Homeಕರ್ನಾಟಕಚಂಪಾ ನಿಧನಕ್ಕೆ ಕಂಬನಿ ಮಿಡಿದ ಬರಹಗಾರರು

ಚಂಪಾ ನಿಧನಕ್ಕೆ ಕಂಬನಿ ಮಿಡಿದ ಬರಹಗಾರರು

- Advertisement -
- Advertisement -

ಕನ್ನಡದ ಹಿರಿಯ ಸಾಹಿತಿ, ಹೋರಾಟಗಾರ ಚಂದ್ರಶೇಖರ ಪಾಟೀಲ (ಚಂಪಾ) ಅವರ ನಿಧನಕ್ಕೆ ಕನ್ನಡದ ಹಿರಿಯ, ಕಿರಿಯ ಬರಹಗಾರರು, ಚಿಂತಕರು ಕಂಬನಿ ಮಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಚಂಪಾ ಅವರನ್ನು ಸ್ಮರಿಸಿ ಅನೇಕರು ಪೋಸ್ಟ್‌ ಮಾಡಿದ್ದಾರೆ. ಚಂಪಾ ಅವರು ಸಮಕಾಲೀನ ಸಂವಾದಗಳಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ನೆನೆದಿದ್ದಾರೆ.

ಕೆ.ಪುಟ್ಟಸ್ವಾಮಿ ಅವರ ಕವಿತೆ…

ಚಂಪಾ ಇಲ್ಲವಾದರೇ?
ಅವರೇ ಕೇಳಿದಹಾಗೆ
ಸತ್ತವರು ಎಲ್ಲಿ ಹೋಗುತ್ತಾರೆ?
ಬದಲಿಸಿ ಹೇಳುವುದಾದರೇ
ಬದುಕಿದವರ ಚಿತ್ತದಲ್ಲಿ ಗೂಡು ಕಟ್ಟುತ್ತಾರೆ.
ಚೀ…ಪೀ..ಕಲರವ ಎಬ್ಬಿಸುತ್ತಾರೆ
ಇರಲಿ ನೀವು
ಅನ್ಯಾಯ ಕಂಡಾಗ
ಪುಟನೆಗೆದು
ಧಿಕ್ಕಾರ ಹೇಳುತ್ತಿದ್ದಿರಿ.
ಮಠಮಾನ್ಯ ಮೂರು ಶ್ರೀಗಳಿರಲಿ
ಜಗದ್ಗುರುಗಳೇ ಆಗಲಿ
ಮಹಾಕವಿಗಳಿರಲಿ
ಮಂತ್ರಿವರ್ಯರಿರಲಿ
ನಿಮ್ಮ ನುಡಿಕೂರಂಬುಗಳಿಗೆ
ವಿಲಿವಿಲಿ..ಒದ್ದಾಟ, ಏದುಸಿರು ಎಲ್ಲಾ ..ಅಲ್ಲೇ!
ಕಲಿಕೆಯ ದಿನಗಳ ಜನತಾಗುರು
ಜಗಳಗಳ ಜೊತೆಯಲ್ಲಿ
ಸತ್ಯವ ಹುಡುಕಿದ ಒಂಟಿಸಲಗ
ಇನ್ನು ನಮ್ಮ ಭಾವಭಿತ್ತಿಯಲ್ಲಿ
ಉಸಿರಾಡುವ ಬಿಂಬ

ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು: ರಾಜಾರಾಂ ತಲ್ಲೂರು

ಯಾವುದೋ ಸಾಹಿತ್ಯ ಸಮ್ಮೇಳನದ ಚಪ್ಪರದಲ್ಲಿ ನನ್ನ ಇಂಗ್ಲಿಷ್ ಪ್ರೊಫೆಸರ್ ಶೇಖರ ಇಡ್ಯರ ಪುಸ್ತಕ ಮಾರಾಟ ಮಳಿಗೆಯಲ್ಲಿ ಅವರ ಸಹಾಯಕ್ಕೆ ನಿಂತಿದ್ದೆ. ಬಿ ಎಸ್ಸಿ ಮೊದಲ ವರ್ಷ ಇರಬೇಕು.

ಎಬಿವಿಪಿಯಿಂದ ಕಳಚಿಕೊಂಡು ಆಗಷ್ಟೇ ಕನ್ನಡ ಸಾಹಿತ್ಯ ಜಗತ್ತು ಪರಿಚಯ ಆಗುತ್ತಿದ್ದ ದಿನಗಳು.
ಇಡ್ಯರೂ ಇದ್ದರು. ಅವರ ಬಳಿಗೆ ಹಸಿರು ಕಂದು ಚೌಕುಳಿ ಅಂಗಿ ಧರಿಸಿದ, ಕೆದರು ತಲೆಯ, ಜೋಳಿಗೆ ಹಾಕಿದ ಒಬ್ಬರು ಬಂದು ಒಂದು ಹದಿನೈದು ನಿಮಿಷಗಳ ಕಾಲ ಹರಟಿ ಹೋದರು. ಹೋದ ಬಳಿಕ ಇಡ್ಯರು ನನ್ನಲ್ಲಿ ಅವರು ಯಾರು ಗೊತ್ತಾಯ್ತಾ? ಕೇಳಿದರು. ಇಲ್ಲ ಎಂದೆ. ಅದು ಚಂಪಾ ಅಂತ. ಚಂದ್ರ ಶೇಖರ ಪಾಟೀಲರು ಎಂದು ಹಿನ್ನೆಲೆ ಹೇಳಿ, ಪರಿಚಯಿಸಿದರು.

ಆ ಬಳಿಕ ಒಂದು ದಿನ, ಕಾಲೇಜು ಲೈಬ್ರರಿಯ ನಿಯತಕಾಲಿಕ ಸೆಕ್ಷನ್‌ನಲ್ಲಿ “ಸಂಕ್ರಮಣ” ತೆಗೆದು ತೋರಿಸಿ, ಇದು ಆ ದಿನ ನಾನು ಪರಿಚಯಿಸಿದ ಪಾಟೀಲರದು. ಓದು ಎಂದು ಕೊಟ್ಟರು.

ಅಲ್ಲಿಂದಾಚೆಗೆ ನಿಯಮಿತವಾಗಿ ಸಂಕ್ರಮಣ ನನ್ನ ಕುತೂಹಲದ ಭಾಗ ಆಗಿತ್ತು. ಲಂಕೇಶ್ – ಚಂಪಾ ಕೋಳಿ ಜಗಳಗಳು, ಬಂಡಾಯದ ಕತೆಗಳು, ಚಂಪಾ ಅವರ ಕುಕ್ಕುವ ವ್ಯಂಗ್ಯ… ಹೀಗೆ. ಆ ಬಳಿಕ ಎರಡೂ ಮೂರು ಬಾರಿ ಮಂಗಳೂರಿನ ವಿಚಾರ ಸಂಕಿರಣಗಳಲ್ಲಿ ಅವರ ಮಾತುಗಳನ್ನೂ ಕೇಳಿದ್ದೆ. ಬಹುತೇಕ ಅವರು ಕಸಾಪ ಅಧ್ಯಕ್ಷತೆ ವಹಿಸುವ ತನಕ ಅವರ ಬರಹಗಳನ್ನೂ ಹಿಂಬಾಲಿಸಿದ್ದೆ.

ಆ ಕಾಲದ “ಪ್ರಭಾವೀ” ಮಾಧ್ಯಮಗಳ ಸಂಪಾದಕರಾಗಿ ಚಂಪಾ ಅವರ ಬರಹಗಳಲ್ಲಿ ವ್ಯಂಗ್ಯದ ಮೊನಚಿಗೂ ಲಂಕೇಶರ ಬರಹಗಳಲ್ಲಿನ ವ್ಯಂಗ್ಯದ ಮೊನಚಿಗೂ ಇರುವ ವ್ಯತ್ಯಾಸ ನನಗೆ ಬಹಳ ಕೌತುಕದ್ದೆನ್ನಿಸಿತ್ತು. ಅವೆರಡರ ನಡುವೆ ಧಾರವಾಡದ ಭಾಷೆಯ ಮೊನಚೇ ನನಗೆ ಇಷ್ಟ ಆಗುತ್ತಿತ್ತು. ಲಂಕೇಶ್ ಪತ್ರಕರ್ತರಾಗಿ ನನಗೆ ಎಷ್ಟು ಬೇಸರ ತರಿಸುತ್ತಿದ್ದರೋ ಅವರ ಸಾಹಿತ್ಯದ, ಸಾಂಸ್ಕೃತಿಕ ಒಳನೋಟಗಳಿಗಾಗಿ ಅಷ್ಟೇ ಇಷ್ಟ ಆಗುತ್ತಿದ್ದರು.

ನಮ್ಮ ಪೀಳಿಗೆಯ ಓದುವ ಆಸಕ್ತಿಗೆ ಇಂತಹದೆಲ್ಲ ಸಿಕ್ಕಿತ್ತು, ಅದರಿಂದಾಗಿ ಏನೋ ಚೂರುಪಾರು ರಾಜಕೀಯ-ಸಾಮಾಜಿಕ ಪ್ರಜ್ಞೆ ಬೆಳೆಯಿತು ಎಂಬ ಬಗ್ಗೆ ಇಂದು ಹಿಂತಿರುಗಿ ನೋಡಿದಾಗ ಸಮಾಧಾನ ಇದೆ.

ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರಲ್ಲಿ ನೀವೂ ಒಬ್ಬರು. ಚಂಪಾಕಾಲಂ ಮುಗಿಸಿದಿರಿ. ಹೋಗಿಬನ್ನಿ ಸರ್.

ವಿ.ಎಲ್‌.ನರಸಿಂಹಮೂರ್ತಿ ಪೋಸ್ಟ್‌‌:

ಚರಿತಾ ಮೈಸೂರು ಅವರ ಪೋಸ್ಟ್‌:

“ಅಪರೂಪದ ನೈತಿಕ ಪ್ರಜ್ಞೆ ಮತ್ತು ನಿಷ್ಠುರತೆಯ ಪ್ರತೀಕದಂತಿದ್ದವರು ಚಂಪಾರವರು. ಒಮ್ಮೆ ಇವರನ್ನು ನೇರವಾಗಿ ಭೇಟಿಯಾಗಿ ಮಾತಾಡಬೇಕಂದುಕೊಂಡಿದ್ದು ಸಾಧ್ಯವಾಗಲಿಲ್ಲ. ದಣಿದಿದ್ದಿರಿ, ವಿಶ್ರಮಿಸಿ ಸರ್.”

ವಿವೇಕದ ಚಾಟಿ ಬೀಸಿದವರು ಚಂಪಾ: ಬಿ.ಎಲ್‌.ರಾಜು

ಕನ್ನಡ ಸಾಹಿತ್ಯ ಲೋಕದಲ್ಲಿ ವ್ಯಂಗ್ಯವನ್ನು ಪರಮ ಆಯುಧವಾಗಿ ಬಳಸಿ ಕಾವ್ಯ, ನಾಟಕಗಳನ್ನು ಕಟ್ಟಿದ ಚಂಪಾ, ಎಲ್ಲಾ ಜಡಗೊಂಡದ್ದರ ವಿರುದ್ದ ತಮ್ಮ ವಿವೇಕವನ್ನು ಚಾಟಿಯಷ್ಟು ಮೊನಚಾಗಿ ಬೀಸುತ್ತಿದ್ದರು. ಪರರನ್ನು, ತನ್ನನ್ನೂ ಒಂದೇ ತೀವ್ರತೆಯಲ್ಲಿ ಚೇಡಿಸಿಕೊಳ್ಳುತ್ತಿದ್ದರು. ಕೆಲವು ಎಡವಟ್ಟುಗಳನ್ನು ಹೊರತುಪಡಿಸಿದರೆ, ಉಳಿದಂತೆ ಎಂದೂ ಯಾವ ಮಠಪೀಠಗಳಿಗೆ ಅಡ್ಡಬಿದ್ದವರಲ್ಲ, ಜಾತಿ ಮತ್ತು ಧರ್ಮಗಳ ವಿರುದ‌್ಧ ಅತ್ಯಂತ ಖಚಿತವಾಗಿ ನಿಲ್ಲುತ್ತಿದ್ದರು. ಕನ್ನಡ ಪ್ರಜ್ಞೆಗೆ ತಮ್ಮದೇ ಕೊಡುಗೆ ಕೊಟ್ಟಿದ್ದ ಚಂದ್ರಶೇಖರ ಪಾಟೀಲರು ಈಗ ಹಠಾತ್ತನೆ ನಿರ್ಗಮಿಸಿದ್ದು ನೋವಿನ ಸಂಗತಿ.

ಅಮಿನ್‌ಮಟ್ಟು ಅವರ ಪೋಸ್ಟ್‌:

ಚಂಪಾ ಅವರ ಕೊಡುಗೆ ಗಣನೀಯ: ವಡ್ಡಗೆರೆ ನಾಗರಾಜಯ್ಯ

ಬಂಡಾಯ ಸಾಹಿತ್ಯ ಸಂಘಟನೆಯ ಪ್ರಮುಖ ರೂವಾರಿಗಳಲ್ಲೊಬ್ಬರಾಗಿ, ದಲಿತ ಸಂಘರ್ಷ ಸಮಿತಿ ಹಾಗೂ ರೈತ ಚಳವಳಿಯ ಹಿತೈಷಿ ಸ್ನೇಹಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಪರ್ಯಾಯ ರಾಜಕಾರಣದ ಚಿಂತಕರಾಗಿ, ಕವಿ- ನಾಟಕಕಾರ – ವಿಮರ್ಶಕ- ಅಂಕಣಕಾರರಾಗಿ ಪ್ರೊ.ಚಂಪಾ ಅವರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಗಣನೀಯವಾದದ್ದು. ‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎಂದು ಅವರು ಕೊಟ್ಟ ಕರೆ ಮತ್ತು ‘ಆದಿಕವಿ ಪಂಪ ಅಂತ್ಯಕವಿ ಚಂಪಾ’ ಎಂದು ಪಿ.ಲಂಕೇಶ್ ಅವರು ಕೊಟ್ಟ ವಿಡಂಬನಾತ್ಮಕ ಬಿರುದು ಅತ್ಯಂತ ಜನಪ್ರಿಯವಾಗಿರುವುದನ್ನು ಕನ್ನಡ ಜಗತ್ತು ಎಂದಿಗೂ ಮರೆಯಲಾಗುವುದಿಲ್ಲ. ಪ್ರೊ.ಚಂಪಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಚಂಪಾ ಇಲ್ಲವೆಂದರೆ ಭಣ ಭಣ: ಚಿಂತಕ ಶ್ರೀಪಾದ ಭಟ್‌

ಇತಿಹಾಸ ನಮ್ಮ ಬೆನ್ನ ಹಿಂದಿನ ಬೆಳಕು
ಅನ್ನುತ್ತಾರೆ ಕವಿಗಳು
ಅದಕ್ಕೇ ಇರಬೇಕು
ನಮ್ಮ ಎದುರಿನ ಹಾದಿಯ ಮೇಲೆ
ನಮ್ಮದೇ ಕಪ್ಪು ನೆರಳು…
ಮೌನದ ಮತ್ತು ಮಾತಿಗಿಲ್ಲ
ಮಾತು ಮುತ್ತಾಗಿ
ಮೌನವಾಗುತ್ತದೆ ಮತ್ತು ಇಳಿದಾಗ
ಮತ್ತೆ ಮಾತು….
ಕನ್ನಡ ಕಾವ್ಯದ ಭೂತ, ಭವಿಷ್ಯ ಬಣ್ಣಿಸಿ ಹೇಳೋ ಗಾಂಪಾ
ನಮ್ಮ ಆದಿಕವಿ ಪಂಪಾ
ಗುರುವೇ ಅಂತ್ಯಕವಿ ಚಂಪಾ….
— ಚಂಪಾ
ಚಂಪಾ ಅದ್ಭುತ ಕವಿ. ಅವರ ನುಡಿ ಮತ್ತು ಪದಗಳ ಆಟ ಕೇವಲ ಹನಿಗವನಗಳಂತೆ ಚಟಗಳಾಗಿರಲಿಲ್ಲ.
ಅವು ಏನನ್ನೋ ಹೇಳಲು ಚಡಪಡಿಸುತ್ತಿದ್ದವು. ಚಂಪಾ ಚಡಪಡಿಕೆಯ ಕವಿ. ಅವರ ಈ ಗುಣ ಬಂಡಾಯ ಸಾಹಿತ್ಯದ ಮಂಚೂಣಿಯಲ್ಲಿರುವಂತೆ ಪ್ರೇರೇಪಿಸಿತು. ಮತ್ತು ಎಂಬತ್ತರ ದಶಕದ ವಿದ್ಯಾರ್ಥಿಗಳಾದ ನಮ್ಮನ್ನು ಬಂಡಾಯ ಸಾಹಿತ್ಯದೊಂದಿಗೆ ಸೆಳೆದುಕೊಂಡಿದ್ದು, ನೀವು ಬರೀರಿ, ಸಂಕ್ರಮಣದಲ್ಲಿ ಹಾಕೋಣ ಅಂತ ನಮ್ಮಂತವರ ಕೈಯಲ್ಲಿ ಲಡಾಸು ಕವಿತೆಗಳನ್ನು ಬರೆಸಿ ಸಂಕ್ರಮಣದಲ್ಲಿ ಪ್ರಕಟಿಸಿದ್ದು ಎಲ್ಲವೂ ಇಂದು ಗತಕಾಲ ಪಳಿಯುಳಿಕೆಗಳಂತಿವೆ. ಚಂಪಾ ಬದುಕಿರುವವರೆಗೂ ಆ ಭೂತಕಾಲವು ಚಲಿಸಿ ವರ್ತಮಾನದಲ್ಲಿ ಆಟವಾಡುತ್ತದೆ ಎನಿಸುತ್ತಿತ್ತು. ಈಗ ಅವರಿಲ್ಲ. ಚಂಪಾ ಇಲ್ಲವೆಂದರೆ ಭಣ ಭಣ. ಆ ಖಾಲಿತನ ಮತ್ತಶ್ಟು ಕಾಡುತ್ತಲೇ ಇರುತ್ತದೆ.

ಶ್ರೀನಿವಾಸ ಕಾರ್ಕಳ ಅವರ ಪೋಸ್ಟ್‌

ದಾದಾ ಕಲಾಂದರ್‌ ಅವರ ಪೋಸ್ಟ್‌:

ಬಂಡಾಯದ ದನಿ ಮೌನವಾಯಿತು: ಸನತ್‌ಕುಮಾರ್‌ ಬೆಳಗಲಿ

“ಪ್ರೀತಿಯಿಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನೂ ಸಹ” ಎಂದು ಹೇಳಿದ ಚಂಪಾ ಎಂಬ ಬಂಡಾಯದ ಧ್ವನಿ ಇಂದು ಮೌನವಾಯಿತು.ಅವರೊಂದಿಗೆನನ್ನದು ನಲವತ್ತು ವರ್ಷಗಳ ಒಡನಾಟ.ಎಪ್ಪತ್ತರ ದಶಕದಲ್ಲಿ “ಸಂಯುಕ್ತ ಕರ್ನಾಟಕ” ದಲ್ಲಿ ನೇಮಕಗೊಂಡು ಬಿಜಾಪೂರ ದಿಂದ ಹುಬ್ಬಳ್ಳಿಗೆ ಹೋದಾಗಿನಿಂದ ಆತ್ಮೀಯ ಬಾಂಧವ್ಯ.ತೇಜಸ್ವಿ, ಲಂಕೇಶ್, ನಂಜುಂಡಸ್ವಾಮಿ,ಕೆ.ರಾಮದಾಸ ಇವರ ಸಾಲಿನಲ್ಲಿ ಸಮಾಜವಾದಿ ಚಿಂತನೆಯ ಬೆಳಕನ್ನು ಕನ್ನಡದ ಸಾರಸ್ವತ ಲೋಕದಲ್ಲಿ ಚೆಲ್ಲಿದವರು,ಕವಿ,ನಾಟಕಕಾರ,ಸಂಕ್ರಮಣ ಸಾಹಿತ್ಯ ನಿಯಕಾಲಿಕದ ಸಂಪಾದಕ ಇವೆಲ್ಲಕ್ಕೆ ಮಿಗಿಲಾಗಿ ಮನುಷ್ಯ ಪ್ರೀತಿಯ ಈ ಅಮೂಲ್ಯ ಜೀವದ ಅಗಲಿಕೆ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.”

ಹೀಗೆ ಕನ್ನಡದ ಅನೇಕ ಬರಹಗಾರರು ಚಂಪಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಚಂಪಾ ಅವರು ‘ದಿ ಸ್ಟೇಟ್‌’ ಜಾಲತಾಣಕ್ಕೆ ನೀಡಿದ್ದ ವಿಡಿಯೊ ಸಂದರ್ಶನವನ್ನು ಅನೇಕರು ಹಂಚಿಕೊಂಡಿದ್ದಾರೆ.


ಇದನ್ನೂ ಓದಿರಿ: ನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...