ಗೇರು ಬೀಜ ಅಥವಾ ಗೋಡಂಬಿ ಹಣ್ಣಿಗೆ ಜಗತ್ತಿನ ಮೂಲೆ ಮೂಲೆಯಲ್ಲಿ ಅಪಾರ ಬೇಡಿಕೆಯಿದೆ. 500 ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ತಂದ ಈ ಗೋಡಂಬಿ ಅಥವಾ ಗೇರು ಹಣ್ಣು ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೂ ಹಬ್ಬಿದೆ. ಗೋವಾದ ಉತ್ತರ ತುದಿಯಿಂದ ಕೇರಳದ ದಕ್ಷಿಣ ತುದಿಯವರೆಗೆ ಕರಾವಳಿಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಅಪಾರ ಪ್ರಮಾಣದ ಗೇರು ಹಣ್ಣನ್ನು ಬೆಳೆಯಲಾಗುತ್ತದೆ.

ಯಾವುದೇ ಪೋಷಣೆಯಿಲ್ಲದೇ ಬಿದ್ದಲ್ಲಿ ಬೇರೂರಿ ಕೃಷಿಕರಿಗೆ ಕೈತುಂಬ ವರಮಾನ ನೀಡುವ ಗೇರು ಹಣ್ಣಿನ ಬೆಳೆ ಇತ್ತೀಚೆಗೆ ನಶಿಸಿ ಹೋಗುತ್ತಿದೆ. ಮಂಗಳೂರು, ಕೊಚ್ಚಿ, ಪಣಜಿಂಗಳಲ್ಲೂ ಗೋಡಂಬಿ ಫ್ಯಾಕ್ಟರಿಗಳು ಕಡಿಮೆಯಾಗುತ್ತಿವೆ. ಜೊತೆಗೆ ಗೇರು ಹಣ್ಣಿನ ಇನ್ನೊಂದು ವಿಶೇಷ ಪಾನೀಯವಾದ ಸಾಂಪ್ರದಾಯಿಕ ಕ್ಯಾಶ್ಯೂ ಪೆನ್ನಿ (ಮದ್ಯ) ಉತ್ಪಾದನೆಯೂ ಕುಸಿಯ ತೊಡಗಿದೆ.

ನೀವು ಸಾಂಪ್ರದಾಯಿಕ ಉಡುಗೆ ತೊಟ್ಟು ಕಚೇರಿಗೆ (ಆಫೀಸ್) ಹೋಗಲು ಇಚ್ಚಿಸುವಿರೇ? - Quora

ಮೊದಲೇ ಹೇಳಿದಂತೆ ಗೇರು ಹಣ್ಣು ಬಹು ಉಪಯೋಗದ ವಸ್ತು. ಗೇರು ಹಣ್ಣಿನ ಗೋಡಂಬಿ ಬೀಜವು  ಅಡಿಗೆಗಳಿಗೆ, ಖಾದ್ಯಗಳಿಗೆ ಬಳಕೆಯಾದರೆ, ಗೇರು ಹಣ್ಣು ದನಗಳಿಗೆ, ಪಶು ಪಕ್ಷಿಗಳಿಗೆ ಆಹಾರವಾಗಿ, ತೋಟಕ್ಕೆ ಗೊಬ್ಬರವಾಗಿ ಹಾಗೂ ಮದ್ಯ ತಯಾರಿಕೆಗೂ ಬಳಕೆಯಾಗುತ್ತದೆ. ಈ ಗೇರು ಹಣ್ಣಿನ ಪೆನ್ನಿ ಹೆಚ್ಚಾಗಿ ಕೇರಳದಲ್ಲಿ ಮಾತ್ರ ತಯಾರಾಗುತ್ತದೆ. ಕರ್ನಾಟಕ ಹಾಗೂ ಕೇರಳದ ಕೆಲವು ಕಡೆ ಮನೆಯಲ್ಲಿ ಸ್ವಂತ ಬಳಕೆಗಾಗಿಯೂ ಗೇರು ಹಣ್ಣಿನ ಪಾನೀಯವನ್ನು ತಯಾರಿಸಲಾಗುತ್ತದೆ. ಆದರೆ ಗೇರು ಹಣ್ಣಿನ ಪೆನ್ನಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಸ್ಥಳ ಗೋವಾ. ಇಲ್ಲಿ ಲೆಕ್ಕವಿಲ್ಲದಷ್ಟು ಸ್ವಾದಿಷ್ಟವಾದ ದೇಸಿ ಫೆನಿಗಳು ತಯಾರಾಗುತ್ತವೆ.

ಇತ್ತೀಚೆಗೆ ಯಂತ್ರ ಆಧಾರಿತ ಮಧ್ಯ ತಯಾರಿಕಾ ಘಟಕಗಳ ಸ್ಥಾಪನೆಯ ಕಾರಣದಿಂದ ಮನೆಯಲ್ಲಿಯೇ ತಯಾರಾಗುತ್ತಿದ್ದ ರಾಸಾಯನಿಕ ಮುಕ್ತ ಸಾವಯವ ಪೆನ್ನಿಗೆ ಈಗ ಬೇಡಿಕೆ ಕಡಿಮೆಯಾಗಿದೆ. ಗೇರು ಹಣ್ಣನ್ನು ಕಾಡಿನಿಂದ ಸಂಗ್ರಹಿಸಿ, ಅದರಿಂದ ಹಣ್ಣಿನ ರಸವನ್ನು ತಯಾರಿಸಿ, ಅದನ್ನು ಭಟ್ಟಿ ಇಳಿಸಿ ಮದ್ಯ ತಯಾರಿಸುವ ಪದ್ಧತಿ ಈಗ ನಶಿಸುತ್ತಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ ಭವಿಷ್ಯವೂ ಆತಂಕಕ್ಕೆ ಸಿಲುಕಿದೆ.

ಗೋವಾದಲ್ಲಿ ದಶಕಗಳಿಂದ ದೇಸಿ ಮದ್ಯವನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದ ಕುಟುಂಬ ಗಾಂವಕರ್ ಫ್ಯಾಮಿಲಿ. ಕಟ್ಟಿಗೆಯ ಕಡ್ಡಿಯನ್ನು ಬಳಸಿ ಕಾಡಿನಿಂದ ಹಣ್ಣನ್ನು ಆರಿಸಿ ತಂದು ಫೆನಿಯನ್ನು ತಯಾರಿಸುತ್ತಿದ್ದರು. ಆದರೆ ಸರ್ಕಾರ ಗೇರು ಹಣ್ಣುಗಳನ್ನು ಕಟಾವು ಮಾಡಲು ದೊಡ್ಡ ದೊಡ್ಡ ಮಾಲೀಕರಿಗೆ ಟೆಂಡರ್‌ ನೀಡುತ್ತಿದೆ. ಹೀಗಾಗಿ ನಮಗೆ ಏನೂ ಸಿಗುತ್ತಿಲ್ಲ ಎಂದು ಗಾಂವಕರ್ ಕುಟುಂಬದ ದೃಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಾಡಿನಿಂದ ಗೇರು ಹಣ್ಣು ಆರಿಸಲು ಮಕ್ಕಳು ದೃಪತಿ ಅವರಿಗೆ ಸಹಾಯ ಮಾಡುತ್ತಾರೆ. ಕಾಡಿನಿಂದ ತಂದ ಹಣ್ಣಿನಿಂದ ಕುಟುಂಬಸ್ಥರು ಸೇರಿ ಬೀಜವನ್ನು ಬೇರ್ಪಡಿಸುತ್ತಾರೆ. ನಂತರ ಗೇರು ಹಣ್ಣನ್ನು ತುಳಿದು ಅದರಿಂದ ರಸ ತೆಗೆಯುವ ಕಾರ್ಯ. ದೃಪತಿ ಗಾಂವಕಾರ್ ಅವರ ಮಕ್ಕಳು ಒಂದು ತೊಟ್ಟು ಗೇರು ಹಣ್ಣಿನ ರಸವನ್ನೂ ವ್ಯರ್ಥ ಮಾಡುವುದಿಲ್ಲ. ಉಳಿಕೆ ತ್ಯಾಜ್ಯ ಹಣ್ಣನ್ನು ಕುಟುಂಬಸ್ಥರು ರೈತರಿಗೆ ನೀಡುತ್ತಾರೆ. ಗೇರು ಹಣ್ಣಿನ ತ್ಯಾಜ್ಯ ಹಸು ಕುರಿಗಳಿಗೆ ಒಳ್ಳೆಯ ಆಹಾರವಾಗಿದೆ. ಹಾಗೇ ರೈತರ ತೋಟಕ್ಕೆ ಒಳ್ಲೆಯ ಗೊಬ್ಬರವೂ ಹೌದು.

ತಾಮ್ರದ ದೊಡ್ಡ ಹಂಡೆಗೆ ಗೇರು ಹಣ್ಣಿನ ರಸವನ್ನು ಸುರಿದು, ಹುತ್ತದ ಮಣ್ಣಿನಿಂದ ಹಂಡೆಯನ್ನು ಭದ್ರ ಪಡಿಸಿದೆರೆ ಪೆನ್ನಿ ತಯಾರಿಸುವ ಅರ್ಧ ಕೆಲಸ ಮುಗಿಯುತ್ತದೆ. ನಂತರ ಎಂಟುಗಂಟೆಗಳ ಕಾಲ ಸಮನಾದ ಶಾಖದಲ್ಲಿ ಗೇರು ಹಣ್ಣಿನ ರಸವನ್ನು ಕುದಿಸಿದರೆ ನೀರಿನ ಅಂಶ ಆವಿಯಾಗಿ ಪೆನ್ನಿ ಮಾತ್ರ ಹಂಡೆಗೆ ಜೋಡಿಸಿದ ಪೈಪ್ ಮೂಲಕ ಹೊರ ಬರುತ್ತದೆ. ಆಗ 40-45% ಆಲ್ಕೋಹಾಲ್ ಹೊಂದಿದ ಗೇರು ಹಣ್ಣಿನ ದೇಸಿ ಪೆನ್ನಿ ಸಿದ್ದವಾಗುತ್ತದೆ.

ಇದನ್ನೂ ಓದಿ : ಭದ್ರಾ  ಮೇಲ್ದಂಡೆ ಯೋಜನೆ ಭ್ರಷ್ಟಾಚಾರ: ಬಾಂಬ್ ಸಿಡಿಸಿದ ಹೆಚ್‌. ವಿಶ್ವನಾಥ್‌!

ದೃಪತಿ ಗಾಂವಕಾರ್ ಕುಟುಂಬ ವರ್ಷಕ್ಕೆ 175 ಲೀಟರ್ ಮಧ್ಯವನ್ನು ತಯಾರಿಸುತ್ತಾರೆ. ಆದರೆ ಇತ್ತೀಚೆಗೆ ಹಳ್ಳಿಗರೆಲ್ಲರೂ ಪಟ್ಟಣ ಸೇರಿರುವುದರಿಂದ ಗಾಂವಕಾರ್ ಕುಟುಂಬದ ದೇಸಿ ಪೆನ್ನಿಗೆ ಬೇಡಿಕೆಯೇ ಇಲ್ಲ.

ಮನೆಯಲ್ಲಿ ತಯಾರಿಸದ ಪೆನ್ನಿಗೆ ಯಾವುದೇ ರಾಸಾಯನಿಕೆ ಸೇರುವುದಿಲ್ಲ. ಅತ್ಯಂತ ಸಾವಯವವಾದ ಈ ಪೆನ್ನಿಗೆ  ಸ್ವಾದಿಷ್ಟ ರುಚಿ ಇದೆ. ಹಿಂದೆ ಸುತ್ತ ಮುತ್ತ ಹಳ್ಳಿಗರೆಲ್ಲ ನಮ್ಮಲ್ಲಿಯೇ ಪೆನ್ನಿ ಖರೀದಿಸುತ್ತಿದ್ದರು. ಈಗ ನಮಗೆ ಬೇಡಿಕೆಯೇ ಇಲ್ಲ. ಮಾರ್ಚ್‌-ಜೂನ್ ಸೀಸನ್‌ನಲ್ಲಿ ದಿನಕ್ಕೆ 300 ರೂಪಾಯಿ ಸಂಪಾದನೆಯೂ ಕಷ್ಟವಾಗಿದೆ. ಹಿಂದೆಲ್ಲ ಒಂದು ಸೀಸನ್‌ನಲ್ಲಿ 50,000 ರೂಪಾಯಿ ಸಂಪಾದಿಸುತ್ತಿದ್ದೆವು ಎಂದು ಗಾಂವಕಾರ್ ಕುಟುಂಬಸ್ಥರು ಹೇಳುತ್ತಾರೆ.

ಗೋವಾದ ದೊಡ್ಡ ಪೆನ್ನಿ ಬ್ರಾಂಡ್ ಖಜೂಲೋ ಈಗ ದೇಸಿ ಪೆನ್ನಿಗಳ ಸಹಾಯಕ್ಕೆ ಮುಂದೆ ಬಂದಿದೆ. ಗಂವಕಾರ್ ತರಹದ ನೂರಾರು ಕುಟುಂಬಗಳಿಂದ ಪೆನ್ನಿಯನ್ನು ಖರೀದಿಸಿ ದೊಡ್ಡ ಮಾರುಕಟ್ಟೆಯಲ್ಲಿ ಅದನ್ನು ಖಜೂಲೊ ಕಂಪನಿಯವರು ಮಾರುತ್ತಿದ್ದಾರೆ. ಆದರೆ ಪೆನ್ನಿ ದೇಸಿ ಮಧ್ಯದ ಅಡಿಯಲ್ಲಿ ಬರುವ ಕಾರಣ ಗೋವಾದ ಆಚೆಗೆ ಅದಕ್ಕೆ ಪ್ರವೇಶವಿಲ್ಲ. ಜೊತೆಗೆ ವರ್ಷದಿಂದ ವರ್ಷಕ್ಕೆ ದೇಸಿ ಪೆನ್ನಿ ಬೇಡಿಕೆ ಇಳಿಕೆಯಾಗುತ್ತಿದೆ. ಹಿಂದೆ ಗೋವಾದ ಆಕರ್ಷಣೆಗಳಲ್ಲಿ ಕ್ಯಾಷ್ಯೂ ಪೆನ್ನಿ ಕೂಡ ಒಂದಾಗಿತ್ತು ಎಂದು ಖಜೂಲೊ ಸಂಸ್ಥೆಯ ಮಾಲೀಕರು ತಿಳಿಸುತ್ತಾರೆ.

ಸರ್ಕಾರದ ಗೇರುಹಣ್ಣು ಕೀಳುವ ಟೆಂಡರ್ ದೊಡ್ಡ ದೊಡ್ಡ ಕಂಪನಿಗಳಿಗೆ ಪಾಲಾಗುತ್ತಿರುವುದರಿಂದ ಸಣ್ಣ ಸಣ್ಣ ಕುಟುಂಬಗಳಿಗೆ ಇಂದು ಏನೂ ಸಿಗುತ್ತಿಲ್ಲ. ಜೊತೆಗೆ ದೊಡ್ಡ ದೊಡ್ಡ ಮಧ್ಯ ತಯಾರಿಕರು ಡಿಸ್ಟಿಲರಿಯಲ್ಲಿ ಪೆನ್ನಿಯನ್ನು ತಯಾರಿಸಿ ಅಗ್ಗದ ಬೆಲೆಗೆ ಮಾರುತ್ತಿದ್ದಾರೆ. ದೊಡ್ಡ ಕಂಪನಿಗಳ ಜೊತೆ ದೃಪತಿ ಗಾಂವಕಾರ್ ತರಹದವರು ಸ್ಪರ್ಧಿಸಲು ಸಾಧ್ಯವಿಲ್ಲ. ಸರ್ಕಾರ ದೇಸಿ ಪೆನ್ನಿಯ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಪೆನ್ನಿ ತಯಾರಕ ಕುಟುಂಬಗಳ ಜೊತೆ ನಿಲ್ಲಬೇಕಿದೆ. ಗೇರು ಹಣ್ಣಿನ ಟೆಂಡರ್ ಬೆಲೆಯನ್ನು ತಗ್ಗಿಸಿ ಪೆನ್ನಿ ತಯಾರಕರ ಬದುಕು ಬೀದಿಗೆ ಬೀಳದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಕೊರೋನಾ ಕಾರಣದಿಂದ ಗೋವಾ ಮತ್ತು ಪಶ್ಚಿಮ ಕರಾವಳಿಯಲ್ಲಿ ಪ್ರವಾಸೋದ್ಯಮ ನಿಂತು ಹೋಗಿದೆ. ಮತ್ತೊಮ್ಮೆ ಪ್ರವಾಸಿಗರನ್ನು ಗೋವಾದತ್ತ ಆಕರ್ಷಿಸಲು ಗೇರುಹಣ್ಣಿನ ಸಾವಯವ ಪೆನ್ನಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಸ್ವಾದಿಷ್ಟ ಮತ್ತು ಸುರಕ್ಷಿತ ವಾದ 500 ವರ್ಷ ಇತಿಹಾಸವಿರುವ ಪೋರ್ಚುಗೀಸ್ ಮೂಲದ ಪೆನ್ನಿಯ ಭವಿಷ್ಯ ಸರ್ಕಾರಗಳ ಕೈಯಲ್ಲಿ ನರಳಾಡುತ್ತಿದೆ.

-ರಾಜೇಶ್ ಹೆಬ್ಬಾರ್

ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here