ಜಿ.ರಾಜಶೇಖರ್, ತಮ್ಮ ಕೊನೆಯ ದಿನಗಳಲ್ಲಿ ಅನುವಾದಿಸಿದ ರಾಮಚಂದ್ರ ಗಾಂಧಿಯವರ ‘ಸೀತೆಯ ಅಡುಗೆಮನೆ’ ಪುಸ್ತಕ ಓದಿದೆ. ಯಾವ ಬಾಬರಿ ಮಸೀದಿ ಇದ್ದ ಸ್ಥಳವನ್ನು ‘ರಾಮಜನ್ಮಭೂಮಿ’ ಎಂದು ಕರೆಯಲಾಗುತ್ತದೆಯೊ, ಅದನ್ನು ಸ್ಥಳೀಕರು ಸೀತಾಕಿ ರಸೋಯಿ ಎಂದು ಕರೆದು, ಅದರ ದರ್ಶನಕ್ಕೆ ಯಾತ್ರೆ ಬರುವುದನ್ನು ಅವರು ಮಹತ್ವದ ವಿದ್ಯಮಾನವೆಂದು ಗುರುತಿಸುತ್ತಾರೆ. ಸೀತೆಯ ಅಡುಗೆ ಮನೆಯನ್ನು ಒಂದು ರೂಪಕವಾಗಿ ಗ್ರಹಿಸುತ್ತಾರೆ. ಸುಖವೈಭವ, ಯುದ್ಧ ಸಂಪತ್ತುಗಳಲ್ಲಿ ಮುಳುಗಿರುವ ರಾಜಕುಮಾರರನ್ನು ಬುಡಕಟ್ಟು ಮಹಿಳೆಯೊಬ್ಬಳು ಆತ್ಮಶೋಧಕ್ಕೆ ಹಚ್ಚುವ ಬೌದ್ಧ ಕಥಾನಕವನ್ನು ಇದಕ್ಕೆ ಜೋಡಿಸುತ್ತಾರೆ. ಸಮಾಜದಲ್ಲಿ ‘ಅನ್ಯ’ವನ್ನು ಹುಡುಕುವ ರಾಜಕಾರಣವು ಹೇಗೆ ಹಿಂಸೆಯನ್ನು ಹುಟ್ಟುಹಾಕುತ್ತದೆ ಎಂಬುದನ್ನು ಅದ್ವೈತ ದರ್ಶನದಲ್ಲಿ ವಿಶ್ಲೇಷಿಸುತ್ತಾರೆ. ದೈನಿಕ ಬದುಕಿಗೆ ಮನುಷ್ಯರು ಮಾಡುವ ಸೆಣಸಾಟಗಳ ಮೂಲಕ ವಿರಾಟ್ ರಾಜಕಾರಣವನ್ನು ವಿಶ್ಲೇಷಿಸುವುದು ಈ ಕೃತಿಯ ಉದ್ದೇಶ. ಇದನ್ನು ಓದುವಾಗ, ನನಗೆ ವಿಶ್ವದ ಮಹತ್ತರವಾದ ಸತ್ಯಗಳನ್ನು ದೈನಿಕ ಬದುಕಿನ ವಿವರಗಳ ಮೂಲಕವೇ ಕಾಣಿಸುವ, ಅದ್ವೈತವಾದಿ ಕುವೆಂಪು ನೆನಪಾದರು. ಅವರಲ್ಲಿ ಬರುವ ಅಡುಗೆಮನೆಯ ಚಿತ್ರಗಳು ನೆನಪಾದವು.
ಮನುಷ್ಯ ಬದುಕಿಗೆ ಬೇಕಾದ ಅನ್ನ ಬಟ್ಟೆ ಮನೆಗಳಲ್ಲಿ, ಮೊದಲನೆಯ ಮೂಲಭೂತ ಅಗತ್ಯ ಪೂರೈಕೆಯಾಗುವ ಜಾಗ ಅಡುಗೆಮನೆ. ಇಷ್ಟು ಮಹತ್ವವುಳ್ಳ ಪವಿತ್ರವಾದ ಈ ಜಾಗವು, ಭಾರತೀಯ ಸಮಾಜದಲ್ಲಿ ಮಲಿನತೆಯ, ಅಡಗಿಸಬೇಕಾದ, ಗಂಡಸರು ತೊಡಗಬಾರದ, ಸ್ತ್ರೀಯರಿಗೆ ಸೀಮಿತವಾದ, ಸಾರ್ವಜನಿಕ ಬದುಕನ್ನು ನಿರಾಕರಿಸುವ ಪ್ರತೀಕವೂ ಆಗಿದೆ. ಕಟ್ಟಿಗೆ, ಒಲೆ, ಬೆಂಕಿ, ಹೊಗೆ, ಬೂದಿ, ಮುಸುರೆನೀರು, ಎಂಜಲುಪಾತ್ರೆ, ಮಸಿಬಟ್ಟೆ, ಕಪ್ಪುಹಿಡಿದ ಗೋಡೆ ಅದರ ಲಕ್ಷಣಗಳು; ಊದುಗೊಳವೆ, ಕಡೆವಕಲ್ಲು ಈಳಿಗೆಮಣಿ, ಸೌಟು, ಕತ್ತಿ, ಮಸೆಗೋಲು, ಕಡೆಗೋಲು, ಮುದ್ದೆಕೋಲು, ಪಾತ್ರೆ, ಡಬ್ಬ, ಬುಟ್ಟಿ ಅಲ್ಲಿನ ಹತ್ಯಾರಗಳು. ‘ಕಾನೂರು ಹೆಗ್ಗಡಿತಿ’ ಬಣ್ಣಿಸುವ ಸುಬ್ಬಮ್ಮನ ಅಡುಗೆಮನೆ “ಬಾಗುಮರಿಗೆ, ಉಪ್ಪಿನಮರಿಗೆ, ಕೈಯದ್ದುವ ಹಿತ್ತಾಳೆಯ ತಂಬಾಳೆ, ಸಿಕ್ಕದ ಮೇಲೆ ಮೆಣಸಿನಕಾಯಿಯ ಬುಟ್ಟಿ, ಮೊಸರುಗಡಿಗೆ ಮಜ್ಜಿಗೆ ಚರಿಗೆ ಕಡೆಗೋಲು ಕಂಬ, ತುಪ್ಪ ಬೆಣ್ಣೆ ಮೊದಲಾದವುಗಳನ್ನು ಇಟ್ಟು ಬೀಗ ಹಾಕಿ ಒಂದು ಕಲಬಿ, ಮಣೆಯ ರಾಶಿ”ಗಳಿಂದ ಕೂಡಿದ್ದು, ಪುರಾಣಪ್ರಸಿದ್ಧ ಗವಿಯನ್ನೊ ಪಾಳುಬಿದ್ದ ಗುಡಿಯನ್ನೊ ನೆನಪಿಸುತ್ತದೆ.
ಸಾಮಾನ್ಯವಾಗಿ ಅಡುಗೆ ಮನೆಗಳಲ್ಲಿ ಕುಟ್ಟುವ ಬೀಸುವ ಅರೆವ ತಿರುವುವ ಬಸಿವ ಹುರಿವ ಕರಿವ ಸುಡುವ ನೆನೆಸುವ ಕುದಿಸುವ ಕ್ರಿಯೆಗಳಿವೆ; ತುಪ್ಪಕಾಯಿಸುವಾಗ, ಮುದ್ದೆ ಹದಕ್ಕೆ ಬಂದಾಗ, ಅನ್ನ ಅರಳುವಾಗ, ಒಗ್ಗರಣೆ ಹಾಕುವಾಗ, ಪಾಯಸ ಕುದಿಯುವಾಗ, ಮೂಲಂಗಿ ಕೋಳಿ ಮೀನು ಮುಂತಾದ ಪದಾರ್ಥಗಳು ಬೇಯುವಾಗ ವಿಶಿಷ್ಟವಾದ ಪರಿಮಳಗಳು ಹೊರಡುವ ಅಲ್ಲೊಂದು ವಾಸನಾಲೋಕವಿದೆ. ಅಡುಗೆ ಮನೆ ಕಾರ ಹುಳಿ ಉಪ್ಪು ಒಗರು ಕಹಿ ಸಿಹಿ ರುಚಿಗಳು ಮಿಲನವಾಗುವ ಜಾಗ; ಕಾಡು ಕರೆ ಹೊಳೆ ಕಡಲು ಹೊಲ ಗದ್ದೆ ತೋಟಗಳಿಂದ ಉತ್ಪನ್ನವಾದ ಸರಕುಗಳು ಕೂಡುವ ಸಂಗಮ; ಅಡುಗೆ ಮಾಡುವವರು ಪರಂಪರೆಯನ್ನು ಮುಂದುವರಿಸುವ ಮತ್ತು ಹೊಸಪ್ರಯೋಗ ಮಾಡುವ ಲ್ಯಾಬೊರೇಟರಿ. ಮನೆಯವರಿಗೆ ಬೇನೆಯಾದಾಗ ಔಷಧಾಲಯವಾಗಿ ರೂಪಾಂತರಗೊಳ್ಳುವ ಜಾಗ. ಅಡುಗೆಯು, ಹಲವು ವ್ಯಂಜನಗಳು ತಮ್ಮ ಮೂಲ ಗುರುತು ಕಳೆದುಕೊಂಡು ಆದರೆ ಸತ್ವವನ್ನು ಉಳಿಸಿಕೊಂಡು ಬೆರೆಯುವ ಮತ್ತು ಮೂರನೆಯದೊಂದನ್ನು ಸೃಷ್ಟಿಸುವ ಅದ್ವೈತದ ರೂಪಕ. ಇದು ಹಲವು ರಾಗಗಳು ಬೆರೆತು ಸಂಗೀತ ಹುಟ್ಟುವ, ಅನುಭವ ಚಿಂತನೆ ಕಲ್ಪನೆ ಪಾಂಡಿತ್ಯಗಳು ಬೆರೆತು ಸಾಹಿತ್ಯ ಹುಟ್ಟುವ ಪ್ರಕ್ರಿಯೆಗೆ ಸಮಾನವಾದುದು. ಬಿಸಿಬಿಸಿಯಾಗಿರುವಾಗಲೇ ತಿನ್ನುವ ಅದರಲ್ಲೂ ರೊಟ್ಟಿ ಸಂಸ್ಕೃತಿಯಲ್ಲಿ, ಅಡುಗೆಮನೆಗಳು ಉಣ್ಣುವ ಜಾಗಗಳೂ ಹೌದು. ಜನರ ರುಚಿಮೊಗ್ಗುಗಳನ್ನು ತಣಿಸುವ ಆಹಾರ ಸಿದ್ಧಗೊಳ್ಳುವ ಇಷ್ಟೊಂದು ಸಂಕೀರ್ಣವಾದ ಆಯಾಮಗಳುಳ್ಳ ಅಡುಗೆಮನೆಗಳು ಕೀಳಾಗಿದ್ದು ಒಂದು ವೈರುಧ್ಯ.
ಆಡುಗೆಮನೆಗಳು ನಮ್ಮ ರುಚಿಪ್ರಪಂಚವನ್ನು ಮಾತ್ರವಲ್ಲ, ಕುಟುಂಬದ ಬಡತನವನ್ನೂ ಸಿರಿವಂತಿಕೆಯನ್ನೂ ಹಸಿವನ್ನೂ ತೇಗನ್ನೂ ಕಾಣಿಸುವ ಜಾಗಗಳೂ ಹೌದು. ಕೆಲವು ಸಮುದಾಯಗಳಲ್ಲಿ ಅವು ಹೊರಗಿನವರನ್ನು ಬಿಟ್ಟುಕೊಳ್ಳದ ಮಡಿಮೈಲಿಗೆಯ ತಾಣಗಳೂ ಆಗಿವೆ. ಮನೆಗೆಲಸಕ್ಕೆ ಮಹಿಳೆಯರನ್ನು ಕಟ್ಟಿಹಾಕುವ ಗಂಡಾಳಿಕೆಯ ಸಮಾಜಗಳಲ್ಲಿ ಅವು ಸೆರೆಮನೆಗಳೂ ಆಗಿವೆ. ನಮ್ಮ ಹಿರೀಕರು ‘ಏ ಮುದ್ದೆ ಕೆರೆಯೋಳಿಗೆ ಯಾಕೆ ಸ್ಕೂಲು?’ ಎನ್ನುತ್ತಿದ್ದರು. ಈಗ ಸನ್ನಿವೇಶ ಬದಲಾಗಿದೆಯಾದರೂ, ಪೂರ್ಣವಾಗಿ ಬದಲಾಗಿಲ್ಲ. ಅನೇಕ ಧಾರ್ಮಿಕ ನಾಯಕರು ಮಹಿಳೆಯರು ಮನೆಗೆ ಸೀಮಿತಗೊಳ್ಳಬೇಕೆಂದು ಘೋಷಿಸುತ್ತಲೇ ಇದ್ದಾರೆ. ಮಹಿಳೆ ಸಾರ್ವಜನಿಕ ಬದುಕಿನಲ್ಲಿದ್ದರೂ, ಅಡುಗೆ ಮನೆಯ ಹೊರೆಯನ್ನು ಹೊರಬೇಕಾದ ವಾಸ್ತವವು ಆಧುನಿಕ ಸಮಾಜದಲ್ಲಿದೆ. ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ ಈ ಮನೋಭಾವದ ಭೀಕರತೆಯನ್ನೂ ಇದರಿಂದ ಬಿಡಿಸಿಕೊಂಡು ದಂಗೆಯೇಳುವ ಹೆಣ್ಣಿನ ಚೈತನ್ಯವನ್ನೂ ಕಾಣಿಸುತ್ತದೆ. ಇದೇ ಹೊತ್ತಲ್ಲಿ ಅಡುಗೆ ಮನೆಯನ್ನು ತಮ್ಮ ಸೃಜನಶೀಲತೆಯ ಪ್ರಕಟಣೆಗೆ ರೂಪಾಂತರಿಸಿಕೊಂಡ ಮಹಿಳೆಯರೂ ಇದ್ದಾರೆ. ಅವರ ಬರೆಹದಲ್ಲಿ ಈ ಲೋಕವು ತನ್ನೆಲ್ಲ ವರ್ಣರಂಜನೆಯಲ್ಲಿ ಕಾಣಿಸುತ್ತದೆ. ಆದರೆ ಇದು ಇರುವ ವಾಸ್ತವವನ್ನೇ ಸಹನೀಯವಾಗಿಸಿಕೊಳ್ಳುವ ಅಸ್ತಿತ್ವದ ಉಪಾಯವೂ ಆಗಿದೆ.
ಇದನ್ನೂ ಓದಿ: ತೀರ್ಥಹಳ್ಳಿ: ನಾಡಗೀತೆ ತಿರುಚಿದ ವ್ಯಕ್ತಿಯಿಂದ ಕುವೆಂಪು ಕುರಿತು ಉಪನ್ಯಾಸ; ಕಾರ್ಯಕ್ರಮ ನಡೆಸದಂತೆ ಜನರ ಎಚ್ಚರಿಕೆ
ನವ್ಯ ವಿಮರ್ಶೆಯು ಮಹಿಳೆಯರ ಸಾಹಿತ್ಯದಲ್ಲಿದ್ದ ಸೀಮಿತ ಅನುಭವಲೋಕವನ್ನು ವಿಡಂಬಿಸಲು ‘ಅಡುಗೆಮನೆ ಸಾಹಿತ್ಯ’ ಎಂಬ ನಿಂದನಾತ್ಮಕ ಪರಿಭಾಷೆಯನ್ನು ಸೃಷ್ಟಿಸಿತ್ತು. ಆದರೆ ಅನುಭವಲೋಕ ಸೀಮಿತಗೊಳ್ಳಲು, ಪ್ರಧಾನಧಾರೆ ಒಪ್ಪಿರುವ ಕಲಾತ್ಮಕತೆ ಇಲ್ಲದಿರಲು, ಸಾಮಾಜಿಕ ಕಾರಣಗಳಿವೆ, ಅವುಗಳಿಗೆ ತಾವೂ ಕಾರಣರೂ ಎಂಬುದನ್ನು ಅವರು ವಿಚಾರ ಮಾಡಲಿಲ್ಲ. ಕನ್ನಡ ಸಾಹಿತ್ಯದಲ್ಲಿ ಅಡುಗೆಯನ್ನು ಸವಿಯುವ ಉಪಭೋಗದ ಚಿತ್ರಗಳು, ರೂಪಕಗಳು ಯಥೇಚ್ಛವಾಗಿವೆ. ಅಡುಗೆ ಸೃಷ್ಟಿಯಾಗುವ ವಿವರಗಳು ಕಡಿಮೆ. ತೇಜಸ್ವಿ, ಲಂಕೇಶ್ ಅನಂತಮೂರ್ತಿ ಸಾಹಿತ್ಯದಲ್ಲಿ ಅಡುಗೆಯ ದಟ್ಟವಾದ ವಿವರಗಳೇ ಇಲ್ಲ. ಫಲವಂತಿಕೆಯ ಮತ್ತು ಪೋಷಕತೆಯ ರೂಪಕವಾಗಿ ಚಿತ್ರಿತಳಾಗುವ ಲಂಕೇಶರ ‘ಅವ್ವ’ದಲ್ಲಿ ಆಕೆ ಅಡುತ್ತಿದ್ದ ಪ್ರಸ್ತಾಪವಿಲ್ಲ. ಈ ಗೈರುಹಾಜರಾತಿಗೆ ಶ್ರಮಹಂಚಿಕೆಯ ವಿಷಯದಲ್ಲಿ ಸಮಾಜದಲ್ಲಿರುವ ತಾರತಮ್ಯ ಮತ್ತು ಮೀಸಲಾತಿ ಮನೋಭಾವದಿಂದ, ಗಂಡಸರು ಅಡುಗೆಯ ಅನುಭವದಿಂದ ವಂಚಿತರಾಗಿರುವುದೂ ಒಂದು ಕಾರಣ. ಭಾರತದಲ್ಲಿ ಸಾರ್ವಜನಿಕ ಅಡುಗೆಗಳಲ್ಲಿ ಗಂಡಸರಿರುತ್ತಾರೆ. ಆದರೆ ಮನೆಯಲ್ಲಿ ಅಡುವುದು ಗಂಡಸುತನಕ್ಕೆ ಸಲ್ಲದ ಸಂಗತಿ. ಮಹಿಳೆಯರು ಮುಟ್ಟಾದಾಗ ಹೊರಗೆ ಕೂರುವ ಮನೆಗಳಲ್ಲಿ ಗಂಡಸರು ಅಡುಗೆಮನೆಗೆ ಹೋದರೂ, ಅದು ಆಪತ್ಕಾಲೀನ ಕರ್ಮದಂತೆ ಬರುತ್ತದೆ. ‘ಸಂಸ್ಕಾರ’ದಲ್ಲಿ ಪ್ರಾಣೇಶಾಚಾರ್ಯರು ರೋಗಿಷ್ಟ ಮಡದಿಗೆ ಅಟ್ಟಿ ಉಣಿಸುವ ಸನ್ನಿವೇಶವಿದ್ದರೂ, ಅಡುವ ವಿವರಗಳಿಲ್ಲ. ಆಧುನಿಕ ಸಾಹಿತ್ಯಕ್ಕೆ ಹೋಲಿಸಿದರೆ ಜನಪದ ಸಾಹಿತ್ಯವೇ ವಾಸಿ. ಅಲ್ಲಿ ಅಡುವ ವಿವರಗಳಿವೆ. ಅಡುಗೂಲಜ್ಜಿಗಳು ಚಾಣಕ್ಯನಂತಹವರಿಗೆ ಯುದ್ಧನೀತಿ ತಿಳಿಸಿಕೊಡುವ ಪ್ರಬುದ್ಧತೆ ತೋರುವ ಚಿತ್ರಣಗಳಿವೆ. ಇದು ಅಡುಗೆ ಮನೆಯೇ ಲೋಕವನ್ನು ಅರಿಯುವ ಸಾಧನವಾಗುವ ರೂಪಕವಾಗಿದೆ.
ಕನ್ನಡದಲ್ಲಿ ಅಡುಗೆಯ ವಿವರಗಳನ್ನು ಅದೊಂದು ಸೃಜನಶೀಲ ಕಲೆ ಎಂಬ ಪರಿಭಾವನೆಯಲ್ಲಿ ವೈದೇಹಿ, ಸುನಂದಾ ಕಡಮೆ, ಗೀತಾನಾಗಭೂಷಣ ಮೊದಲಾದವರು ಬರೆದರು. ಗೀತಾ ಅವರ ‘ಬದುಕು’ ಕಾದಂಬರಿಯ ತುಂಬ ಅಡುಗೆಯ ಅದರಲ್ಲೂ ಮಾಂಸದಡಿಗೆಯ ವಿವರಗಳು ತುಂಬಿವೆ. ಪುರುಷ ಲೇಖಕರಲ್ಲಿ ಈ ಜಗತ್ತನ್ನು ಶ್ರದ್ಧೆಯಿಂದ ಕಾಣಿಸಿದವರು ಕಾರಂತ ಮತ್ತು ಕುವೆಂಪು. ಕುವೆಂಪು ಸಾಹಿತ್ಯದಲ್ಲಿ ಅಡುಗೆಮನೆ ಮಾತ್ರವಲ್ಲ, ಅದಕ್ಕೆ ಲಗತ್ತಾದ ಬಚ್ಚಲುಮನೆ, ಪಾತ್ರೆ, ಕಟ್ಟಿಗೆ ಒಲೆ ಬೆಂಕಿ ಅನ್ನ ನಾಯಿ ಕೋಳಿ ಪಂಕ್ತಿ ಉಣ್ಣುವಿಕೆ ಅಲ್ಲಿನ ಪ್ರೀತಿ ಮತ್ತು ಭೇದಭಾವಗಳೆಲ್ಲ ಒಳಗೊಂಡ ವಿಶಿಷ್ಟ ಜಗತ್ತೇ ಅನಾವರಣಗೊಳ್ಳುತ್ತದೆ. ಅಡುಗೆ ಮನೆಯು ಮಹಿಳೆಯರ ಅಡಗುದಾಣವಾಗಿ ಕೂಡ ಬರುತ್ತದೆ. ಚಂದ್ರಯ್ಯಗೌಡರಿಂದ ತಪ್ಪಿಸಿಕೊಳ್ಳಲು ಸುಬ್ಬಮ್ಮ ಅಡುಗೆ ಮನೆಯಲ್ಲಿ ಅಡಗುತ್ತಾಳೆ. ಅವಳನ್ನು ಪತ್ತೆಮಾಡುವ ಗೌಡರು, ಸೌದೆಹೋಳು ತೆಗೆದುಕೊಂಡು ಬಡಿಯುತ್ತಾರೆ. ಅಡುಗೆ ಮನೆಯು ಹೆಂಗಸರ ಸಂಘರ್ಷದ ತಾಣವಾಗಿಯೂ ಅಲ್ಲಿ ಬರುತ್ತದೆ.
‘ರಾಮಾಯಣ ದರ್ಶನಂ’ನಲ್ಲಿ ಕಾಡಿನಲ್ಲಿ ಸೀತೆ ಅಡುವ ಚಿತ್ರವಿದೆ. ಆಕೆ ಹಸಿಸೌದೆಯಿಂದ ಹೊಗೆತುಂಬಿಕೊಂಡ ಪರ್ಣಶಾಲೆಯಲ್ಲಿ, ‘ಮುಳಿದೊಲೆಯ ಮೋರೆಯಂ ತಿವಿದು ಕಟ್ಟಿಗೆಯಿಂದೆ, ಕಣ್ಣೊರಸಿ, ಮೂಗೊರಸಿ, ಮೊಗಮೆಲ್ಲಮಸಿಯಾಗೆ, ಮಿಂದುಟ್ಟ ಮಸಿ ಮಾಸೆ, ಸಿಗ್ಗೇರ್‍ದು ಸಿಡುಕು’ತ್ತಾಳೆ. ಆಶ್ರಮದಿಂದ ಅಧ್ಯಯನ ಮುಗಿಸಿ ಬರುವ ರಾಮ, ಹೊಗೆಯಲ್ಲಿ ಮುಳುಗಿದ ಸೀತೆಯ ಮುಖವನ್ನು ನೋಡಿ, ಯಾವುದೊ ಮುಸಿಯ ಬಂದಿದೆಯೆಂದು ತಮಾಷೆ ಮಾಡಿ ನಗುತ್ತಾನೆ. ಆದರೆ ಹಸಿಸೌದೆ ತಂದಿದ್ದ ಲಕ್ಷ್ಮಣನ ಪ್ರತಿಕ್ರಿಯೆ: ‘ನಗಲಿಲ್ಲವನ್!’. ಅಡುಗೆ ಮನೆಯ ಕಷ್ಟಕ್ಕೆ ಮಿಡುಕುವುದು ಇಲ್ಲಿ ಲಕ್ಷ್ಮಣ. ಅವನು ಊರ್ಮಿಳೆಯನ್ನು ಸ್ಮರಿಸುತ್ತ ಒಲೆಯನ್ನು ಊದಿ ಬೆಂಕಿ ಪ್ರಜ್ವಲಿಸುವಂತೆ ಮಾಡುತ್ತಾನೆ. ಕಾವ್ಯವು ರಾಮನ ಹಾಸ್ಯಪ್ರಜ್ಞೆಯಲ್ಲಿರುವ ಅಸೂಕ್ಷ್ಮತೆಯನ್ನೂ, ಒಲೆಯನೂದುವ ಲಕ್ಷ್ಮಣನ ಸಂವೇದನಾಶೀಲತೆಯನ್ನು ಎದುರುಬದುರು ನಿಲ್ಲಿಸುತ್ತದೆ.
ಆದರೂ ಕೃತಕವೆಂದು ತೋರುವ ಈ ಅಡುಗೆಮನೆಯ ಚಿತ್ರಕ್ಕಿಂತ, ಅವರ ಕಾದಂಬರಿಗಳಲ್ಲಿವ ಚಿತ್ರಗಳು ಹೆಚ್ಚು ನೈಜವಾಗಿವೆ. ‘ಹೆಗ್ಗಡಿತಿ’ಯಲ್ಲಿ ಬರುವ ’ಕಡೆಗೋಲು ಕಂಬದ ಸಾಕ್ಷಿಯಲ್ಲಿ’ ಅಧ್ಯಾಯವು, ಕುವೆಂಪುರವರ ವಿವರಗಳ ಸೂಕ್ಷ್ಮ ಗಮನಿಸುವಿಕೆಯನ್ನು ಮಾತ್ರವಲ್ಲ, ಅಡುಗೆ ಮನೆಯೊಳಗಿನ ಮಹಿಳೆಯರ ಜಗಳಗಳ ಹಿಂದೆ ಅವರ ವೈಮನಸ್ಯಗಳಿರದೆ, ಅವು ಅದರಾಚೆಗಿನ ಗಂಡಸರ ಜಗತ್ತಿನಲ್ಲಿವೆ ಎಂದೂ ಧ್ವನಿಸುತ್ತದೆ. ಹೆಂಗಸರ ಜಗಳವು ಮನೆಯಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳಿಗೂ ವಿಸ್ತರಣೆಗೊಳ್ಳುವುದನ್ನು ಕಾಣಿಸುತ್ತದೆ. ಇಂತಹ ಜಗಳಗಳನ್ನು ತಲೆಮಾರುಗಳ ಕಾಲ ಕಂಡಿರುವ ಕಡೆಗೋಲು ಕಂಬಕ್ಕೆ ಮಾತು ಬಂದರೆ “ರಾಮಾಯಣ ಮಹಾಭಾರತಗಳಿಗಿಂತಲೂ ದೊಡ್ಡ ಪುರಾಣವಾಗಿ ಹೋಗುತ್ತದೆ. ಅಯ್ಯೊ! ನಾವು ರಾಮ ಸೀತೆ ಹನುಮಂತ ರಾವಣ ಪಂಚಪಾಂಡವರು ಕೃಷ್ಣ ಕೌರವ ದ್ರೌಪದಿ ಇವರುಗಳ ಕಥೆಯೇ ಹೆಚ್ಚೆಂದು ತಿಳಿದಿದ್ದೆವಲ್ಲಾ!” ಎಂದು ವಾಲ್ಮೀಕಿ ವ್ಯಾಸಾದಿ ಕವಿವರ್ಯರೂ ನಾಚಿ ತಲೆಬಾಗಬೇಕಾಗುತ್ತದೆ ಎಂದು ವ್ಯಾಖ್ಯಾನಿಸುತ್ತದೆ.
ಇದನ್ನೂ ಓದಿ: ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..
ಇಲ್ಲಿ ಅಡುಗೆಮನೆಯ ಮೂಲಕ ಪ್ರಕಟವಾಗುತ್ತಿರುವ ಮಲೆನಾಡಿನ ಸಾಮಾನ್ಯ ಮಹಿಳೆಯರ ಜಗತ್ತು, ಪುರಾಣ ಮಹಾಕಾವ್ಯಗಳ ಜೀವನಕ್ಕೇರುತ್ತಿದೆ; ಜತೆಗೆ ಒಲೆಯ ಬೆಂಕಿಯು “ಪುಣ್ಯ ಯಾಗಗಳಲ್ಲಿ ಪೂತ ಹವಿಸ್ಸನ್ನು ಆಸ್ವಾದಿಸಿದ್ದ ಪಾವನ ಪವನಸಖನು ಕಲಿಯುಗದ ಮಹಿಮೆಯಿಂದಲೊ ಎಂಬಂತೆ ಕಾನೂರು ಸುಬ್ಬಮ್ಮನ ಕೈಗೆ ಬಿದ್ದು ಕಲ್ಲುಗಡಿಗೆಯ ಬೆನ್ನು ನೆಕ್ಕು ಪತಿತ ಕರ್ತವ್ಯದಲ್ಲಿ ತನ್ಮಯನಾಗುವ” ಅವಸ್ಥೆಗೆ ಇಳಿಯುತ್ತದೆ. ಸಾಮಾನ್ಯತೆಯ ಈ ಏರಿಕೆ ಮತ್ತು ಅಸಾಮಾನ್ಯತೆಯ ಈ ಇಳಿಕೆಗಳು, ಕುವೆಂಪು ಅವರ ಸಮಾಜವಾದಿ ಜೀವನದರ್ಶನದ ಭಾಗವಾಗಿವೆ. ಅವರ ಸಾಹಿತ್ಯದಲ್ಲಿ ಅಡುಗೆಮನೆ ಕೇವಲ ಒಂದು ಸ್ಥಳವಲ್ಲ. ಅದೊಂದು ಬಂಧನ-ಬಿಡುಗಡೆಯ, ಸೃಜನಶೀಲತೆ-ಕೇಡುಗಳ ಸಂಕೀರ್ಣ ಜಗತ್ತು. ದೈನಿಕ ಬದುಕಿನ ಮೂಲಕವೇ ದೊಡ್ಡ ಸತ್ಯವನ್ನು ಹೇಳುವ ಅವರ ಬರೆಹದ ಮೀಮಾಂಸೆ ಕೂಡ. ಕುವೆಂಪು ಅವರು ಬದುಕಿನ ವಿವರಗಳ ಮೂಲಕ ಹೇಳುವುದನ್ನು ರಾಮಚಂದ್ರ ಗಾಂಧಿಯವರು, ದಾರ್ಶನಿಕ ಜಿಜ್ಞಾಸೆಯ ಮೂಲಕ ಹೇಳುತ್ತಾರೆ. ಇಬ್ಬರೂ ಅದ್ವೈತಿಗಳೇ ಆಗಿರುವುದು ಆಕಸ್ಮಿಕವಲ್ಲ.

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


