Homeಕರ್ನಾಟಕಸಾವಿನಲ್ಲೂ ಘನತೆ ಮತ್ತು ವೈಶಿಷ್ಟ್ಯ ಮೆರೆದ ಗಿರೀಶ್ ಕಾರ್ನಾಡ್

ಸಾವಿನಲ್ಲೂ ಘನತೆ ಮತ್ತು ವೈಶಿಷ್ಟ್ಯ ಮೆರೆದ ಗಿರೀಶ್ ಕಾರ್ನಾಡ್

ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರ ಮತ್ತು ಅಂತ್ಯಸಂಸ್ಕಾರದ ವಿಧಿವಿಧಾನಗಳ ಕುರಿತು ಆಗ ಪ್ರಶ್ನೆಗಳು ಎದ್ದಿದ್ದವು. ಅಂತಹ ಯಾವುದಕ್ಕೂ ಕಾರ್ನಾಡರು ಅವಕಾಶ ಕೊಟ್ಟಿಲ್ಲ.

- Advertisement -
- Advertisement -

|ನಾನು ಗೌರಿ ಡೆಸ್ಕ್|

ತನ್ನ ಸಾವಿಗೆ ಮುಂಚೆಯೇ ಕುಟುಂಬದವರೊಂದಿಗೆ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಹೇಳಿದ್ದ ಸಂಗತಿಗಳು ಇಂದು ಗಮನಕ್ಕೆ ಬಂದಿವೆ. ಕನ್ನಡಕ್ಕೆ, ಕರ್ನಾಟಕಕ್ಕೆ ಗೌರವ ತಂದುಕೊಟ್ಟಿರುವ ಸಾಹಿತಿ ಕಾರ್ನಾಡ್ ರವರಿಗೆ ಸರ್ಕಾರೀ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲು ಸರ್ಕಾರ ಸಿದ್ಧವಾಗಿತ್ತು. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ, ಅವರ ಕಚೇರಿಯ ಅಧಿಕಾರಿಗಳು ಕಾರ್ನಾಡ್ ಅವರ ಮನೆಗೆ ಹೋದಾಗ ಅವರಿಗೆ ಅಚ್ಚರಿ ಕಾದಿತ್ತು.

ಯಾವುದೇ ಸರ್ಕಾರೀ ಗೌರವ ಬೇಡ ಮತ್ತು ಸರ್ಕಾರೀ ಜಾಗದಲ್ಲೂ ಅಂತ್ಯ ಸಂಸ್ಕಾರ ಬೇಡವೆಂದು ಗಿರೀಶ್ ಕಾರ್ನಾಡ್ ಅವರು ಹೇಳಿದ್ದಾರೆ ಎಂದು ಕುಟುಂಬದವರು ಅಧಿಕಾರಿಗಳಿಗೆ ತಿಳಿಸಿದರು. ಅಷ್ಟೇ ಅಲ್ಲದೇ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದೂ ತಿಳಿದು ಬಂದಿದೆ. ಕಾರ್ನಾಡ್ ಅವರ ಕುರಿತು ಸಾಕ್ಷ್ಯ ಚಿತ್ರ ನಿರ್ಮಿಸಿದ್ದ ಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಇದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಂದು ಮಧ್ಯಾಹ್ನದ ನಂತರ ಬೈಯ್ಯಪ್ಪನಹಳ್ಳಿಯ ಚಿತಾಗಾರದಲ್ಲಿ ಕಾರ್ನಾಡ್ ರ ಅಂತ್ಯ ಸಂಸ್ಕಾರ ನಡೆಯಲಿದೆ.ಜೀವನದುದ್ದಕ್ಕೂ ಕೆಲವು ಮೌಲ್ಯಗಳಿಗೆ ಬದ್ಧರಾಗಿದ್ದು ಬದುಕಿದ ಗಣ್ಯ ವ್ಯಕ್ತಿಗಳು, ಸಾವಿನ ನಂತರ  ಏನು ಮಾಡಬೇಕೆಂದು ಕುಟುಂಬದವರಿಗೆ ತಿಳಿಸದೇ ಇದ್ದಾಗ ಕೆಲವು ಎಡವಟ್ಟುಗಳು ಸಂಭವಿಸುತ್ತವೆ. ಅವರ ಮೌಲ್ಯಗಳಿಗೆ ವಿರುದ್ಧವಾಗಿ ಕುಟುಂಬವು ಧಾರ್ಮಿಕ ವಿಧಿ ವಿಧಾನಗಳಿಗೆ ಶರಣಾಗಬಹುದು. ಅಂತಹ ಸಂದರ್ಭದಲ್ಲಿ ಸದರಿ ಗಣ್ಯರ ಸಾರ್ವಜನಿಕ ಬದುಕಿನ ಒಡನಾಡಿಗಳಾಗಿದ್ದವರೂ ಮುಜುಗರಕ್ಕೆ ಸಿಲುಕುತ್ತಾರೆ. ಏಕೆಂದರೆ ಬದುಕಿದ್ದಾಗ, ತನ್ನ ಬದುಕಿನ ಆದ್ಯತೆಗಳ ಕುರಿತು ಹೇಳಿಕೊಳ್ಳಲು ಆ ವ್ಯಕ್ತಿಯೇ ಇರುತ್ತಾರೆ. ಸತ್ತ ನಂತರ  ಕುಟುಂಬ ಏನು ತೀರ್ಮಾನ ಮಾಡುತ್ತದೋ ಅದೇ ಅಂತಿಮವಾಗುತ್ತದೆ.

ಯು.ಆರ್.ಅನಂತಮೂರ್ತಿಯವರು ತೀರಿಕೊಂಡಾಗ ಹಲವು ಪ್ರಶ್ನೆಗಳು ಎದ್ದಿದ್ದವು. ಅವರ ಅಂತ್ಯ ಸಂಸ್ಕಾರವು ಕಲಾಗ್ರಾಮದ ಆವರಣದಲ್ಲಿ ನಡೆಯಿತು ಮತ್ತು ಅದು ಮಾಧ್ವ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ನಡೆದಿತ್ತು. ಕ್ರಿಶ್ಚಿಯನ್ ಪತ್ನಿಯಿದ್ದ ಅನಂತಮೂರ್ತಿಯವರು, ಬ್ರಾಹ್ಮಣ್ಯದ ದ್ವಂದ್ವಗಳನ್ನು ಎತ್ತಿ ತೋರಿಸುವ ಸೃಜನಶೀಲ ಕೃತಿಗಳನ್ನು ಬರೆದಿದ್ದರು. ಅದೇ ರೀತಿ, ಬ್ರಾಹ್ಮಣ ಆಚರಣೆ, ವಿಧಿ ವಿಧಾನ ಮತ್ತು ಸಾಂಸ್ಕೃತಿಕ ಸಂಗತಿಗಳ ಕುರಿತು ಇತರ ವಿಚಾರವಾದಿಗಳಿಗಿಂತ ಭಿನ್ನವಾದ ನಿಲುವನ್ನು ಹೊಂದಿದ್ದರು. ಅವರ ಅಂತ್ಯಸಂಸ್ಕಾರದ ವಿಧಿ ವಿಧಾನದ ಬಗ್ಗೆಯೂ ಅವರೇ ಸೂಚಿಸಿದ್ದರು ಎನ್ನಲಾಗಿದೆ.

ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರ ಮತ್ತು ಅಂತ್ಯಸಂಸ್ಕಾರದ ವಿಧಿವಿಧಾನಗಳ ಕುರಿತು ಆಗ ಪ್ರಶ್ನೆಗಳು ಎದ್ದಿದ್ದವು. ಅಂತಹ ಯಾವುದಕ್ಕೂ ಕಾರ್ನಾಡರು ಅವಕಾಶ ಕೊಟ್ಟಿಲ್ಲ.

ಇಷ್ಟೇ ಅಲ್ಲದೇ, ಇನ್ನೂ ಕಾರ್ನಾಡರು ಮತ್ತೊಂದು ವಿಚಾರದಲ್ಲೂ ‘ಭಿನ್ನ’ ನಿಲುವನ್ನು ಹೊಂದಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ಎಲ್ಲೆಡೆ ಕನ್ನಡ ಅಸ್ಮಿತೆಯ ಹೆಗ್ಗುರುತುಗಳಾಗಿ ಬಳಸುವುದನ್ನು ಅವರು ಒಪ್ಪಿರಲಿಲ್ಲ. ಜ್ಞಾನಪೀಠ ಪ್ರಶಸ್ತಿಯೊಂದೇ ಸಾಹಿತ್ಯ ಶ್ರೇಷ್ಠತೆಯ ಮಾನದಂಡವೂ ಅಲ್ಲ  ಎಂಬುದು ಅವರ ಅಭಿಪ್ರಾಯವಾಗಿತ್ತು. ಸ್ವತಃ ತಾವೇ ಜ್ಞಾನಪೀಠ ಪಡೆದುಕೊಂಡಿದ್ದರೂ, ಇಂತಹ ಅಭಿಪ್ರಾಯ ಅವರಲ್ಲಿತ್ತು ಮತ್ತು ಇದನ್ನು ಅವರು ಬಹಿರಂಗವಾಗಿಯೂ ಹೇಳಿದ್ದರು.

ಗಿರೀಶ್ ಕಾರ್ನಾಡರು ಈ ರೀತಿಯಾಗಿ ಸಾವಿನ ನಂತರದ ಸಂಗತಿಗಳ ಕುರಿತು ಮೊದಲೇ ಕುಟುಂಬದವರಿಗೆ ತಿಳಿಸಿ ಮಾದರಿಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...