Homeಮುಖಪುಟಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ನೀವು ಕನ್ನಡಿಗರ ತೆರಿಗೆ ಹಣ ಸ್ವೀಕರಿಸುವುದಿಲ್ಲವೇ? : ನಡ್ಡಾಗೆ ಪ್ರಕಾಶ್...

ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ನೀವು ಕನ್ನಡಿಗರ ತೆರಿಗೆ ಹಣ ಸ್ವೀಕರಿಸುವುದಿಲ್ಲವೇ? : ನಡ್ಡಾಗೆ ಪ್ರಕಾಶ್ ರಾಥೋಡ್ ಪ್ರಶ್ನೆ

- Advertisement -
- Advertisement -

ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ನೀವು ಕನ್ನಡಿಗರ ತೆರಿಗೆ ಹಣ ಸ್ವೀಕರಿಸುವುದಿಲ್ಲವೇ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರವರಿಗೆ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ, “ಕೇಂದ್ರದಿಂದ ಪ್ರಧಾನಿ ಮೋದಿ ಕಳುಹಿಸುವ ಹಣ ಪಡೆಯಲು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕು” ಎಂದು ಹೇಳಿದ್ದೀರಿ. ಇದು ಭಾರತದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಅಹಂಕಾರದ ಮಾತಾಗಿದೆ. ನಿಮ್ಮದು ಒಕ್ಕೂಟ ಸರ್ಕಾರ ಎನ್ನುವುದನ್ನು ಮರೆತು ಕನ್ನಡಿಗರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದೀರಿ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ಕೇಂದ್ರದಿಂದ ಹಣ ಬರುವುದಿಲ್ಲ ಎನ್ನುವ ಅರ್ಥದಲ್ಲಿ ನಿಮ್ಮ ಮಾತು ಧ್ವನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ನೀವು ಕನ್ನಡಿಗರ ತೆರಿಗೆ ಹಣವನ್ನು ಸ್ವೀಕರಿಸುವುದಿಲ್ಲವೇ? ಕನ್ನಡಿಗರು ಕನ್ನಡ ದ್ರೋಹಿಯಾದ ಬಿಜೆಪಿ ಸರ್ಕಾರಕ್ಕೆ ತೆರಿಗೆ ಹಣ ನೀಡುವುದಿಲ್ಲ ಎಂದು ಹಠಕ್ಕೆ ಬಿದ್ದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಕಲ್ಪನೆಯಾದರೂ ನಿಮಗೆ ಇದೆಯೇ? ಭಾರತದ ಅಡಿಪಾಯ ಒಕ್ಕೂಟ ತತ್ವದ ಕಾರಣದಿಂದ ಈ ಕ್ಷಣಕ್ಕೂ ವಜ್ರದಷ್ಟು ಗಟ್ಟಿಯಾಗಿದೆ. ಇದನ್ನು ದುರ್ಬಲಗೊಳಿಸುವ ಪ್ರಯತ್ನ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕದ ಬ್ಯಾಂಕ್‌ಗಳನ್ನು ನುಂಗಿದಿರಿ. ಅದೇ ರೀತಿ ಕನ್ನಡಿಗರ ಪಾಲಿನ ಉದ್ಯೋಗದ ಅವಕಾಶಗಳು ಮತ್ತು ಬದುಕಿನ ಅವಕಾಶಗಳನ್ನು ನಿರಂತರವಾಗಿ ಕಿತ್ತುಕೊಳ್ಳುತ್ತಲೇ ಇದ್ದೀರಿ. ಈಗ ಕನ್ನಡದ ಮಕ್ಕಳು ಕುಡಿಯುವ ನಂದಿನಿ ಹಾಲಿನ ಮೇಲೂ ನಿಮ್ಮ ಕಣ್ಣು ಬಿದ್ದಿದೆ. ಇವೆಲ್ಲದರ ಆಚೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಕೇಂದ್ರದ ಅನುದಾನ ಎನ್ನುವ ಅರ್ಥದಲ್ಲಿ ಮಾತನಾಡಿ ಬೆದರಿಕೆ ಹಾಕಿರುವುದನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂದು ಅವರು ಹೇಳಕೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಬಿಜೆಪಿಗೆ ಇರುವುದು ನೆನ್ನೆ ಮೊನ್ನೆಯ ಇತಿಹಾಸ. ಕನ್ನಡ ಸಂಸ್ಕೃತಿ ಮತ್ತು ಕನ್ನಡತನ ಹಾಗೂ ಕನ್ನಡ ನೆಲಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಚರಿತ್ರೆ ಇದೆ. ಇದನ್ನು ಕೆಣಕುವ ಪ್ರಯತ್ನ ಮಾಡಬೇಡಿ. ನೀವು ಹಿಮಾಚಲ ಪ್ರದೇಶದಿಂದ ಬಂದು ಕನ್ನಡಿಗರ ಸಹನೆ ಮತ್ತು ಸ್ವಾಭಿಮಾನ ಕೆಣಕಬಾರದು. ನಿಮ್ಮ ರಾಜ್ಯದಲ್ಲೇ ನೀವು ನಿಮ್ಮ ಬಿಜೆಪಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಕರ್ನಾಟಕಕ್ಕೆ ಬಂದು ಈಗಾಗಲೇ ತುರ್ತುನಿಗಾ ಘಟಕದಲ್ಲಿ ಏದುಸಿರುವ ಬಿಡುತ್ತಿರುವ ಬಿಜೆಪಿಯ ಕುತ್ತಿಗೆ ಹಿಚುಕಬೇಡಿ. ಕನ್ನಡಿಗರ ಸಾರ್ವಭೌಮತ್ವವನ್ನು ಕೆಣಕುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.

ಶಿಗ್ಗಾಂವಿಯಲ್ಲಿ ಮಾತನಾಡಿದ್ದ ಜೆ.ಪಿ ನಡ್ಡಾ, “ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು. ಮತ ಹಾಕದಿದ್ದರೆ ಮೋದಿಯ ಆರ್ಶೀವಾದದಿಂದ ತಪ್ಪಿಸಿಕೊಳ್ಳುವಿರಿ” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ “ರಾಜ್ಯದ ಮತದಾರರಿಗೆ ಬೆದರಿಕೆ ಹಾಕಿದ ನಡ್ಡಾ ಅವರೇ, ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂ ಮಂತರ್ ಬಾಬಾನಾ’ ಎಂದು ಪ್ರಶ್ನಿಸಿದೆ. ಬಿಜೆಪಿಗರೇ, ಕನ್ನಡಿಗರ ತೆರಿಗೆ ಭಿಕ್ಷೆಯಲ್ಲಿ ಗತ್ತು, ಗಮ್ಮತ್ತು, ಶೋಕಿ ಮಾಡುತ್ತಿರುವ ಮೋದಿಯೇ ಕನ್ನಡಿಗರಿಗೆ ಋಣಿಯಾಗಿರಬೇಕು ಅಲ್ಲವೇ” ಎಂದು ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: “ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು”: ಜೆ.ಪಿ ನಡ್ಡಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read