ಸಂಘಪರಿವಾರಕ್ಕೆ ಬೇಡವಾದರೇ ಕಲ್ಲಡ್ಕ ಪ್ರಭಾಕರ ಭಟ್ಟ?!

ದಕ್ಷಿಣ ಕನ್ನಡದ ಸಂಘ ಪರಿವಾರದಲ್ಲಿ ನಡೆಯುತ್ತಿರುವ ಶೀತಲ ಸಮರ ಈ ಚುನಾವಣೆಯಿಂದ ಬೀದಿಗೆ ಬಂದಿದೆ. ಕಳೆದೆರೆಡು ದಶಕದಿಂದ ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಬಿಜೆಪಿಯ ತೆರೆಮರೆಯ ಪ್ರಶ್ನಾತೀತ ತಂತ್ರಗಾರನಾಗಿದ್ದ ಕಲ್ಲಡ್ಕ ಪ್ರಭಾಕರ ಭಟ್ಟರು ಈಗ ಸಂಘ ಪರಿವಾರಕ್ಕೇ ಬೇಡವಾಗಿದ್ದಾರಾ ಎಂಬ ಸಂಶಯ ಕೇಸರಿ ಪಡೆಯ ಪ್ರಚಾರ ವೈಖರಿ ನೋಡಿದವರನ್ನು ಕಾಡಲು ಶುರು ಮಾಡಿದೆ. ಕರಾವಳಿಯ ಮೂರು ಜಿಲ್ಲೆಗಳ ಬಿಜೆಪಿ ಸಂಸದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಪ್ರಚಾರದ ಪ್ರತಿ ಹಂತದಲ್ಲೂ ಭಟ್ಟರನ್ನು ಬದಿಗಿಡಲಾಗಿತ್ತು. ಮೋದಿ ಮಂಗಳೂರಿಗೆ ಬಂದಾಗಲೂ ಭಟ್ಟರಿಗೆ ಯಾವ ಮಾನ-ಮರ್ಯಾದೆಯೂ ಇರಲಿಲ್ಲ.

ಅದೊಂದು ಕಾಲವಿತ್ತು. ಕರಾವಳಿ ಬಿಜೆಪಿಯ ಗ್ರಾಮ ಪಂಚಾಯ್ತಿ ಕ್ಯಾಂಡಿಡೇಟ್‍ನಿಂದ ಲೋಕಸಭೆ ಹುರಿಯಾಳಿನ ಆಯ್ಕೆ ಕಲ್ಲಡ್ಕ ಭಟ್ಟರ ಇಷ್ಟಾನಿಷ್ಟದಂತೆಯೇ ನಡೆಯುತ್ತಿತ್ತು. ಜೊತೆಗೆ ಉಡುಪಿಯ ನಾಜೂಕಯ್ಯ ವೇದವ್ಯಾಸ ಆಚಾರ್ಯ ಮತ್ತು ಕುಂದಾಪುರದ ವಿಪ್ರ ಭೀಷ್ಮ ಎ.ಜಿ.ಕೊಡ್ಗಿ ಇರುತ್ತಿದ್ದರು. ಯಡ್ಡಿ ಸಿಎಂ ಆಗಿದ್ದಾಗ ಆತನ ಸರ್ಕಾರದ ಅಂಕಿ-ಸಂಖ್ಯೆಯ ಮೆದುಳಾಗಿದ್ದ ಆಚಾರ್ಯ ಮಂತ್ರಿಯಾಗಿರುವಾಗಲೇ ಹಠಾತ್ ನಿಧನರಾದರು; ಕುಂದಾಪುರದ ಕೊಡ್ಗಿ, ಸ್ಥಳೀಯ ಶೂದ್ರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಪಳಗಿಸಲಾಗದ ಹತಾಶೆಯಿಂದ ರಾಜಕಾರಣದಿಂದ ದೂರಾದರು. ಆಗ ಕಲ್ಲಡ್ಕ ಭಟ್ಟರು ಬಿಜೆಪಿಯ ಏಕಮೇವಾದ್ವಿತೀಯ ನಾಯಕನಾಗಿ ಹೋದರು! ಯಾವ ಮಟ್ಟಿಗೆಂದರೆ ಪುತ್ತೂರಿನ ಜನಸಂಘ ಕಾಲದ ಶಾಸಕನೂ ತನ್ನ ಖಾಸಾ ಭಾಮೈದುನನೂ ಆದ ರಾಮಭಟ್ಟರನ್ನೇ ಮೂಲೆಗೆ ಸರಿಸಿ ಅಟ್ಟಹಾಸದಿಂದ ಹಾರಾಡತೊಡಗಿದರು.

ಇವತ್ತು ಕರಾವಳಿ, ಕೋಮುವಾದದ ರಣರಂಗವಾಗಿ ಭೀತಿಯ ಓಟ್ ಬ್ಯಾಂಕ್ ರಾಜಕಾರಣ ಹದವಾಗಿದ್ದರೆ, ಅದು ಕಲ್ಲಡ್ಕರ ಕೊಡುಗೆ! ಹಾಗಾಗಿ ಭಟ್ಟರು ಹೇಳಿದವರಿಗೆ ಪರಿವಾರ ಎಮ್ಮೆಲ್ಲೆ, ಎಂಪಿ, ಜಿಪಂ, ತಾಪಂ ಮೆಂಬರಿಕೆ ಟಿಕೆಟ್ ಕೊಡುತ್ತಿತ್ತು. ಆರ್‍ಎಸ್‍ಎಸ್‍ನಲ್ಲಿ ಭಟ್ಟರ ಮಾತೇ ಕರಾವಳಿ ರಾಜಜಕಾರಣದ ಮಟ್ಟಿಗೆ ಅಂತಿಮವಾಣಿಯಾಗಿತ್ತು. ಬಿಜೆಪಿಯ ಸಂಸದ, ಶಾಸಕರಿಗೆಲ್ಲಾ ಭಟ್ಟರೆಂದರೆ ಒಂಥರಾ ಅವ್ಯಕ್ತ ಭಯ-ಭಕ್ತಿ. ಸಾರ್ವಜನಿಕವಾಗೇ ಭಟ್ಟರ ಕಾಲಿಗೆ ಡೈ ಹೊಡೆಯದ ಸಂಸದ-ಶಾಸಕ ಬಿಜೆಪಿಯಲ್ಲಿರಲು ಸಾಧ್ಯವೇ ಇಲ್ಲವೆಂಬಂಥ ಪರಿಸ್ಥಿತಿ ನಿರ್ಮಾಣ ಆಗಿತ್ತು!

ಈ ‘ದೊರೆತನ’ವನ್ನು ಭಟ್ಟರು ಸ್ವಾರ್ಥ ಸಾಧನೆಗೆ, ಆರ್ಥಿಕ ಉನ್ನತಿಗೆ ವ್ಯವಸ್ಥಿತವಾಗಿ ಬಳಸಿಕೊಳ್ಳತೊಡಗಿದರು. ತನ್ನ ಶಿಕ್ಷಣ ಸಂಸ್ಥೆಗೆ ‘ದೇಣಿಗೆ’ ಕೊಡದ ಶಾಸಕರಿಗೆ ಕಿರುಕುಳ ಕೊಡಲು ಶುರು ಮಾಡಿದರು. ಪುತ್ತೂರಿನ ಬಿಜೆಪಿ ಶಾಸಕಿ ಶಕುಂತಲಾ ಶೆಟ್ಟಿ ಗುರುಕಾಣಿಕೆ ಕೊಡಲಾಗದೆ ‘ಕಾಫಿರ್’ ಎನಿಸಿಕೊಂಡು ಕಾಂಗ್ರೆಸ್ ಪಾಲಾಗಬೇಕಾಗಿ ಬಂತು. ಭಟ್ಟರ ವಿರುದ್ಧ ವಯೋವೃದ್ಧ ರಾಮಭಟ್ಟರು ಬಂಡಾಯವೆದ್ದರೂ ಪ್ರಯೋಜನ ಆಗಲಿಲ್ಲ. ಹಲ್ಮುಖಿ ಸದಾನಂದ ಗೌಡ ಅಂಜುತ್ತ-ಅಳುಕುತ್ತ ಭಟ್ಟರ ವಿರುದ್ಧ ಒಂದೊಂದು ಪದ ಪಟಾಕಿ ಸಿಡಿಸಿದ್ದರು. ಭಟ್ಟರ ಕೆಂಗಣ್ಣಿಗೆ ತುತ್ತಾದ ಈ ಅರೆಭಾಷೆ ಗೌಡರಿಗೆ ಮತ್ತೆ ದಕ್ಷಿಣ ಕನ್ನಡದಿಂದ ಎಂಪಿಯಾಗುವ ಧೈರ್ಯ ಬರಲಿಲ್ಲ. ತನ್ನ ಬಾಲಕ್ಕೆ ಬೆಂಕಿ ಇಡುವ ಭಯದಿಂದ ಗೌಡ ಪಕ್ಕದ ಉಡುಪಿ-ಚಿಕ್ಕಮಗಳೂರಿಗೆ ಪಲಾಯನ ಮಾಡಬೇಕಾಗಿ ಬಂತು. ಭಟ್ಟರಿಗೆ ಕಪ್ಪ ಒಪ್ಪಿಸಿ ಹೈರಾಣಾದ ದೊಡ್ಡ ಪಟ್ಟಿಯೇ ಬಿಜೆಪಿಯಲ್ಲಿದೆ.

ಕುಂದಾಪುರದ ಐ.ಎಂ.ಜಯರಾಮ ಶೆಟ್ಟಿ ಕಲ್ಲಡ್ಕ ಭಟ್ಟಗೆ ಕಾಸು ಕೊಟ್ಟೇ ಎಂಪಿ ಟಿಕೆಟ್ ಪಡೆದಿದ್ದರು. ಕಳಪೆ ರಸಗೊಬ್ಬರ, ಬೀಜ ಉದ್ಯಮಿಯಾಗಿದ್ದ ಶೆಟ್ಟಿಯ ಜುಟ್ಟು ಹಿಡಿದು ಕುಣಿಸುತ್ತಿದ್ದರು. ಭಟ್ಟ ಮತ್ತು ಆಚಾರ್ಯರಿಗೆ ಕಾಸು ಕೊಡಲಾಗದಿದ್ದಾಗ ಶೆಟ್ಟಿ ಬಿಜೆಪಿಯಲ್ಲಿ ಉಳಿಯಲಾಗಲಿಲ್ಲ.

ಸುಳ್ಯದ ದಲಿತ ಚೆಡ್ಡಿ ಶಾಸಕ ಅಂಗಾರನಂತೂ ಭಟ್ಟರ ಕೇಸರಿ ಸಂಘ-ಸಂಸ್ಥೆಗಳಿಗೆ ದೊಡ್ಡ ಧನಾಧಾರವೆಂಬ ಪುಕಾರುಗಳಿವೆ. ಈ ಪಾಪದ ದಲಿತ ಸುಳ್ಯಕ್ಕೆ ನಯಾಪೈಸೆಯ ಒಳಿತು ಮಾಡದಿದ್ದರೂ ತಾನು ಬಲಿತು ಗುರು ಶಿಷ್ಯರನ್ನು ಸಂಪ್ರೀತಗೊಳಿಸುತ್ತಾ ಬಂದಿದ್ದಾನೆ. ಶಿಪ್ಪಿಂಗ್ ಉದ್ಯಮಿ ನಾಗರಾಜ ಶೆಟ್ಟಿ ಬಂಟ್ವಾಳದ ಶಾಸಕನಾಗಿದ್ದು ಭಟ್ಟರ ಕೃಪೆಯಿಂದ. ಆದರೆ ಭಟ್ಟರನ್ನು ನಿರಂತರವಾಗಿ ‘ಖುಷಿ’ ಪಡಿಸಲಾಗದೇ ಆತ ಭೀತಿಯಿಂದ ಹೊರಹೋಗಬೇಕಾಗಿ ಬಂತು! ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಟ್ರಿಗೆ ಸೆಡ್ಡುಹೊಡೆದ ತಪ್ಪಿಗೆ ಮಂತ್ರಿಗಿರಿಯಿಂದ ‘ವಂಚಿತ’ನಾಗಬೇಕಾಯ್ತು.

ಭಟ್ಟರ ಗುರುದಕ್ಷಿಣೆ ದಾಹಕ್ಕೆ ಕಳೆದೊಂದು ದಶಕದಿಂದ ಬಿಜೆಪಿ-ಸಂಘಪರಿವಾರ ಎರಡೂ ತತ್ತರಿಸಿ ಹೋದವು. ಈ ಬಗ್ಗೆ ಸಂಘ ಪರಿವಾರದಲ್ಲಿ ದೊಡ್ಡ ಚರ್ಚೆ ಎಬ್ಬಿಸಿತು! ಸ್ವಾಮಿ ರಾಘುನ ಪರವಹಿಸಿ ಭಟ್ಟರು ವಕಾಲತ್ತು ಶುರುಹಚ್ಚಿಕೊಂಡಿದ್ದು ಆರ್‍ಎಸ್‍ಎಸ್‍ನಲ್ಲಿ ಅಸಮಾಧಾನ ಮೂಡಿಸಿತ್ತು. ಆರ್‍ಎಸ್‍ಎಸ್‍ನ ಅತ್ಯುನ್ನತ ಹೈಕಮಾಂಡಿನ ಮಾಂಡಲೀಕನಂತಿರುವ ದತ್ತಾತ್ರೇಯ ಹೊಸಬಾಳೆ ಬಳಗ ರಾಘುನ ರಂಗೀಲಾ ಚಟುವಟಿಕೆ ವಿರುದ್ಧ ಬಂಡೆದ್ದು ಆತನ ಪೀಠೋಚ್ಛಾಟನೆಗೆ ಅಣಿಯಾಗಿದ್ದರು. ಆ ಸಂದರ್ಭದಲ್ಲಿ ಕಲ್ಲಡ್ಕ ಭಟ್ರು ಮಾತ್ರ ಹವ್ಯಕ ಕುಲಕಂಠಕ ರಾಘುನ ಬಚಾಯಿಸಲು ಹವಣಿಸಿದ್ದರು. ಭಟ್ಟರ ಧನ ದೌರ್ಬಲ್ಯ ಬಲ್ಲ ರಾಘು ಮಾನ್ಯ ಆರ್‍ಎಸ್‍ಎಸ್‍ನಲ್ಲೂ ಒಡಕು ಮೂಡುವಂತೆ ಕಾಂಚಾಣ ಕಾರಸ್ಥಾನ ನಡೆಸಿದ್ದಾನೆಂದು ಹವ್ಯಕ ವಲಯವೇ ಪಿಸುಗುಡುತ್ತಿದೆ.

ಭಟ್ಟರ ದುಡ್ಡಿನ ದಾಹ ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಮುಜುಗರ ಮೂಡಿಸಿತ್ತು. ಭಟ್ಟರ ವ್ಯವಹಾರ ಹೀಗೆ ಮುಂದುವರೆದರೆ ಆರ್‍ಎಸ್‍ಎಸ್-ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆಂದು ಆತಂಕ ಶುರುವಾಗಿತ್ತು.

ಭಟ್ಟರನ್ನು ಬದಿಗೆ ಸರಿಸಲು ಸ್ಕೆಚ್ ರೆಡಿಯಾಗತೊಡಗಿದ್ದೇ ಆಗ. ಹಾಗೆ ನೋಡಿದರೆ ಭಟ್ಟರ ಬಗ್ಗೆ ಸಂಘ ಪರಿವಾರದಲ್ಲಿ ವಿರೋಧ ಉದ್ಭವವಾದದ್ದು 2014 ಲೋಕಸಭಾ ಚುನಾವಣೆ ಹೊತ್ತಲ್ಲೇ. ತನಗೆ ವಿಧೇಯತೆ ತೋರದ ಮಾಜಿ ಶಿಷ್ಯ ನಳಿನ್‍ಕುಮಾರ್ ಕಟೀಲ್‍ಗೆ ಮತ್ತೆ ಎಂಪಿ ಟಿಕೆಟ್ ಕೊಡುವ ಮನಸ್ಸು ಭಟ್ಟರಿಗೆ ಇರಲಿಲ್ಲ. ಹಾಗಾಗಿ ಆತನ ಅನೈತಿಕ ಪುರಾಣವೊಂದು ಬೀದಿಗೆ ಬರುವಂತೆ ತನ್ನ ಹಿಂಬಾಲಕರ ಮೂಲಕ ಭಟ್ಟರು ನೋಡಿಕೊಂಡಿದ್ದರು.

ಭಟ್ಟರ ಈ ಕಿತಾಪತಿಯನ್ನು ಆರ್‍ಎಸ್‍ಎಸ್‍ನ ದೊಡ್ಡವರಿಗೆ ಮನಮುಟ್ಟುವಂತೆ ವಿವರಿಸಿದ್ದ ಕಟೀಲ್ ಗುರು ವಿರುದ್ಧ ಸರಿಯಾಗೇ ಪಿಟ್ಟಿಂಗ್ ಇಟ್ಟು ಮತ್ತೆ ಟಿಕೆಟ್ ತಂದಿದ್ದರು. ಈ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು. ಭಟ್ಟರ ಹಣಿಯಲು ಪ್ಲಾನ್ ಹಾಕಿಕೊಂಡಿದ್ದ ಪರಿವಾರಿಗಳು ಕಟೀಲ್‍ನ ಛೂಬಿಟ್ಟರು. ಆತ ಹೇಳಿದವರಿಗೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ಕೊಡಲಾಯಿತು. ಭಟ್ಟರ ಮಾತು ನಡೆಯಲಿಲ್ಲ. ಮುಗಿದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಳಿನ್‍ಗೆ ಟಿಕೆಟ್ ತಪ್ಪಿಸಲು ಭಟ್ಟರು ತಿಪ್ಪರಲಾಗ ಹಾಕಿದರು. ಭಟ್ಟರ ಹಣಿಯಲು ಇದೇ ಸರಿಯಾದ ಸಮಯ ಎಂದೆಣಿಸಿದ್ದ ಕೇಸರಿ ಚಿಂತಕರ ತಂಡ ಕಟೀಲ್‍ನನ್ನೇ ಅಭ್ಯರ್ಥಿ ಮಾಡಿದರು. ಕೆರಳಿದ ಕಲ್ಲಡ್ಕ ಭಟ್ಟರು ಬಿಜೆಪಿ ಪ್ರಚಾರಕ್ಕೆ ಹೋಗಲಿಲ್ಲ.
ಕಟೀಲ್ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಿದರು. ಮೋದಿ ಮೇಲೆ ಪಕ್ಷ ಅವಲಂಬಿಸಿರುವುದು ಅಪಾಯಕಾರಿ ಎಂದು ಸ್ಟೇಟ್‍ಮೆಂಟ್ ಒಗಾಯಿಸಿದರು. ಹಿಂದುತ್ವದ ಪ್ರಶ್ನೆ ಬಂದಾಗ ನಳಿನ್‍ಗಿಂತ ಕಾಂಗ್ರೆಸ್ ಹುರಿಯಾಳು ಮಿಥುನ್ ರೈನೇ ಬೆಟರ್ ಎಂದು ಹೇಳಿದರು. ಈ ವೀಡಿಯೊ ವೈರಲ್ ಆಯಿತು. ನಳಿನ್‍ಗೆ ದೊಡ್ಡ ಹೊಡೆತ ಕೊಟ್ಟಿತು. ಭಟ್ಟರಿಗೆ ಬುದ್ಧಿ ಕಲಿಸಬೇಕೆಂಬ ಹಠದಿಂದ ಕೇಸರಿಪಡೆಯೂ ವ್ಯವಸ್ಥಿತವಾಗಿ ಕೆಲಸ ಮಾಡಿದೆ. ಆದರೆ ನಳಿನ್ ದಂಡಪಿಂಡ ಸಂಸದನೆಂಬ ಅಸಮಾಧಾನ ಮತ್ತು ಭಟ್ಟರ ಅಸಹಕಾರ ಕಾಂಗ್ರೆಸ್‍ಗೆ ವರವಾಗಿದೆ. ಹೀಗಾಗಿ ಕತ್ತುಕತ್ತಿನ ಹೋರಾಟ ನಡೆದಿದೆ. ಯಾರು ಬೇಕಿದ್ದರೂ ಗೆಲ್ಲಬಹುದೆಂಬ ಪರಿಸ್ಥಿತಿ ಇರುವುದರಿಂದ ಬೆಟ್ಟಿಂಗ್ ಸಹ ನಡೆಯುತ್ತಿಲ್ಲ.

ಒಂದಂತೂ ಖರೆ. ಈ ಪಾರ್ಲಿಮೆಂಟ್ ಎಲೆಕ್ಷನ್ ಭಟ್ಟರನ್ನು ಬಿಜೆಪಿ-ಆರ್‍ಎಸ್‍ಎಸ್‍ನಲ್ಲಿ ಮೂಲೆಗುಂಪು ಮಾಡಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಒಳ್ಳೆಯ ಉದಾಹರಣೆ.
    ಪಾಪದ ಕೊಡ ತುಂಬಿದ ನಂತರ ಯಾರೂ ಉಳಿಯಬಾರದು

LEAVE A REPLY

Please enter your comment!
Please enter your name here