Homeಮುಖಪುಟರೈತ ಸಂಘಟನೆಗಳಿಂದ ಇಂದು 'ಗ್ರಾಮೀಣ ಭಾರತ ಬಂದ್'

ರೈತ ಸಂಘಟನೆಗಳಿಂದ ಇಂದು ‘ಗ್ರಾಮೀಣ ಭಾರತ ಬಂದ್’

- Advertisement -
- Advertisement -

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೇರಿದಂತೆ ಹಲವು ರೈತ ಸಂಘಟನೆಗಳು ಇಂದು (ಫೆ.16) ಗ್ರಾಮೀಣ ಭಾರತ ಬಂದ್ ಅಥವಾ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಇಂದಿನ ಬಂದ್‌ಗೆ ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳು ಬೆಂಬಲ ನೀಡುವಂತೆ ಎಸ್‌ಕೆಎಂ ಮನವಿ ಮಾಡಿದೆ.

ಈಗಾಗಲೇ ಪಂಜಾಬ್‌ನಿಂದ ದಿಲ್ಲಿ ಚಲೋ ಹಮ್ಮಿಕೊಂಡಿರುವ ರೈತರನ್ನು ದೆಹಲಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ಅಂಬಾಲಾ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಈ ನಡುವೆ ದೇಶವ್ಯಾಪಿ ಗ್ರಾಮೀಣ ಪ್ರದೇಶಗಳ ಬಂದ್‌ಗೆ ಕರೆ ನೀಡಲಾಗಿದೆ.

ಬಂದ್‌ ಹಿನ್ನೆಲೆ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಕೆಲಸಗಳು, ಖಾಸಗಿ ಕಚೇರಿಗಳು, ಹಳ್ಳಿಗಳ ಅಂಗಡಿಗಳು ಮತ್ತು ಗ್ರಾಮೀಣ ಕೈಗಾರಿಕಾ ಮತ್ತು ಸೇವಾ ವಲಯದ ಸಂಸ್ಥೆಗಳು ಸ್ಥಗಿತಗೊಳ್ಳಲಿವೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ಆಂಬ್ಯುಲೆನ್ಸ್ ಕಾರ್ಯಾಚರಣೆ, ಪತ್ರಿಕೆ ವಿತರಣೆ, ಮದುವೆ, ಮೆಡಿಕಲ್ ಶಾಪ್‌ಗಳು, ಬೋರ್ಡ್ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಇತ್ಯಾದಿ ತುರ್ತು ಸೇವೆಗಳ ಮೇಲೆ ಬಂದ್‌ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಕೆಲವು ವರದಿಗಳು ಹೇಳಿವೆ.

ರೈತರ ಬೇಡಿಕೆಗಳೇನು?

ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನು ಜಾರಿಗೊಳಿಸಬೇಕು, ನರೇಗಾ ಯೋಜನೆಯನ್ನು ಬಲಪಡಿಸಬೇಕು, ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಯನ್ನು ಮರುಸ್ಥಾಪಿಸಬೇಕು, ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳಲ್ಲಿ ಎಲ್ಲಾ ಕಾರ್ಮಿಕರಿಗೆ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಂಜಾಬ್ ಮತ್ತು ಹರಿಯಾಣದ ರೈತರು ಈಗಾಗಲೇ ಬೀದಿಗಿಳಿದಿದ್ದಾರೆ. ಇದೇ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಭಾರತ ಬಂದ್‌ಗೆ ಕರೆ ನೀಡಲಾಗಿದೆ.

ಸ್ವಾಮಿನಾಥನ್ ಸೂತ್ರದ C2 50 (ಬಂಡವಾಳ ವೆಚ್ಚದ ಶೇ. 50ರಷ್ಟು) ಎಂಎಸ್‌ಪಿ ಕಾನೂನು ಖಾತರಿ, ಸಾಲ ಮನ್ನಾ, ಗೃಹ ಬಳಕೆ, ಅಂಗಡಿಗಳಿಗೆ ಮತ್ತು ಕೃಷಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಬೇಕು, ಸಮಗ್ರ ಬೆಳೆ ವಿಮೆ ಮತ್ತು ಪಿಂಚಣಿಯನ್ನು ತಿಂಗಳಿಗೆ ₹10 ಸಾವಿರಕ್ಕೆ ಹೆಚ್ಚಿಸಬೇಕು, ಸ್ಮಾರ್ಟ್ ಮೀಟರ್‌ ಅಳವಡಿಸಬಾರದು ಮತ್ತು ವಿದ್ಯುತ್ ದರ ಹೆಚ್ಚಿಸಬಾರದು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಕೆಎಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಕಾರ್ಮಿಕರು ಮತ್ತು ರೈತರು ಕರೆ ನೀಡಿರುವ ಇಂದಿನ ಗ್ರಾಮೀಣ ಭಾರತ ಬಂದ್‌ ಬೆಂಬಲಿಸಿ ಬುದ್ದಿ ಜೀವಿಗಳು, ಕಲಾವಿದರು ಸೇರಿದಂತೆ ಹಲವರು ಗುರುವಾರ (ಫೆ.15) ಜಂಟಿ ಹೇಳಿಕೆ ನೀಡಿದ್ದಾರೆ. ಪ್ರಭಾತ್ ಪಟ್ನಾಯಕ್, ಅರ್ಥಶಾಸ್ತ್ರಜ್ಞ ಇರ್ಫಾನ್ ಹಬೀಬ್, ಇತಿಹಾಸಕಾರ ನಾಸಿರ್ ತ್ಯಾಬ್ಜಿ, ಆರ್ಥಿಕ ಇತಿಹಾಸಕಾರ ಅನಿಲ್ ಚಂದ್ರ, ಸಾಂಸ್ಕೃತಿಕ ಕಾರ್ಯಕರ್ತ ಮತ್ತು ಪತ್ರಕರ್ತರಾದ ಪಿ ಸಾಯಿನಾಥ್ ಸೇರಿದಂತೆ ಒಟ್ಟು 34 ಜನರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ರೈತರು ಮತ್ತು ಕಾರ್ಮಿಕರ ಈ ಮಹತ್ವದ ಬಂದ್‌ ಅನ್ನು ಸಮಾಜದ ಎಲ್ಲಾ ವರ್ಗದ ಜನರು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಸೆಂಟ್ರಲ್ ಟ್ರೇಡ್ ಯೂನಿಯನ್ಸ್ (CTUs)ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (SKM)ಕೈಗಾರಿಕಾ ವಲಯಗಳ ಮುಷ್ಕರ ಮತ್ತು ಗ್ರಾಮೀಣ ಭಾರತ್ ಬಂದ್‌ಗೆ ಒಗ್ಗಟ್ಟಿನ ಕರೆ ನೀಡಿವೆ. ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಪೊರೇಟ್ ಪರ, ಜನವಿರೋಧಿ ನೀತಿಗಳಿಂದ ತೀವ್ರ ತರವಾದ ದಾಳಿಯನ್ನು ಎದುರಿಸುತ್ತಿರುವ ಕಾರ್ಮಿಕ ವರ್ಗಗಳು ಪರ ಮತ್ತು ರೈತರ ಬೇಡಿಕೆಗಳ ಈಡೇರಿಕೆಗೆ ಈ ಬಂದ್‌ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದಿಲ್ಲಿ ಚಲೋ:

ಒಂದೆಡೆ ರೈತ, ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದರೆ, ಮತ್ತೊಂದೆಡೆ ದಿಲ್ಲಿ ಚಲೋ ಹಮ್ಮಿಕೊಂಡಿರುವ ಪಂಜಾಬ್‌ನ ರೈತರು ಪಂಜಾಬ್ -ಹರಿಯಾಣದ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಅವರು ದೆಹಲಿಯತ್ತ ಮೆರವಣಿಗೆ ನಡೆಸುತ್ತಿದ್ದಾರೆ.

ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಕೆಲವೆಡೆ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ನಡುವೆ 30,000ಕ್ಕೂ ಹೆಚ್ಚು ಅಶ್ರುವಾಯು ಶೆಲ್‌ಗಳ ಖರೀದಿಗೆ ಆದೇಶ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

2020ರಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ದ ದೊಡ್ಡ ಮಟ್ಟದ ಹೋರಾಟ ರೂಪಿಸಿದ್ದ ರೈತರು ಸುಮಾರು ಹದಿಮೂರು ತಿಂಗಳುಗಳ ಕಾಲ ದೆಹಲಿಯನ್ನು ಸಂಪರ್ಕಿಸುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಧರಣಿ ನಡೆಸಿದ್ದರು. ಆಗಸ್ಟ್ 2020 ರಿಂದ ಡಿಸೆಂಬರ್ 2021 ರವರೆಗೆ ರೈತರು ದೆಹಲಿಯ ಗಡಿಗಳಲ್ಲಿ ಕುಳಿತಿದ್ದರು. ಕೊನೆಗೆ ಕೇಂದ್ರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಮೂಲಕ ರೈತರ ಹೋರಾಟಕ್ಕೆ ದೊಡ್ಡ ಮಟ್ಟದ ಜಯ ಸಿಕ್ಕಿತ್ತು.

ಇದನ್ನೂ ಓದಿ : ಪೌರ ಕಾರ್ಮಿಕರ ₹90 ಕೋಟಿ ಪಿಎಫ್‌ ಬಾಕಿ ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...