Homeಮುಖಪುಟಒಂದೇ ಕುಟುಂಬದ ಇಬ್ಬಿಬ್ಬರು ನಾಮಪತ್ರ ಸಲ್ಲಿಸುವುದೇಕೆ? ಎ, ಬಿ, ಸಿ ಫಾರಂ ಎಂದರೇನು?

ಒಂದೇ ಕುಟುಂಬದ ಇಬ್ಬಿಬ್ಬರು ನಾಮಪತ್ರ ಸಲ್ಲಿಸುವುದೇಕೆ? ಎ, ಬಿ, ಸಿ ಫಾರಂ ಎಂದರೇನು?

- Advertisement -
- Advertisement -

2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ನೂರಾರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಒಂದೇ ಕುಟಂಬದಿಂದ ಇಬ್ಬಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಕನಕಪುರ ಕ್ಷೇತ್ರಕ್ಕೆ ಡಿ.ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ ಸುರೇಶ್, ಸರ್ವಜ್ಞ ನಗರದಿಂದ ಕೆ.ಜೆ.ಜಾರ್ಜ್‌ ಮತ್ತು ಅವರ ಪುತ್ರ ರಾಣಾ ಜಾರ್ಜ್‌, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಮತ್ತು ಅವರ ತಾಯಿ ಸುನೀತಾ ಪುಟ್ಟಣ್ಣಯ್ಯನವರು ಸೇರಿದಂತೆ ಒಂದೇ ಕುಟುಂಬದ ಹಲವರು ನಾಮಪತ್ರ ಸಲ್ಲಿಸಿದ್ದಾರೆ.

ಇಲ್ಲಿ ಏಕೆ ಇಬ್ಬಿಬ್ಬರು ನಾಮಪತ್ರ ಸಲ್ಲಿಸುವುದು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಉತ್ತರ ಸರಳವಾಗಿದ್ದು, ಕಾರಣಾಂತರಗಳಿಂದ ಒಬ್ಬರ ನಾಮಪತ್ರ ತಿರಸ್ಕೃತಗೊಂಡುಬಿಟ್ಟರೆ ಅವರ ಪರವಾಗಿ ಇನ್ನೊಬ್ಬರು ಅಭ್ಯರ್ಥಿಯಾಗಿ ಕಣದಲ್ಲಿಳಿಯಬಹುದು ಎಂದು ಮುಂದಾಲೋಚನೆಯಿಂದ ಈ ರೀತಿಯಾಗಿ ಒಂದೇ ಕುಟುಂಬದ ಇಬ್ಬಿಬ್ಬರು ನಾಮಪತ್ರ ಸಲ್ಲಿಸುವ ರೂಢಿ ಬೆಳೆದು ಬಂದಿದೆ.

ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವೇನು?

ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅವರ ಪೌರತ್ವ ದಾಖಲೆ, ವಯಸ್ಸು ಮತ್ತು ಜಾತಿ ಪ್ರಮಾಣ ಪತ್ರ (ಅವರು ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದರೆ), ಹಾಗೆಯೇ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಿದ್ದರೆ ಅವುಗಳ ಅಫಿಡವಿಟ್ ಮತ್ತು ಅಭ್ಯರ್ಥಿಗಳ ಮತ್ತು ಅವರ ಹತ್ತಿರದ ಸಂಬಂಧಿಯ ಆಸ್ತಿ ಮಾಲೀಕತ್ವ ಮತ್ತು ನಗದು, ಚಿನ್ನಾಭರಣಗಳ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲದೆ ಪಕ್ಷದ ವತಿಯಿಂದ ಸ್ಪರ್ಧಿಸುವಾಗ ಆ ಪಕ್ಷದ ಬಿ ಫಾರಂನಲ್ಲಿ ಎಲ್ಲಾ ಕಾಲಂಗಳನ್ನು ತುಂಬಬೇಕು. ಜೊತೆಗೆ 10 ಜನ ಸೂಚಕರ ವಿವರ ಮತ್ತು ದಾಖಲೆಗಳನ್ನು ಸಲ್ಲಿಸಬೇಕು. ಇವುಗಳಲ್ಲಿ ಯಾವುದಾದರೂ ಒಂದು ತಪ್ಪಾದರೆ, ಬಿಟ್ಟು ಹೋದರೆ ಅಂತಹ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳ್ಳುತ್ತದೆ.

ಎ ಫಾರ್ಮ್ ಎಂದರೇನು?

ಇದು ‘ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯ ರಾಜಕೀಯ ಪಕ್ಷ’ ಅಥವಾ ‘ನೋಂದಾಯಿತ ಆದರೆ ಗುರುತಿಸದ ರಾಜಕೀಯ ಪಕ್ಷ’ದಿಂದ ಕ್ಷೇತ್ರದ ಚುನಾವಣಾಧಿಕಾರಿ ಅಥವಾ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪಕ್ಷದ ಪದಾಧಿಕಾರಿಗಳ ಹೆಸರುಗಳನ್ನು ತಿಳಿಸಲು ಸಲ್ಲಿಸುವ ಅರ್ಜಿಯಾಗಿದೆ. ಇಲ್ಲಿ ಇರುವ ಹೆಸರು ಮತ್ತು ಸಹಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಸೂಚಿಸಲು ಅಧಿಕಾರ ಪಡೆದಿದ್ದಾರೆ. ಇದು ಸಾಮಾನ್ಯವಾಗಿ ರಾಜಕೀಯ ಪಕ್ಷವೊಂದರ ಅಧ್ಯಕ್ಷ ಅಥವಾ ಕಾರ್ಯದರ್ಶಿಗಳ ಹೆಸರು, ಸಹಿ ಮತ್ತು ಪಕ್ಷದ ಮುದ್ರೆಯನ್ನು ಹೊಂದಿರಬೇಕು. ಟಿಕೆಟ್‌ಗಳನ್ನು ವಿತರಿಸಲು ಪಕ್ಷದಿಂದ ಅಧಿಕಾರ ಪಡೆದ ಪದಾಧಿಕಾರಿಗಳ ಮಾದರಿ ಸಹಿಯನ್ನು ಸಹ ಈ ಫಾರ್ಮ್ ಒಳಗೊಂಡಿದೆ.

ಬಿ ಫಾರಂ ಎಂದರೇನು?

ಈ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿ ಇವರೇ ಎಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ವಿಶೇಷ ಅಧಿಕಾರಿಯು ತನ್ನ ಸಹಿ ಮತ್ತು ಮುದ್ರೆಯೊಂದಿಗೆ ನೀಡಲ್ಪಟ್ಟ ಫಾರಂ ಅನ್ನು ಬಿ ಫಾರಂ ಎನ್ನಲಾಗುತ್ತದೆ. ಇದನ್ನು ತುಂಬಿ ತಮ್ಮ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಅಭ್ಯರ್ಥಿಗಳು ಸಲ್ಲಿಸುತ್ತಾರೆ. ಇದು ಪಕ್ಷದ ಚಿಹ್ನೆಯನ್ನು ಒಳಗೊಂಡಿದ್ದು ಕೆಲವೊಮ್ಮೆ ಇಬ್ಬರ ಹೆಸರುಗಳನ್ನು ಬರೆದಿರಲಾಗುತ್ತದೆ. ಅದರಲ್ಲಿ ಮೊದಲನೇಯದು ಅಧಿಕೃತ ಅಭ್ಯರ್ಥಿಯಾಗಿದ್ದರೆ ಮತ್ತೊಂದು ಎರಡನೇ ಅಭ್ಯರ್ಥಿಯಾಗಿರುತ್ತದೆ. ಒಂದು ವೇಳೆ ಮೊದಲನೇ ವ್ಯಕ್ತಿಯ ನಾಮಪತ್ರ ತಿರಸ್ಕೃತಗೊಂಡಲ್ಲಿ ಎರಡನೇ ವ್ಯಕ್ತಿ ಸ್ಪರ್ಧಿಸಬಹುದಾಗಿರುತ್ತದೆ.

ಸಿ ಫಾರಂ ಎಂದರೇನು?

ಕೆಲವೊಂದು ಪಕ್ಷಗಳು ಸಿ ಫಾರಂ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿವೆ. ಅಂದರೆ ಇಬ್ಬರು ವ್ಯಕ್ತಿಗಳಿಗೆ ಬಿ ಫಾರಂ ನೀಡಿ, ಅಂತಿಮ ಕ್ಷಣದಲ್ಲಿ ಅವರಲ್ಲಿ ಒಬ್ಬರಿಗೆ ಮಾತ್ರ ಸಿ ಫಾರಂ ನೀಡಿ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿಕೊಳ್ಳುತ್ತವೆ.

ನಾಮಪತ್ರ ತಿರಸ್ಕೃತಗೊಳ್ಳಲು ಕಾರಣಗಳೇನು?

ಕೆಲವೊಮ್ಮೆ ಅಭ್ಯರ್ಥಿಗಳು ಬಿ ಫಾರಂ ನಲ್ಲಿನ ಎಲ್ಲಾ ಕಾಲಂಗಳನ್ನು ತುಂಬಿರುವುದಿಲ್ಲ. ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಜೊತೆಗೆ 10 ಜನ ಸೂಚಕರು ಅದೇ ವಿಧಾನಸಭಾ ಕ್ಷೇತ್ರದವರಾಗಿರಬೇಕು. ಸುಳ್ಳು ದಾಖಲೆ ಪತ್ರಗಳನ್ನು ಸಲ್ಲಿಸುವಂತಿಲ್ಲ. ಕಡೆಯ ದಿನದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು. ಇವುಗಳಲ್ಲಿ ಲೋಪದೋಷವಾದಲ್ಲಿ ಅಂತಹ ನಾಮಪತ್ರವನ್ನು ತಿರಸ್ಕೃತಗೊಳಿಸಲಾಗುತ್ತದೆ.

ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ; 224 ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

0
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಗುರುವಾರ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ...