Homeಅಂತರಾಷ್ಟ್ರೀಯಗಾಝಾದಲ್ಲಿ ಮತ್ತೆ 700ಕ್ಕೂ ಹೆಚ್ಚು ನಾಗರಿಕರ ಹತ್ಯೆ: ಪ್ರಾದೇಶಿಕ ಸಂಘರ್ಷದ ಅಪಾಯ

ಗಾಝಾದಲ್ಲಿ ಮತ್ತೆ 700ಕ್ಕೂ ಹೆಚ್ಚು ನಾಗರಿಕರ ಹತ್ಯೆ: ಪ್ರಾದೇಶಿಕ ಸಂಘರ್ಷದ ಅಪಾಯ

- Advertisement -
- Advertisement -

4 ದಿನಗಳ ಕದನ ವಿರಾಮದ ಬಳಿಕ ಇಸ್ರೇಲ್‌ ಮತ್ತೆ ಪ್ಯಾಲೆಸ್ತೀನ್‌ ಮೇಲೆ ದಾಳಿಯನ್ನು ಮುಂದುವರಿಸಿದೆ. ಕಳೆದ 24 ಗಂಟೆಗಳಲ್ಲಿ ಗಾಝಾದಲ್ಲಿ 700ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಝಾದಲ್ಲಿನ ಸರ್ಕಾರಿ ಮಾಧ್ಯಮ ಕಚೇರಿಯ ಮಹಾನಿರ್ದೇಶಕರು ಅಲ್ ಜಝೀರಾಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್‌ ದಾಳಿಯನ್ನು ಇರಾನ್‌ ಖಂಡಿಸಿದ್ದು, ಪ್ರಾದೇಶಿಕ ಸಂಘರ್ಷದ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಇಸ್ರೇಲ್‌ ಹತ್ಯಾಕಾಂಡ ಮುಂದುವರಿದಂತೆ ಗಾಝಾದ ಮೇಲೆ ಇಸ್ರೇಲ್‌ ದಾಳಿ ಕೊನೆಗೊಳ್ಳುವವರೆಗೆ ಬಂಧಿತ ಕೈದಿಗಳ ವಿನಿಮಯದ ಕುರಿತು ಮಾತುಕತೆ ಪುನರಾರಂಭಗೊಳ್ಳುವುದಿಲ್ಲ ಎಂದು ಹಮಾಸ್ ಹೇಳಿದೆ.

ಕದನ ವಿರಾಮ ಕೊನೆಗೊಳ್ಳುತ್ತಿದ್ದಂತೆ ಇಸ್ರೇಲ್‌ ಸೈನ್ಯವು ದಕ್ಷಿಣ ಗಾಝಾದ ಖಾನ್ ಯೂನಿಸ್‌ನಲ್ಲಿರುವ ನಿವಾಸಿಗಳಿಗೆ ಸ್ಥಳ ಬಿಟ್ಟು ತೆರಳುವಂತೆ ಸೂಚಿಸಿದೆ. ವೆಸ್ಟ್‌ ಬ್ಯಾಂಕ್‌ ಮೇಲೆ ಇಂದು ಬೆಳಗ್ಗೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ 21 ವರ್ಷದ ಪ್ಯಾಲೆಸ್ತೀನ್‌ ಯುವಕನ ಹತ್ಯೆ ನಡೆದಿದೆ. ಪ್ಯಾಲೆಸ್ತೀನ್‌ನ ಪ್ರಿಸನರ್ಸ್ ಸೊಸೈಟಿಯ ಪ್ರಕಾರ, ವೆಸ್ಟ್‌ ಬ್ಯಾಂಕ್‌ ಮೇಲೆ ರಾತ್ರಿ ಇಸ್ರೇಲ್‌ ಸೇನೆ ದಾಳಿ ನಡೆಸಿ ಕನಿಷ್ಠ 60 ಪ್ಯಾಲೆಸ್ತೀನಿಯನ್ನರನ್ನು ಬಂಧಿಸಿದೆ.

ಯುನಿಸೆಫ್‌ನ ಜಾಗತಿಕ ವಕ್ತಾರರಾದ ಜೇಮ್ಸ್ ಎಲ್ಡರ್ ಅವರು ಗಾಝಾದ ದಕ್ಷಿಣದಲ್ಲಿರುವ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯೊಳಗಿನ ದೃಶ್ಯಗಳ ಬಗ್ಗೆ ವಿವರಿಸಿದ್ದಾರೆ. ಆಸ್ಪತ್ರೆಯಲ್ಲಿ ಜನರು ಸುಟ್ಟಗಾಯಗಳು, ತಲೆಗೆ ಗಂಭೀರ ಗಾಯಗಳಾಗಿ ಬಳಲುತ್ತಿದ್ದಾರೆ. ಮಕ್ಕಳು ಮೂಳೆಗಳನ್ನು ಮುರಿದುಕೊಂಡು ನರಳಾಡುತ್ತಿದ್ದಾರೆ. ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಮಕ್ಕಳನ್ನು ನೋಡಿ ತಾಯಂದಿರು ಅಳುತ್ತಿದ್ದಾರೆ. ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ ಒಂದು ಕಡೆ ಸಾವು ಸಂಭವಿಸಿದೆರೆ, ಇನ್ನೊಂದು ಕಡೆ ಸಾವು- ಬದುಕಿನ ನಡುವೆ ಮಕ್ಕಳ ನರಳಾಟವು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಇರಾನ್‌ನ ವಿದೇಶಾಂಗ ಸಚಿವರು ಪ್ಯಾಲೇಸ್ತೀನಿಯನ್ನರ ವಿರುದ್ಧ ಇಸ್ರೇಲ್ ತನ್ನ ಯುದ್ಧ ಅಪರಾಧಗಳನ್ನು ನಿಲ್ಲಿಸದಿದ್ದರೆ ಆಳವಾದ ಪ್ರಾದೇಶಿಕ ಸಂಘರ್ಷದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಗಾಝಾ ಮತ್ತು ವೆಸ್ಟ್‌ ಬ್ಯಾಂಕ್‌ ಮೇಲೆ ಇಸ್ರೇಲ್‌ ದಾಳಿಯನ್ನು ನಿಲ್ಲಿಸದಿದ್ದರೆ ಈ ಪ್ರದೇಶದಲ್ಲಿ ಯುದ್ಧದ ವ್ಯಾಪ್ತಿ ಆಳವಾಗಿ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೊಸೆನ್ ಅಮೀರ್ ಅಬ್ದುಲ್ಲಾಹಿಯಾನ್ ಹೇಳಿದ್ದಾರೆ.

ಪ್ಯಾಲೆಸ್ತೀನಿಯರನ್ನು ತಮ್ಮ ಭೂಮಿಯನ್ನು ಬಿಟ್ಟು ತೆರಳುವಂತೆ ಇಸ್ರೇಲ್‌ ಬಲವಂತ ಪಡಿಸುತ್ತಿರುವುದನ್ನು ಖಂಡಿಸಿದ ಅಬ್ಡೊಲ್ಲಾಹಿಯಾನ್ ಇಸ್ರೇಲ್ ಮಿಲಿಟರಿ ದಾಳಿಯನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಅ.7ರಂದು ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಗಾಝಾದಲ್ಲಿ 15,000ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದೆ. ಇದರಲ್ಲಿ 6,000ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. 30,000ಕ್ಕೂ ಅಧಿಕ ಮಂದಿ ಇಸ್ರೇಲ್‌ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಝಾದ ಆಸ್ಪತ್ರೆಗಳು ನಿರಾಶ್ರಿತರ ಶಿಬಿರಗಳಲ್ಲಿ ಜನರು ತುಂಬಿ ತುಳುಕುತ್ತಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

ಕತಾರ್‌ ಮಧ್ಯಸ್ಥಿಕೆಯಲ್ಲಿ ಇತ್ತೀಚೆಗೆ 4 ದಿನಗಳ ಕದನ ವಿರಾಮ ಒಪ್ಪಂದ ಮಾಡಲಾಗಿತ್ತು. ಈ ವೇಳೆ ಇಸ್ರೇಲ್- ಹಮಾಸ್‌ ಒತ್ತೆಯಾಳುಗಳ ಬಿಡುಗಡೆ, ಪ್ಯಾಲೆಸ್ತೀನ್‌ಗೆ ಮಾನವೀಯ ನೆರವಿಗೆ ಒಪ್ಪಂದ ಮಾಡಲಾಗಿತ್ತು. ಆದರೆ ಕದನ ವಿರಾಮದ ಬೆನ್ನಲ್ಲೇ ಇಸ್ರೇಲ್‌ ಮತ್ತೆ ಯುದ್ಧವನ್ನು ಘೋಷಿಸಿತ್ತು.

 ಇದನ್ನು ಓದಿ: ರಾಮಮಂದಿರಕ್ಕೆ ಧನಸಹಾಯ ನೀಡಲು ಬಯಸಿದ ನಾಲ್ವರ ಹಂತಕ ಪೇದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...