Homeಮುಖಪುಟದೆಹಲಿ: ಸಂಸದರ ಅಮಾನತು ಖಂಡಿಸಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ

ದೆಹಲಿ: ಸಂಸದರ ಅಮಾನತು ಖಂಡಿಸಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ

- Advertisement -
- Advertisement -

ಸಂಸತ್‌ನಿಂದ 146 ವಿಪಕ್ಷ ಸಂಸದರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇಂಡಿಯಾ ಒಕ್ಕೂಟದಿಂದ ದೇಶದಾದ್ಯಂತ ಇಂದು ಪ್ರತಿಭಟನೆಗೆ ಕರೆ ನೀಡಲಾಗಿದೆ. ಒಕ್ಕೂಟದ ಪ್ರಮುಖ ನಾಯಕರು ಜಂತರ್‌ ಮತರ್‌ನಲ್ಲಿ ಒಗ್ಗೂಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತರಾಮ್ ಯೆಚೂರಿ, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮತ್ತು ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನಮ್ಮ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಸಂಸತ್‌ನಲ್ಲಿ ನಮಗೆ ನೋಟಿಸ್ ನೀಡಿದಾಗ ಅದನ್ನು ಓದಲೂ ಅವಕಾಶ ನೀಡಿಲ್ಲ. ಬಿಜೆಪಿ ಸರ್ಕಾರ ದಲಿತರೊಬ್ಬರಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಹೇಳಬೇಕೆ? ಮಾತನಾಡುವ ನಮ್ಮ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಸ್ವಾತಂತ್ರ್ಯವನ್ನು ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರು ನಮಗೆ ನೀಡಿದ್ದಾರೆ. ನೀವು ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಿ ಮತ್ತು ಅವಿರೋಧವಾಗಿ ಕಾನೂನುಗಳನ್ನು ಜಾರಿಗೊಳಿಸಿ.. ನಾವು ಒಟ್ಟಾಗಿ ಹೋರಾಡುತ್ತೇವೆ” ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮಾತನಾಡಿ, “ಮಾಧ್ಯಮಗಳು ದೇಶದ ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ. ಆದರೆ, ಅಮಾನತುಗೊಂಡ ಸಂಸದರು ಸಂಸತ್ತಿನ ಹೊರಗೆ ಕುಳಿತಿರುವ ವಿಡಿಯೋವನ್ನು ರಾಹುಲ್ ಗಾಂಧಿ ರೆಕಾರ್ಡ್ ಮಾಡಿದ ಬಗ್ಗೆ ಮಾತನಾಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮಾತನಾಡಿ, “ಪ್ರಜಾಪ್ರಭುತ್ವ ಉಳಿಸಲು ಯಾವುದೇ ಬೆಲೆ ತೆರಲು ನಾವು ಸಿದ್ಧ” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸುತ್ತಿರುವ ರೀತಿ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರ ವಿರುದ್ಧ ಇಂಡಿಯಾ ಬಣದ ಪಕ್ಷಗಳು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಪ್ರತಿಪಕ್ಷಗಳು ಒಗ್ಗಟ್ಟಾಗಿವೆ, ದೇಶ ಒಗ್ಗಟ್ಟಾಗಿದೆ” ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ದೆಹಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲೂ ಇಂಡಿಯಾ ಒಕ್ಕೂಟದ ಪಕ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೇರಳದ ತಿರುವನಂತಪುರಂನ ರಾಜಭವನದ ಬಳಿ ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್ ಬಣ ಪ್ರತಿಭಟನೆ ನಡೆಸಿದೆ.

ತೆಲಂಗಾಣ ಕಾಂಗ್ರೆಸ್ ವತಿಯಿಂದ ಹೈದರಾಬಾದ್‌ನ ಇಂದಿರಾ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವ ವಹಿಸಿದ್ದಾರೆ. ಉತ್ತರ ಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಮಾಜವಾಧಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಗುರುವಾರ ಬೆಳಿಗ್ಗೆ ಅಮಾನತುಗೊಂಡ ಸಂಸದರು ದೆಹಲಿಯ ಸಂಸತ್ ಭವನದಿಂದ ವಿಜಯ್ ಚೌಕ್‌ವರೆಗೆ ಮೆರವಣಿಗೆ ನಡೆಸಿದ್ದರು.

ಡಿಸೆಂಬರ್ 13ರಂದು ಸಂಸತ್‌ ಭವನದಲ್ಲಿ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವಂತೆ ಆಗ್ರಹಿಸಿದ್ದಕ್ಕೆ ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಸೆಂಬರ್ 14ರಿಂದ 21ರವರೆಗೆ ಲೋಕಸಭೆ ಮತ್ತು ರಾಜ್ಯಸಭೆಯಿಂದ ಒಟ್ಟು 146 ಸಂಸದರನ್ನು ಅಮಾನತು ಮಾಡಲಾಗಿದೆ. ಸಂಸತ್ತಿನ ಇತಿಹಾಸದಲ್ಲಿ ಇಷ್ಟೊಂದು ಸಂಸದರು ಅಮಾನತ್ತಾಗಿರುವುದು ಇದೇ ಮೊದಲು.

ಇದನ್ನೂ ಓದಿ : “ಗೋಮಾಂಸ ಪ್ರಚಾರಕಿಯನ್ನು ದೇವಸ್ಥಾನಕ್ಕೆ ಹೇಗೆ ಬಿಟ್ರು”?..ಯೂಟ್ಯೂಬರ್ ವಿರುದ್ಧ ಧ್ವೇಷ ಹರಡಿದ ಬಲ ಪಂಥೀಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...