Homeಮುಖಪುಟರಾಷ್ಟ್ರಪತಿ ಮುರ್ಮು ಕುರಿತು ಅವಹೇಳನ: ಟಿಎಂಸಿ ನಾಯಕ ಕ್ಷಮೆಯಾಚನೆ

ರಾಷ್ಟ್ರಪತಿ ಮುರ್ಮು ಕುರಿತು ಅವಹೇಳನ: ಟಿಎಂಸಿ ನಾಯಕ ಕ್ಷಮೆಯಾಚನೆ

ಮುರ್ಮು ಅವರ ಬಗ್ಗೆ ಆಕ್ಷೇಪಾರ್ಹವಾಗಿ ಬರೆದಿದ್ದ ವಿಶ್ವೇಶ್ವರ ಭಟ್ ಪ್ರಕರಣ ಚರ್ಚೆಯಲ್ಲಿರುವ ಹೊತ್ತಿನಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.

- Advertisement -
- Advertisement -

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಖಿಲ್ ಗಿರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಗಿರಿಯವರು ಶನಿವಾರ ಕ್ಷಮೆಯಾಚಿಸಿದ್ದಾರೆ.

ಪಶ್ಚಿಮ ಬಂಗಾಳದ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದ ಗಿರಿ ಅವರು ಪಶ್ಚಿಮ ಬಂಗಾಳದ ನಂದಿಗ್ರಾಮ್‌ನಲ್ಲಿ ನಡೆದ ಸಭೆಯೊಂದರಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾವು ಯಾರನ್ನೂ ಅವರ ನೋಟದಿಂದ ನಿರ್ಣಯಿಸುವುದಿಲ್ಲ, ನಾವು ರಾಷ್ಟ್ರಪತಿ ಕಚೇರಿಯನ್ನು ಗೌರವಿಸುತ್ತೇವೆ. ಆದರೆ ನಮ್ಮ ರಾಷ್ಟ್ರಪತಿಗಳು ಹೇಗೆ ಕಾಣುತ್ತಾರೆ?” ಎಂದು ಗಿರಿಯವರು ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿತ್ತು.

“ಸಂವಿಧಾನ ಮತ್ತು ರಾಷ್ಟ್ರಪತಿ ಹುದ್ದೆಯನ್ನು ಗೌರವಿಸುತ್ತೇನೆ” ಎಂದಿರುವ ಗಿರಿ, ಶನಿವಾರ ಕ್ಷಮೆಯಾಚನೆ ಮಾಡಿದ್ದಾರೆ.

“ಕಳೆದ ಕೆಲವು ತಿಂಗಳುಗಳಿಂದ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ನನ್ನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅದು ನನಗೆ ಕೋಪವನ್ನುಂಟುಮಾಡಿದೆ” ಎಂದು ಗಿರಿ ತಮ್ಮ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಂದಿಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಕೋಪದಲ್ಲಿ ಮಾತನಾಡಿರುವೆ. ‌ಆದರೆ ಭಾರತದ ರಾಷ್ಟ್ರಪತಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ಕಾಮೆಂಟ್‌ಗಳಿಗಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ಹಲವಾರು ನಾಯಕರು ಗಿರಿ ಹೇಳಿಕೆಯನ್ನು, ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಮಮತಾ “ಬ್ಯಾನರ್ಜಿ ನೇತೃತ್ವದ ತೃಣಮೂಲ ಸರ್ಕಾರವು ಬುಡಕಟ್ಟು ವಿರೋಧಿಯಾಗಿದೆ” ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.

“ಸಿಎಂ ಮಮತಾ ಬ್ಯಾನರ್ಜಿ ಯಾವಾಗಲೂ ಬುಡಕಟ್ಟು ವಿರೋಧಿಯಾಗಿದ್ದಾರೆ” ಎಂದು ಮಜುಂದಾರ್ ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಸಂಸದರಾದ ಸೌಮಿತ್ರಾ ಖಾನ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಗಿರಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಾಷ್ಟ್ರಪತಿಯವರ ಕುರಿತ ಗಿರಿಯವರ ಹೇಳಿಕೆಯು ದೇಶದ ನಾಗರಿಕರಿಗೆ ಮತ್ತು ಅದರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ ಎಂದು ಸೌಮಿತ್ರಾ ಪತ್ರದಲ್ಲಿ ಬರೆದಿದ್ದಾರೆ.

“ಆದ್ದರಿಂದ ಈ ಹೇಯ ಕೃತ್ಯಕ್ಕಾಗಿ ಅಖಿಲ್ ಗಿರಿಯನ್ನು ತಕ್ಷಣವೇ ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಮ್ಮನ್ನು ವಿನಂತಿಸಲಾಗಿದೆ” ಎಂದು ಬಿಜೆಪಿ ಸಂಸದರು ಹೇಳಿದ್ದಾರೆ. “ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಏಕೆಂದರೆ ಸಮಾಜವು ಈ ರೀತಿಯ ಮನಸ್ಥಿತಿಯನ್ನು ಬಯಸುವುದಿಲ್ಲ” ಎಂದಿದ್ದಾರೆ.

ಕರ್ನಾಟಕದಲ್ಲಿಯೂ ಇದೇ ರೀತಿಯ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ರಾಷ್ಟ್ರಪತಿ ಮುರ್ಮು ಅವರ ಬಗ್ಗೆ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕ ಬರೆದಿದ್ದ ಸಾಲು ಟೀಕೆಗೆ ಗುರಿಯಾಗಿತ್ತು. ವರ್ಣವನ್ನು ಹೀಯಾಳಿಸಿ ಅಪಮಾನಿಸಿದ್ದ ಕರ್ನಾಟಕದ ಪ್ರಕರಣ ಚರ್ಚೆಯಲ್ಲಿರುವ ಹೊತ್ತಿನಲ್ಲಿಯೇ ಪಶ್ಚಿಮ ಬಂಗಾಳದಲ್ಲಿಯೂ ಇಂಥದ್ದೇ ಪ್ರಕರಣ ವರದಿಯಾಗಿದೆ.

ಇದನ್ನೂ ಓದಿರಿ: ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಸಂಸ್ಕಾರಿ ಬ್ರಾಹ್ಮಣರು ಎಂದಿದ್ದ ಶಾಸಕನಿಗೆ ಮತ್ತೆ ಟಿಕೆಟ್ ನೀಡಿದ ಬಿಜೆಪಿ

ತಮ್ಮ ಅಂಕಣ ಬರಹದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಬಣ್ಣವನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿ ಜನಾಂಗೀಯ ನಿಂದನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರ ಭಟ್, ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಇತ್ತೀಚೆಗೆ ಹಾಜರಿದ್ದರು.

ಅವಹೇಳನಕಾರಿಯಾಗಿ ಬರೆದಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗವು (NCW) ಗುರುತಿಸಿತ್ತು. ಈ ಕುರಿತು ಅಕ್ಟೋಬರ್ 26ರಂದು ವಿಚಾರಣೆಗೆ ಹಾಜರಾಗುವಂತೆ ಪತ್ರಕರ್ತ ವಿಶ್ವೇಶ್ವರ ಭಟ್‌ರವರಿಗೆ ನೋಟಿಸ್ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಆಯೋಗದ ಮುಂದೆ ಹಾಜರಾದ ವಿಶ್ವೇಶ್ವರ ಭಟ್, “ಭಾರತದ ರಾಷ್ಟ್ರಪತಿಯವರನ್ನು ಅವಮಾನಿಸುವ ಯಾವುದೇ ದುರುದ್ದೇಶ ತನಗೆ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿ ಕ್ಷೆಮೆ ಯಾಚಿಸಿದ್ದಾರೆ, ಲಿಖಿತವಾಗಿಯೂ ಕ್ಷಮೆ ಕೇಳಿದ್ದಾರೆ” ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾರವರ ಹೇಳಿಕೆ ಉಲ್ಲೇಖಿಸಿ ‘ಪ್ರಜಾವಾಣಿ’ ವರದಿ ಮಾಡಿತ್ತು. ಆದರೆ ಕ್ಷಮೆಯಾಚಿಸಿಲ್ಲ ಎಂದು ವಿಶ್ವೇಶ್ವರ್‌ ಭಟ್ ಹೇಳಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read