ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಯಡಿಯೂರಪ್ಪನವರ ಸರ್ಕಾರ, ಮಲೆನಾಡನ್ನು ಬೋಳುಗುಡ್ಡವಾಗಿಸಲು ಪ್ರಯತ್ನಿಸುತ್ತಿದೆ ಎಂದು ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ ಆರೋಪಿಸಿದೆ. ಸರ್ಕಾರಿ ಅರಣ್ಯ ಭೂಮಿಯನ್ನು ಕಾನೂನುಬಾಹಿರವಾಗಿ ಖಾಸಗೀಕರಣಗೊಳಿಸಿ ಅದರ ಲಾಭವನ್ನು ಖಾಸಗಿ ಉದ್ಯಮಿಗಳಿಗೆ ನೀಡಲು ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ಜನವರಿ 7 ರಂದು ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಒಕ್ಕೂಟದ ಮುಖ್ಯಸ್ಥರಾದ ಕೆ.ಪಿ.ಶ್ರೀಪಾಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೈಸೂರು ಪೇಪರ್ ಮಿಲ್ಸ್ (MPM) ಅನ್ನು ಖಾಸಗೀಕರಣ ಮಾಡುವುದರ ಜತೆಗೆ MPM ನೆಡುತೋಪಿನ ಅರಣ್ಯ ಇಲಾಖೆಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ: ರೈತ ಹೋರಾಟಕ್ಕೆ ವಿಶ್ವದ ಅತ್ಯಂತ ಕಿರಿಯ ಪರಿಸರ ಹೋರಾಟಗಾರ್ತಿಯ ಬೆಂಬಲ

“ನಮ್ಮದು ಮಲೆನಾಡಿನ ಕಾಡು, ಕಾಡಿನೊಂದಿಗೆ ಬದುಕುವ ಜನ, ಕಾಡುಪ್ರಾಣಿಗಳು, ಸಸ್ಯ, ಹೊಳೆ-ಹಳ್ಳ, ನದಿ-ಕಣಿವೆಗಳಿಗೆ ಸಂಚಕಾರ ತಂದಿರುವ ಅರಣ್ಯ ಖಾಸಗೀಕರಣದ ಹುನ್ನಾರದ ವಿರುದ್ಧದ ಜನಹೋರಾಟ. ಕಾಡನ್ನು ಅದರ ಪಾಡಿಗೆ ಬಿಡಿ, ಕಾಡಿನಂಚಿನ ಮಲೆನಾಡಿನ ಸಕಲ ಜೀವ ಚರಾಚರಗಳ ಬದುಕನ್ನು ನಾಶ ಮಾಡಬೇಡಿ ಎಂದು ಸರ್ಕಾರಕ್ಕೆ ಮಲೆನಾಡಿಗರು ನೀಡುತ್ತಿರುವ ಎಚ್ಚರಿಕೆಯ ಹೋರಾಟ. ಕಾಡಿನ ಹೆಸರಲ್ಲಿ ದಂಧೆ ಮಾಡುವ ದಂಧೆಕೋರರ ವಿರುದ್ಧದ ಜನದನಿ” ಎಂದು ಹೇಳಿದರು.

ಕಳೆದ ಹಲವು ದಿನಗಳಿಂದ ಈ ಹೋರಾಟವನ್ನು ಸಂಘಟಿಸುತ್ತಿರುವ ಈ ಒಕ್ಕೂಟಕ್ಕೆ ನಾಡಿನ ಹತ್ತಾರು ಚಿಂತಕರು ಸಾಹಿತಿಗಳು, ತಜ್ಞರು ಬೆಂಬಲ ನೀಡಿದ್ದಾರೆ.

 

“ಸುಮಾರು 40 ವರ್ಷಗಳ ಹಿಂದೆ MPM ಕಾಗದ ಕಾರ್ಖಾನೆಯನ್ನು ಸರ್ಕಾರ ಆರಂಭಿಸಿದಾಗ ಅದಕ್ಕೆ ಕಚ್ಚಾವಸ್ತು ಸರಬರಾಜಿಗಾಗಿ ಮಲೆನಾಡಿನ ದಟ್ಟ ಕಾಡಿನ 32,000 ಹೆಕ್ಟೇರ್ (ಅಂದಾಜು 80 ಸಾವಿರ ಎಕರೆ) ಅರಣ್ಯ ಭೂಮಿಯನ್ನು 40 ವರ್ಷದ ಲೀಸ್ (ಗುತ್ತಿಗೆ) ಆಧಾರದ ಮೇಲೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಮೇಲೆ ಒಂದು ವೇಳೆ, ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟರೂ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಕೊಡಬೇಕು ಎಂದು ಲೀಸಿನಲ್ಲಿ ಸರ್ಕಾರವೇ ಷರತ್ತು ಹಾಕಿತ್ತು”

ಇದನ್ನೂ ಓದಿ: ಹೆಸರಘಟ್ಟದಲ್ಲಿ ಚಿತ್ರನಗರಿ ಬೇಡ; ಪರಿಸರವಾದಿಗಳು ಸೇರಿದಂತೆ ಹಲವರಿಂದ ಒತ್ತಾಯ

ಆ ಭೂಮಿಯಲ್ಲಿ ಬೆಳೆದುನಿಂತಿದ್ದ ಸಹಜ ಕಾಡನ್ನು ನಾಶಮಾಡಿದ ಕಂಪನಿ, ಅಲ್ಲಿ ಮಲೆನಾಡಿನ ಅಂತರ್ಜಲ ಮತ್ತು ಒಟ್ಟಾರೆ ಪರಿಸರಕ್ಕೆ ಮಾರಕವಾದ ಅಕೇಶಿಯಾ ಹಾಗೂ ನೀಲಗಿರಿ ಬೆಳೆದಿದೆ. ಸಾವಿರಾರು ಎಕರೆ ಪ್ರದೇಶದ ಕಾಡಿನ ಜಾಗದಲ್ಲಿ ಈ ವಿದೇಶಿ ತಳಿ ಮರಗಳನ್ನು ಬೆಳೆದ ಕಾರಣ ಮಲೆನಾಡಿನ ಪರಿಸರ, ವನ್ಯಜೀವಿ, ಜನಜೀವನ, ಹವಾಮಾನ ಮತ್ತು ನದಿ ಕಣಿವೆಯ ಜೊತೆ ಅಂತರ್ಜಲ ಮಟ್ಟದ ಮೇಲೆಯೂ ಸಾಕಷ್ಟು ಪರಿಣಾಮಗಳಾಗಿವೆ. ಈ ನಡುವೆ ನಷ್ಟದ ಸುಳಿಗೆ ಸಿಲುಕಿ MPM ಕಂಪನಿ ಮುಚ್ಚಿಹೋಗಿ ವರ್ಷಗಳೇ ಉರುಳಿವೆ.

ಈಗ, ಭೂಮಿಯ ಲೀಸ್ ಅವಧಿ ಮುಗಿದಿದೆ. ಆದರೆ ಸರ್ಕಾರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವ ಬದಲು, ಮತ್ತೆ ಲೀಸ್ ನವೀಕರಣದ ಮೂಲಕ ಆ ಭೂಮಿಯನ್ನು ಮುಚ್ಚಿಹೋಗಿರುವ ಕಂಪನಿಗೆ ಪರಭಾರೆ ಮಾಡಿದೆ! ಏಕೆಂದರೆ; ಈ ಅಪಾರ ಪ್ರಮಾಣದ ಅಮೂಲ್ಯ ಭೂಮಿಯ ಮೇಲೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿರುವವರ ಕಣ್ಣು ಬಿದ್ದಿದೆ. ಕಾರ್ಖಾನೆಯನ್ನು ಪುನರಾರಂಭಿಸುವ ನೆಪದಲ್ಲಿ ಮಲೆನಾಡಿನ ಈ ಭೂಮಿಯನ್ನು ತಮ್ಮ ವಶಕ್ಕೆ ಪಡೆದು ಅಲ್ಲಿ ವಾಣಿಜ್ಯ ಅರಣ್ಯಬೆಳೆ ಬೆಳೆಯುವ ದಂಧೆ ನಡೆಸಲು ಅವರು ಸಂಚು ಹೂಡಿದ್ದಾರೆ. ಅದಕ್ಕೆ ತಕ್ಕಂತೆ ಅರಣ್ಯ ಇಲಾಖೆ, ಸರ್ಕಾರ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದವರೂ ಅವರಿಗೆ ಸಾಥ್ ನೀಡುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳೊಂದಿಗೆ ರಾಜಕಾರಣಿಗಳೂ, ಅಧಿಕಾರಿಗಳು ಕೈಜೋಡಿಸಿದ್ದಾರೆ.

ಇದನ್ನೂ ಓದಿ: ’ಕಾವೇರಿ ಕೂಗು’ ಎಂಬುದು ರಾಜಕೀಯ, ಮೋಸ ಮತ್ತು ನಾಟಕ: ಜಗ್ಗಿ ವಾಸುದೇವ್ ನಡೆಗೆ ಪರಿಸರ ಕಾರ್ಯಕರ್ತರ ಆಕ್ಷೇಪ

ಈ ನಾಡದ್ರೋಹಿ, ಜನದ್ರೋಹಿ ವಿಷವರ್ತುಲ, ಇಡೀ ಮಲೆನಾಡಿನ ಅರಣ್ಯ ಪ್ರದೇಶವನ್ನೇ ತಮ್ಮ ಕಬ್ಜಕ್ಕೆ ಪಡೆದು, ಮಲೆನಾಡು ಮಾತ್ರವಲ್ಲದೆ, ಇಡೀ ರಾಜ್ಯಕ್ಕೇ ಶುದ್ಧ ಗಾಳಿ, ನೀರು, ಆಹಾರ ಮೂಲಿಕೆಗಳನ್ನು ನೀಡುವ ಕಾಡನ್ನೇ ಸರ್ವನಾಶ ಮಾಡುವ ಸಂಚು ಹೂಡಿದೆ. ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಯನ್ನೇ ತಮ್ಮ ಜಹಗೀರು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಹೋರಾಟಗಾರರ ಒಕ್ಕೂಟವು ಆರೋಪಿಸಿದೆ.

ವಿರೋಧ ಯಾಕೆ?

ಈ 80 ಸಾವಿರ ಎಕರೆಯಷ್ಟು ಭಾರೀ ಭೂ ಪ್ರದೇಶವನ್ನು, ಸಹಜ ಕಾಡು ಬೆಳೆಯಬೇಕಾದ ಜಾಗವನ್ನು ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಕಂಪನಿಯ ಲಾಭಕ್ಕಾಗಿ, ದಂಧೆಗಾಗಿ ಮತ್ತೆ ಬಿಟ್ಟುಕೊಡಲಾಗುತ್ತಿದೆ. ಅದು ಈಗಾಗಲೇ ವಿವಿಧ ಕಾರಣಗಳಿಂದಾಗಿ ಕರಗುತ್ತಿರುವ ಕಾಡಿಗೆ, ಬತ್ತಿ ಹೋಗಿರುವ ಅಂತರ್ಜಲಕ್ಕೆ, ಮಾಯವಾಗುತ್ತಿರುವ ವನ್ಯಜೀವಿಗಳಿಗೆ ಮತ್ತು ಅಂತಿಮವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ಮಲೆನಾಡಿನ ನಮ್ಮ-ನಿಮ್ಮೆಲ್ಲರ ಬದುಕಿನ ಅಂತ್ಯವೇ ಆಗಲಿದೆ. ಕಾಡಿನ ನಡುವಿನಲ್ಲಿರುವ ನಮ್ಮ ಮನೆ, ಹೊಲ, ಗದ್ದೆಗಳಿಗೆ ಹೋಗಲೂ ಅವಕಾಶವಾಗದಂತೆ ಖಾಸಗಿ ಕಂಪನಿಗಳ ಬಲಿಷ್ಠ ಬೇಲಿಗಳು ಸುತ್ತುವರಿಯಲಿವೆ. ಅವರ ಅನುಮತಿ ಇಲ್ಲದೆ ನಮ್ಮ ಮನೆಗೆ ನಾನೇ ಹೋಗುವುದು ಕೂಡ ದುಸ್ತರವಾಗಲಿದೆ. ಹಾಗಾಗಿ ವಿರೋಧ. ನಮ್ಮ ಬದುಕಿನ ಮೇಲೆ ಮತ್ತೊಬ್ಬರ ಬೀಗ ಬೀಳುವುದಕ್ಕಾಗಿ ಈ ವಿರೋಧ, ನಮ್ಮ ಕಾಡಿನ ಮೇಲೆ, ಕಾಡಿನ ಜೀವಿಗಳ ಮೇಲೆ, ನಮ್ಮ ಹೊಳೆ-ಹಳ್ಳ-ನದಿ-ಕಣಿವೆಗಳ ಮೇಲೆ ದೊಣ್ಣೆ ನಾಯಕನ ಅಪ್ಪಣೆಯ ತೂಗುಗತ್ತಿ ಬೇಡ ಎಂದು ಈ ವಿರೋಧ! ಎಂದು ಹೋರಾಟಗಾರರು ತಿಳಿಸಿದ್ದಾರೆ.


ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ

LEAVE A REPLY

Please enter your comment!
Please enter your name here