Homeಕರ್ನಾಟಕಕುವೆಂಪು ವರ್ಣಾಶ್ರಮ ಪದ್ಧತಿಯನ್ನು ಒಪ್ಪಿ ಬೆಂಬಲಿಸಿದ್ದರು: ರೋಹಿತ್ ಚಕ್ರತೀರ್ಥ ಭಾಷಣಕ್ಕೆ ವ್ಯಾಪಕ ಖಂಡನೆ

ಕುವೆಂಪು ವರ್ಣಾಶ್ರಮ ಪದ್ಧತಿಯನ್ನು ಒಪ್ಪಿ ಬೆಂಬಲಿಸಿದ್ದರು: ರೋಹಿತ್ ಚಕ್ರತೀರ್ಥ ಭಾಷಣಕ್ಕೆ ವ್ಯಾಪಕ ಖಂಡನೆ

- Advertisement -
- Advertisement -

ಕುವೆಂಪುರವರನ್ನು ಅವಮಾನಿಸಿದ್ದ ರೋಹಿತ್ ಚಕ್ರತೀರ್ಥರವರು ತೀರ್ಥಹಳ್ಳಿಯಲ್ಲಿ ನಡೆದ ‘ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಪ್ರತಿಭಟನೆಗಳು ನಡೆದಿದ್ದವು. ವಿರೋಧದ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಹಿತ್ ಚಕ್ರತೀರ್ಥರವರು ತಮ್ಮ ಉಪನ್ಯಾಸದಲ್ಲಿ “ಕುವೆಂಪು ವರ್ಣಾಶ್ರಮ ಪದ್ಧತಿಯನ್ನು ಒಪ್ಪಿ ಬೆಂಬಲಿಸಿದ್ದರು” ಎಂದು ಉಲ್ಲೇಖಿಸಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

“ವೇದ, ಪುರಾಣಗಳನ್ನು ರಾಷ್ಟ್ರಕವಿ ಕುವೆಂಪು ವಿರೋಧಿಸಿರಲಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಅವರು ಒಪ್ಪಿ ಬೆಂಬಲಿಸಿದ್ದರು. ವರ್ಣಾಶ್ರಮ ಪದ್ಧತಿ ಧಾರ್ಮಿಕತೆಗೆ ಪೂರಕವಾಗಿದೆ. ಸಂಸ್ಕಾರ, ಸಂಸ್ಕೃತಿಗಳನ್ನು ಒಳಗೊಳ್ಳದ ಕುಟುಂಬಗಳು ಸುಡುಗಾಡಿಗಿಂತಲೂ ಕೀಳು ಎಂದು ಕುವೆಂಪು ಪ್ರತಿಪಾದಿಸಿದ್ದರು” ಎಂಬ ಚಕ್ರತೀರ್ಥರ ಭಾಷಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಲೇಖಕ ಮತ್ತು ವ್ಯಂಗ್ಯ ಚಿತ್ರಕಾರ ಪಂಜು ಗಂಗೊಳ್ಳಿಯವರು ರೋಹಿತ್ ಚಕ್ರತೀರ್ಥರ ಭಾಷಣವನ್ನು ಖಂಡಿಸಿ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಸುಳ್ಳುಬುರುಕನೊಬ್ಬ ನಿನ್ನೆ ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುವೆಂಪು ವರ್ಣಾಶ್ರಮ ಪದ್ಧತಿಯನ್ನು ಒಪ್ಪಿ ಬೆಂಬಲಿಸಿದ್ದರು ಎಂದು ಹೇಳಿದ್ದನಂತೆ. ಆ ಕಾರ್ಯಕ್ರಮದಲ್ಲಿದ್ದ ಯಾರಾದರೂ ಅದನ್ನು ಅಲ್ಲಿಯೇ ವಿರೋಧಿಸಿದ್ದರೇ ಇಲ್ಲವೋ ತಿಳಿಯದು. ಆದರೆ, ವರ್ಣಾಶ್ರಮ ಪದ್ಧತಿ ಬಗ್ಗೆ ಕುವೆಂಪುರವರ ಅಭಿಪ್ರಾಯವನ್ನು ಕೆ.ಪಿ.ನಟರಾಜ್ ರವರು ಇಲ್ಲಿ ಹಂಚಿಕೊಂಡಿದ್ದಾರೆ. “ವಿಶ್ವ ಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವ ಪ್ರಣಾಳಿಕೆ ಸಂಪಾದಿಸಿ, “ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು” ಎಂದು ಕುವೆಂಪು ಹೇಳಿದ್ದರು ಎಂದು ಬರೆದಿದ್ದಾರೆ.

ಮುಂದುವರೆದು, ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.
ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು. ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು” ಎಂದಿದ್ದಾರೆ.

ನಾನು ಹಿಂದೂ ಅಲ್ಲ – ಕುವೆಂಪು

“ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ? ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇಃ ಇನ್ನು ಗೋವು, ಕಡಿಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ? ಬೇರೆ ಪ್ರಾಣಿಗಳೇನು ಪಾಪ ಮಾಡಿದ್ದಾವೆ? ಅವೂ ಅಷ್ಟೇ ಮುಖ್ಯ. ಪೂಜೆ, ಪುನಸ್ಕಾರ, ವಿಧಿ ಇಂಥವುಗಳನ್ನು ಮಾಡೋರು ಹಿಂದುಗಳಾದರೆ, ಇದಾವುದನ್ನೂ ನಾನೂ ಮಾಡೋದಿಲ್ಲ. ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ” ಎಂಬ ಕುವೆಂಪುರವರ ಬರಹ ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ.

ಧರಣಿಯ ಅಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಉಬ್ಬರದಿ ಹೆಚ್ಚಿಹುದು ಅರಿನೃಪಾಲರ ಯುದ್ಧಪರಿಯಂತ
ಜರಿದು ನಸಿವುದು, ವಾಹಿನಿಗೆ ಮಲೆತ
ಉರಿಮಳಲ ಕಟ್ಟೆಯವೋಲ್ ಆದನರಿದ
ಅರಸುಗಳು ವರ್ಣೋತ್ತಮಠ ದೆಸೆಗೆ ಅಂಜಬೇಕೆಂದ

ಇದರ ಅರ್ಥ ಅರಸನಾದವನು ಯಾವಾಗಲೂ ವರ್ಣೋತ್ತಮರಿಗೆ ಹೆದರಿಕೊಂಡಿರಬೇಕು ಎಂಬುದು. ಒಂದು ವೇಳೆ ಅವನೇನಾದರೂ ಅವರ ವಿರೋಧ ಮಾಡಿಕೊಂಡರೆ ಪ್ರವಾಹಕ್ಕೆ ಕೊಚ್ಚಿ ಹೋಗುವ ಮಳಲ ಕಟ್ಟೆಯಂತೆ ಅವರ ಸ್ಥಿತಿ. ನಾನು ಸುಮ್ಮನೆ ಅಲ್ಲಿ ಇಲ್ಲಿ ಒಂದೆರಡು ಉದಾಹರಣೆಗಳನ್ನು ಹೇಳಿದ್ದೇನೆ ಅಷ್ಟೆ. ಆದರೆ ಇಂಥದ್ದು ನಮ್ಮಲ್ಲಿ ರಾಶಿರಾಶಿಯಾಗಿದೆ. ಕೆಲವು ದಿನಗಳ ಹಿಂದೆ ಶ್ರೀ ಬಸವಲಿಂಗಪ್ಪನವರು ‘ಬೂಸ’ ಎಂದು ಹೇಳಿದರಲ್ಲ; ಇದೆಲ್ಲಾ ಆ ಬೂಸಾಕ್ಕೆ ಸೇರುತ್ತದೆ. ಯಾರೋ ಒಬ್ಬರು ಕೇಳಿದರು, ಕುಮಾರವ್ಯಾಸ ಭಾರತಕ್ಕೆ ನೀವೂ ಒಬ್ಬರು ಸಂಪಾದಕರು, ಇದನ್ನೆಲ್ಲಾ ಸೇರಿಸಿಬಿಟ್ಟಿದ್ದೀರಲ್ಲಾ ಎಂದು, ನಮ್ಮ ದೃಷ್ಟಿ academic ಎಂದು ಹೇಳುತ್ತಾರಲ್ಲ ಆ ತರಹದ್ದು. ನಾಳೆ ನೀವು ಯಾರಾದರೂ ಇದನ್ನು ಪಠ್ಯಪುಸ್ತಕವಾಗಿ ಮಾಡಬೇಕಾದರೆ ಇದನ್ನೆಲ್ಲಾ ತೆಗೆದುಬಿಟ್ಟು ನಿಜವಾದ ಕಾವ್ಯದ ಅಂಶ ಏನಿದೆಯೊ ಅದನ್ನು ಮಾತ್ರ ಉಳಿಸಬೇಕಾಗುತ್ತದೆ – ಹೀಗೆ ಹೇಳಿದವರು ಕುವೆಂಪು.. ಎಂದು ಪ್ರಸನ್ನ ಲಕ್ಷ್ಮೀಪುರರವರು ಪೋಸ್ಟ್ ಮಾಡಿದ್ದಾರೆ.

ಕುವೆಂಪುವನ್ನು ಅವಮಾನಿಸುವ ಅತ್ಯುತ್ತಮ ಉಪಾಯವೆಂದರೆ ಕುವೆಂಪು ನಿಂದಕನಿಂದ, ಕುವೆಂಪು ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಇಲ್ಲದವನಿಂದ, ಕುವೆಂಪು ಚಿಂತನೆಯನ್ನು ಅಪಹಾಸ್ಯ ಮಾಡುವವನಿಂದ (ವಿರೋಧ, ಟೀಕೆ, ವಿಮರ್ಶೆಯಲ್ಲ; ವಿರೋಧ, ಟೀಕೆ, ವಿಮರ್ಶೆ ಯಾರೂ ಮಾಡಬಹುದು. ಅದು ತಪ್ಪಲ್ಲ. ಯಾರೂ ವಿಮರ್ಶಾತೀತರಲ್ಲ) ಕುವೆಂಪು ಬಗ್ಗೆ ಭಾಷಣ ಮಾಡಿಸುವುದು.
ಇಂತಹ ಒಂದು ಕಾರ್ಯಕ್ರಮ ಕುವೆಂಪು ಊರಿನಲ್ಲಿಯೇ ನಡೆಯಬೇಕೇ !!? ತೀರ್ಥಹಳ್ಳಿ ಯಾಕೆ ಹೀಗಾಯಿತು?!! ಎಂದು ಚಿಂತಹ ಶ್ರೀನಿವಾಸ ಕಾರ್ಕಳರವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತೀರ್ಥಹಳ್ಳಿ: ನಾಡಗೀತೆ ತಿರುಚಿದ ವ್ಯಕ್ತಿಯಿಂದ ಕುವೆಂಪು ಕುರಿತು ಉಪನ್ಯಾಸ; ಕಾರ್ಯಕ್ರಮ ನಡೆಸದಂತೆ ಜನರ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...