ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ನಡೆದ ಮೊದಲ ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಕೌನ್ಸಿಲ್(ಡಿಡಿಸಿ) ಸ್ಥಳೀಯ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕರ್ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ.
ಒಟ್ಟು 20 ಜಿಲ್ಲೆಗಳಲ್ಲಿ ನಡೆದ ಡಿಡಿಸಿ ಚುನಾವಣೆಯಲ್ಲಿ ಎನ್‌ಸಿ, ಪಿಡಿಪಿ ಸೇರಿದಂತೆ ಏಳು ಪ್ರಾದೇಶಿಕ ಪಕ್ಷಗಳ ಗುಂಪಾಗಿರುವ ಗುಪ್ಕರ್ ಮೈತ್ರಿಕೂಟ 13 ಜಿಲ್ಲೆಗಳಲ್ಲಿ ಜಯಗಳಿಸಿದೆ. ಜಮ್ಮುವಿನ ಆರು ಜಿಲ್ಲೆಗಳಲ್ಲಿ ಬಿಜೆಪಿ ಜಯ ಸಾಧಿಸಿದೆ.
ಪ್ರತಿ ಜಿಲ್ಲೆಯಲ್ಲಿ 14 ಸ್ಥಾನಗಳಂತೆ ಎಲ್ಲಾ 20 ಜಿಲ್ಲೆಗಳೂ ಸೇರಿ ಜಮ್ಮು ಕಾಶ್ಮೀರದ ಒಟ್ಟು 280 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಗುಪ್ಕರ್ ಮೈತ್ರಿಕೂಟ 110 ಸ್ಥಾನಗಳನ್ನು ಪಡೆದಿದೆ. ಆದರೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 74 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ 27 ಸ್ಥಾನಗಳನ್ನು ಗೆದ್ದು ತೃಪ್ತಿ ಪಟ್ಟುಕೊಂಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಗುಪ್ಕರ್ ಒಕ್ಕೂಟಕ್ಕೆ ಸ್ಪಷ್ಟ ಮುನ್ನಡೆ, ಬಿಜೆಪಿಗೆ ಹಿನ್ನಡೆ
49 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಇವರು ಕಿಂಗ್ ಮೇಕರ್‌ಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಒಂದು ಜಿಲ್ಲೆಯ ಫಲಿತಾಂಶ ಹೊರಬೀಳುವುದು ಬಾಕಿ ಇದೆ.
ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಮೈತ್ರಿ 72 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಮೂರು ಸ್ಥಾನಗಳನ್ನು, ಕಾಂಗ್ರೆಸ್ 10 ಸ್ಥಾನಗಳನ್ನ ಗೆದ್ದುಕೊಂಡಿದೆ. ಗುಪ್ಕರ್ ಮೈತ್ರಿಕೂಟ 9 ಜಿಲ್ಲಾ ಮಂಡಳಿಗಳ ಉಸ್ತುವಾರಿ ವಹಿಸಿಕೊಂಡರೆ, ಸ್ವತಂತ್ರ ಅಭ್ಯರ್ಥಿಗಳು ಗೆದ್ದಿರುವ ಶ್ರೀನಗರ ಜಿಲ್ಲಾ ಮಂಡಳಿಗಳ ಉಸ್ತುವಾರಿಯ ಕುರಿತು ಇನ್ನೂ ತೀರ್ಮಾನವಾಗಿಲ್ಲ.
ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ 71 ಸ್ಥಾನಗಳನ್ನು ಗೆದ್ದಿದ್ದು, ಜಮ್ಮು, ಉಧಂಪುರ್, ಸಾಂಬಾ, ಕಥುವಾ, ರಿಯಾಸಿ ಮತ್ತು ದೋಡಾದಲ್ಲಿ ಗೆದ್ದಿದೆ. ಗುಪ್ಕರ್ ಕೂಟ 35 ಸ್ಥಾನ, ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ: ರೈತ ಮುಖಂಡರ ಪತ್ರ
49 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಅವರು ಯಾವ ಕಡೆ ಹೊರಳುತ್ತಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಪಕ್ಷೇತರರ ಸಂಖ್ಯೆ ಕಾಂಗ್ರೆಸ್ ಮತ್ತು ಪಿಡಿಪಿಗಿಂತ ಹೆಚ್ಚಾಗಿದೆ.
“ಕಳೆದ ವರ್ಷ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ಜನರು ತಿರಸ್ಕರಿಸಿದ್ದಾರೆ ಎಂಬುದನ್ನು ಈ ಚುನಾವಣಾ ಫಲಿತಾಂಶಗಳು ಸ್ಪಷ್ಟಪಡಿಸಿವೆ” ಎಂದು ಗುಪ್ಕರ್ ಮೈತ್ರಿಕೂಟದ ಸದಸ್ಯರಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇನ್ನು ಡಿಡಿಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕೆಲವೇ ದಿನಗಳಲ್ಲಿ ಎನ್‌ಐಎಯಿಂದ ಬಂಧನಕ್ಕೆ ಒಳಗಾಗಿದ್ದ ಪೀಪಲ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಯುವ ಘಟಕದ ಅಧ್ಯಕ್ಷ ವಹೀದ್ ಪರ್ರಾ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಜಯಗಳಿಸಿದ್ದಾರೆ.
ಇದನ್ನೂ ಓದಿ: ಡಿಡಿಸಿ ಚುನಾವಣೆ: NIA ಬಂಧಿಸಿದ್ದ ಪಿಡಿಪಿಯ ವಹೀದ್ ಪರ್ರಾಗೆ ಜಯ


