Homeಮುಖಪುಟಕುಸ್ತಿ ತ್ಯಜಿಸುತ್ತಿದ್ದೇನೆ…; ಬೂಟು ಕಳಚಿಟ್ಟ ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್!

ಕುಸ್ತಿ ತ್ಯಜಿಸುತ್ತಿದ್ದೇನೆ…; ಬೂಟು ಕಳಚಿಟ್ಟ ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್!

- Advertisement -
- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಶನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಕುಸ್ತಿ ತ್ಯಜಿಸುವುದಾಗಿ ಘೋಷಿಸಿರುವ ಒಲಿಂಪಿಕ್ ಪದಕ ವಿಜೇತೆ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್, ಪ್ರತ್ರಕರ್ತರ ಮುಂದೆಯೇ ತಮ್ಮ ಬೂಟು ಕಳಚಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಭಾರತ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಂತರ ಇಂದು ನಡೆದ ಚುನಾವಣೆಯಲ್ಲಿ ಆತನ ಆಪ್ತ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬ್ರಿಜ್ ಭೂಷಣ್ ಅವರು 12 ವರ್ಷಗಳ ಕಾಲ ಕುಸ್ತಿ ಫೆಡರೇಷನ್ ಮುಖ್ಯಸ್ಥರಾಗಿದ್ದರು. ಈಗ ಆಯ್ಕೆಯಾಗಿರುವ ಸಂಜಯ್ ಸಿಂಗ್ ಹಲವು ವರ್ಷಗಳಿಂದ ಭೂಷಣ್‌ಗೆ ಆಪ್ತರಾಗಿದ್ದಾರೆ. ಉತ್ತರ ಪ್ರದೇಶದಿಂದ ಆರು ಬಾರಿ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಮಲಿಕ್ ಸೇರಿದಂತೆ ಪ್ರಮುಖ ಆಟಗಾರರು ಗಂಭೀರ ಆರೋಪ ಮಾಡಿ, ಹಲವು ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರಶನ ನಡೆಸಿದ್ದರು.

ಇಂದು ನಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ 47 ಮತಗಳಲ್ಲಿ 40 ಮತಗಳನ್ನು ಗಳಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನಕ್ಕೆ ಪ್ರತಿಭಟನಾನಿರತ ಕುಸ್ತಿಪಟುಗಳ ಅಭ್ಯರ್ಥಿಯಾಗಿದ್ದ ಅನಿತಾ ಶೆಯೊರನ್ ಅವರು ಕೇವಲ ಏಳು ಮತಗಳನ್ನು ಪಡೆದರು. ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ ಫೋಗಟ್ ಮತ್ತು ಬಜರಂಗ್ ಪುನಿಯಾ ಫಲಿತಾಂಶದ ಬಗ್ಗೆ ತಮ್ಮ ನಿರಾಸೆ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ ಫೋಗಟ್, ‘ಈಗ ಸಂಜಯ್ ಸಿಂಗ್ ಫೆಡರೇಶನ್‌ನ ಮುಖ್ಯಸ್ಥರಾಗಿ ಆಯ್ಕೆಯಾದ ನಂತರ, ಮಹಿಳಾ ಕುಸ್ತಿಪಟುಗಳು ಕಿರುಕುಳವನ್ನು ಎದುರಿಸುತ್ತಲೇ ಇರುತ್ತಾರೆ. ದೇಶದಲ್ಲಿ ನ್ಯಾಯವನ್ನು ಹೇಗೆ ಹುಡುಕಬೇಕು ಎಂದು ನನಗೆ ತಿಳಿಯುತ್ತಿಲ್ಲ. ನಮ್ಮ ಕುಸ್ತಿ ವೃತ್ತಿಜೀವನದ ಭವಿಷ್ಯವು ಕತ್ತಲೆಯಲ್ಲಿದೆ. ಎಲ್ಲಿಗೆ ಹೋಗಬೇಕೆಂದು ನಮಗೆ ತಿಳಿದಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಲಂಪಿಕ್ ಕಂಚಿನ ಪದಕ ವಿಜೇತ ಭಜರಂಗ್ ಪುನಿಯಾ ಮಾತನಾಡಿ, ‘ಸರ್ಕಾರವು ನಮಗೆ ನೀಡಿದ ಭರವಸೆಯನ್ನು ಈಡೇರಿಸದಿರುವುದು ದುರಾದೃಷ್ಟಕರ. ನಾವು ಯಾವುದೇ ಪಕ್ಷದೊಂದಿಗೆ ನಂಟು ಹೊಂದಿಲ್ಲ, ನಾವು ರಾಜಕೀಯಕ್ಕಾಗಿ ಇಲ್ಲಿಗೆ ಬಂದಿಲ್ಲ, ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೇವೆ. ಆದರೆ, ಇಂದು ಬ್ರಿಜ್ ಭೂಷಣ್ ಸಿಂಗ್ ಅವರ ಸಹಾಯಕ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದಾರೆ’ ಎಂದು ಹೇಳಿದರು.

ಕುಸ್ತಿ ಸಂಸ್ಥೆಗೆ ಮಹಿಳಾ ಮುಖ್ಯಸ್ಥರು ಆಯ್ಕೆಯಾಗಬೇಕು ಎಂದು ನಾವು ಬಯಸಿದ್ದೆವೆ. ಆದರೆ, ಅದು ಸಾಧ್ಯವಾಗಲಿಲ್ಲ. ನಾವು ಹೋರಾಡಿದೆವು; ಆದರೆ ಹೊಸ ಅಧ್ಯಕ್ಷರು ಬ್ರಿಜ್ ಭೂಷಣ್ ಅವರ ಸಹಾಯಕ. ಅವರ ವ್ಯಾಪಾರದಲ್ಲಿ ಪಾಲುದಾರರಾಗಿದ್ದಾರೆ. ನಾನು ಕುಸ್ತಿಯನ್ನು ತ್ಯಜಿಸುತ್ತೇನೆ’ ಎಂದು ಹೇಳಿದ ಸಾಕ್ಷಿ, ತನ್ನ ಬೂಟುಗಳನ್ನು ಕಳಚಿ ಮೇಜಿನ ಮೇಲೆ ಇರಿಸಿದರು.

ಇದೆ ವರ್ಷದ ಜನವರಿಯಲ್ಲಿ, ಮೂವರು ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಬ್ರಿಜ್ ಭೂಷಣ್ ಹಲವಾರು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ಸರ್ಕಾರ ತನಿಖೆಗೆ ಆದೇಶಿಸಿದ ನಂತರ ಅವರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು. ‘ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಯಾವುದೇ ಸಹಾಯಕ ಅಥವಾ ಸಂಬಂಧಿಗೆ ಕುಸ್ತಿ ಸಂಸ್ಥೆಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಕುಸ್ತಿಪಟುಗಳಿಗೆ ಭರವಸೆ ನೀಡಲಾಗಿತ್ತು. ಬ್ರಿಜ್ ಭೂಷಣ್ ಅವರ ಪುತ್ರ ಪ್ರತೀಕ್ ಮತ್ತು ಅಳಿಯ ವಿಶಾಲ್ ಸಿಂಗ್ ಚುನಾವಣಾ ಸ್ಪರ್ಧೆಗೆ ಪ್ರವೇಶಿಸದಿದ್ದರೂ, ಅವರ ಸಹಾಯಕ ಸಂಜಯ್ ಸಿಂಗ್ ಅವರ ನಾಮಪತ್ರವನ್ನು ಸಿಂಧುಗೊಳಿಸಲಾಗಿದೆ.

ಸಂಜಯ್ ಸಿಂಗ್ ಈ ಹಿಂದೆ ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಡಬ್ಯೂಎಫ್ಐನ ಹಿಂದಿನ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದರು, ಜತೆಗೆ, 2019 ರಿಂದ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿದ್ದರು.

ಇಂದಿನ ಚುನಾವಣೆಯಲ್ಲಿ ತಮ್ಮ ಗೆಲುವಿನ ನಂತರ ಮಾತನಾಡಿದ ಸಂಜಯ್ ಸಿಂಗ್, ‘ಇದು ಸುಳ್ಳಿನ ಮೇಲೆ ಸತ್ಯದ ಗೆಲುವು. ಆ ಪ್ರವೃತ್ತಿಗಳಿಗೆ ಸ್ಥಾನವಿಲ್ಲದ ವ್ಯಕ್ತಿಯ (ಬ್ರಿಜ್ ಭೂಷಣ್) ವಿರುದ್ಧ ಅವರು (ಕುಸ್ತಿ ಪಟುಗಳು) ಇಂತಹ ಆರೋಪಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.

ನೀವು ಬಿಜೆಪಿ ಸಂಸದರಿಗೆ ನಿಕಟವಾಗಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಖಂಡಿತವಾಗಿ, ನಾನು ಅವರಿಗೆ ಹತ್ತಿರವಾಗಿದ್ದೇನೆ’ ಎಂದು ಹೇಳಿದರು. ಫೆಡರೇಶನ್ ಈಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಕುಸ್ತಿಪಟುಗಳ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದ್ದಕ್ಕೆ, ‘ಯಾವುದೇ ಮಹಿಳಾ ಕುಸ್ತಿಪಟುಗಳ ವಿರುದ್ಧ ಯಾವುದೇ ಅನ್ಯಾಯವಾಗುವುದಿಲ್ಲ’ ಎಂದು ಹೇಳಿದರು.

ಸಂಜಯ್ ಸಿಂಗ್ ಅವರ ವಿಜಯದ ಕುರಿತು ಮಾತನಾಡಿದ ಬ್ರಿಜ್ ಭೂಷಣ್ ಶರಣ್ ಸಿಂಗ್, ‘ನಾನು ದೇಶದ ಕುಸ್ತಿಪಟುಗಳಿಗೆ ಮತ್ತು ಡಬ್ಲ್ಯೂಎಫ್ಐ ಕಾರ್ಯದರ್ಶಿಗೆ ಜಯದ ಶ್ರೇಯವನ್ನು ನೀಡಲು ಬಯಸುತ್ತೇನೆ. ಹೊಸ ಒಕ್ಕೂಟದ ರಚನೆಯ ನಂತರ, ಕುಸ್ತಿ ಪಂದ್ಯಗಳು ಪುನರಾರಂಭಗೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ’ ಎಂದರು.

ಇದನ್ನೂ ಓದಿ; ಕುಸ್ತಿ ಫೆಡರೇಷನ್‌ ನೂತನ ಅಧ್ಯಕ್ಷರಾಗಿ ಬ್ರಿಜ್‌ ಭೂಷಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ ಆಯ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...