Homeಮುಖಪುಟದೆಹಲಿ ರೈತ ಚಳವಳಿಯ ಹಿನ್ನೆಲೆಯಲ್ಲಿ ಚಳವಳಿಗಳು ಮುಂದೇನು?: ಡಾ. ವಾಸು

ದೆಹಲಿ ರೈತ ಚಳವಳಿಯ ಹಿನ್ನೆಲೆಯಲ್ಲಿ ಚಳವಳಿಗಳು ಮುಂದೇನು?: ಡಾ. ವಾಸು

- Advertisement -
- Advertisement -

ಸೆಪ್ಟೆಂಬರ್ 2011ರ 17ನೇ ತಾರೀಕು ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಕೂತರು. ನಂತರ ಗೊತ್ತಾದದ್ದು ಅವರು ಸುಮ್ಮನೇ ಕೂತಿಲ್ಲ; ಅಲ್ಲೇ ಬೀಡುಬಿಟ್ಟಿದ್ದಾರೆಂದು. ನಿರ್ದಿಷ್ಟ ಒತ್ತಾಯಗಳನ್ನು ಮುಂದಿಟ್ಟುಕೊಂಡು ಸಾವಿರಾರು ಜನರು ಅಲ್ಲಿ ಪ್ರತಿಭಟನೆ ನಡೆಸಿದ್ದರು. ಅದನ್ನು ಕೇವಲ ಪ್ರತಿಭಟನೆಯೆಂದು ಅವರು ಕರೆಯಲಿಲ್ಲ. ಅದನ್ನವರು ’ಆಕ್ಯುಪೈ ವಾಲ್‌ಸ್ಟ್ರೀಟ್ ಮೂವ್‌ಮೆಂಟ್’ ಎಂದರು. ಅಂದರೆ ಪ್ರಪಂಚದ ಅತೀ ದೊಡ್ಡ ಷೇರು ಮಾರುಕಟ್ಟೆಯಿರುವ ವಾಲ್‌ಸ್ಟ್ರೀಟ್‌ಅನ್ನು ವಶಪಡಿಸಿಕೊಳ್ಳುವ ಚಳವಳಿ. ಅಮೆರಿಕದ ಇತರ ನಗರಗಳೂ ಸೇರಿದಂತೆ ವಿವಿಧ ದೇಶಗಳಲ್ಲಿ ’ಆಕ್ಯುಪೈ’ ಶುರುವಾಯಿತು. ಅದೇ ವರ್ಷ ಅಕ್ಟೋಬರ್ 15ರಂದು ನೀಡಲಾದ ಕರೆಗೆ 82 ದೇಶಗಳ 951 ನಗರಗಳು ಸ್ಪಂದಿಸಿ ಪ್ರತಿಭಟಿಸಿದ್ದವು. ಚುನಾವಣೆಗಳಲ್ಲಿ ಮತ್ತು ಸರ್ಕಾರದಲ್ಲಿ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಪ್ರಭಾವವನ್ನು ತಪ್ಪಿಸುವ ಘೋಷಣೆಯಿಂದ ಶುರುವಾಗಿ, ಎಲ್ಲ ಬಗೆಯ ಅಸಮಾನತೆಗಳ ವಿರುದ್ಧದ ಕೂಗನ್ನು ಆ ಚಳವಳಿಯು ಹಾಕಿತ್ತು.

ಅಂತಿಮವಾಗಿ ನವೆಂಬರ್ 15ರಂದು ಝುಕೊಟ್ಟಿ ಪಾರ್ಕ್‌ನಲ್ಲಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸುವುದರೊಂದಿಗೆ ಆ ಆಂದೋಲನವು ಮುಗಿದಿತ್ತು. ಆದರೆ ಅದರ ಪ್ರಭಾವವು ಹಲವು ರೀತಿಯಲ್ಲಿ ಬೇರೆ ಬೇರೆ ವಲಯಗಳನ್ನು ಮತ್ತು ಸಮುದಾಯಗಳನ್ನು ಪ್ರಭಾವಿಸಿತ್ತು. ದೆಹಲಿಯಲ್ಲಿ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುದಾನ ಕಡಿತಗೊಳಿಸುವುದರ ವಿರುದ್ಧ ಪ್ರತಿಭಟಿಸಿದ ಯುವಕ ಯುವತಿಯರು ’ಆಕ್ಯುಪೈ ಯುಜಿಸಿ’ ಅಂತ ಕರೆ ನೀಡಿ, ಹೋರಾಟ ನಡೆಸಿದ್ದರು.

ಹೀಗಿದ್ದೂ, ಆಕ್ಯುಪೈ ವಾಲ್‌ಸ್ಟ್ರೀಟ್‌ನ ಜನಕರಲ್ಲೊಬ್ಬ ಎಂದು ಹೇಳಿಕೊಳ್ಳುವ (ಆಡ್‌ಬಸ್ಟರ್‍ಸ್ ಎಂಬ ಪತ್ರಿಕೆಯೊಂದು ಈ ಚಳವಳಿಗೆ ಕರೆ ನೀಡಿತ್ತು ಮತ್ತು ಆ ಕರೆಯನ್ನು ನೀಡಿದವರಲ್ಲಿ ಒಬ್ಬನಾದ) ಮಿಕಾ ವೈಟ್, ಈ ಹೋರಾಟವು ವಿಫಲವಾದ ಪ್ರತಿಭಟನೆ ಎಂದು ಷರಾ ಬರೆದ. ಆತ ಬರೆದ ’ದಿ ಎಂಡ್ ಆಫ್ ಪ್ರೊಟೆಸ್ಟ್’ ಪುಸ್ತಕದಲ್ಲಿ ಇದರ ವೈಫಲ್ಯದ ಬಗ್ಗೆ ಬರೆದುದಷ್ಟೇ ಅಲ್ಲದೇ, ಇಂತಹ ಪ್ರತಿಭಟನಾ ಮಾದರಿಯೇ ಮುಗಿದು ಹೋಗಿದೆ ಎಂದುಬಿಟ್ಟ. ಅಲ್ಲಿಂದ ಮುಂದಕ್ಕೆ ಮಿಕಾ ವೈಟ್ ಏನಾದ ಎಂಬುದು ಇಲ್ಲಿ ಅಷ್ಟು ಪ್ರಸ್ತುತವಲ್ಲವಾದರೂ, ಹಳೆಯ ರೀತಿಯ ಪ್ರತಿಭಟನಾ ಮಾದರಿಯ ಕಥೆ ಮುಗಿದಿದೆ ಎಂಬ ಮಾತು ಬಹಳ ಮುಖ್ಯವಾದುದು.

Members of Occupy Wall Street stand in triumph after a court order allowed them to reenter Zuccotti Park late Tuesday afternoon. (Photo by Carolyn Cole/Los Angeles Times via Getty Images)

ಏಕೆಂದರೆ ಅಲ್ಲಿಂದ ಮುಂದಕ್ಕೆ ಪ್ರಪಂಚದಲ್ಲಿ ನಡೆದ ಗಮನ ಸೆಳೆದ ಪ್ರತಿಭಟನೆಗಳು ಯಾವುವು ಎಂದು ನೋಡಿದರೆ ಅರ್ಥವಾಗುತ್ತದೆ. ಅರಬ್ ಸ್ಪ್ರಿಂಗ್ ಎಂದು ಕರೆಯಲಾಗುವ ಇನ್ನೊಂದು ರೀತಿಯ ಆಕ್ಯುಪೈಗಳು – ಅಂದರೆ ಸಾವಿರ ಸಾವಿರ ಜನರು ಬಹುಮುಖ್ಯ ಪ್ರದೇಶದಲ್ಲಿ (ಬಹುತೇಕ ರಾಜಧಾನಿಗಳ ಪ್ರಮುಖ ವೃತ್ತಗಳಲ್ಲಿ) ಸೇರಿ ದಿನಗಟ್ಟಲೇ ಕೂತು ಮಹತ್ತರ ಬದಲಾವಣೆಯೊಂದಕ್ಕೆ ಕಾರಣವಾದವು. ಮತ್ತೊಂದು ಕಡೆ ಗ್ರೇಟಾ ಥನ್‌ಬರ್ಗ್ ಎಂಬೊಬ್ಬ 15 ವರ್ಷದ ಹುಡುಗಿ ಶಾಲೆಗೆ ಹೋಗದೇ ಸ್ವೀಡನ್‌ನ ಪಾರ್ಲಿಮೆಂಟಿನ ಮುಂದೆ ನಿಂತು ಪರಿಸರ ರಕ್ಷಣೆಗೆ ದನಿಯೆತ್ತಿದ್ದು ಬಹಳ ದೊಡ್ಡ ಸುದ್ದಿಯಾಯಿತು. ತೀರಾ ಈಚೆಗೆ ರಿಹನ್ನಾ ಎಂಬೊಬ್ಬ ಪಾಪ್ ಗಾಯಕಿ ಬರೆದ ಆರು ಪದಗಳ ಟ್ವೀಟ್ ಉಂಟು ಮಾಡಿದ ಅಲೆಗಳು ಇನ್ನೂ ಬೀಸುತ್ತಲೇ ಇವೆ.

ಅಂದರೆ ಕೆಲವು ನೂರು ಅಥವಾ ಹಲವು ಸಾವಿರ ಜನರು ಒಂದೆಡೆ ಸೇರಿ ಒಂದು ದಿನ ಪ್ರತಿಭಟನಾ ಪ್ರದರ್ಶನ ನಡೆಸಿ ಗಮನ ಸೆಳೆದು, ಪರಿಣಾಮ ಬೀರುವ ಕಾಲ ಮುಗಿದಿದೆಯೇ? ಸಾವಿರ ಸಾವಿರ ಜನರು ದಿನಗಳು-ತಿಂಗಳುಗಟ್ಟಲೇ ಒಂದೆಡೆ ಸೇರುವುದು ಅಥವಾ ವಿಶಿಷ್ಟ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಅಲೆ ಅಲೆಯಾಗಿ ಬೀಸುವಂಥದ್ದೇನೋ ಆಗುವುದು ಮಾತ್ರವೇ ಹೊಸ ಕಾಲದ ಪ್ರತಿಭಟನಾ ಮಾದರಿಯೇ? ಹಾಗೆಂದು ಷರಾ ಬರೆಯಲಾಗದು. ಗುಜರಾತಿನ ಉನಾದಲ್ಲಿ ಸತ್ತದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತ ಯುವಕರನ್ನು ತೀವ್ರವಾಗಿ ಬಡಿಯಲಾಯಿತು. ಅದನ್ನು ಪ್ರತಿಭಟಿಸಿ ಅಹಮದಾಬಾದ್‌ನಿಂದ ಉನಾದವರೆಗೆ ನಡೆದ ಪಾದಯಾತ್ರೆ ಮತ್ತು ಅಲ್ಲಿ ನಡೆದ ಒಂದು ದಿನದ ಪ್ರತಿಭಟನಾ ಪ್ರದರ್ಶನವು ಆ ಸಂದರ್ಭದಲ್ಲಂತೂ ಸಂಚಲನ ಮೂಡಿಸಿತ್ತು. ಅಲ್ಲಿಂದ 1600 ಕಿ.ಮೀ. ದೂರದಲ್ಲಿ ನಡೆದ ಚಲೋ ಉಡುಪಿ ಹೋರಾಟಕ್ಕೂ ಪ್ರೇರಣೆಯಾಯಿತು.

ಇಂತಹ ಇನ್ನೂ ಹಲವಾರು ಉದಾಹರಣೆಗಳನ್ನು ನೀಡಬಹುದು. ಒಟ್ಟಿನಲ್ಲಿ ನಿರ್ದಿಷ್ಟ ಬಗೆಯ ಪ್ರತಿಭಟನಾ ಮಾದರಿಯ ಕಥೆ ಮುಗಿಯಿತು ಎಂಬ ಅಂತಿಮ ತೀರ್ಪನ್ನು ನೀಡುವುದು ಸಾಧ್ಯವಿಲ್ಲ. ಏಕೆಂದರೆ ನಿರ್ದಿಷ್ಟ ಸಂದರ್ಭವು ಯಾವುದು ಪರಿಣಾಮಕಾರಿ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಹೀಗೆ ಹೇಳಿದ ಮೇಲೂ ರೊಟೀನ್ ಆಗಿ ನಡೆಯುವ ಒಂದೇ ಬಗೆಯ ಪ್ರತಿಭಟನೆಗಳ ಸಾಮಾಜಿಕ ಪರಿಣಾಮ ಕಡಿಮೆಯಾಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆಂದು ಪ್ರತಿಯೊಂದು ಸಣ್ಣ ಪ್ರತಿಭಟನೆಯೂ ದಿಕ್ಕು ಬದಲಿಸುವ ಮಹತ್ತರ ತಿರುವಾಗುವುದೂ ಸಾಧ್ಯವಿಲ್ಲ.

ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಚಾರಿತ್ರಿಕವಾದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ನೆನೆಯಲು ಕಾರಣವಿದೆ. ಈ ಹೋರಾಟ ಮುಂದೇನಾಗಬಹುದು? ಮುಂದೇನಾಗಬೇಕು? ಅದನ್ನು ಮುನ್ನಡೆಸುವ ಅತೀ ಕಷ್ಟದ ಜವಾಬ್ದಾರಿಯನ್ನು ಹೊತ್ತಿರುವವರಿಗೆ ಅಥವಾ ಅದನ್ನು ಮುರಿಯಲು ಅಹರ್ನಿಶಿ ಪ್ರಯತ್ನಿಸುತ್ತಿರುವವರಿಗೂ ಗೊತ್ತಿಲ್ಲದ ಭವಿಷ್ಯವದು.

ವಾಸ್ತವವೇನು ಗೊತ್ತೇ? ಈ ಹೋರಾಟದ ಆರಂಭದ ದಿಕ್ಕು ದೆಸೆಯನ್ನು ಅಲ್ಲಿನ ನಾಯಕರು ತೀರ್ಮಾನ ಮಾಡಲಿಲ್ಲ. ದೆಹಲಿಯ ಕಡೆಗೆ ಹೊರಡಬೇಕು, ಎಲ್ಲಿ ತಡೆದರೆ ಅಲ್ಲಿಯೇ ಕೂರಬೇಕು; ತಿಂಗಳುಗಟ್ಟಲೇ ಅಲ್ಲೇ ಕೂರಲು ಬೇಕಾದ ತಯಾರಿ ಮಾಡಿಕೊಂಡೇ ಹೋಗಬೇಕು ಎಂಬುದು ನಾಯಕರ ತೀರ್ಮಾನವಾಗಿತ್ತು. ದಾರಿಯಲ್ಲಿ ಹಾಕಲಾದ ಬ್ಯಾರಿಕೇಡುಗಳನ್ನು ಪಕ್ಕಕ್ಕೆ ಸರಿಸಿ, ಕಂದಕಗಳನ್ನು ದಾಟಿ ಹೋಗುವುದು ಜನರ ತೀರ್ಮಾನವಾಗಿತ್ತು. ದೆಹಲಿಯೊಳಕ್ಕೆ ಬಿಡದಾಗ ಪೊಲೀಸರು ಸೂಚಿಸಿದ ಮೈದಾನಕ್ಕೆ ತೆರಳಬೇಕೆಂಬುದು ಈ ಹೋರಾಟದ ಸಲುವಾಗಿ ರೂಪಿಸಿಕೊಂಡಿದ್ದ ಉನ್ನತ ಸಮಿತಿಯ ಸರ್ವಾನುಮತದ ನಿರ್ಧಾರವಾಗಿತ್ತು. ಆದರೆ, ಅದನ್ನು ಮನವರಿಕೆ ಮಾಡಿಕೊಡಲೆಂದು ಪ್ರತಿಭಟನೆಯ ಮುಂಚೂಣಿಗೆ ತೆರಳಿದ ನಾಯಕರಿಗೆ, ರೈತರನ್ನು ಒಪ್ಪಿಸುವುದು ದುಸ್ಸಾಧ್ಯವೆಂದು ಮನವರಿಕೆಯಾಗಿತ್ತು.

’ಹಿಂತಿರುಗಿ ನೋಡಿದರೆ, ಜನರ ನಿರ್ಧಾರ ಸರಿಯಿತ್ತು; ನಮ್ಮದಲ್ಲ’ ಎಂದು ವಿನಮ್ರವಾಗಿ ಆ ಹೋರಾಟದ ಉನ್ನತ ನಾಯಕರಲ್ಲೊಬ್ಬರು ಈಚೆಗೆ ನಮ್ಮೊಡನೆ ನಡೆಸಿದ ಚರ್ಚೆಯಲ್ಲಿ ಹೇಳಿದರು. ಈಗ ಅಲ್ಲಿ ಕುಳಿತಿರುವವರ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳುವುದು ಮತ್ತು ಬಹುತೇಕರಿಗೆ ಒಪ್ಪಿಗೆಯಾಗಬಹುದಾದ ಪರಿಹಾರದೊಂದಿಗೆ ಮಾತ್ರ ಮರಳುವುದಷ್ಟೇ ನಾಯಕರಿಗುಳಿದಿರುವ ಆಯ್ಕೆ. ಹಾಗಾಗಿ ದೂರದಲ್ಲೆಲ್ಲೋ ಕುಳಿತು ತೀರ್ಪುಗಳನ್ನು ಕೊಡುವುದು ಸುಲಭ; ಮೂವತ್ತು ಅಥವಾ ಮುನ್ನೂರು ಜನರ ಹೋರಾಟದ ಕುರಿತು ತೀರ್ಮಾನ ತೆಗೆದುಕೊಳ್ಳುವುದೂ ಸಲೀಸು. ಆದರೆ ಲಕ್ಷಾಂತರ ಜನರ ಹೋರಾಟವನ್ನು ಮುನ್ನಡೆಸುವವರು ಬಹಳ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಒಂದು ಹೆಜ್ಜೆ ಅತಿ ಮಾಡಿದರೆ ಎಡವಟ್ಟು, ಕಡಿಮೆ ಇಟ್ಟರೆ ಸ್ಥೈರ್ಯ ಉಳಿಸಿಕೊಳ್ಳುವುದು ಕಷ್ಟ.

ನನ್ನ ಪ್ರಕಾರ ಈ ಚಳವಳಿಯು ಈಗಾಗಲೇ ಮಹತ್ವದ ಗೆಲುವನ್ನು ಸಾಧಿಸಿದೆ. ನರೇಂದ್ರ ಮೋದಿ ಸರ್ಕಾರ ಬಂದ ನಂತರ, ಪ್ರಭುತ್ವದ ದುರಾಡಳಿತದ ವಿರುದ್ಧ ಮೊದಲ ಗೆಲುವು ಸಾಧಿಸಿದ್ದೂ ರೈತರೇ ಆಗಿದ್ದರು. 2014ರಲ್ಲಿ ಸುಗ್ರೀವಾಜ್ಞೆಯ ಮೂಲಕವೇ ಜಾರಿಯಾಗಿದ್ದ ಭೂಸ್ವಾಧೀನ ಕಾಯ್ದೆಯೂ ರೈತರ ಪ್ರತಿರೋಧದ ಕಾರಣಕ್ಕೆ ಹಿಂದಕ್ಕೆ ಹೋಗಿತ್ತು. ಅದನ್ನು ಬಿಟ್ಟರೆ ನಡೆದ ದೊಡ್ಡ ಹೋರಾಟವೆಂದರೆ ಸಿಎಎ ವಿರೋಧಿ ಆಂದೋಲನ. ಅಲ್ಲಿ ಅತ್ಯಂತ ಹೆಚ್ಚಾಗಿ ನಡೆದದ್ದು ಸಾವಿರ, ಲಕ್ಷಗಟ್ಟಲೇ ಜನರು ಒಂದಾದ ಮೇಲೊಂದರಂತೆ ದೇಶದೆಲ್ಲೆಡೆ ನಡೆಸಿದ ಪ್ರತಿಭಟನಾ ಸಮಾವೇಶಗಳೇ.

ಆದರೆ, ಅಲ್ಲಿಯೂ ನೂರು, ಸಾವಿರಗಟ್ಟಲೇ ಜನರು ಶಹೀನ್‌ಬಾಗ್‌ಗಳನ್ನು ನಿರ್ಮಿಸಿದ್ದರು. ನಿರಂತರವಾಗಿ ಮಹಿಳೆಯರು ಒಂದೆಡೆ ಕೂತು ತಮ್ಮ ವಿರೋಧವನ್ನು ಕಾಪಿಟ್ಟುಕೊಂಡಿದ್ದರು. ಆ ಹೋರಾಟದ ಮಹತ್ವವೇನೆಂದರೆ, ಬಹಳ ಅಂಚಿಗೆ ಸರಿಯಲ್ಪಟ್ಟಿದ್ದ ಮುಸ್ಲಿಂ ಸಮುದಾಯವು ಅದಕ್ಕೆ ನಾಯಕತ್ವ ಕೊಟ್ಟಿತ್ತು; ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದರು; ರಾಷ್ಟ್ರಧ್ವಜ ಮತ್ತು ಸಂವಿಧಾನದ ಪ್ರಣಾಳಿಕೆಗಳು ಸಂಕೇತಗಳಾಗಿ ಬಳಕೆಯಾದವು. ಇಂತಹದೊಂದು ಬೃಹತ್ ಹೋರಾಟವನ್ನು ಇನ್ನವರ ಕಥೆ ಮುಗಿಯಿತು ಎಂಬಂತೆ ಭಾವಿಸಲಾಗಿದ್ದ ಮುಸ್ಲಿಮರು ನಡೆಸಿದ್ದರು. ಅದೇ ರೀತಿ ಇನ್ನು ಇದು ಮುಗಿದಂತೆ ಎಂದು ಭಾವಿಸಲಾಗಿದ್ದ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದ ರೈತರು ಮತ್ತೊಂದು ಆಂದೋಲನಕ್ಕೆ ಕೈ ಹಾಕಿದ್ದಾರೆ. ಇದೂ ಅತ್ಯಂತ ವಿಶೇಷವೇ.

ಅಂದರೆ ಒಂದು ಸಿಎಎ ಆಂದೋಲನವು ಸೃಷ್ಟಿ ಮಾಡಿದ್ದ ಚೈತನ್ಯವು ’ಯಾರೂ ಎದುರಿಸಲಾಗದು’ ಎಂಬಂತೆ ಭಾವಿಸಲಾಗಿದ್ದ ಇಂದಿನ ಒಕ್ಕೂಟ ಸರ್ಕಾರದ ಪ್ರತಿಷ್ಠೆಯನ್ನು ಕೆಳಗಿಳಿಸುವಷ್ಟರಮಟ್ಟಿಗೆ ರೈತ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಇನ್ನೊಂದಕ್ಕೆ ದಾರಿ ತೋರಿಸಲಿದೆ. ಈಗಲೇ ಕೃಷಿ ಕಾನೂನುಗಳು ವಾಪಸ್ಸಾಗುತ್ತವೆಯೋ ಇಲ್ಲವೋ ಎಂಬುದು ಅಷ್ಟು ಮಹತ್ವದ ಸಂಗತಿಯೇನಲ್ಲ. ಪ್ರಬುದ್ಧರಾದ, ಹೋರಾಟದ ಕುಲುಮೆಯಲ್ಲಿ ಪುಟಕ್ಕಿಟ್ಟಂತಾಗಿರುವ ನಾಯಕರು ಇದರ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಯಾವ ರೀತಿಯಲ್ಲಿ ಇದು ಕೊನೆಗೊಂಡರೂ ಅದು ಆಂದೋಲನದ ಚೈತನ್ಯವನ್ನು ಮುಂದಕ್ಕೊಯ್ಯುವುದರಲ್ಲಿ ಸಂಶಯವಿಲ್ಲ.

ಈಗ ಜವಾಬ್ದಾರಿ ಇರುವುದು ದೆಹಲಿಯಲ್ಲಿ ಕುಳಿತ ರೈತರು ಅಥವಾ ಅದರ ನೇತಾರರದ್ದಲ್ಲ. ನಮ್ಮದು. ದೂರವಿದ್ದು ಈ ಪ್ರಜಾಪ್ರಭುತ್ವವನ್ನು ಯಾರೋ ಹೇಗೋ ಸರಿ ಮಾಡಲಿ ಎಂದು ಕಾಯುತ್ತಿರುವವರದ್ದು. ಇದೇ ಈ ಹೊತ್ತಿನಲ್ಲೇ ರೈತ ಚಳವಳಿಗೆ ಪೂರಕವಾಗಿ ಮತ್ತು ಒಟ್ಟಾರೆ ಪ್ರಜಾತಾಂತ್ರಿಕ ರಾಜಕೀಯ ಚಳವಳಿಯನ್ನು ಕಟ್ಟುವ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ಕಾಲಕ್ಕೆ ತಕ್ಕಂತೆ ಏನು ಮಾಡಬಹುದು ಎಂಬುದನ್ನು ಪ್ರಾಯೋಗಿಕವಾಗಿ ಪಾಲ್ಗೊಳ್ಳುತ್ತಲೇ ಕಂಡುಕೊಳ್ಳುವುದು ಯುಗಧರ್ಮವಾಗಿದೆ. ಅಂದರೆ ಕೇವಲ ಚರ್ಚೆಯಲ್ಲಿ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಚರ್ಚೆ, ಚಿಂತನೆ ಹಾಗೂ ಹಿನ್ನೋಟಗಳೆಲ್ಲವೂ ಶುರು ಮಾಡಲು ಬೇಕಾದ ಬಿಂದುವನ್ನು ಮತ್ತು ನಮ್ಮನ್ನು ಎಚ್ಚರದಲ್ಲಿಡುವ ಪಾಠಗಳಾಗಿ ಪ್ರಯೋಜನಕ್ಕೆ ಬರಬಹುದು ಅಷ್ಟೇ.


ಇದನ್ನೂ ಓದಿ: ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...