ಗೋವಾ ಮತ್ತು ಮಣಿಪುರ ರಾಜ್ಯವನ್ನು ಕೊರೊನಾ ವೈರಸ್ ಮುಕ್ತ ರಾಜ್ಯಗಳೆಂದು ಘೋಷಿಸಲಾಗಿದೆ. ಗೋವಾವನ್ನು ಕೊರೊನಾ ಮುಕ್ತರಾಜ್ಯ ಎಂದು ಘೋಷಿಸಿದ ನಂತರ ಮನಿಪುರವನ್ನು ಭಾರತದ ಎರಡನೇ ಕೊರೊನಾ ಮುಕ್ತ ರಾಜ್ಯ ಎಂದು ಘೋಷಿಸಲಾಯಿತು.

ಗೋವಾವೂ ದೇಶದಲ್ಲಿ ಜನತಾ ಕರ್ಫ್ಯೂ ನಡೆಯುವ ಮೊದಲೇ ದೇಶದ ಇತರ ರಾಜ್ಯಗಳ ಪ್ರವಾಸಿಗರು ಹಾಗೂ ಜನರನ್ನು ತಪಾಸಣೆ ಮಾಡಿ ಮನೆಯಲ್ಲೇ ಸಂಪರ್ಕತಡೆಗೆ ಒಳಪಡಿಸಿತ್ತು .

ಕೊರೊನಾ ಸೋಂಕಿಗೆ ಒಳಗಾದ 2 ಜನರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಮಣಿಪುರದಲ್ಲಿ ಸೋಂಕಿಗೆ ಒಳಗಾದ ಇಬ್ಬರು ಜನರಲ್ಲಿ ಒಬ್ಬರು 23 ವರ್ಷದ ಯುವತಿ ಇಂಗ್ಲೇಂಡಿನಿಂದ ಹಿಂದಿರುಗಿದ್ದರು, ಇದು ರಾಜ್ಯದ ಮೊದಲ ಪ್ರಕರಣವಾಗಿತ್ತು. ಎರಡನೇ ರೋಗಿಯು 65 ವರ್ಷದ ವ್ಯಕ್ತಿಯಾಗಿದ್ದು, ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾಅತ್ ಸಭೆಯಿಂದ ಮರಳಿದ ನಂತರ ಈ ಕಾಯಿಲೆಗೆ ತುತ್ತಾಗಿರುವುದು ಕಂಡುಬಂದಿತ್ತು.

ಏಪ್ರಿಲ್ 3 ರಿಂದ ಗೋವಾ ಯಾವುದೇ ಹೊಸ ಪ್ರಕರಣಗಳನ್ನು ಹೊಂದಿಲ್ಲ ಮತ್ತು ಕೊರೊನಾ ವೈರಸ್ ಸೋಂಕಿಗೆ ಒಳಗಾದ ಏಳು ರೋಗಿಗಳು ಚೇತರಿಸಿಕೊಳ್ಳುವ ಮೂಲಕ ಮೊದಲ ಕರೋನಾ ಮುಕ್ತ ರಾಜ್ಯವಾಯಿತು. ಸೋಂಕಿತ ಏಳು ಜನರಲ್ಲಿ ಆರು ಮಂದಿ ವಿದೇಶಿ ಪ್ರಯಾಣಮಾಡಿದ್ದರೆ, ಇನ್ನೊಬ್ಬರು ಕೊರೊನಾ ಸೋಂಕಿತ ರೋಗಿಯ ಸಹೋದರರಾಗಿದ್ದರು.


ಇದನ್ನೂ ಓದಿ: 46 ಜಿಲ್ಲೆಗಳಲ್ಲಿ ಒಂದೂ ಕೊರೊನಾ ಪಾಸಿಟಿವ್‌ ಪ್ರಕರಣಗಳಿಲ್ಲ: ಕೇಂದ್ರ ಸರ್ಕಾರ


ಚೇತರಿಸಿಕೊಂಡ ಈ ಏಳು ರೋಗಿಗಳನ್ನು ಸರ್ಕಾರಿ ಸೌಲಭ್ಯಗಳಲ್ಲಿ, ಮನೆಯಲ್ಲಿ ಪ್ರತ್ಯೇಕಿಸಲಾಗುವುದು ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸ್ವಾಂತ್ ಹೇಳಿದ್ದಾರೆ. “ಇದು ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಕಾರ್ಮಿಕರಿಗೆ ಸಂತೋಷದ ಕ್ಷಣವಾಗಿದ್ದರೂ ಇದು ವಿಶ್ರಾಂತಿ ಪಡೆಯುವ ಸಮಯವಲ್ಲ ಮತ್ತು ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಬೇಕಾಗಿದೆ” ಎಂದು ಪ್ರಮೋದ್ ಸ್ವಾಂತ್ ಹೇಳಿದ್ದಾರೆ.

“ಕೇಂದ್ರ ಸರ್ಕಾರ ನಿರ್ಧರಿಸುವವರೆಗೂ ಲಾಕ್‌ಡೌನ್ ಮುಂದುವರಿಯುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಗಳು ಮುಚ್ಚಲ್ಪಟ್ಟಿರುತ್ತದೆ ಆದರೆ ವಿಶೇಷ ಸಂದರ್ಭಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುವ ಯಾರಾದರೂ ಸರ್ಕಾರಿ ಸಂಪರ್ಕತಡೆ ಕೇಂದ್ರದಲ್ಲಿ ಇರಬೇಕಾಗುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ “ಕೊರೊನಾ ಮುಕ್ತವಾಗಿರುವ ದೇಶದ ಮೊದಲ ರಾಜ್ಯ ಗೋವಾ” ಎಂದು ಟ್ವೀಟ್ ಮಾಡಿದ್ದಾರೆ.

ಮಾರ್ಚ್ 22 ರಂದು ಜನತಾ ಕರ್ಫ್ಯೂ ದಿನದಿಂದ ಗೋವಾ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕದೊಂದಿಗೆ ಗೋವಾದ ಗಡಿಯನ್ನು ಮುಚ್ಚಲು ಮುಖ್ಯಮಂತ್ರಿ ನಿರ್ಧರಿಸಿದ್ದರು.

ಒಟ್ಟಾರೆಯಾಗಿ ಗೋವಾ ಇದುವರೆಗೆ 800 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದೆ, ಅವರಲ್ಲಿ ಏಳು ಮಂದಿಗೆ ಕೊರೊನಾ ವೈರಸ್ ಸೋಂಕಿರುವುದು ಪತ್ತೆಯಾಗಿತ್ತು.

ಕಡ್ಡಾಯ ಸುರಕ್ಷತಾ ಶಿಷ್ಟಾಚಾರವನ್ನು ಅನುಸರಿಸಿ ಮಣಿಪುರ ಮತ್ತು ಗೋವಾ ರಾಜ್ಯಗಳು ತಮ್ಮ ವ್ಯವಹಾರ ಚಟುವಟಿಕೆಗಳನ್ನು ಪ್ರಾರಂಭಿಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

LEAVE A REPLY

Please enter your comment!
Please enter your name here