Homeಮುಖಪುಟ'ED'ಯನ್ನು ಬಂದ್‌ ಮಾಡಿದರೆ ಅರ್ಧದಷ್ಟು ಬಿಜೆಪಿ ನಾಯಕರು ಪಕ್ಷ ತೊರೆಯುತ್ತಾರೆ: ಅರವಿಂದ್ ಕೇಜ್ರಿವಾಲ್

‘ED’ಯನ್ನು ಬಂದ್‌ ಮಾಡಿದರೆ ಅರ್ಧದಷ್ಟು ಬಿಜೆಪಿ ನಾಯಕರು ಪಕ್ಷ ತೊರೆಯುತ್ತಾರೆ: ಅರವಿಂದ್ ಕೇಜ್ರಿವಾಲ್

- Advertisement -
- Advertisement -

ಜಾರಿ ನಿರ್ದೇಶನಾಲಯವನ್ನು(ಇಡಿ)ಯನ್ನು ಬಂದ್‌ ಮಾಡಿದರೆ ಮತ್ತು ಪಿಎಂಎಲ್‌ಎಯ ಸೆಕ್ಷನ್ 45ನ್ನು ರದ್ದುಗೊಳಿಸಿದರೆ ಯಾರೂ ಕೂಡ ಬಿಜೆಪಿಗೆ ಹೋಗುವುದಿಲ್ಲ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೆ ಅವರಂತಹ ನಾಯಕರು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ರಚಿಸುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಭೋಜನಕೂಟದಲ್ಲಿ ವಿರೋಧ ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಇಂದು ಇಡಿಯನ್ನು (ಜಾರಿ ನಿರ್ದೇಶನಾಲಯ) ಬಂದ್‌ ಮಾಡಿದರೆ ಮತ್ತು ಪಿಎಂಎಲ್‌ಎ (ಹಣ-ಲಾಂಡರಿಂಗ್ ತಡೆ ಕಾಯ್ದೆ) ಸೆಕ್ಷನ್ 45 ರದ್ದುಪಡಿಸಿದರೆ, ಅರ್ಧದಷ್ಟು ಬಿಜೆಪಿ ನಾಯಕರು ಪಕ್ಷವನ್ನು ತೊರೆಯುತ್ತಾರೆ, ಇಂದು ನಾಯಕರು ಬಿಜೆಪಿಗೆ ಸೇರುವುದಕ್ಕೆ ಒಂದೇ ಒಂದು ಏಜೆನ್ಸಿ (ಇಡಿ) ಕಾರಣವಾಗಿದೆ. ಪಿಎಂಎಲ್‌ಎ ಸೆಕ್ಷನ್ 45ನ್ನು ತೆಗೆದುಹಾಕಿದರೆ ಯಾರೂ ಬಿಜೆಪಿಗೆ ಸೇರುವುದಿಲ್ಲ. ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೆ ಅವರಂತಹ ನಾಯಕರು ಸೆಕ್ಷನ್ 45ನ್ನು ತೆಗೆದು ಹಾಕಿದ ಸಂಜೆಯೊಳಗೆ ತಮ್ಮದೇ ಆದ ಪಕ್ಷಗಳನ್ನು ರಚಿಸಬಹುದು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಮರಳುವುದನ್ನು ತಿಳಿದಿದ್ದರೂ  ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಚೌಹಾಣ್ ಮತ್ತು ರಾಜೇ ಅವರನ್ನು ಬಿಜೆಪಿ ಕಡೆಗಣಿಸಿತ್ತು. ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ಮತ್ತು ಕಾಂಗ್ರೆಸ್ ಪರಸ್ಪರ ಒಪ್ಪಿಗೆ ಸೂಚಿಸಿವೆ ಎಂದು ಕೇಜ್ರಿವಾಲ್ ಅವರು ಭೋಜನಕೂಟದಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಕುರಿತು ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ ತಿಂಗಳು ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಎಎಪಿ ಎಲ್ಲಾ 13 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದರು.

ಇಂಡಿಯಾ ಬಣದ ಭಾಗವಾಗಿರುವ ಎಎಪಿ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಕೇಜ್ರಿವಾಲ್ ನೇತೃತ್ವದ ಎಎಪಿ, ಕಾಂಗ್ರೆಸ್‌ ಪಕ್ಷಕ್ಕೆ ಕೇವಲ ಒಂದು ಸ್ಥಾನವನ್ನು ನೀಡಲು ಇಚ್ಛೆಯನ್ನು ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ. ಕಳೆದ ವಾರ ಎಎಪಿ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್, ದೆಹಲಿಯಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನ ನೀಡಲು ಪಕ್ಷ ಸಿದ್ಧವಿದೆ ಎಂದು ಹೇಳಿದ್ದರು.

ಇದನ್ನು ಓದಿ: ಹಲ್ದ್ವಾನಿ ಹಿಂಸಾಚಾರ: ಲೋಪಗಳನ್ನು ಬಿಚ್ಚಿಟ್ಟ ಸತ್ಯಶೋಧನಾ ವರದಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌: ಎಸ್ಒಪಿ ಮಾಹಿತಿ ನೀಡಲು ಮತ್ತೆ ನಿರಾಕರಿಸಿದ ಎಸ್‌ಬಿಐ

0
ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ...