Homeಮುಖಪುಟಹೈದ್ರಾಬಾದ್: ಜೊತೆಗಾತಿಯ ಕೊಂದು ತುಂಡುತುಂಡಾಗಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ ಆರೋಪಿ ಅರೆಸ್ಟ್‌

ಹೈದ್ರಾಬಾದ್: ಜೊತೆಗಾತಿಯ ಕೊಂದು ತುಂಡುತುಂಡಾಗಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ ಆರೋಪಿ ಅರೆಸ್ಟ್‌

ಆರೋಪಿ ಬಿ.ಚಂದ್ರ ಮೋಹನ್‌ನನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದು, ಶ್ರದ್ಧಾ ವಾಕರ್‌, ನಿಕ್ಕಿ ಯಾದವ್‌ ಪ್ರಕರಣಗಳಿಗೆ ಈ ಕೇಸ್‌ ಸಾಮ್ಯತೆ ಹೊಂದಿದೆ

- Advertisement -
- Advertisement -

ತನ್ನ ಲಿವ್‌ ಇನ್‌ ಪಾರ್ಟರ್‌ (ಸಂಗಾತಿ)ಅನ್ನು ಕೊಂದ ವ್ಯಕ್ತಿಯು, ಆಕೆಯ ದೇಹವನ್ನು ಕಲ್ಲು ಕತ್ತರಿಸುವ ಯಂತ್ರದಲ್ಲಿ ತುಂಡರಿಸಿ, ವಿವಿಧ ಸ್ಥಳಗಳಿಗೆ ವಿಲೇವಾರಿ ಮಾಡಿರುವ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ.

ಆರೋಪಿಯು ತನ್ನ ಸಂಗಾತಿಯ ಕೈ ಮತ್ತು ಕಾಲುಗಳನ್ನು ಮನೆಯ ರೆಫ್ರಿಜರೇಟರ್‌ನಲ್ಲಿ ಇಟ್ಟಕೊಂಡಿದ್ದನು. ದುರ್ವಾಸನೆ ತಪ್ಪಿಸಲು ಸೋಂಕುನಿವಾರಕ ಮತ್ತು ಸುಗಂಧ ದ್ರವ್ಯಗಳನ್ನು ಸಿಂಪಡಿಸುತ್ತಿದ್ದನು.

ಕತ್ತರಿಸಿದ ಸ್ಥಿತಿಯಲ್ಲಿ ಮಹಿಳೆಯ ತಲೆ ಮೇ 17ರಂದು ನಗರದ ಮೂಸಿ ನದಿಯ ಬಳಿ ಪತ್ತೆಯಾಗಿತ್ತು. ಅದನ್ನು ಬೆನ್ನು ಹತ್ತಿದ ಹೈದರಾಬಾದ್ ಪೊಲೀಸರು ಪ್ರಕರಣವನ್ನು ಬಯಲಿಗೆಳೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣವು ದೆಹಲಿಯ ಶ್ರದ್ದಾ ವಾಕರ್ ಮತ್ತು ನಿಕ್ಕಿ ಯಾದವ್ ಹತ್ಯೆ ಪ್ರಕರಣಗಳಿಗೆ ಸಾಮ್ಯತೆ ಹೊಂದಿದೆ. ತಮ್ಮ ಸಂಗಾತಿಯನ್ನು ಕೊಲೆ ಮಾಡಿದ ಬಳಿಕ ಆರೋಪಿಯು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ದೇಹದ ಭಾಗಗಳನ್ನು ವಿಲೇವಾರಿ ಮಾಡಲು ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸಿರುವ ಕ್ರಮಬದ್ಧತೆಯನ್ನು ಈ ಮೂರು ಪ್ರಕರಣಗಳಲ್ಲಿಯೂ ಗುರುತಿಸಬಹುದು.

ಹೈದ್ರಾಬಾದ್‌ ಆಗ್ನೇಯ ವಲಯದ ಉಪ ಪೊಲೀಸ್ ಆಯುಕ್ತ ರೂಪೇಶ್ ಚೆನ್ನೂರಿ ಮಾತನಾಡಿ, “ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ವಹಿವಾಟು ನಡೆಸುತ್ತಿದ್ದ, ಬ್ಯಾಚೂಲರ್‌ ಆಗಿದ್ದ ಬಿ.ಚಂದ್ರ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

48ರ ವರ್ಷದ ಚಂದ್ರ ಮೋಹನ್‌, 55 ವರ್ಷದ ಯರ್ರಂ ಅನುರಾಧಾ ರೆಡ್ಡಿ ಅವರ ಜೊತೆಯಲ್ಲಿ ಕಳೆದ 15 ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದನು.

ಬಹಳ ಹಿಂದೆಯೇ ಪತಿಯಿಂದ ಬೇರ್ಪಟ್ಟಿದ್ದ ಅನುರಾಧಾ ಅವರು, ಚಂದ್ರಮೋಹನ್ ಜೊತೆಯಲ್ಲಿ ದಿಲ್‌ಸುಖ್‌ನಗರದ ಚೈತನ್ಯಪುರಿ ಕಾಲೋನಿಯಲ್ಲಿ ಆತನ ಮನೆಯಲ್ಲಿ ವಾಸವಿದ್ದರು.

ಅನುರಾಧ ಅವರು ಬಡ್ಡಿ ವ್ಯವಹಾರವನ್ನು 2018ರಿಂದಲೂ ನಡೆಸುತ್ತಿದ್ದರು. ಅಗತ್ಯವಿರುವವರಿಗೆ ಬಡ್ಡಿಯ ಮೇಲೆ ಸಾಲ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡಲು ಅನುರಾಧ ಅವರಿಂದ ಸುಮಾರು 7 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡ ಮೋಹನ್, ಆಕೆಗೆ ಹಣವನ್ನು ಹಿಂತಿರುಗಿಸಿರಲಿಲ್ಲ. ಪದೇ ಪದೇ ಕೇಳಿದರೂ ಹಣ ವಾಪಸ್ ನೀಡುವಲ್ಲಿ ವಿಫಲನಾಗಿದ್ದನು. ಇದರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.

ಹಣ ವಾಪಸ್ ಕೊಡುವಂತೆ ಅನುರಾಧ ಅವರು ಆತನ ಮೇಲೆ ಒತ್ತಡ ಹೇರುತ್ತಿದ್ದರಿಂದ ಕೊಲೆ ಮಾಡಲು ಆತ ಸಂಚು ರೂಪಿಸಿದ್ದನು. ಮೇ 12 ರಂದು ಮೋಹನ್‌, ಅನುರಾಧ ಜೊತೆಯಲ್ಲಿ ಜಗಳ ಮಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದನು.

ಅನುರಾಧ ಅವರ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಚುಕ್ಕಿದ್ದನು. ಇದರಿಂದಾಗಿ ಅವರು ಸಾವನ್ನಪ್ಪಿದ್ದರು. ಕೊಲೆ ಮಾಡಿದ ನಂತರ, ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ವಿಲೇವಾರಿ ಮಾಡಲೆಂದು ಕಲ್ಲು ಕತ್ತರಿಸುವ ಎರಡು ಸಣ್ಣ ಯಂತ್ರಗಳನ್ನು ಆರೋಪಿ ಖರೀದಿಸಿದ್ದನು.

ತಲೆ ಕತ್ತರಿಸಿ ಕಪ್ಪು ಪಾಲಿಥಿನ್ ಕವರ್‌ನಲ್ಲಿಟ್ಟಿದ್ದನು. ನಂತರ ಕಾಲುಗಳು ಮತ್ತು ಕೈಗಳನ್ನು ಬೇರ್ಪಡಿಸಿದನು. ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸುರಕ್ಷಿತವಾಗಿ ಇಟ್ಟಿದ್ದನು. ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಸೂಟ್‌ಕೇಸ್ ಬಳಸುತ್ತಿದ್ದನು.

ಮೇ 15ರಂದು ತಲೆಯನ್ನು ಆಟೊರಿಕ್ಷಾದಲ್ಲಿ ತಂದು ‘ಮೂಸಿ ನದಿ’ ಬಳಿ ಎಸೆದಿದ್ದನು. ಫಿನಾಯ್ಲ್‌, ಡೆಟಾಲ್, ಸುಗಂಧ ದ್ರವ್ಯ, ಅಗರಬತ್ತಿ ಮತ್ತು ಕರ್ಪೂರವನ್ನು ಖರೀದಿಸಿ ದೇಹದ ಇತರ ಭಾಗಗಳಿಗೆ ನಿಯಮಿತವಾಗಿ ಸಿಂಪಡಿಸುತ್ತಿದ್ದನು. ಸುತ್ತಮುತ್ತ ದುರ್ವಾಸನೆ ಹರಡದಂತೆ ನೋಡಿಕೊಂಡಿದ್ದನು.

ಇದನ್ನೂ ಓದಿರಿ: ಅಫ್ತಾಬ್-ಶ್ರದ್ಧಾ 2019ರಿಂದಲೂ ಜೊತೆಯಲ್ಲಿದ್ದರು; ಮುಂಬೈ ತೊರೆದು ದೆಹಲಿಗೆ ಹೋದರು: ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ…

ದೇಹದ ಭಾಗಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ್ದನು. ಮೃತಳ ಸೆಲ್ ಫೋನ್ ಬಳಸಿ, “ಆಕೆ ಜೀವಂತವಾಗಿದ್ದಾಳೆ ಮತ್ತು ಬೇರೆಡೆ ಇದ್ದಾಳೆ” ಎಂದು ನಂಬುವಂತೆ ಆಕೆಯ ಪರಿಚಿತರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದನು.

ಮೇ 17ರಂದು ಮೂಸಿ ನದಿಯ ಬಳಿಯ ಅಫ್ಜಲ್ ನಗರದ ಸಮುದಾಯ ಭವನದ ಎದುರು ಕಸ ಸುರಿಯುವ ಸ್ಥಳದಲ್ಲಿ ಪೌರಕಾರ್ಮಿಕರು ಮಹಿಳೆಯ ತಲೆಯನ್ನು ಪತ್ತೆ ಹಚ್ಚಿದ್ದರು. ಮಲಕಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರಕರಣ ಭೇದಿಸಲು ಎಂಟು ತಂಡಗಳನ್ನು ರಚಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳು, ಇತರ ತಂತ್ರಜ್ಞಾನವನ್ನು ಬಳಸಿದ ತನಿಖಾಧಿಕಾರಿಗಳು ಆರೋಪಿಯನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಸಂತ್ರಸ್ತೆಯ ದೇಹದ ಇತರ ಭಾಗಗಳನ್ನು ಆರೋಪಿಯ ಮನೆಯಿಂದ ವಶಪಡಿಸಿಕೊಂಡ ಪೊಲೀಸರು ಅವುಗಳನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...