ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೇವಾಡಿಯ ಸರ್ಕಾರಿ ಶಾಲಾ ಶಿಕ್ಷಕ ರಂಜಿತ್‌ಸಿಂಹ ದಿಸಾಳೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಷ್ಠಿತ ‘ಗ್ಲೋಬಲ್ ಟೀಚರ್ ಪ್ರೈಜ್- 2020’ಕ್ಕೆ ಪಾತ್ರರಾಗಿದ್ದಾರೆ. ವಿಶೇಷವೆಂದರೇ 32 ವರ್ಷದ ಶಿಕ್ಷಕ ದಿಸಾಳೆ ಅವರು ಅಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕವನ್ನು ಮರುವಿನ್ಯಾಸ ಮಾಡಿದ ಖ್ಯಾತಿ ಹೊಂದಿದ್ದಾರೆ.
‘ಗ್ಲೋಬಲ್ ಟೀಚರ್ ಪ್ರೈಜ್- 2020’ನ ಬರೋಬ್ಬರಿ 7.4 ಕೋಟಿ ರೂಪಾಯಿಗಳ (10 ಮಿಲಿಯನ್ ಡಾಲರ್) ಪ್ರಶಸ್ತಿ ಹಣವನ್ನು ಗೆದ್ದುಕೊಂಡಿದ್ದಾರೆ.
ಪ್ರಶಸ್ತಿ ಒಲಿದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಿಕ್ಷಕ ರಂಜಿತ್‌ಸಿಂಹ ದಿಸಾಳೆ, ’ಕೊರೊನಾ ಸಾಂಕ್ರಾಮಿಕದಂತಹ ಈ ಕಠಿಣ ಸಮಯದಲ್ಲಿ, ಪ್ರತಿ ವಿದ್ಯಾರ್ಥಿಯು ತಮ್ಮ ಜನ್ಮಸಿದ್ಧ ಹಕ್ಕಾದ ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಶಾಲಾ ಶಿಕ್ಷಕರು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದಾರೆ’ ಎಂದು ದಿಸಾಲೆ ಹೇಳಿದ್ದಾರೆ.

‘ಈ ಪ್ರಶಸ್ತಿಯಿಂದಾಗಿ ಸರ್ಕಾರಿ ಶಾಲಾ ವ್ಯವಸ್ಥೆ ಬಗ್ಗೆ ನಮ್ಮ ವಿಶ್ವಾಸ ಹೆಚ್ಚಾಗುತ್ತದೆ. ಸವಾಲುಗಳ ನಡುವೆಯೂ ತಮ್ಮ ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುತ್ತಿರುವ ಶಿಕ್ಷಕರು ಎಂದರೆ ಬದಲಾವಣೆಯ ಹರಿಕಾರರು. ಶಿಕ್ಷಕರು ಯಾವಾಗಲೂ ವಿಷಯಗಳನ್ನು ಹಂಚಿಕೊಳ್ಳುವುದರಲ್ಲಿ ವಿಶ್ವಾಸವಿಟ್ಟಿರುತ್ತಾರೆ’ ಎಂದು ದಿಸಾಳೆ ಹೇಳಿದ್ದಾರೆ.
ಇದನ್ನೂ ಓದಿ: ಎಂಎಲ್‌ಸಿ ಚುನಾವಣೆ: 4 ಸ್ಥಾನದಲ್ಲಿ ಮಹಾವಿಕಾಸ್ ಅಘಾಡಿ ಜಯ- ಬಿಜೆಪಿಗೆ ಮುಖಭಂಗ
Wow! Here’s THE MOMENT Stephen Fry announced Ranjitsinh Disale as the Winner of The Global Teacher Prize 2020! Congratulations Ranjit! Watch here: https://t.co/9t5GXaIJ58 @ranjitdisale @stephenfry #GTP2020 #TeachersMatter #globalteacherprize #India @NHM_London @UNESCO pic.twitter.com/eQjSosGQwY
— Global Teacher Prize (@TeacherPrize) December 3, 2020
ಪ್ರಶಸ್ತಿಗಾಗಿ 140 ದೇಶಗಳ 12 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ದಿಸಾಳೆ ಪ್ರಶಸ್ತಿ ಮೊತ್ತದ ಅರ್ಧ ಭಾಗವನ್ನು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಉಳಿದ 9 ಮಂದಿಗೆ ಅಭ್ಯರ್ಥಿಗಳಿಗೆ ಹಂಚುವುದಾಗಿ ಆನ್‌ಲೈನ್ ವೇದಿಕೆಯಲ್ಲೇ ಹೇಳಿದ್ದಾರೆ. ಗ್ಲೋಬಲ್ ಟೀಚರ್ ಪ್ರೈಜ್‌ನ ಇತಿಹಾಸದಲ್ಲಿ ಹೀಗೆ ಪ್ರಶಸ್ತಿ ಮೊತ್ತವನ್ನು ಹಂಚಿಕೊಂಡದ್ದು ದಿಸಾಳೆಯೇ ಮೊದಲು.
ಶಿಕ್ಷಕ ರಂಜಿತ್‌ಸಿಂಹ ದಿಸಾಳೆ ಮೊದಲು ಪಾಠ ಮಾಡಲು ಪ್ರಾರಂಭಿಸಿದ್ದು, ದನಗಳ ಹಟ್ಟಿಯ ಸಮೀಪ ಇದ್ದ ಶಿಥಿಲಾವಸ್ಥೆಗೆ ತೆರಳಿದ್ದ ಶಾಲೆಯೊಂದರಲ್ಲಿ. ಶಾಲೆಗೆ ಬರುತ್ತಿದ್ದವರೆಲ್ಲಾ ಕರ್ನಾಟಕದ ಗಡಿ ಭಾಗದ ಬುಡಕಟ್ಟು ಸಮುದಾಯಗಳಿಗೆ ಸೇರಿದ ಮಕ್ಕಳು. ಅವರಿಗೆ ಕನ್ನಡ ಬಿಟ್ಟು ಮರಾಠಿ ಬರುತ್ತಿರಲಿಲ್ಲ. ಆದರೆ, ಪಠ್ಯಕ್ರಮವು ಮರಾಠಿಯಲ್ಲಿಯೇ ಇತ್ತು.ಇದರಿಂದ ಬುಡಕಟ್ಟು ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
ಇದನ್ನೂ ಓದಿ: ಡಿಸೆಂಬರ್ 8 ರ ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದ ಹೋರಾಟನಿರತ ರೈತರು
ಹೀಗಾಗಿ, ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ತಾವೇ ಕನ್ನಡ ಭಾಷೆಯನ್ನು ಕಲಿತು ಪಠ್ಯ ಪುಸ್ತಕಗಳನ್ನು ಮರುವಿನ್ಯಾಸ ಮಾಡಿದ್ದರು. ಪಠ್ಯ ಪುಸ್ತಕಗಳನ್ನು QR ಕೋಡ್ಗೆ ಪರಿವರ್ತಿಸಿದರು. ಹಾಡುಗಳು, ವಿಡಿಯೋಗಳನ್ನು QR ಕೋಡ್ಗೆ ಪರಿವರ್ತಿಸಿ ಮಕ್ಕಳಿಗೆ ಶಿಕ್ಷಣ ನೀಡಿದ್ದರು.
ದಿಸಾಳೆ ಅವರ ಕಾರ್ಯ ಫಲ ನೀಡಿದ್ದು ಶಿಕ್ಷಣದಲ್ಲಿ ಮಾತ್ರವಲ್ಲ, ಗ್ರಾಮದಲ್ಲಿದ್ದ ಬಾಲಕಿಯರ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ಕಡಿಮೆಯಾಗಿವೆ. ಹೆಣ್ಣು ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಈ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಯೂ ದಕ್ಕಿದೆ. ಹಳ್ಳಿಯ ಒಬ್ಬ ಯುವತಿ ಪದವೀಧರೆಯಾಗಿದ್ದು, ರಂಜಿತ್‌ಸಿಂಹ ಇಲ್ಲಿಗೆ ಬರುವ ಮುಂಚೆ ಇದು ಊಹಿಸಲೂ ಸಹ ಆಗದ ವಿಷಯವಾಗಿತ್ತು’ ಎಂದು ಗ್ಲೋಬಲ್ ಟೀಚರ್ ಪ್ರೈಜ್‌ನ ವೆಬ್‌ಸೈಟ್ ಮಾಹಿತಿ ನೀಡಿದೆ.


