Homeಕರ್ನಾಟಕತೀರ್ಥಹಳ್ಳಿ: ನಾಡಗೀತೆ ತಿರುಚಿದ ವ್ಯಕ್ತಿಯಿಂದ ಕುವೆಂಪು ಕುರಿತು ಉಪನ್ಯಾಸ; ಕಾರ್ಯಕ್ರಮ ನಡೆಸದಂತೆ ಜನರ ಎಚ್ಚರಿಕೆ

ತೀರ್ಥಹಳ್ಳಿ: ನಾಡಗೀತೆ ತಿರುಚಿದ ವ್ಯಕ್ತಿಯಿಂದ ಕುವೆಂಪು ಕುರಿತು ಉಪನ್ಯಾಸ; ಕಾರ್ಯಕ್ರಮ ನಡೆಸದಂತೆ ಜನರ ಎಚ್ಚರಿಕೆ

- Advertisement -
- Advertisement -

ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ತಿರುಚಿದ ಆರೋಪವನ್ನು ಎದುರಿಸುತ್ತಿರುವ ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ಅವರಿಂದ ಕುವೆಂಪು ಕುರಿತು ವಿಶೇಷ ಉಪನ್ಯಾಸವನ್ನು ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

“ಕುವೆಂಪು ಅವರಿಗೆ ಅಗೌರವ ತೋರಿಸಿದ ವ್ಯಕ್ತಿ ಈ ಕಾರ್ಯಕ್ರಮಕ್ಕೆ ಬಂದರೆ ಮಸಿ ಬಳಿಯಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ‘ಗೋಬ್ಯಾಕ್‌’ ಎಂಬ ಪೋಸ್ಟರ್‌ಗಳು ಹರಿದಾಡುತ್ತಿವೆ.

‘ಕಡಗೋಲು ವಿಚಾರ ಮಂಥನ ವೇದಿಕೆ’ ಎಂಬ ಸಂಘಟನೆಯು ಡಿಸೆಂಬರ್‌ 28ರಂದು ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ‘ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ’ ಆಯೋಜಿಸಿದೆ. ತೀರ್ಥಹಳ್ಳಿ ಮಾಜಿ ಶಾಸಕರಾದ ಕಡಿದಾಳ್‌ ದಿವಾಕರ್‌ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ‘ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ’ ಎಂಬ ವಿಷಯದ ಕುರಿತು ರೋಹಿತ್‌ ಚಕ್ರತೀರ್ಥ ಮಾತನಾಡಲಿದ್ದಾರೆ. ಡಾ.ಜೀವಂಧರ್‌ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಉದ್ಘಾಟಕರನ್ನಾಗಿ ಮಾಜಿ ವಿಧಾನಸಭಾ ಸದಸ್ಯರಾದ ಕಡಿದಾಳ್ ದಿವಾಕರ್‌ ಅವರನ್ನು ಆಹ್ವಾನಿಸಿರುವುದಕ್ಕೂ ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ್ ಹೆಗ್ಡೆ ಪ್ರತಿಕ್ರಿಯಿಸಿ, “ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ, ಶ್ರೀ ನಾರಾಯಣ ಗುರುವಿನ ಬಗ್ಗೆ ಪಠ್ಯ ಪುಸ್ತಕ ವಿಚಾರದಲ್ಲಿ ತಿರುಚಿ, ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಮಾಡಲು ಹೊರಟಿರುವ ಬಿಜೆಪಿ ಪ್ರಯೋಜಿತ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಬಹಿಷ್ಕಾರ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

ತೀರ್ಥಹಳ್ಳಿಯ ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಹಾಬಲೇಶ್, “ನಮ್ಮ ತಾಲೂಕಿನ ಹೆಮ್ಮೆಯ ಪುತ್ರ, ರಾಷ್ಟ್ರದ ಕವಿ ಕುವೆಂಪು ಅವರಿಗೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದು ನಮ್ಮ ತಾಲೂಕಿನ ಜನರಿಗೆ ಮಾಡಿದ ಅಪಮಾನ. ಅದರಿಂದ ಅವರು ನಮ್ಮ ತಾಲೂಕಿಗೆ ಬರುವ ನೈತಿಕತೆ ಕಳೆದುಕೊಂಡಿದ್ದು ಅವರ ಆಗಮನಕ್ಕೆ ನಮ್ಮ ಹಾಗೂ ತಾಲೂಕಿನ ಜನತೆಯ ವಿರೋಧವಿದೆ. ವಿರೋಧದ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿದರೆ ನಾವು ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.

ಒಕ್ಕಲಿಗರ ಸಂಘದ ಬಾಳೆಹಳ್ಳಿ ಪ್ರಭಾಕರ್ ಪ್ರತಿಕ್ರಿಯಿಸಿ, “ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಆಗಮಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಏನೆಲ್ಲಾ ಮಾಡಬೇಕೋ ಅದನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ನಮ್ಮ ನಾಡಿನ ಮೇರು ಕವಿಯನ್ನು ಚಕ್ರತೀರ್ಥ ಅವಮಾನ ಮಾಡಿದ್ದಾರೆ. ಕುವೆಂಪು ಅವರ ಬಗ್ಗೆ ನಾವು ಶಾಲೆಗಳಿಂದಲೂ ಕೂಡ ಓದಿ ಅವರ ಬಗ್ಗೆ ಕೇಳಿ ಅದನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದೇವೆ. ಈಗಲೂ ಸಮಯಾವಕಾಶ ಇದ್ದು ರಾಷ್ಟ್ರಕವಿಯನ್ನು ಅವಮಾನ ಮಾಡಿದಂತಹ ರೋಹಿತ್ ಚಕ್ರತೀರ್ಥರನ್ನು ಕರೆಸದಂತೆ ರಾಮೇಶ್ವರ ದೇವರು ಬಿಜೆಪಿಯವರಿಗೆ ಬುದ್ದಿ ನೀಡಲಿ” ಎಂದು ಆಶಿಸಿದ್ದಾರೆ.

ಹಿಂದುಳಿದ ವರ್ಗದ ಯುವ ನಾಯಕ, ಪ್ರಗತಿಪರ ಚಿಂತಕ ಪಡುವಳ್ಳಿ ಹರ್ಷೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, “ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಡುವ ಅವಶ್ಯಕತೆಯೇ ಇಲ್ಲ. ಆತ ಬಂದರೆ ಬಿಜೆಪಿಯವರು ಕುವೆಂಪು ಅವರಿಗೆ ಮಾಡುವ ಅವಮಾನವಾಗುತ್ತದೆ” ಎಂದಿದ್ದಾರೆ.

ಲೇಖಕರಾದ ನೆಂಪೆ ದೇವರಾಜ್ ವಿರೋಧ ವ್ಯಕ್ತಪಡಿಸಿದ್ದು, “ಭಾರತ ಜನನಿಯ ತನುಜಾತೆ ಎನ್ನುವ ಕವಿತೆಯನ್ನು ದೇಶಕ್ಕೆ ನೀಡಿದ ಕವಿಯನ್ನು ಅವಮಾನ ಮಾಡಿ ಆ ಸಾಹಿತ್ಯವನ್ನೇ ತಿರುಚಿದ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸುತ್ತಿದ್ದಾರೆ. ರಾಜಕೀಯ ಅಜೆಂಡಾ ಏನೇ ಇದ್ದರೂ ಚುನಾವಣೆಯಲ್ಲಿ ತೋರಿಸಿ. ಆದರೆ ಕುವೆಂಪು ಅವರ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಚಕ್ರತೀರ್ಥರನ್ನು ಆಯ್ಕೆ ಮಾಡಿದ್ದೇ ಡಬಲ್ ಇಂಜಿನ್ ಸರ್ಕಾರ ಮಾಡಿರುವ ತಪ್ಪು. ತನ್ನ ತಪ್ಪುಗಳನ್ನು ಬಿಜೆಪಿಯವರು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಕುವೆಂಪು ಅವರನ್ನು ಅವಮಾನ ಮಾಡಿರುವ ಚಕ್ರತೀರ್ಥ ಈ ತಾಲೂಕಿಗೆ ಕಾಲಿಡಬಾರದು” ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಕಡಿದಾಳ್ ದಿವಾಕರ್‌ ಅವರಿಗೆ ಪತ್ರ

ತೀರ್ಥಹಳ್ಳಿ ಸಮಾನ ಮನಸ್ಕ ಸ್ನೇಹಿತರ ಬಳಗವು ಮಾಜಿ ವಿಧಾನ ಪರಿಷತ್‌ ಸದಸ್ಯರಾದ ಕಡಿದಾಳ್ ದಿವಾಕರ್‌ ಅವರಿಗೆ ಪತ್ರ ಬರೆದಿದೆ. “ಕುವೆಂಪು ವಿರೋಧಿ ವ್ಯಕ್ತಿ ಪಾಲ್ಗೊಳ್ಳುವ ಕಾರ್ಯಕ್ರಮವನ್ನು ತಾವು ಉದ್ಘಾಟಿಸಬಾರದು” ಎಂದು ಆಗ್ರಹಿಸಲಾಗಿದೆ.

“28-12-2022ರಂದು ತೀರ್ಥಹಳ್ಳಿಯಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮಕ್ಕೆ ಉಧ್ಘಾಟಕರಾಗಿ ನೀವು ಆಯ್ಕೆ ಆಗಿರುವುದು ತಿಳಿದು ಬಂದಿದೆ. ಬಹುಶಃ ತಾವು ಸಕ್ರಿಯ ರಾಜಕಾರಣದಿಂದ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಬಹಳ ಕಾಲದಿಂದ ದೂರ ಇರುವ ಹಿನ್ನೆಲೆಯಲ್ಲಿ ಕೆಲವೊಂದು ರಾಜಕೀಯ ಬೆಳವಣಿಗೆಗಳು ಏನೇನು ನಡೆದಿದೆ ಎಂದು ತಮಗೆ ಅರಿವಿಗೆ ಬಂದಿರುವುದಿಲ್ಲ ಎಂದುಕೊಳ್ಳುತ್ತೇವೆ. ನೀವು ಉದ್ಘಾಟಕರಾಗಿ ಆಯ್ಕೆ ಆಗಿರುವ ಕಾರ್ಯಕ್ರಮದಲ್ಲಿ ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳುವ ರೋಹಿತ್ ಚಕ್ರತೀರ್ಥ ಎಂಬವರ ಪರಿಚಯ ತಮಗೆ ಇದ್ದಂತಿಲ್ಲ. ವೈಚಾರಿಕರ ವಲಯದಲ್ಲಿ ಈ ಮಾಹಾನುಭಾವನನ್ನು ಕುವೆಂಪು, ತೇಜಸ್ವಿಯವರನ್ನ ಅವಹೇಳನ ಮಾಡಿದ ವ್ಯಕ್ತಿ ಎಂದೇ ಗುರುತಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಈತ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕರ್ನಾಟಕ ನಾಡಧ್ವಜವನ್ನು ತನ್ನ ಒಳವಸ್ತ್ರಕ್ಕೆ ಹೋಲಿಕೆ ಮಾಡಿದ ಕುಖ್ಯಾತಿ ಹೊಂದಿರುತ್ತಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ಯಾವುದೇ ಶೂದ್ರ, ದಲಿತ ಸಮುದಾಯದ ಪ್ರತಿಭೆಗಳು ಈ ವ್ಯಕ್ತಿಗೆ ಕಾಲ ಕಸ. ಇಂತಹ ಕುಖ್ಯಾತಿಗಳಿಂದಲೇ ಇವರನ್ನು ಬಿಜೆಪಿ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯನನ್ನಾಗಿ ಮಾಡಿದೆ. ಸಾಲದೆಂಬಂತೆ ಇತ್ತೀಚೆಗೆ ಅತಿ ದೊಡ್ಡ ವಿವಾದಕ್ಕೆ ಕಾರಣವಾದ ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಆದ ಅದ್ವಾನಗಳಿಗೆ ಈ ವ್ಯಕ್ತಿಯೇ ನೇರ ಹೊಣೆಯಾಗಿದ್ದಾರೆ. ಪರಿಷ್ಕರಣೆ ನೆಪದಲ್ಲಿ ಶಾಲಾ ಪುಸ್ತಕವನ್ನು ಆರ್‌ಎಸ್‌ಎಸ್‌ನ ಶಾಖಾ ಪುಸ್ತಕವನ್ನಾಗಿ ಮಾಡಿ ಪಠ್ಯಪುಸ್ತಕ ಕೇಸರೀಕರಣಕ್ಕೆ ಇವರು ಕೈ ಇಟ್ಟಿದ್ದು ಇಡೀ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದನ್ನು ರಾಜ್ಯವ್ಯಾಪಿ ಪ್ರಜ್ಞಾವಂತ ಸಮಾಜ ಖಂಡಿಸಿದ್ದು ಕೂಡಾ ಇನ್ನೂ ಯಾರೂ ಮರೆತಿಲ್ಲ” ಎಂದು ನೆನಪಿಸಿದೆ.

“ಇಲ್ಲಿ ಕುವೆಂಪು ಆದಿಯಾಗಿ ಯಾರೂ ಪ್ರಶ್ನಾತೀತರಲ್ಲ. ಆದರೆ ಕುವೆಂಪು ಅವರ ವ್ಯಕ್ತಿತ್ವಕ್ಕೆ ಯಾವ ವಿಚಾರದಲ್ಲೂ ಸರಿಸಮನಾಗದ ಈ ವ್ಯಕ್ತಿ ಸೈದ್ಧಾಂತಿಕ ದ್ವೇಷದ ಕಾರಣಕ್ಕೆ ಕುವೆಂಪು, ತೇಜಸ್ವಿಯಂತಹವರ ವಿಚಾರದಲ್ಲಿ ನಿರಂತರವಾಗಿ ವಿಷ ಕಾರಿಕೊಂಡೇ ಬಂದಿದ್ದಾರೆ. ಕುವೆಂಪು ಪದ್ಯಗಳನ್ನು ಇಟ್ಟು ಅವರನ್ನು ಕಟುವಾಗಿ ಟೀಕಿಸಿಕೊಂಡು ಬಂದಿದ್ದಾರೆ. ಕುವೆಂಪು ಮಾತ್ರವಲ್ಲ, ಅಂಬೇಡ್ಕರ್, ಬುದ್ಧ, ಗುರುನಾನಕ್, ಬಸವ ಶರಣರಾದಿಯಾಗಿ ಅನೇಕರ ಸಾಮಾಜಿಕ ಕಾರ್ಯಗಳನ್ನು ಕೆಟ್ಟದಾಗಿ ಬಿಂಬಿಸಿ ಬರೆದುಕೊಂಡು, ಟೀಕಿಸಿಕೊಂಡು ಈ ವ್ಯಕ್ತಿ ಬಂದಿದ್ದಾರೆ. ಬಹುಶಃ ಇವರ ಕೆಟ್ಟ ಕೆಲಸಗಳ ಬಗ್ಗೆ ವಿವರಿಸುತ್ತಾ ಹೋದರೆ ಸಮಯ ಸಾಲುವುದಿಲ್ಲ. ಅಂದಹಾಗೆ ನೀವು ಉದ್ಘಾಟಕರಾಗಿ ಆಯ್ಕೆ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರು ಪ್ರತಿಭಟನೆ ಬಿಸಿ ಮುಟ್ಟಿಸಲಿದ್ದಾರೆ. ಕಡಿದಾಳ್ ದಿವಾಕರ್ ಅವರೆ, ನಿಮ್ಮ ಸೈದ್ಧಾಂತಿಕ ಬದ್ಧತೆ, ಸ್ಪಷ್ಟತೆ ಬಗ್ಗೆ ನಮಗೆ ಅಗತ್ಯವಿಲ್ಲ. ಆದರೆ ಕುವೆಂಪು, ತೇಜಸ್ವಿ, ಅಂಬೇಡ್ಕರ್, ಬುದ್ಧ, ಬಸವಾದಿ ಶರಣರ ಮೇಲೆ ನಿಮಗೆ ಕಿಂಚಿತ್ತಾದರೂ ಗೌರವ ಅಭಿಮಾನ ಇದೆ ಎಂದುಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ನೀವು ಆ ಕಾರ್ಯಕ್ರಮ ಬಹಿಷ್ಕರಿಸುವಿರಿ ಎಂದೂ ಸಹ ನಂಬಿದ್ದೇವೆ” ಎಂದು ತಿಳಿಸಲಾಗಿದೆ.

ಶಿವಶರಣರ ವಿಚಾರ ವೇದಿಕೆಯಿಂದ ಕುವೆಂಪು ಕುರಿತು ಕಾರ್ಯಕ್ರಮ

ಪ್ರಗತಿಪರ ವಿಚಾರವಂತರು ರೂಪಿಸಿರುವ ‘ಶಿವಶರಣರ ವಿಚಾರ ವೇದಿಕೆ’ ವತಿಯಿಂದ ಡಿಸೆಂಬರ್‌ 28ರಂದು ಕುವೆಂಪು ಅವರ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅಂದು ಸಂಜೆ 6 ಗಂಟೆಗೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿರುವ ಕೆಟಿಕೆ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚಿಂತಕರಾದ ಶಿವಾನಂದ ಕರ್ಕಿ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ವಕೀಲರಾದ ಸುಧೀರ್‌ ಕುಮಾರ್‌ ಮುರೊಳ್ಳಿಯವರು “ಕುವೆಂಪು ಸಾಹಿತ್ಯದಲ್ಲಿ ಸರ್ವೋದಯ ಮತ್ತು ವಿಶ್ವಪ್ರಜ್ಞೆ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಇಷ್ಟೆಲ್ಲ ವಿರೋಧದ ನಡುವೆಯೂ ಆತನನ್ನ ಬಿಜೆಪಿಯವರು ಕರೆಸಿ ಕಾರ್ಯಕ್ರಮ ಮಾಡಿದರೆ ಖಂಡಿತವಾಗಿಯೂ ಅವರ ಅಧಃಪತನದ ಮುನ್ನುಡಿಯನ್ನ ಅವರೇ ಬರೆದುಕೊಂಡಂತಾಗುತ್ತದೆ….

  2. ಕುತಂತ್ರವನ್ನೇ ಸಿದ್ದಾಂತ ಮಾಡಿಕೊಂಡಿರುವ ಮನುವಾದಿಗಳಿಗೆ, “ನಿರಂಕುಶ ಮತಿಗಳಾಗಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿ, ವಿಶ್ವಪ್ರಜ್ಞೆಯನ್ನು ಮರೆದಿರುವ ಕುವೆಂಪು ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ.
    ಪ್ರಜ್ಞಾವಂತರು ಮನುವಾದಿಗಳ ಕುತಂತ್ರಗಳನ್ನು ಹಿಮ್ಮೆಟ್ಟಿಸಬೇಕು.

  3. Yes he is not an human and he is wild cat of rss he should not be allowed to speak on Kuvempu that too in thirthahalli, Kannadigas of surrounding places must come together and stop this animal not to speak 👏

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...