ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಿಎಸ್‌ಟಿ ಪರಿಹಾರದ ಕೊರತೆಯನ್ನು ಪೂರೈಸಲು ಕೇಂದ್ರವು ಸಾಲ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಈ ವಿತ್ತೀಯ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ 2.35 ಲಕ್ಷ ಕೋಟಿ ಕೊರತೆ ಬೀಳುವ ಕಾರಣ ರಾಜ್ಯಗಳಿಗೆ ಪಾಲು ನೀಡಲು ಹಣದ ಕೊರತೆಯಾಗಿದೆ ಎಂದು ಕೇಂದ್ರ ಸರ್ಕಾರದ ಕಂದಾಯ ಕಾರ್ಯದರ್ಶಿ ಎ.ಬಿ. ಪಾಂಡೆ ತಿಳಿಸಿದ್ದರು.
ಇದನ್ನೂ ಓದಿ: ದೇವರ ಸಂದೇಶವಾಹಕರೆ, ಆರ್ಥಿಕ ತಪ್ಪು ನಿರ್ವಹಣೆಗೆ ಕಾರಣರ್ಯಾರು? ಪಿ.ಚಿದಂಬರಂ ಪ್ರಶ್ನೆ
ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ ಪರಿಹಾರವನ್ನು ನಿರಾಕರಿಸುವುದು ನಮ್ಮ ರಾಷ್ಟ್ರದ ಒಕ್ಕೂಟ ನೀತಿಗೆ ಅಸಹನೀಯ ಹೊಡೆತ ಎಂದು ತಮ್ಮ ಪತ್ರದಲ್ಲಿ ಅವರು ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜಿಎಸ್‌ಟಿ ಕೊರತೆಗೆ ರಾಜ್ಯಗಳಿಗೆ ಪರಿಹಾರ ನೀಡುವುದು ಕೇಂದ್ರದ ಜವಾಬ್ದಾರಿಯಲ್ಲ ಎಂದಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅಭಿಪ್ರಾಯವನ್ನು ಪತ್ರದಲ್ಲಿ ಟೀಕಿಸಿದ್ದಾರೆ. ಪರಿಹಾರದ ಕೊರತೆಯನ್ನು ಪೂರೈಸಲು ಕೇಂದ್ರವು ಸಾಲ ಪಡೆಯಬೇಕು ಎಂದಿದ್ದ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಬೇಡಿಕೆಗೆ ಮಮತಾ ಬ್ಯಾನರ್ಜಿ ಕೂಡ ಸೇರಿಕೊಂಡಿದ್ದಾರೆ.
41 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೊರೊನಾದಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿತವಾಗಿದೆ, ಕೊರೊನಾ ದೇವರ ಕಾರ್ಯ ಎನ್ನುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಸಹಾಯಕತೆ ಪ್ರದರ್ಶಿಸಿದ್ದರು. 2019-20ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ ಒಟ್ಟು 1.65 ಲಕ್ಷ ಕೋಟಿ ರೂ ಜಿಎಸ್‌ಟಿ ಪರಿಹಾರ ಹಣ ನೀಡಲಾಗಿದೆ. ಆದರೆ ಜಿಎಸ್‌ಟಿ ಪರಿಹಾರಕ್ಕಾಗಿನ ಸೆಸ್ ಸಂಗ್ರಹ ಕೇವಲ 95,444 ಕೋಟಿ ರೂ. ಗೆ ಕುಸಿದಿದೆ ಎಂದು ಹಣಕಾಸು ಸಚಿವೆ ತಿಳಿಸಿದ್ದರು.
ಇದನ್ನೂ ಓದಿ: ಮಾನವ ನಿರ್ಮಿತ ವಿಪತ್ತುಗಳಿಗಾಗಿ ದೇವರನ್ನು ದೂಷಿಸಬೇಡಿ
ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ಆಯ್ಕೆಗಳು ಏಕಪಕ್ಷೀಯವಾದವು ಎಂದು ಮಮತ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ಆಯ್ಕೆಯಾಗಿ ಆರ್‌ಬಿಐನಿಂದ 97,000 ಕೋಟಿ ರೂ. ಸಾಲ ಪಡೆಯಬಹುದು ಮತ್ತು ಎರಡನೇ ಆಯ್ಕೆಯಾಗಿ ಹೊರಗಿನಿಂದ 2.35 ಲಕ್ಷ ಕೋಟಿ ಸಾಲ ಪಡೆಯಬಹುದೆಂಬ ಮತ್ತು ಅದನ್ನು 2022 ರ ನಂತರ ಕೇಂದ್ರ ಸರ್ಕಾರ ಭಾಗಶಃ ತೀರಿಸುತ್ತದೆ ಎಂಬ ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿತ್ತು.
ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಲವು ರಾಜ್ಯಗಳು ತಮ್ಮ ಪಾಲಿನ ಹಣಕ್ಕಾಗಿ ಒತ್ತಾಯಿಸಿದ್ದರು. ಆದರೆ ಕೇಂದ್ರ ಸರ್ಕಾರವೇ ರಾಜ್ಯಗಳ ಬಳಿ ತನ್ನ ಕಷ್ಟ ತೋಡಿಕೊಂಡಿದ್ದು ರಾಜ್ಯಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
“ಸರಕು ಮತ್ತು ಸೇವಾ ತೆರಿಗೆ ಅಸ್ತವ್ಯಸ್ತವಾಗಿರುವುದು ನನಗೆ ತೀವ್ರ ದುಃಖವಾಗಿದೆ. ಇದು ರಾಜ್ಯ ಸರ್ಕಾರಗಳ ಬಗ್ಗೆ ಭಾರತ ಸರ್ಕಾರದ ನಂಬಿಕೆ ಮತ್ತು ನೈತಿಕ ಹೊಣೆಗಾರಿಕೆಯನ್ನು ದ್ರೋಹಕ್ಕೆ ಸಮನಾಗಿರುತ್ತದೆ, ಇದರಿಂದ ಒಕ್ಕೂಟ ವ್ಯವಸ್ಥೆಯ ನಂಬಿಕೆಯನ್ನು ಹೊಡೆದುಹಾಕಿದೆ” ಎಂದು ಮಮತ ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್
ರಾಜ್ಯಗಳು ಕೇಂದ್ರಕ್ಕೆ ಸಂಪೂರ್ಣ ವ್ಯಾಟ್ ವಿಧಿಸುವ ಅಧಿಕಾರವನ್ನು ಒಳಗೊಂಡಂತೆ ಶೇಕಡಾ 70 ರಷ್ಟು ಅಧಿಕಾರವನ್ನು ಬಿಟ್ಟುಕೊಟ್ಟಿವೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆಯೆಂದು ಜಾಗತಿಕವಾಗಿ ಪ್ರಶಂಸಿಸಲ್ಪಟ್ಟ ಜಿಎಸ್ಟಿ ವಿಷಯಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರದ ನಡುವಿನ ನಂಬಿಕೆಯನ್ನು ನಂಬಬೇಡಿ ಎಂದು ನಾನು ನಿಮ್ಮನ್ನು ಪ್ರಾಮಾಣಿಕವಾಗಿ ಒತ್ತಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಗಳಿಗೆ ಪರಿಹಾರ ನೀಡುವುದು ಕೇಂದ್ರವು ಕರ್ತವ್ಯವಾಗಿದೆ. ಹೀಗಾಗಿ ಕೊರತೆಯನ್ನು ಪೂರೈಸಲು ಕೇಂದ್ರ ಸಾಲ ಪಡೆಯಬೇಕು. ಇದಲ್ಲದೆ, ಭಾರತ ಸರ್ಕಾರವು ತನ್ನ ಸಾಲವನ್ನು ಪೂರೈಸಲು ಸಂಪನ್ಮೂಲಗಳನ್ನು ಸಂಗ್ರಹಿಸಬಹುದು, ಆದರೆ ರಾಜ್ಯಗಳು ತಮ್ಮ ಹಣಕಾಸು ಕುಸಿತದ ಅಂಚಿನಲ್ಲಿರುವಾಗ ಹೆಚ್ಚಿನ ಹೆಚ್ಚುವರಿ ಸಾಲಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕುಸಿತಕ್ಕೆ ಸಾಕ್ಷಿಯಾದ ಭಾರತದ ಆರ್ಥಿಕತೆ; ವರ್ಷದ ಮೊದಲ ತ್ರೈಮಾಸಿಕದಲ್ಲೇ ಶೇ.-23.9 ರಷ್ಟು ಕುಸಿತ!
ಇತ್ತ ಕೇರಳ ಮತ್ತು ಛತ್ತೀಸ್‌ಗಢ ಸರ್ಕಾರಗಳು ಕೇಂದ್ರ ಸರ್ಕಾರ ಸಾಲ ಪಡೆದು ಬಾಕಿ ನೀಡುವಂತೆ ಒತ್ತಾಯಿಸಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದು ಈ ಸಮಯದಲ್ಲಿ ಕಾನೂನುಬದ್ಧವಾದ ಮತ್ತು ಸುಸ್ಥಿರ ಆಯ್ಕೆಗಳನ್ನು ಪರಿಗಣಿಸುವಂತೆ ತಿಳಿಸಿದ್ದಾರೆ.
ಸಾಲ ಪಡೆಯಲು ಕರ್ನಾಟಕ ಸಿದ್ಧ
ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ನೀಡಿರುವ ಎರಡು ಆಯ್ಕೆಗಳಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿಕೊಂಡಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಪ್ರಕಾರ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
GST ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಆಯ್ಕೆಯನ್ನು ಕರ್ನಾಟಕ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ.@PMOIndia @FinMinIndia pic.twitter.com/pn83QrLjhV
— CM of Karnataka (@CMofKarnataka) September 2, 2020
ದೇಶದಲ್ಲಿ ತಮ್ಮ ಜಿಎಸ್‌ಟಿ ಹಕ್ಕುಗಳಿಗಾಗಿ ಬಿಜೆಪಿಯೇತರ ಸರ್ಕಾರಗಳು ಪ್ರಧಾನಿ ಮೋದಿಗೆ ಪತ್ರ ಬರೆದು ಪ್ರತಿರೋಧ ತೋರಿಸುತ್ತಿವೆ. ಆದರೆ ಬಿಜೆಪಿ ಆಡಳಿತವಿರುವ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಸಾಲ ಪಡೆಯಲು ನಿರ್ಧರಿಸುತ್ತಿದ್ದು, ಅದರಲ್ಲಿ ಕರ್ನಾಟಕ ಮೊದಲನೆಯದ್ದಾಗಿದೆ.
ಇದನ್ನೂ ಓದಿ: ಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?