‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ‘ಗರುಡ ಗಮನ ವೃಷಭ ವಾಹನ’ ಈಗ ಬಿಡುಗಡೆಯಾಗಿದೆ. ಬಹುತೇಕ ಜನಪ್ರಿಯ ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆ-ಪ್ರಶಂಸೆಯ ಭರಪೂರದೊಂದಿಗೆ ಚರ್ಚೆಯಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಸಾಂಪ್ರದಾಯಿಕ ಎಂಬಂತೆ ಬರುವ ‘ಫಾರ್ಮುಲಾ’ ಸಿನಿಮಾಗಳಿಂದ ತುಸು ಡೀವಿಯೇಟ್ ಆಗುವ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಬರದಪ್ಪಿಕೊಳ್ಳುವುದು ಸಾಮಾನ್ಯವಾದ ಸಂಗತಿ. ಕನ್ನಡದಲ್ಲಿ ಸಿನಿಮಾ ಬೆಳೆಯಲು ಇಂತಹ ನಡೆ ಅತಿಮುಖ್ಯ ಎಂಬುದು ಸರ್ವೇಸಾಧಾರಣ ವಾದ. ಖಂಡಿತಾ ಕನ್ನಡ ಸಿನಿಮಾರಂಗ ಇನ್ನೂ ಬೃಹತ್ತಾಗಿ ಬೆಳೆಯಬೇಕು ಎನ್ನುವುದರಲ್ಲಿ ಎರಡುಮಾತಿಲ್ಲ. ಆದರೆ, ಕಾಲದ ಬದಲಾವಣೆಗೆ ಸ್ಪಂದಿಸುವಂತೆ, ನಮ್ಮ ಸುತ್ತಲಿನ ಜಗತ್ತಿನ ನೋವು-ನಲಿವುಗಳನ್ನು ವೈಚಾರಿಕ ದೃಷ್ಟಿಕೋನದಲ್ಲಿ ಕಂಡುಕೊಳ್ಳಲು ಅನುವಾಗುವಂತೆ, ಸಮಸ್ಯೆಗಳಿಗೆ ಕ್ರಿಯಾತ್ಮಕವಾಗಿ-ಸೃಜನಾತ್ಮಕವಾಗಿ ಪ್ರತಿಕ್ರಿಯಿಸುವ ಮಾಧ್ಯಮವಾಗಿ, ಎಲ್ಲರ ಒಳಿತಿಗೆ ಕಾರಣವಾಗುವ ಸಾರ್ವತ್ರಿಕವಾದ ಮೌಲ್ಯಗಳನ್ನು ಪ್ರತಿನಿಧಿಸುವಂತೆ ಕನ್ನಡ ಸಿನಿಮಾರಂಗದಲ್ಲಿ ದೃಶ್ಯ ಕಥೆಗಳು ಮೂಡಿದಾಗ ಮಾತ್ರ ಗುಣಮಟ್ಟದ ದೃಷ್ಟಿಯಿಂದಲೂ ಅದು ಬೆಳೆಯುವುದಕ್ಕೆ ಸಾಧ್ಯವಾದೀತು. ಆ ನಿಟ್ಟಿನಲ್ಲಿ ಹಲವು ಕೋನಗಳಿಂದ ತೆರೆದುಕೊಳ್ಳುವ ಪ್ರಶ್ನೆಗಳಿಗೆ ಕನ್ನಡ ಸಿನಿಮಾ ಮುಖಾಮುಖಿಯಾಗಬೇಕಿದೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಕ್ರೌರ್ಯ ಮತ್ತು ಹಿಂಸೆಗಳನ್ನು ದೃಶ್ಯಮಾಧ್ಯಮದಲ್ಲಿ ಯಾವ ಬಗೆಯಲ್ಲಿ ತೋರಿಸಬೇಕು, ಸಿನಿಮಾದಲ್ಲಿ ಕಟ್ಟಿಕೊಡಲಾಗುವ ಹಿಂಸೆಯ ದೃಶ್ಯಗಳು, ಆ ಸಿನಿಮಾ ನೋಡುವ ಪ್ರಕ್ರಿಯೆಯಲ್ಲಿ ಪ್ರೇಕ್ಷಕನಿಗೆ ಯಾವ ಭಾವನೆ ಕಟ್ಟಿಕೊಡಲು ಸಾಧ್ಯವಾಗಬೇಕು ಎಂಬೆಲ್ಲಾ ಚರ್ಚೆಗಳು ಹಲವು ದಶಕಗಳಿಂದ ನಡೆದುಕೊಂಡು ಬಂದಿರುವಂತವೇ. ಅಮೆರಿಕದ ಸ್ವತಂತ್ರ ನಿರ್ದೇಶಕ ಸ್ಟಾನ್ಲಿ ಕುಬ್ರಿಕ್‌ನ ‘ಎ ಕ್ಲಾಕ್‌ವರ್ಕ್ ಆರೆಂಜ್’ಗಿಂತ ಮುಂಚಿನಿಂದಲೂ, ಇತ್ತೀಚಿನ ‘ಜೈ ಭೀಮ್’ವರೆಗೂ ಇಂತಹ ಚರ್ಚೆಗಳು ಮರುಕಳಿಸಿವೆ. ಆಂಥನಿ ಬರ್ಗೆಸ್‌ನ ಕಾದಂಬರಿಯನ್ನು ಕುಬ್ರಿಕ್ ತನ್ನ ಸಿನಿಮಾಗಾಗಿ ಅಳವಡಿಸಿಕೊಳ್ಳುವಾಗ, ಪ್ರಭುತ್ವದ-ಸಮಾಜದ ಹಿಂಸೆಗೆ ಅಷ್ಟು ಪ್ರಾಮುಖ್ಯತೆ ಕೊಡದೆ, ಮುಖ್ಯ ಪಾತ್ರಧಾರಿ ಅಲೆಕ್ಸ್ ನಡೆಸುವ ದೌರ್ಜನ್ಯಗಳ ಹಿಂಸೆಯನ್ನು ಹೆಚ್ಚು ಅದ್ದೂರಿಯಾಗಿಸುತ್ತಾನೆ, ಆ ಮೂಲಕ ಪ್ರಭುತ್ವದ ಹಿಂಸೆ-ಕ್ರೌರ್ಯಕ್ಕೆ, ಅಲೆಕ್ಸ್ ನಡೆಸುವ ಹಿಂಸೆಯನ್ನು ಪ್ರೇಕ್ಷಕ ಹೋಲಿಸಿಕೊಳ್ಳಬಹುದಾದ ಸಾಧ್ಯತೆಯನ್ನು ತಗ್ಗಿಸುತ್ತಾನೆ ಎಂಬ ವಿಮರ್ಶೆ ಆತನ ಸಿನಿಮಾಗೆ ಬಂದಿತ್ತು. ಇಂತಹ ಎಷ್ಟೋ ಚರ್ಚೆಗಳ ಹಿನ್ನೆಲೆಯಲ್ಲಿ, ಜಗತ್ತಿನ ಅತ್ಯುತ್ತಮ ನಿರ್ದೇಶಕರು ತಮ್ಮ ಚಿತ್ರಕಥೆಯಲ್ಲಿ ಹಿಂಸೆಯನ್ನು ಹಿಡಿದಿಡುವ ಅಗತ್ಯ ಎದುರಾದಾಗ, ‘ಹಿಂಸೆಯ ದೃಶ್ಯಗಳನ್ನು ಪ್ರೇಕ್ಷಕರು ಸ್ರವಿಸುತ್ತಾರೆ’ ಎಂಬ ‘ಜನಪ್ರಿಯ ಧಾಟಿ’ಯನ್ನು ದಾಟಿ, ತಾನು ಹೇಳುವ ಕಥೆಯ ಸಂಕೀರ್ಣತೆಗೆ ಅಗತ್ಯವಿರುವ ರೀತಿಯಲ್ಲಿ ಅದನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ತಮಿಳು ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಮೊದಲ ಸಿನಿಮಾ ‘ಪರಿಯೇರುಂ ಪೆರುಮಾಳ್’ ಗಮನಿಸಿದರೆ, ಮುಖ್ಯಪಾತ್ರಧಾರಿಯನ್ನು ಕಟ್ಟುವಾಗ ಹಿಂಸೆಯನ್ನು ತ್ಯಜಿಸುವ ಪಾತ್ರವಾಗಿ ಕಟ್ಟುತ್ತಾರೆ. ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತಿಯಾಗಿ ಆತ ಹಿಂಸೆಯ ದಾರಿ ತುಳಿಯುವುದೇ ಇಲ್ಲ. ಅದು ಅಂದಿನ ಕಾಲಘಟ್ಟದ ಸೂಚನೆ ಕೂಡ. ಅದೇ ‘ಕರ್ಣನ್’ ಸಿನಿಮಾದಲ್ಲಿ ಕರ್ಣನಿಗೆ ಹಿಂಸೆ ಅನಿವಾರ್ಯವಾಗುತ್ತದೆ. ಇಲ್ಲಿ ಪ್ರಭುತ್ವ-ಸಮಾಜ ತಳಸಮುದಾಯದ ಮೇಲೆ ಹೇರುವ ಹಿಂಸೆಲ್ವಯಿಂದ ರಕ್ಷಿಸಿಕೊಳ್ಳಲು ಪ್ರತಿಹಿಂಸೆಯ ಹೊರತಾದ ಅವಕಾಶವೇ ಅಲ್ಲಿಲ್ಲ. ಅದನ್ನು ಅವರು ಪ್ರೇಕ್ಷಕರಿಗೆ ದಾಟಿಸಬೇಕಿದೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ವಿಸಾರಣೈ ಮತ್ತು ಜೈಭೀಮ್ ಸಿನಿಮಾಗಳಲ್ಲಿ ಆಡಳಿತ ವ್ಯವಸ್ಥೆ/ಪೊಲೀಸ್ ವ್ಯವಸ್ಥೆ ನಡೆಸುವ ಹಿಂಸೆಯನ್ನು ಭೀಕರವಾಗಿ ಕಟ್ಟಿಕೊಡುವಾಗ ಕೂಡ, ಆ ಕಟ್ಟುವಿಕೆ ದೇಶ-ಕಾಲದ ಅಗತ್ಯವಾಗಿ ಪ್ರೇಕ್ಷಕನಿಗೆ ಕಾಡುತ್ತದೆ. ಅಂತಹ ವ್ಯವಸ್ಥೆಯ ವಿರುದ್ಧ ಪ್ರೇಕ್ಷಕನಿಗೆ ಮೂಡಿಸಬೇಕಾದ ತಿಳಿವಳಿಕೆ ಮತ್ತು ಅದನ್ನು ಸರಿಪಡಿಸದೆ ಅದರ ಭಾಗವಾಗಿರುವ ಕಾರಣಕ್ಕೆ, ‘ಗಿಲ್ಟ್’ ಭಾವನೆಯನ್ನು ಮೂಡಿಸುವುದಕ್ಕೂ ಅದು ಮುಖ್ಯ. ಗ.ಗ.ವೃ.ವಾ ಸಿನಿಮಾದಲ್ಲಿ ಹಿಂಸೆಯನ್ನು ಅತಿರಂಜಿತವಾಗಿ ಕಟ್ಟಿಕೊಡುವಾಗ, ನಿರ್ದೇಶಕರಿಗೆ ಇಂತಹ ಯಾವುದಾದರೂ ಪ್ರಶ್ನೆ ಮೂಡಿರಬಹುದೇ ಎಂಬ ಸಂದೇಹ ಹುಟ್ಟುವುದರಿಂದ ಇಂತಹ ಒಂದು ಪೀಠಿಕೆಗೆ ಮುಂದಾಗಬೇಕಾಯಿತು.

ಗ.ಗ.ವೃ.ವಾ ಮುಖ್ಯಪಾತ್ರಧಾರಿ ಶಿವ (ರಾಜ್ ಬಿ ಶೆಟ್ಟಿ) ತನ್ನ ಅನಾಥ ಬಾಲ್ಯದಲ್ಲಿ ಹಲವು ದೌರ್ಜನ್ಯಗಳಿಗೆ ಒಳಗಾಗಿದ್ದಾನೆ ಎಂಬ ಕಾರಣಕ್ಕೆ, ತನಗೆ ಸರಿಕಾಣದ, ತನ್ನ ಪ್ರಿಯ ಗೆಳೆಯ ಹರಿಯ (ರಿಷಭ್ ಶೆಟ್ಟಿ) ವ್ಯವಹಾರಗಳಿಗೆ ಅಡ್ಡಬರುವ ಎಲ್ಲರನ್ನೂ ಕಲ್ಲಿನಲ್ಲಿ ಚಚ್ಚಿ ಅಥವಾ ಚಾಕುವಿನಲ್ಲಿ ಚುಚ್ಚಿ ಕೊಲ್ಲುವ ಮೃಗವಾಗಿ ಬದಲಾಗಿದ್ದಾನೆ. ಇಡೀ ಸಿನಿಮಾದಲ್ಲಿ ಹಲವು ಜನರನ್ನು ಈ ರೀತಿ ಕೊಲ್ಲುವುದನ್ನು ವಿಜೃಂಭಿಸಲಾಗಿದೆ. ಉದಾ: ಆತ ಮಾಡಿದ ಮೊದಲನೇ ಕೊಲೆಯನ್ನು ಪ್ರೇಕ್ಷಕರಿಗೆ ನರೇಟ್ ಮಾಡುತ್ತಿರುವ ಎಸ್‌ಐ, ‘ಆತ ಯಾವ ರೀತಿ ಹೊಡೆದಿದ್ದ ಅಂದರೆ, 17 ಹಲ್ಲುಗಳನ್ನು ಬಾಚಿಕೊಳ್ಳಬೇಕಾಯಿತು’ ಎಂದು ಶಿವ ಚಚ್ಚಿ ಕೊಲ್ಲುತ್ತಿರುವ ದೃಶ್ಯದ ಹಿನ್ನೆಲೆಯಲ್ಲಿ ಹೇಳುತ್ತಾನೆ. ಶಿವ ತಾನು ಕೊಂದವರ ಚಪ್ಪಲಿ-ಬೂಟ್‌ಗಳನ್ನು ಹಾಕಿಕೊಂಡು ಒಡಾಡುತ್ತಾನೆ ಎಂಬ ಸಂಗತಿ ಸಿನಿಮಾದಲ್ಲಿ ಹಲವು ಬಾರಿ ಪುನರಾವರ್ತಿತವಾಗಿ ವಿಜೃಂಭಿಸುತ್ತದೆ. ಒಂದು ಸೀನ್‌ನಲ್ಲಿ ಆತ ತನ್ನ ವಿರೋಧಿ ಕೇಬಲ್ ಆಪರೇಟರ್‌ನನ್ನು ಕೊಚ್ಚಿಕೊಲ್ಲುವಾಗ ‘ಮಾದೇವ’ ಹಾಡನ್ನು ಹಾಕಲಾಗುತ್ತದೆ. (ಹಿಂಸೆಯನ್ನು ‘ಕೂಲ್’ ಎನಿಸುವಂತೆ ಮಾಡುವ ಜನಪ್ರಿಯ ಹಪಾಹಪಿ). ಹೀಗೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನ ಹಿಂಸಾತ್ಮಕ ಕೃತ್ಯಗಳನ್ನು ವೈಭವೀಕರಿಸಿ ‘ಸ್ಟೈಲಿಶ್’ ಎಂಬಂತೆ ಕಟ್ಟಿಕೊಡುವುದೇ ‘ವಿವರ’ವಾಗಿ ಕಟ್ಟಿಕೊಡುವುದು ಎಂದು ತಿಳಿದು ಈ ಸಿನಿಮಾವನ್ನು ಪ್ರಶಂಸಿಸಿದ್ದೂ ಇದೆ.

ನಮ್ಮ ಸುತ್ತಲಿನ ಪರಿಸರದಲ್ಲಿ ಎಷ್ಟೊಂದು ಕೊಲೆಯಾಗುವುದಿಲ್ಲವೇ? ಹಿಂಸೆ ಇಲ್ಲವೇ? ಕೊಂದು ಉದಾಸೀನ ತಳೆದು ಬದುಕುವವರಿಲ್ಲವೇ? ಸಿನಿಮಾದಲ್ಲಿ ಮಾತ್ರ ಅದರ ಬಗ್ಗೆ ಆಕ್ಷೇಪ ಏಕೆ ಎಂಬಿತ್ಯಾದಿ ಪ್ರಶ್ನೆಗಳು ತೂರಿಬರುವುದು ಸಹಜ. ಖಂಡಿತಾ ಸಮಾಜದಲ್ಲಿ ಹಿಂಸೆ ಸಾಕಷ್ಟಿದೆ. ಕಲಾವಿದ ಆ ಹಿಂಸೆಗೆ ಕನ್ನಡಿ ಹಿಡಿಯುವುದು ಕೂಡ ಮುಖ್ಯವೇ. ಆದರೆ ಅತ್ಯುತ್ತಮ ಕಲಾವಿದ ಹಿಡಿದ ಕನ್ನಡಿ, ಪ್ರೇಕ್ಷಕನಿಗೆ ಆ ಹಿಂಸೆಯನ್ನಷ್ಟೇ ತೋರಿಸದೆ ಅದಕ್ಕೂ ಮೀರಿದ್ದನ್ನು ಕಾಣಿಸುತ್ತದೆ. ಆಗ ವಿವರಗಳಿಗೆ ಪ್ರಾಮುಖ್ಯತೆ ಮೂಡುತ್ತದೆ. ಪ್ರಸ್ತುತ ಸಿನಿಮಾದಲ್ಲಿಯೂ ನಿಜವಾದ ವಿವರಗಳನ್ನು (ಶಿವ ತಾನು ಕೊಂದವರ ಬೂಟ್‌ಗಳನ್ನು ಹಾಕಿಕೊಳ್ಳುತ್ತಿದ್ದ ಎಂಬುದನ್ನು ವಿಜೃಂಭಿಸಿ ಪುನರಾವರ್ತಿಸುವ ತಾಂತ್ರಿಕ ವಿವರಗಳು ಮಾತ್ರವಲ್ಲ) ಕಟ್ಟಿಕೊಡಲು ನಿರ್ದೇಶಕನಿಗೆ ಅನಂತ ಸಾಧ್ಯತೆ ಇತ್ತು. ಶಿವ ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಎಂದು ನಿರೂಪಕ ಹೇಳುವ ಮಾತುಗಳಿಗಿಂತಲೂ, ತೋರಿಸುವ ಒಂದೆರಡು ಸಣ್ಣಪುಟ್ಟ ದೃಶ್ಯಗಳಿಗಿಂತಲೂ, ಸಮಾಜದಲ್ಲಿರುವ ಯಾವಯಾವ ಸಂಗತಿಗಳು ಅವನು ಬದಲಾಗುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂಬುದನ್ನು ದೃಶ್ಯಗಳ ಮೂಲಕ ಎಕ್ಸ್ಪ್ಲೋರ್ ಮಾಡಿದ್ದರೆ, ಅಂತಹ ಸಂಘರ್ಷಗಳನ್ನು ಕಟ್ಟಿಕೊಡುವ ಡೀಟೇಲಿಂಗ್ ಮೂಲಕ ಮನಗಾಣಿಸಿದ್ದರೆ ಇದು ಒಳ್ಳೆಯ ಸಿನಿಮಾವಾಗಿ ಬೆಳೆಯುವ ಸಾಧ್ಯತೆಯಿತ್ತು. ಶಿವ-ಹರಿಯರ ಸುತ್ತ ಇರುವ ಜನರ, ವ್ಯವಸ್ಥೆಯ ಸಾಮಾಜಿಕ-ಆರ್ಥಿಕ-ರಾಜಕೀಯದ ವಿವಿಧ ಆಯಾಮಗಳ ಪರಿಸರವನ್ನು ಇನ್ನೂ ನಿಖರವಾಗಿ ಕಟ್ಟಿಕೊಡಲು ಸಾಧ್ಯವಾಗಿದ್ದರೆ ಆ ಪಾತ್ರಗಳಿಗೆ ಇನ್ನಷ್ಟು ಸ್ಪಷ್ಟತೆಯನ್ನು ತಂದುಕೊಡುತ್ತಿತ್ತು. ಇದನ್ನೆಲ್ಲಾ ಮಾಡುವ ಗೋಜಿಗೆ ಹೋಗದೆ, ಸರಣಿ ಕೊಲೆಗಳನ್ನು ‘ರಿಚ್’ ಆಗಿ ತೋರಿಸುವ, ಅದನ್ನು ಪ್ರೇಕ್ಷಕ ‘ಎಂಜಾಯ್’ ಮಾಡುವಂತೆ ಮಾಡುವುದಕ್ಕೇ ನಿರ್ದೇಶಕ ಬಹುತೇಕ ಸ್ಕ್ರೀನ್ ಸಮಯವನ್ನು ಮೀಸಲಿಡುತ್ತಾರೆ. ಅದೇ ಹಳೆಯ ಶೈಲಿಯ, ಸಾಹುಕಾರನ ದರ್ಪ, ನಿಷ್ಟೆ ತೋರಿಸುವವನ ಮೇಲೆ ಅಸಡ್ಡೆ, ರಾಜಕೀಯ ವಿರೋಧಕ್ಕಾಗಿ ರೌಡಿಯಿಸಂ, ವ್ಯವಹಾರ ವಿಸ್ತರಣೆಗಾಗಿ ಹೊಡೆದಾಟ ಇಂತಹ ಕೆಲವು ಸಂಗತಿಗಳು ಇಲ್ಲೂ ಇವೆ. ಇಂತಹ ಚರ್ವಿತಚರ್ವಣ ಸಂಘರ್ಷಗಳ ಜೊತೆಗೆ, ಹೊಸ ಕಾಲಘಟ್ಟದ ಸಂದರ್ಭವನ್ನು, ಸವಾಲುಗಳನ್ನು, ಸಮಸ್ಯೆಗಳನ್ನು ವಿವರವಾಗಿ ಹಿಡಿಯುವ ಯಾವುದೇ ಪ್ರಯತ್ನ ಸಿನಿಮಾದಲ್ಲಿ ಇಲ್ಲ. ಈ ಇಬ್ಬರು ಗೆಳೆಯರು ದೊಡ್ಡ ರೌಡಿಗಳಾಗಿ ಬೆಳೆದಿದ್ದನ್ನು ಮೆರೆಸಲು, ‘ಡಮ್ಮಿ’ಯಂತೆ ಕಾಣುವ ಪೊಲೀಸ್ ಸ್ಟೇಷನ್ ಸೃಷ್ಟಿಸುವ, ತರ್ಕವಿಲ್ಲದಂತೆ ಗೃಹ ಸಚಿವ ಒಬ್ಬ ಎಸ್‌ಐಅನ್ನು ಮಂಗಳೂರು ಪೊಲೀಸ್ ಠಾಣೆಗೆ ವರ್ಗಾಯಿಸುವ, ಕಪಾಳಕ್ಕೆ ಹೊಡೆಸಿಕೊಂಡು ಕ್ಷಣಮಾತ್ರದಲ್ಲಿ ಬದಲಾಗುವ ಪೊಲೀಸ್ ಪೇದೆ/ಡ್ರೈವರ್ ಇಂತಹ ಸುಲಭ ಕಥಾ ಬೆಳವಣಿಗೆಗೆ ನಿರ್ದೇಶಕ ಜೋತುಬೀಳುತ್ತಾರೆ.

ಇನ್ನು ಮುಖ್ಯಪಾತ್ರಧಾರಿಗಳಾದ ಶಿವ ಮತ್ತು ಹರಿಯ ನಡುವೆ ಮೂಡುವ ಸಂಘರ್ಷ, ಅದನ್ನು ಬಗೆಹರಿಸುವ ರೀತಿ, ಈ ಯಾವೊಂದೂ ಉತ್ತಮ ಸಿನಿಮಾ/ಕಥೆಗೆ ನಿದರ್ಶನದಂತಿಲ್ಲ. ಅಲ್ಲಿ ಆ ಪಾತ್ರಗಳಿಗೆ ರಿಫ್ಲೆಕ್ಟ್ ಮಾಡಿಕೊಳ್ಳುವ, ಬದಲಾವಣೆಗೆ ಅವಕಾಶ ನೀಡುವ, ಆ ಮೂಲಕ ಪ್ರೇಕ್ಷಕನಿಗೂ ಚಿಂತನೆಗೆ ಹಚ್ಚಬಹುದಾದ ರೀತಿಯಲ್ಲಿ ಕಥೆ ಬೆಳೆಯುವುದೇ ಇಲ್ಲ. ಬದಲಿಗೆ ಯಾರಾದರೂ ಪ್ರೆಡಿಕ್ಟ್ ಮಾಡಬಹುದಾದಂತೆ ಅವರಿಬ್ಬರ ನಡುವೆ ದ್ವೇಷ, ಸೇಡು, ಕೊಲೆ, ಸಾವು ಇವುಗಳಿಂದ ಕಥೆ ಅಂತ್ಯವಾಗುತ್ತದೆ. ಕಥಾ ಸಂವಿಧಾನದಲ್ಲಿ ಪಾತ್ರಗಳ ಬೆಳೆವಣಿಗೆಗೆ ಯಾವ ಅವಕಾಶವನ್ನೂ ನೀಡದೆ, ‘ಕ್ಲೈಮ್ಯಾಕ್ಸ್’ನಲ್ಲಿ ಮಾತ್ರ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿರುವ ‘ಫಿಲಾಸಫಿಕಲ್’ ಅಂತ್ಯಕ್ಕೆ ಸಿನಿಮಾ ಶರಣಾಗುತ್ತದೆ.

ಹೀಗೆ, ದೌರ್ಜನ್ಯ, ಅನಾಥತೆ, ಸ್ನೇಹ, ನಿಷ್ಠೆ, ದ್ವೇಷ, ಸೇಡು, ಹಿಂಸೆಯ 70-80ರ ದಶಕದ ಕಥೆಗಳನ್ನು ನೆನಪಿಸುವ ‘ಗ.ಗ.ವೃ.ವಾ’ನದಲ್ಲಿ ಕೆಲವು ದೃಶ್ಯಗಳಿಗೆ ನೀಡಿರುವ ಟ್ರೀಟ್‌ಮೆಂಟ್‌ನ ಚುರುಕುತನವೇ ಇದ್ದುದರಲ್ಲಿ ಹೆಚ್ಚುಗಾರಿಕೆ. ಅದು ತಾಂತ್ರಿಕತೆಗೆ ಸಂಬಂಧಿಸಿದ್ದು. ಉದಾಹರಣೆಗೆ ತುರೇಮಣೆಯಲ್ಲಿ ಮೀನುಕೊಯ್ಯುತ್ತಾ, ವಾಸನೆಯ ಬಗ್ಗೆ ಗೊಂದಲವಾಗಿ, ಬಾವಿಯಲ್ಲಿ ಬಿದ್ದಿರುವ ಹೆಣ ಹುಡುಕುವುದು, ಹಾಗೆಯೇ, ಮೊದಲೇ ಹೇಳಿದಂತೆ, ಅಂತ್ಯದಲ್ಲಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಂತೆ ಮೂಡುವ ದೃಶ್ಯಗಳು ಹೀಗೆ. ಆದರೆ ತಾಂತ್ರಿಕತೆಯೇ ಒಂದು ಸಿನಿಮಾವನ್ನು ಮೇಲೆತ್ತಲು ಸಾಧ್ಯವಿಲ್ಲ. ಮಾದೇವ ಹಾಡನ್ನು ಬಳಸಿರುವ ದೃಶ್ಯ ಹೇಗೆ ತಾಂತ್ರಿಕತೆ ‘ಮ್ಯಾನಿಪುಲೇಶನ್’ಗಾಗಿ ಬಳಸಲಾಗಿದೆ ಎಂಬುದನ್ನೂ ಎತ್ತಿತೋರಿಸುತ್ತದೆ. ಸದಾ ಬೆದರುವ ಎಸ್‌ಐ ಪಾತ್ರ ಸೃಷ್ಟಿ ಮಾಡಿದ್ದು ಮುಖ್ಯವಾದರೂ, ಅದನ್ನು ಸೃಷ್ಟಿಸಲೋಸ್ಕರ, ಪೊಲೀಸ್ ವ್ಯವಸ್ಥೆಯ ವಿವರಗಳನ್ನು ಸಾಧ್ಯವಾದಷ್ಟು ಮರೆಮಾಚಿ ಅದನ್ನು ಪೇಲವಗೊಳಿಸಲಾಗಿದೆ.

ಆಕಸ್ಮಿಕವಾಗಿ ಗೆಳೆಯರಾಗುವ ಹರಿ ಮತ್ತು ಶಿವನ ನಡುವಿನ ಸಂಬಂಧ, ಅವರಿಬ್ಬರಿಗೆ ಸಮಾಜ-ವ್ಯವಸ್ಥೆಯ ಜೊತೆಗೆ ಇರುವ ಸಂಬಂಧದ ಸಂಕೀರ್ಣತೆಯ ಯಾವ ಮಜಲುಗಳೂ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಸಿನಿಮಾದಲ್ಲಿ ಕಟ್ಟಿಕೊಡುವ ಸರಣಿ ಕೊಲೆಗಳು ಕೂಡ ಅಂತಹ ಸಂಬಂಧವನ್ನು ಶೋಧಿಸುವುದಕ್ಕೆ ಕಾರಣವಾಗುವ ರೀತಿಯಲ್ಲಿ ಮೂಡಿಲ್ಲ. ಸುಲಭ ಗ್ರಹಿಕೆಯಲ್ಲಿ ಪ್ರೇಕ್ಷಕರನ್ನು ಉದ್ರೇಕತೆಯ ಮೂಲಕ ರಂಜಿಸಲೆಂಬಂತೆ ನಿರ್ದೇಶಿಸಿರುವ ಈ ಸಿನಿಮಾ ಅದೇ ನಿಟ್ಟಿನಲ್ಲಿ ಪ್ರಶಂಸೆಗೂ ಕಾರಣವಾಗಿರುವುದನ್ನು ಢಾಳವಾಗಿ ಗಮನಿಸಬಹುದಾಗಿದೆ.

ಕೊನೆಗೆ: ಫಿಲ್ಮ್ ಶೀರ್ಷಿಕೆಯ ಬಗ್ಗೆ ಹಲವರಿಗೆ ಗೊಂದಲ ಇದೆ. ಹರಿ ಮತ್ತು ಶಿವನ ಅನ್ವರ್ಥವಾಗಿ ಸಿನಿಮಾದ ಶೀರ್ಷಿಕೆಯಿದೆ ಅಷ್ಟೇ ಎನ್ನುತ್ತಾರೆ ಪುರಾಣ ಕಥೆಗಳನ್ನು ಬಲ್ಲವರು!

– ಗುರುಪ್ರಸಾದ್ ಡಿ ಎನ್

ನ್ಯಾಯಪಥ ಸಂಪಾದಕರು

5 COMMENTS

  1. ನಾನು ಭಾರತೀಯ ಸಂಸ್ಥಾನಗಳ ಏಕೀಕರಣ ಪುಸ್ತಕವನ್ನು ಆನ್ಲೈನ್ ಮುಖಾಂತರ ಆರ್ಡರ್ ಮಾಡಿದ್ದೆ.ಇನ್ನೂ ವರೆಗೆ ನನಗೆ ಪುಸ್ತಕ ತಲುಪಿರುವುದು ಇಲ್ಲ.ಪೇಮೆಂಟ್ ಕೂಡಾ successful ಅಂತ ಆಗಿದೆ.ಕಾರಣ ತಿಳಿಸಿ ಮೇಡಂ.ಧನ್ಯವಾದಗಳು

LEAVE A REPLY

Please enter your comment!
Please enter your name here