Homeಕರ್ನಾಟಕಲಾಯರ್‌ ಜಗದೀಶ್‌ ಬಿಡುಗಡೆ; ಫೇಸ್‌ಬುಕ್‌ ಲೈವ್‌ ಮೂಲಕ ಜೈಲ್‌ ಡೈರಿ ರಿವೀಲ್‌

ಲಾಯರ್‌ ಜಗದೀಶ್‌ ಬಿಡುಗಡೆ; ಫೇಸ್‌ಬುಕ್‌ ಲೈವ್‌ ಮೂಲಕ ಜೈಲ್‌ ಡೈರಿ ರಿವೀಲ್‌

- Advertisement -
- Advertisement -

ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಲಾಯರ್‌ ಕೆ.ಎಂ.ಜಗದೀಶ್‌ ಜಾಮೀನಿನ ಮೇಲೆ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದು, ಫೇಸ್‌ಬುಕ್‌ ಲೈವ್‌ ಮೂಲಕ ತಮ್ಮ ಜೈಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಫೇಸ್‌ಬುಕ್ ಖಾತೆ ಲಾಕ್‌ ಆಗಿರುವ ಕಾರಣ ತಮ್ಮ ಸ್ನೇಹಿತೆ ಪ್ರಶಾಂತಿ ಸುಭಾಷ್ ಅವರ ಫೇಸ್‌ಬುಕ್‌‌ ಖಾತೆಯ ಮೂಲಕ ಲೈವ್ ಬಂದಿದ್ದ ಅವರು, ಬಹಳ ಖುಷಿ ಹಾಗೂ ಲವಲವಿಕೆಯಿಂದ ಮಾತನಾಡಿದರು.

“ಕಳೆದ 24 ದಿನಗಳ ಹಿಂದೆ ಒಂದು ಕೇಸ್‌ನಲ್ಲಿ ಬಂಧಿಸಿ, ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಿದ್ದರು. ಇಂದು ರಿಲೀಸ್ ಆಗಿದ್ದೀನಿ. ನನಗಾಗಿ ಸಾಕಷ್ಟು ಹೃದಯಗಳು ಸ್ಪಂದಿಸಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಯಲಿದೆ. ಸಣ್ಣಪುಟ್ಟ ತಪ್ಪುಗಳಿಂದ ಅದು ಹಳಿ ತಪ್ಪಿತ್ತು. ಮತ್ತೆ ಟ್ರಾಕ್‌ಗೆ ಬಂದಿದೆ. ಎಲ್ಲ ನೈತಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೋರಾಟ ಮುಂದುವರಿಸುವೆ” ಎಂದು ಗುಡುಗಿದ್ದಾರೆ.

“ನನಗಾಗಿ ಸಾಕಷ್ಟು ಜನರು ಹೋರಾಟ ಮಾಡಿದ್ದಾರೆ. ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜೈಲಿಗೆ ಪತ್ರಿಕೆ ಬರುತ್ತಿತ್ತು, ಅದನ್ನು ಓದಿ ಇದನ್ನೆಲ್ಲ ತಿಳಿದುಕೊಳ್ಳುತ್ತಿದೆ. ಜೈಲು ನಿಜಕ್ಕೂ ವಂಡರ್‌ಫುಲ್‌. ಇದನ್ನು ಜೈಲು ಅನ್ನುವುದಕ್ಕಿಂತ ಮನಪರಿವರ್ತನೆಯ ಸ್ಥಳ ಎಂದು ಕರೆದಿದ್ದಾರೆ. ಬಹುಶಃ ನಾನು ಕೂಡ ನನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ” ಎಂದಿದ್ದಾರೆ.

“ಜೈಲಿನ ಸಿಬ್ಬಂದಿ ನಿಜಕ್ಕೂ ಅದ್ಭುತ. ಜೈಲಿನ ಬಗ್ಗೆ ಸಾಕಷ್ಟು ಜನ ಕೆಟ್ಟದ್ದಾಗಿ ಮಾತನಾಡುತ್ತಾರೆ. ಆದರೆ ನಾನು ಹೇಳುತ್ತೇನೆ: ಜೈಲಿನಲ್ಲಿ ತುಂಬಾ ಒಳ್ಳೆಯ ವಾತಾವರಣ ಇದೆ. ಗಾರ್ಡ್‌ಗಳಾಗಿ ನೇಮಕವಾಗಿರುವ ಯುವಕರು ನಿಜಕ್ಕೂ ಅದ್ಭುತ. ಜೈಲರ್‌ಗಳೆಲ್ಲ ನಿಜಕ್ಕೂ ನನ್ನ ಪಾಲಿಗೆ ಜಂಟಲ್‌ಮನ್‌ಗಳು. ಜೈಲೆಂದು ಯಾವತ್ತೂ ನನಗೆ ಫೀಲ್ ಆಗಿಲ್ಲ. ನನ್ನನ್ನು ನೋಡಿಕೊಂಡ ಡಾಕ್ಟರ್‌ಗಳಿಗೆ ತುಂಬಾ ಧನ್ಯವಾದ” ಎಂದು ತಿಳಿಸಿದ್ದಾರೆ.

“ಜೈಲು ಸಿಬ್ಬಂದಿ ಬಹುತೇಕ ಇಂಜಿನಿಯರ್‌ಗಳೆಂದು ಕೇಳಿ ನನ್ನ ಹೃದಯ ಒಡೆದುಹೋಯಿತು. ಸುಮಾರು ಒಂದು ಸಾವಿರ ಜನ ನೇಮಕವಾಗಿದ್ದಾರೆ. ಅದರಲ್ಲಿ ಏಳನೂರು ಜನ ಇಂಜಿನಿಯರ್‌ಗಳಿದ್ದಾರೆ. ಪಿಎಚ್‌ಡಿ ಪಡೆದವರು ಇದ್ದಾರೆ. ಮೇಷ್ಟ್ರಾದವರು ಇದ್ದಾರೆ. ಬೇಜಾರಾದ ಸಂಗತಿ ಏನೆಂದರೆ ಕೇವಲ ಹತ್ತನೇ ತರಗತಿ ವಿದ್ಯಾರ್ಹತೆ ಬೇಕಾದ ಗಾರ್ಡ್ ಕೆಲಸಕ್ಕೆ ಇಂಜಿನಿಯರ್‌ಗಳು ಬಂದಿದ್ದಾರೆ. ತುಂಬಾ ನೋವಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಇಪ್ಪತ್ತು ನಾಲ್ಕು ದಿನಗಳು ಹೇಗೆ ಕಳೆದವು ಎಂಬುದೇ ಗೊತ್ತಾಗಲಿಲ್ಲ. ನನ್ನ ಫೇಸ್‌ಬುಕ್ ಲೈವ್ ಮಿಸ್‌ ಮಾಡಿಕೊಂಡೆ… ಕೆಲವು ದಿನಗಳಲ್ಲಿ  ಬ್ಲಾಕ್ ಆಗಿರುವ ಫೇಸ್‌ಬುಕ್ ಖಾತೆ ಓಪನ್‌ ಮಾಡಿಸುತ್ತೇನೆ” ಎಂದು ಹೇಳಿದ ಅವರು, ತಮಗಾಗಿ ಹೋರಾಟ ಮಾಡಿದವರನ್ನು ಮನಪೂರ್ವಕವಾಗಿ ನೆನೆದು ಧನ್ಯವಾದ ತಿಳಿಸಿದ್ದಾರೆ.

“ಈ ಹೋರಾಟ ಎಂದ ಮೇಲೆ ಇವೆಲ್ಲ ಸಾಮಾನ್ಯ. ತಾಳ್ಮೆಯನ್ನು ಕಳೆದುಕೊಂಡೆ ಅನಿಸುತ್ತೆ. ಒಬ್ಬ ತಂದೆಯಾಗಿ ಹೀಗೆ ವರ್ತಿಸಿದ್ದು ಸರಿ. ಆದರೆ ಒಬ್ಬ ವಕೀಲನಾಗಿ ನಾನು ಹೀಗೆ ನಡೆದುಕೊಳ್ಳಬಾರದಿತ್ತು” ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

“ಜೈಲಿನಲ್ಲಿ ನಾನು ಸಹ ಒಂದು ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ. ಅದನ್ನು ಸಮಯ ಬಂದಾಗ ತಿಳಿಸುತ್ತೇನೆ. ಈಗ ಹೇಳಿದರೆ ವಿರೋಧಿಗಳು ಅಲರ್ಟ್ ಆಗಿಬಿಡುತ್ತಾರೆ. ಇನ್ನ ಮೇಲೆ ಮುಚ್ಚಿಡುವ ಕೆಲಸಗಳನ್ನು ಮಾಡಬೇಕಾಗುತ್ತದೆ” ಎಂದಿದ್ದಾರೆ.

ಏನಿದು ಪ್ರಕರಣ?

ಕೊಲೆ ಯತ್ನ ಪ್ರಕರಣ ಆರೋಪಿಸಿ ಜಗದೀಶ್‌ ಅವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆವರಣದಲ್ಲಿ ಈಚೆಗೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ವಕೀಲರಾದ ಕೆ.ಎನ್.ಜಗದೀಶ್‌ ವಕೀಲರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿ ವೃತ್ತಿಗೆ ಚ್ಯುತಿ ತಂದಿದ್ದಾರೆ. ನ್ಯಾಯಾಲಯ ಆವರಣದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ, ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ಪ್ರತಿನಿಧಿಗಳು ನೀಡಿದ್ದ ದೂರಿನ ಮೇಲೆ ಜಗದೀಶ್ ಅವರನ್ನು ಹಲಸೂರು ಗೇಟ್‌‌ ಪೊಲೀಸರು ಬಂಧಿಸಿದ್ದರು.

ಜಾತಿ ನಿಂದನೆ ಮತ್ತು ಪೊಲೀಸ್‌ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆಂದೂ ಆರೋಪಿಸಲಾಗಿತ್ತು. ಈಗ ಈ ಎರಡು ಪ್ರಕರಣಗಳಲ್ಲಿಯೂ ಜಾಮೀನು ದೊರೆತು ಜಗದೀಶ್‌ ಬಿಡುಗಡೆಯಾಗಿದ್ದಾರೆ.


ಇದನ್ನೂ ಓದಿರಿ: ಲಾಯರ್‌ ಜಗದೀಶ್ ವಿಚಾರದಲ್ಲಿ ವಕೀಲರ ಸಂಘದ ನಡೆ ಸ್ವೀಕಾರಾರ್ಹವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read