IPL2022 ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ನಾಲ್ಕೈದು ಬಾರಿ ಚಾಂಪಿಯನ್ ಆಗಿದ್ದ ಮುಂಬೈ-ಚನ್ನೈ ತಂಡಗಳು ಕಳಪೆ ಪ್ರದರ್ಶನ ನೀಡಿದರೆ, ಹೊಸ ನಾಯಕತ್ವದ ಗುಜರಾತ್ ಮತ್ತು ಯುವ ನಾಯಕತ್ವದ ಲಕ್ನೋ, ರಾಜಸ್ತಾನ್ ತಂಡಗಳು ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿವೆ. ಇದುವರೆಗೂ ಲೀಗ್ ಹಂತದ 44 ಪಂದ್ಯಗಳು ನಡೆದಿದ್ದು, ಹೆಚ್ಚು ಕಡಿಮೆ ಅರ್ಧದಷ್ಟು ಪಂದ್ಯಗಳು ಮುಕ್ತಾಯವಾಗಿವೆ. ಮುಂಬೈ ಸತತ 8 ಪಂದ್ಯಗಳನ್ನು ಸೋತು 9ನೇ ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿ ಕೊನೆಯ ಸ್ಥಾನದಲ್ಲಿದೆ. ಚನ್ನೈ ತಂಡ ಸಹ 8 ಪಂದ್ಯಗಳಲ್ಲಿ 6 ಸೋಲು ಕಂಡು 2 ಗೆಲುವಿನೊಂದಿಗೆ 9 ನೇ ಸ್ಥಾನಕ್ಕೆ ಕುಸಿದಿದೆ. ಈ ಅನಿರೀಕ್ಷಿತ ಆಘಾತದಿಂದ ಹೊರಬರಲು ಚನ್ನೈ ತಂಡದ ನೂತನ ನಾಯಕರಾಗಿದ್ದ ರವೀಂದ್ರ ಜಡೇಜಾ ತಮ್ಮ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಮತ್ತೆ ಚನ್ನೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇನ್ನು ಸೋಲಿನ ಸುಳಿಗೆ ಸಿಲುಕಿರುವ ಆರ್‌ಸಿಬಿ ತಂಡ ಕೂಡ ನಾಯಕತ್ವ ಬದಲಾವಣೆ ಚರ್ಚೆಗೆ ಹೋಗುವ ಅನಿವಾರ್ಯ ಸ್ಥಿತಿಗೆ ತಲುಪಿದೆ.
IPL2022 ಆರಂಭವಾಗುವ ಎರಡು ದಿನದ ಮುನ್ನ ಚನ್ನೈ ತಂಡದ ನಾಯಕರಾಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದರು. ಅದುವರೆಗೂ ಖ್ಯಾತ ಆಲ್‌ರೌಂಡರ್ ಆಗಿದ್ದ ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿಯೂ ಮಿಂಚುತ್ತಿದ್ದರು. ಆದರೆ ನಾಯಕನಾದ ನಂತರ ಅವರಿಂದ ಉತ್ತಮ ಪ್ರದರ್ಶನ ಕಂಡಬಂದಿಲ್ಲ. ತಂಡವಾಗಿ ಚನ್ನೈ 8 ಪಂದ್ಯಗಳಲ್ಲಿ 6 ಸೋಲು ಕಂಡರೆ ನಾಯಕ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ಕೇವಲ 112 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 5 ವಿಕೆಟ್ ಪಡೆದು ನೀರಸ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ವಯಕ್ತಿಕ ಆಟದ ಕಡೆ ಗಮನ ಕೊಡುವುದಕ್ಕಾಗಿ ನಾಯಕತ್ವವನ್ನು ಮತ್ತೆ ಧೋನಿ ಕೈಗೆ ಒಪ್ಪಿಸಿದ್ದಾರೆ. ಇದು ಒಂದು ರೀತಿಯಲ್ಲಿ ಸೋಲಿನ ಜವಾಬ್ದಾರಿ ಹೊತ್ತು ತೆಗೆದುಕೊಂಡ ನಿರ್ಧಾರವಾಗಿದೆ.
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
ಈ ಸಲ ಕಪ್ ನಮ್ದೆ ಎನ್ನುವುದು ಪ್ರತಿ ಬಾರಿ ಐಪಿಲ್ ನಡೆಯುವಾಗ ಆರ್‌ಸಿಬಿ ಅಭಿಮಾನಿಗಳ ಕೂಗು. ಇಡೀ ಐಪಿಎಲ್ ನಲ್ಲಿಯೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ ಎಂದರೆ ತಪ್ಪಾಗಲಾರದು. ಆದರೆ ಇದುವರೆಗೂ ನಡೆದ 14 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲಾಗದ ಆರ್‌ಸಿಬಿ 3 ಬಾರಿ ಫೈನಲ್ ತಲುಪಿ ಎಡವಿದೆ. ಈ 15 ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡ ತಂಡವು ನಂತರ ಸತತ ಮೂರು ಸೋಲುಗಳಿಂದ ಕಂಗೆಟ್ಟಿದೆ. ತಾನಾಡಿದ 10 ಪಂದ್ಯಗಳಲ್ಲಿ 5 ಗೆಲುವು ಮತ್ತು 5 ಸೋಲು ಕಂಡಿದ್ದು 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಆದರೆ ಪ್ಲೇ ಆಫ್ ತಲುಪಲು ಮೊದಲ ನಾಲ್ಕು ಸ್ಥಾನಗಳಲ್ಲಿ ಆರ್‌ಸಿಬಿ ಇರಬೇಕು. ತಂಡದ ಪ್ರದರ್ಶನ ನೋಡುತ್ತಿದ್ದರೆ ಸುಲಭ ಸಾಧ್ಯವಲ್ಲ ಅನಿಸುತ್ತಿದೆ.
ಇನ್ನು ವಯಕ್ತಿಕವಾಗಿ ನೋಡುವುದಾದರೆ 2019, 2020, 2021ರಲ್ಲಿ ಚನ್ನೈ ತಂಡಕ್ಕಾಗಿ ಆಡಿದ್ದ ಡು ಪ್ಲೆಸಿಸ್ ಅದ್ಬುತ ಪ್ರದರ್ಶನ ನೀಡಿದ್ದರು. ಕ್ರಮವಾಗಿ 396, 449, 633 ರನ್ ಗಳಿಸಿ ಮಿಂಚಿದ್ದರು. ಆದರೆ ಈ ಬಾರಿ ಆರ್‌ಸಿಬಿ ಪರವಾಗಿ 10 ಪಂದ್ಯಗಳಲ್ಲಿ 278 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಆದರೆ ಅದು ಸಾಲುತ್ತಿಲ್ಲ. ಒಂದೆಡೆ ನಾಯಕನಾಗಿ ವಿಫಲನಾಗಿರುವುದರಿಂದ ವಯಕ್ತಿಕ ಮೊತ್ತವು ಕಡಿಮೆ ಎನಿಸುತ್ತದೆ. ಇನ್ನು ಆರ್‌ಸಿಬಿಯ ಯಾವ ಆಟಗಾರರು ಸ್ಥಿರ ಪ್ರದರ್ಶನ ನೀಡದಿರುವುದು ನಾಯಕನ ಮೇಲೆ ಒತ್ತಡ ಹೆಚ್ಚಿಸಿದೆ. ಅವರು ಯಾವ ತೀರ್ಮಾನ ಮಾಡುತ್ತಾರೆ ನೋಡಬೇಕಿದೆ.
ಅದೃಷ್ಟದಲ್ಲಿ ತೇಲುತ್ತಿರುವ ಗುಜರಾತ್ ತಂಡ ಮತ್ತು ಅದರ ನಾಯಕ ಹಾರ್ದಿಕ್ ಪಾಂಡ್ಯ
ಅದು ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯ. ಮೊದಲು ಬ್ಯಾಟ್ ಮಾಡಿದ ಪಂಜಾಬ್ 189 ರನ್ ಗಳಿಸಿ ಪೈಪೋಟಿಯ ಮೊತ್ತ ಪೇರಿಸಿತು. ಅದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ಅಂತಿಮ ಓವರ್‌ನಲ್ಲಿ 19 ರನ್ ಗಳಿಸಬೇಕಿತ್ತು. ಒಡಿಯನ್ ಸ್ಮಿತ್ ಮಾಡಿದ ಮೊದಲ ಬಾಲ್ ವೈಡ್ ಆದರೆ ನಂತರದ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ರನ್ ಔಟ್ ಆದರು. ಆಗ ಕ್ರೀಸ್‌ಗೆ ಬಂದ ರಾಹುಲ್ ತಿವಾಟಿಯ ಎರಡನೆ ಬಾಲ್ ನಲ್ಲಿ ಒಂದು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಫೋರ್ ಬಾರಿಸಿದರು. ನಂತರು ಮೂರು ಬಾಲ್‌ನಲ್ಲಿ 13 ರನ್ ಬೇಕಿತ್ತು. ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಬ್ಯಾಟ್ ನಿಂದ ಹೊರಟ ಬಾಲ್ ಬೌಲರ್ ಒಡಿಯನ್ ಸ್ಮಿತ್ ಕೈಗೆ ತಲುಪಿತ್ತು. ಆದರೆ ಅವರು ಅದನ್ನು ವಿಕೆಟ್ ಕಡೆ ಎಸೆದ ಕಾರಣ ಬಾಲ್ ವಿಕೆಟ್ ತಾಗದೆ ದೂರ ಹೋಗಿದ್ದರಿಂದ ಒಂದು ರನ್ ಗಳಿಸಿದರು. ನಂತರದ ಎರೆಡು ಎಸೆತಗಳಲ್ಲಿ ಎರೆಡು ಸಿಕ್ಸರ್ ಬಾರಿಸಿದರು ತಿವಾಟಿಯ. ಗುಜರಾತ್ ತಂಡಕ್ಕೆ 6 ವಿಕೆಟ್ ಗಳ ಜಯ. ಆದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಂಬಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ನಗುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅದ್ಭುತ ಆಟದ ಜೊತೆಗೆ ಗುಜರಾತ್ ತಂಡಕ್ಕೆ ಅದೃಷ್ಟವೂ ಸಹ ಕೈ ಹಿಡಿದಿದೆ ಎನ್ನಲೇಬೇಕು. ಇದೇ ರೀತಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಕೊನೆಯ ಓವರ್‌ನಲ್ಲಿ 22 ರನ್ ಗಳಿಸಬೇಕಿದ್ದ ತಂಡ ರಶೀದ್ ಖಾನ್ ಮತ್ತು ರಾಹುಲ್ ತಿವಾಟಿಯ ಸೇರಿ 4 ಸಿಕ್ಸರ್ ಸಿಡಿಸಿ ಆ ಪಂದ್ಯವನ್ನು ಗೆದ್ದುಕೊಟ್ಟರು. ಹೀಗೆ 2022ರಲ್ಲಿ ಹೊಸದಾಗಿ ಪಾದಾರ್ಪಣೆ ಮಾಡಿದ ಈ ತಂಡ ತಾನಾಡಿದ 9 ಪಂದ್ಯಗಳಲ್ಲಿ 8 ಅನ್ನು ಗೆದ್ದು, ಒಂದು ಪಂದ್ಯದಲ್ಲಿ ಮಾತ್ರ ಸೋತು ಅಗ್ರಸ್ಥಾನ ಕಾಯ್ದುಕೊಂಡಿದೆ. ಬಹಳಷ್ಟು ಪಂದ್ಯಗಳಲ್ಲಿ ಅದು ಕೊನೆಯ ಓವರ್‌ವರೆಗೂ ತಲುಪಿ ಗೆಲುವು ಸಾಧಿಸುತ್ತಿದೆ.
ಇನ್ನು ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಹ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 8 ಪಂದ್ಯಗಳಲ್ಲಿ 308 ರನ್ ಗಳಿಸಿದ್ದಾರೆ. ಇದು ಅವರ 8 ಐಪಿಎಲ್‌ಗಳಲ್ಲಿಯೇ ಎರಡನೇ ಅತಿ ಹೆಚ್ಚು ರನ್‌ಗಳಾಗಿದೆ. ಈ ಬಾರಿ ಮೂರು ಅರ್ಧ ಶತಕ ಸಿಡಿಸಿರುವ ಅವರು 32 ಫೋರ್ ಮತ್ತು 08 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅಲ್ಲದೆ ಉತ್ತಮ ನಾಯಕನಾಗಿಯೂ ಹೆಸರು ಗಳಿಸಿದ್ದಾರೆ. ಈ ಬಾರಿ ಚಾಂಪಿಯನ್ ಆಗುವ ಸಾಮರ್ಥ್ಯ ಹೊಂದಿದೆ ಈ ತಂಡ.

ಇನ್ನು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ತಂಡವು 9 ಪಂದ್ಯಗಳಲ್ಲಿ 6 ಅನ್ನು ಗೆದ್ದು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಕೇವಲ 09 ಪಂದ್ಯಗಳಲ್ಲಿ 556 ರನ್ ಸಿಡಿಸಿದ್ದಾರೆ. ಅದರಲ್ಲಿ ಮೂರು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿವೆ. ಕನ್ನಡಿಗ ಕೆ.ಎಲ್ ರಾಹುಲ್ ನಾಯಕನಾಗಿರುವ ಲಕ್ನೋ ತಂಡ ಕೂಡ 9 ಪಂದ್ಯಗಳಲ್ಲಿ 6 ಅನ್ನು ಗೆದ್ದು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಹುಲ್ ಕೂಡ 9 ಪಂದ್ಯಗಳಲ್ಲಿ ಎರಡು ಶತಕ ಮತ್ತು ಒಂದು ಅರ್ಧ ಶತಕದೊಂದಿಗೆ 374 ರನ್ ಗಳಿಸಿ ಮಿಂಚಿದ್ದಾರೆ. ಕೇನ್ ವಿಲಿಯಂಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ 8 ಪಂದ್ಯಗಳಲ್ಲಿ 5 ಅನ್ನು ಗೆದ್ದು 10 ಅಂಕಗಳೊಂದಿಗೆ 4 ನೇ ಸ್ಥಾನ ಪಡೆದಿದೆ. ಡೆಲ್ಲಿ ಮತ್ತು ಪಂಜಾಬ್ ತಂಡಗಳು ಕ್ರಮವಾಗಿ 7 ಮತ್ತು 8ನೇ ಸ್ಥಾನ ಪಡೆದು ತಿಣುಕಾಡುತ್ತಿವೆ.
ಈ ಅಂಕಿ ಅಂಶಗಳು ಹೇಳುವುದೇನೆಂದರೆ ನಾಯಕತ್ವ ಮತ್ತು ತಂಡದ ಸ್ಥಿರ ಪ್ರದರ್ಶನಗಳು ಗೆಲುವಿಗೆ ಅಗತ್ಯವಾಗಿವೆ. ಹಲವಾರು ತಂಡಗಳು ಇವುಗಳಲ್ಲಿಯೇ ಎಡವುತ್ತಿವೆ. ಹಾಗಾಗಿ ನಾಯಕತ್ವ ಬದಲಾವಣೆ ಚರ್ಚೆಗಳು ಆರಂಭಗೊಂಡಿವೆ.