್ನಿ ಸಾವಿನ ಹಿನ್ನೆಲೆ ಅವರ ಬೆಂಬಲಿಗರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಯಿದೆ. ಹಾಗಾಗಿ, ಪುಟಿನ್ ಆಡಳಿತ ಎಚ್ಚರಿಕೆ ವಹಿಸಿದ್ದು, ಜನ ಸೇರಿಸಿ ದೊಡ್ಡ ಮಟ್ಟ ಪ್ರತಿಭಟನೆ ನಡೆಸದಂತೆ ಸೂಚಿಸಿದೆ. ಮಧ್ಯ ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್, ಮರ್ಮನ್ಸ್ಕ್ ಮತ್ತು ನಿಜ್ನಿ-ನವ್ಗೊರೊಡ್ ಸೇರಿದಂತೆ ಇತರ ನಗರಗಳಲ್ಲಿ ಹಲವಾರು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದೆ.

ಸಾವನ್ನಪ್ಪುವ ಒಂದು ದಿನದ ಹಿಂದೆ 47 ವರ್ಷದ ನವಾಲ್ನಿ ನಗು ನಗುತ್ತಾ ಆರೋಗ್ಯವಾಗಿದ್ದರು. ವಿಡಿಯೋ ಕಾನ್ಪರೆನ್ಸ್ ಮೂಲಕ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಹಾಗಾಗಿ, ಅವರ ಹಠಾತ್ ಸಾವಿನ ಬಗ್ಗೆ ಸಂಶಯ ಮೂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ಅತ್ಯಂತ ಜನಪ್ರಿಯ ವಿರೋಧ ಪಕ್ಷದ ಮುಖಂಡರಾಗಿದ್ದ ನವಾಲ್ನಿ, ದಶಕಗಳಿಗೂ ಹಿಂದೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಅವರ ನಿಕಟವರ್ತಿಗಳಾಗಿದ್ದ ಮುಖಂಡರನ್ನು ಕಟುವಾಗಿ ಟೀಕಿಸುವ ಮೂಲಕ ಮತ್ತು ರಷ್ಯಾ ಆಡಳಿತದಲ್ಲಿ ವ್ಯಾಪಿಸಿದ್ದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುವ ಮೂಲಕ ಪ್ರಾಮುಖ್ಯತೆ ಪಡೆದಿದ್ದರು.

ನವಾಲ್ನಿ ಸಾವಿನ ಬಗ್ಗೆ ಪುಟಿನ್‍ಗೆ ಮಾಹಿತಿ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. 2020ರ ಆಗಸ್ಟ್ ನಲ್ಲಿ ಸೈಬೀರಿಯಾದಲ್ಲಿ ನವಾಲ್ನಿಗೆ ವಿಷಪ್ರಾಶನ ಮಾಡಿರುವುದಾಗಿ ವರದಿಯಾಗಿತ್ತು. 2021ರಲ್ಲಿ ಜರ್ಮನಿಯಿಂದ ರಷ್ಯಾಕ್ಕೆ ಮರಳಿದ್ದ ನವಾಲ್ನಿಯನ್ನು 2021ರ ಜನವರಿಯಿಂದ ಬಂಧನದಲ್ಲಿ ಇಡಲಾಗಿತ್ತು.

ಯುಎಸ್ ತೀವ್ರ ಖಂಡನೆ:

ರಷ್ಯಾದ ವಿಪಕ್ಷ ನಾಯಕನ ಸಾವಿನ ಕುರಿತು ಯುಎಸ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಇದು ರಷ್ಯಾ ಅಧ್ಯಕ್ಷ ಪುಟಿನ್ ಅವರ ಕ್ರೂರತೆಗೆ ಮತ್ತಷ್ಟು ಪುರಾವೆಯಾಗಿದೆ ಎಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ನವಾಲ್ನಿ ಸಾವಿನ ಸುದ್ಧಿಯಿಂದ ತೀವ್ರ ವಿಚಲಿತಗೊಂಡಿದ್ದು, ಅತೀವ ದುಃಖವಾಗಿದೆ. ತನ್ನದೇ ದೇಶದ ಜನರ ಭಿನ್ನಾಭಿಪ್ರಾಯವನ್ನು ಎದುರಿಸಲು ಪುಟಿನ್ ಹೆದರುತ್ತಾರೆ. ಪುಟಿನ್ ನಿರಂಕುಶ ಅಧಿಕಾರದ ವಿರುದ್ಧ ಧ್ವನಿ ಎತ್ತುವವರಿಗೆ ರಕ್ಷಣೆ ಮತ್ತು ಭದ್ರತೆ ಖಾತರಿಪಡಿಸಲು ನಾವೆಲ್ಲಾ ಒಂದಾಗಬೇಕಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‍ಡೆರ್ ಲೆಯೆನ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕೇಂದ್ರ ಸರ್ಕಾರದ ಧೋರಣೆಯಿಂದ ಬೇಸತ್ತು ದೇಶ ತೊರೆದ ಫ್ರೆಂಚ್ ಪತ್ರಕರ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...