Homeಮುಖಪುಟಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

ಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

- Advertisement -
- Advertisement -

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ ಮಣಿಪುರದ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಆವಕಾಶ ಒದಗಿಸುತ್ತದೆ.

ಇತ್ತೀಚಿನ ವಾರಗಳಲ್ಲಿ ಮಣಿಪುರವು ಎದುರಿಸುತ್ತಿರುವ ಮಾನವೀಯ ದುರಂತ ಮತ್ತು ಸಾಮಾಜಿಕ ತಲ್ಲಣಗಳು- ವಿಭಜನಕಾರಿ ರಾಜಕಾರಣದ ಪರಿಣಾಮ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ವಿವರಣಾತ್ಮಕ ಜನಾಂಗೀಯ ಪರಿಭಾಷೆಯ ಗೊಂದಲ, ವಿವಿಧ ಸಮುದಾಯಗಳ ಮೂಲಗಳ ಕುರಿತು ದತ್ತಾಂಶ-ಮಾಹಿತಿಗಳ ಕೊರತೆ, ವೈಜ್ಞಾನಿಕವಾದ ಜನಗಣತಿ ನಡೆಯದೇ ಇರುವುದು ಸೇರಿದಂತೆ ಇನ್ನೂ ಹಲವು ಸಂಗತಿಗಳು ಈ ಬಿಕ್ಕಟ್ಟಿಗೆ ತಮ್ಮ ಪಾಲು ಸಲ್ಲಿಸಿವೆ.

ಇತ್ತೀಚಿನ ಹಿಂಸಾತ್ಮಕವಾದ ಘರ್ಷಣೆಗಳು ಮತ್ತು ರಕ್ತಪಾತವು ಮೈತೇಯಿ (Meitei ಅಥವಾ Meiteyi) ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಮುಂದಡಿಯಿಡಲು ಮಣಿಪುರ ಸರಕಾರಕ್ಕೆ ಅನುಮತಿ ನೀಡುವ ಹೈಕೋರ್ಟಿನ ನಿರ್ಧಾರದ ಪರಿಣಾಮವಾಗಿ ಉಂಟಾಯಿತು.

ಈ ಬೇಡಿಕೆ- ಮತ್ತು ಅದಕ್ಕೆ ಈಗಾಗಲೇ ಎಸ್‌ಟಿ ಸ್ಥಾನಮಾನ ಹೊಂದಿರುವ ಗುಂಪುಗಳ ತೀವ್ರ ವಿರೋಧವು- ರಾಜ್ಯದಲ್ಲಿರುವ ಗುಡ್ಡ-ಕಣಿವೆ ಪ್ರತ್ಯೇಕತೆಯಲ್ಲಿ ಮತ್ತು ಈ ಮೈತೇಯಿ ಸಮುದಾಯದವರು ಯಾರು ಎಂಬುದರ ಸುತ್ತ ಇರುವ ಗೊಂದಲದಲ್ಲಿ ದೊಡ್ಡ ಪಾತ್ರ ಹೊಂದಿದೆ.

ಮೈತೇಯಿ (ಮೈತೈ ಅಥವಾ ಮೈತ್‌ಯಿ ಎಂದೂ ಕರೆಯಲಾಗುತ್ತದೆ) ಎಂಬುದು ಸಾಮಾನ್ಯವಾಗಿ ಮಣಿಪುರದ ನಿವಾಸಿಗಳನ್ನು ಕರೆಯಲಾಗುವ ಜನಜನಿತ ಹೆಸರು. ಮಣಿಪುರದಲ್ಲಿ ಮುಖ್ಯವಾಗಿ ಮಾತನಾಡಲಾಗುವ ಭಾಷೆ ಮಣಿಪುರಿ ಮತ್ತು ಅದು ರಾಜ್ಯದ ಅಧಿಕೃತ ಭಾಷೆಯೂ ಹೌದು. ಮತ್ತಿದು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಭಾಷೆಯೂ ಕೂಡಾ.

ಆದರೆ, ಮಣಿಪುರಿ ಭಾಷೆಯನ್ನು ಮಣಿಪುರ ಮಾತ್ರವಲ್ಲದೇ, ಅಸ್ಸಾಂ, ತ್ರಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳ ಹಾಗೂ ನೆರೆಯ ದೇಶಗಳಾದ ಮಯನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿಯೂ ಮಾತನಾಡಲಾಗುತ್ತದೆ. ಈ ಸಮಾನಾತ್ಮಕವಾದ ಅಂಶವು- ಮಣಿಪುರಿ ಭಾಷೆಯನ್ನು ಮಾತನಾಡುವ ಎಲ್ಲರೂ ಮೈತೇಯಿಗಳು ಎಂಬ ಭಾವನೆಯನ್ನು ಮೂಡಿಸುತ್ತದೆ. ’ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ (ಪಿಎಲ್‌ಎಸ್‌ಐ- ಲೇಖಕರು ಇದರ ಸ್ಥಾಪಕರು)ದ ’ದಿ ಲ್ಯಾಂಗ್ವೇಜಸ್ ಆಫ್ ಮಣಿಪುರ್’ (ಮಣಿಪುರದ ಭಾಷೆಗಳು) ನೀಡಿರುವ ಪರಿಚಯದ ಪ್ರಕಾರ, ಮಣಿಪುರವು, ಸ್ವಭಾವತಃ ಬಹುಭಾಷೆಗಳ, ಹಲವು ಬುಡಕಟ್ಟುಗಳ, ಬಹುಸಂಸ್ಕೃತಿಗಳ ಒಂದು ರಾಜ್ಯ.

ಈ ರಾಜ್ಯದ ಕಣಿವೆಯನ್ನು ಬಿಷ್ಣುಪುರ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಎಂಬ ನಾಲ್ಕು ಆಡಳಿತಾತ್ಮಕ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ಅದೇ ರೀತಿಯಲ್ಲಿ, ಗುಡ್ಡಗಾಡು (ಅಥವಾ ಬೆಟ್ಟಗಳನ್ನು) ಪ್ರದೇಶವನ್ನು ಚಂದೇಲ್, ಚೂರಾಚಂದ್‌ಪುರ್, ಸೇನಾಪತಿ, ತಮೆಂಗ್‌ಲಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ರಾಜ್ಯದ ಭೂಪ್ರದೇಶವು 22,327 ಚದರ ಕಿ.ಮೀ. ವಿಸ್ತಾರವಾಗಿದ್ದು, ವಿವಿಧ ಭಾಷೆಗಳನ್ನು ಮಾತನಾಡುವ, ವಿವಿಧ ಸಂಸ್ಕೃತಿಗಳನ್ನು ಅನುಸರಿಸುವ ಮೂರು ಡಜನ್ನಿಗೂ ಹೆಚ್ಚು ಬುಡಕಟ್ಟುಗಳಿಗೆ ಮನೆಯಾಗಿದೆ.

ರಾಜ್ಯವು ಮುಖ್ಯವಾಗಿ ಮೈತೇಯಿ, ಕುಕಿ ಮತ್ತು ನಾಗಾಗಳ ವಾಸಸ್ಥಾನವಾಗಿದ್ದು, ಅವು ಟಿಬೆಟೋ-ಬರ್ಮನ್ ಭಾಷಾ ಗುಂಪುಗಳಿಗೆ ಸೇರಿವೆ. ಇನ್ನಷ್ಟು ಪರಿಶೀಲನೆ ನಡೆಸಿದಲ್ಲಿ, ಪೂರ್ವ ಇಂಫಾಲ್ ಜಿಲ್ಲೆಯ ಜಿರಿಬಾಮ್ ಉಪವಿಭಾಗದಲ್ಲಿ ಆಸ್ಟ್ರೋ-ಏಷಿಯಾಟಿಕ್ ಭಾಷೆಗಳನ್ನು ಮಾತನಾಡುವವರನ್ನೂ, ಚಂದೇಲ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಮೊರೆಹ್ ಪಟ್ಟಣದಲ್ಲಿ ದ್ರಾವಿಡ ಭಾಷೆ ಮಾತಾಡುವವರನ್ನೂ, ರಾಜಧಾನಿ ಇಂಪಾಲ್‌ನಲ್ಲಿ ಹೆಚ್ಚಾಗಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುವವರನ್ನೂ ಕಾಣಬಹುದು.

ರಾಜ್ಯದ ಒಳಗೆ ಮಣಿಪುರಿಯನ್ನು ಜನವಾಸವಿರುವ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ರೂಪಗಳಲ್ಲಿ ಮಾತನಾಡಲಾಗುತ್ತದೆ. ಈ ರೂಪಗಳ ವ್ಯತ್ಯಾಸ ಎಲ್ಲರಿಗೂ ಗೊತ್ತಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ವ್ಯವಹಾರಗಳಲ್ಲಿ ಮೂರು ಲಿಪಿಗಳನ್ನು ಬಳಸಲಾಗುತ್ತದೆ- ಬಂಗಾಳಿ ಲಿಪಿ, ಮೈತೇಯಿ-ಮಾಯೆಕ್ ಲಿಪಿ ಮತ್ತು ರೋಮನ್ ಲಿಪಿ. ಮೈತೇಯಿಗಳು ಬಾಂಗ್ಲಾ (ಬಂಗಾಳಿ) ಲಿಪಿಯನ್ನು ಬಳಸಲು ಆರಂಭಿಸುವುದಕ್ಕೆ ಮೊದಲು ಬರವಣಿಗೆಗೆ ಮೈತೇಯಿ-ಮಾಯೆಕ್ ಲಿಪಿಯನ್ನು ಬಳಸುತ್ತಿದ್ದರು. ಇಂದು, ಸ್ಥಳೀಯ ಎಂದು ಪರಿಗಣಿಸಲಾಗುತ್ತಿರುವ ಮೈತೇಯಿ-ಮಾಯೆಕ್ ಲಿಪಿಯು ಸರಕಾರಿ ಮತ್ತು ಸರಕಾರೇತರ ವ್ಯವಹಾರಗಳಲ್ಲಿ ಬಳಕೆಯಲ್ಲಿ ಮತ್ತೆ ತನ್ನ ನೆಲೆಯನ್ನು ಹೆಚ್ಚಿಸುತ್ತಾ ಬರುತ್ತಿದೆ.

ಕೆಲವು ಮೈತೇಯಿ ಸಮುದಾಯಗಳನ್ನು (ಮೈತೇಯಿ ಒಂದು ಏಕರೂಪಿ-ಏಕ ಮೂಲದ ಸಮುದಾಯವಲ್ಲ) ಈಗಾಗಲೇ ಪರಿಶಿಷ್ಟ ಬುಡಕಟ್ಟು ಆಥವಾ ಇತರೆ ಹಿಂದುಳಿದ ವರ್ಗಗಳ ಗುಂಪುಗಳಿಗೆ ಸೇರಿಸಲಾಗಿದೆ. ಮಣಿಪುರದ ಪರಿಸ್ಥಿತಿಯನ್ನು ಮಹಾರಾಷ್ಟ್ರದೊಂದಿಗೆ ಹೋಲಿಸಿದರೆ, ಬೇರೆ ರಾಜ್ಯದವರು ಮಣಿಪುರದಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಮರಾಠ ಎಂಬುದು ಹಲವು ಜಾತಿ-ಉಪಜಾತಿ, ಜನಾಂಗಿಯ ಗುಂಪುಗಳನ್ನು ಹೊಂದಿರುವ ಒಂದು ಸಾಮಾನ್ಯ ಸಮುದಾಯ. ಅದಕ್ಕೆ ಹೊರತಾಗಿ, ಸಾಮಾನ್ಯವಾಗಿ- ಅದರಲ್ಲೂ ವಿಶೇಷವಾಗಿ ವಸಾಹತುಶಾಹಿ ಕಾಲಘಟ್ಟದ ಸಾಂಸ್ಕೃತಿಕ ಬರಹಗಳಲ್ಲಿ ’ಮರಾಠ’ ಮತ್ತು ’ಮಹಾರಾಷ್ಟ್ರ’ ಎಂಬುದನ್ನು ಜೊತೆಜೊತೆಗೇ ಸೇರಿಸಲಾಗಿದೆ. ಆದರೆ, ಎಲ್ಲಾ ಮಹಾರಾಷ್ಟ್ರೀಯರು ಮರಾಠರಲ್ಲ ಅಥವಾ ಮರಾಠಿ ಭಾಷೆ ಮಾತನಾಡುವವರೆಲ್ಲರೂ ಮರಾಠರಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು. ಆದುದರಿಂದ ಎಸ್‌ಸಿ ಸ್ಥಾನಮಾನ ನೀಡಬೇಕೆಂಬ ಮೈತೇಯಿಗಳ ಬೇಡಿಕೆಯನ್ನು ಮಹಾರಾಷ್ಟ್ರದ ಮರಾಠ ಆರಕ್ಷಣ್ (ಮೀಸಲಾತಿ) ಮೋರ್ಚಾ ಮತ್ತು ರಾಜಸ್ಥಾನದ ಜಾಟ್ ಮೀಸಲಾತಿ ಆಂದೋಲನಗಳಿಗೆ ಹೋಲಿಸಬಹುದು.

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?: ಜೈರಾಮ್ ರಮೇಶ್ ಪ್ರಶ್ನೆ

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಈ ಗಲಭೆಗಳ ಪ್ರಾಥಮಿಕ ಜವಾಬ್ದಾರಿಯು ಆಳುವ ಸರಕಾರದ ಹೆಗಲೇರುತ್ತದೆ. ಭಾರತೀಯ ಜನತಾ ಪಕ್ಷವು 60 ಸದಸ್ಯಬಲದ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆದ್ದು ಮಣಿಪುರದಲ್ಲಿ ಸರಕಾರ ರಚಿಸಿತ್ತು. ಸಂಯುಕ್ತ ಜನತಾ ದಳ (ಜೆಡಿ-ಯು) ಆರು ಸ್ಥಾನಗಳನ್ನು ಗೆದ್ದಿತ್ತು. ಇದೀಗ ಜೆಡಿ-ಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಿಂದ (ಎನ್‌ಡಿಎ) ಹೊರಬಂದಿರುವುದರಿಂದ ಬಿಜೆಪಿಯು ರಾಜಕೀಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಭವಿಷ್ಯದಲ್ಲಿ ಚುನಾವಣಾ ಯಶಸ್ಸನ್ನು ಖಾತರಿಪಡಿಸಿಕೊಳ್ಳಲು ಅದು ಮೈತೇಯಿಗಳಿಗೆ ಮೀಸಲಾತಿ ಕೊಡಮಾಡುವುದರ ಜೊತೆಗೆ, ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಎಂದಿನ ಮಾಮೂಲಿ ತಂತ್ರವನ್ನು ಅನುಸರಿಸಿದೆ.

ಈ ಆಳುವ ಸರಕಾರವು ಪ್ರಾಮಾಣಿಕವಾಗಿ ಬಹುಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದೇ ಆಗಿದ್ದಲ್ಲಿ-ಅದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿಷಯವಾಗಿರುವ- ರಾಜ್ಯಮಟ್ಟದ ಸಮುದಾಯಗಳ ಗಣತಿಯನ್ನು ನಡೆಸುತ್ತಿತ್ತು. ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ- ಯಾರ ಹೆಸರಿನಲ್ಲಿ ಅವರು ಅಧಿಕಾರ ಬಯಸುತ್ತಾರೋ, ಅದೇ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಅವಕಾಶ ಒದಗಿಸುತ್ತದೆ.

ಮಣಿಪುರವು ಬಹಳ ದೀರ್ಘಕಾಲದಿಂದಲೂ ಭಾರೀ ಮಿಲಿಟರಿ ಪಡೆಯ ಅಸ್ತಿತ್ವ ಹೊಂದಿರುವ ನಾಗರಿಕ ಪ್ರದೇಶವಾಗಿದೆ. ತೀವ್ರವಾದ ಸ್ವತಂತ್ರ ಮನೋಭಾವದ ಮತ್ತು ತಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿರುವ ಇಲ್ಲಿನ ಜನರ ಮೇಲೆ, ಕೇಂದ್ರ ಸರಕಾರದ ತನ್ನಿಚ್ಛೆಗಳನ್ನು ಹೇರುವುದರ ವಿರುದ್ಧ ದೀರ್ಘಕಾಲದ ಪ್ರತಿಭಟನೆಗಳೂ ಇಲ್ಲಿ ನಡೆಯುತ್ತಾ ಬಂದಿವೆ. ಒಂದು ವೈಜ್ಞಾನಿಕವಾದ ಜನಗಣತಿಯು ಭವಿಷ್ಯದ ರಾಜ್ಯಾಡಳಿತಕ್ಕೆ ಮಣಿಪುರದ ಹಲವು ಜನಾಂಗೀಯ ಮತ್ತು ಭಾಷಾ ಸಮುದಾಯಗಳ ಅಗತ್ಯಗಳನ್ನು ಅಂದಾಜು ಮಾಡಲು ನೆರವಾಗುತ್ತದೆ. ಆದರೆ, ಅಧಿಕಾರದ ಲಾಲಸೆ ಹೊತ್ತಿರುವ ವಿಭಜನಕಾರಿ ರಾಜಕೀಯವು ಅದಕ್ಕೆ ಅವಕಾಶ ನೀಡುವುದಿಲ್ಲ.

ಈ ಹೊತ್ತಿನಲ್ಲಿ ಮಣಿಪುರವು ಬಹುದೊಡ್ಡ ಮಾನವೀಯ ದುರಂತವನ್ನು ಎದುರಿಸುತ್ತಿದೆ. ಅದಕ್ಕೆ- ಸಂತ್ರಸ್ತರ ಜನಾಂಗ, ಭಾಷೆ, ಧರ್ಮಗಳನ್ನು ಮೀರಿ- ಸಮಾಧಾನ, ಆರೈಕೆ, ಕಾಳಜಿಯ ಆಗತ್ಯವಿದೆ. ಆದರೆ, ದೂರಗಾಮಿಯಾಗಿ, ಅದಕ್ಕೆ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಾದ ಅಗತ್ಯವೇನೂ ಇಲ್ಲ. ಅದಕ್ಕೆ ಬೇಕಾಗಿರುವುದು ಯಾವುದೆಂದರೆ ಮತ್ತು ಅದು ಅರ್ಹವಾಗಿರುವುದು ಯಾವುದಕ್ಕೆಂದರೆ, ಸರಿಯಾದ ಸಾಮಾಜಿಕ ತಿಳಿವಳಿಕೆ ಮತ್ತು ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಂಡಿರುವಂಥ ಒಂದು ಸರಕಾರ. ವಿಭಜನಕಾರಿ ರಾಜಕೀಯವು ಈ ಸುಂದರ ರಾಜ್ಯವನ್ನು ಇನ್ನಷ್ಟು ಸಂಕಷ್ಟ, ನೋವು ಮತ್ತು ದುಃಖಕ್ಕೆ ತಳ್ಳಬಹುದು.

ಜಿ.ಎನ್.ದೇವಿ ಮತ್ತು ನಿಪುಣಿ ಕೆ. ಮಾಓ
(ಗಣೇಶ್ ಎನ್. ದೇವಿಯವರು ಭಾಷಾ ವಿದ್ವಾಂಸರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ- ಪಿಎಲ್‌ಎಸ್‌ಐದ ಸ್ಥಾಪಕರು. ನಿಪುಣಿ ಕೆ. ಮಾಓ ಅವರು ಮಣಿಪುರ ’ಪಿಎಲ್‌ಎಸ್‌ಐ’ಯ ಸಂಪಾದಕರು.)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ದ್ವೀಪ ರಾಷ್ಟ್ರದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದೆ: ಮಾಲ್ಡೀವ್ಸ್ ಸಚಿವ

0
ಮಾಲ್ಡೀವ್ಸ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ರಚಿಸಲು ಭಾರತವು ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಮಾಲ್ಡೀವ್ಸ್ ಸಚಿವ ಮೊಹಮ್ಮದ್ ಸಯೀದ್ ಹೇಳಿದ್ದಾರೆ. ಮಾಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವ ಸಯೀದ್, "ಎಫ್‌ಟಿಎಗೆ...