Homeಮುಖಪುಟಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

- Advertisement -
- Advertisement -

ಕಳೆದ 40 ವರ್ಷಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ ಹನುಮೇಗೌಡರು ಅಲ್ಲಿ ತಮಗಾದ ಅನುಭವಗಳನ್ನು, ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬ ಈ ಕಿರು ಹೊತ್ತಿಗೆಯಲ್ಲಿ ಅನಾವರಣ ಮಾಡಿದ್ದಾರೆ. ಸಂಘದ ಕರಾಳ ಮುಖ ಮುಚ್ಚಿಟ್ಟರೆ ಸಮಾಜಕ್ಕೆ ದ್ರೋಹ ಮಾಡಿದಂತೆ ಎಂಬ ಆತ್ಮಸಾಕ್ಷಿಗೆ ಓಗೊಟ್ಟು ಹನುಮೇಗೌಡರು ರಾಜ್ಯದ ಜನತೆಗೆ ಸತ್ಯದರ್ಶನ ಮಾಡಿಸಲು ಹೊರಟಿದ್ದಾರೆ. ಅಲ್ಲಿ ತಾವು ಅನುಭವಿಸಿದ ಮಾನಸಿಕ ಹಿಂಸೆ, ನೋವುಗಳು ಭವಿಷ್ಯದಲ್ಲಿ ಬೇರಾರಿಗೂ ಬರದಿರಲಿ ಎಂಬ ಸದುದ್ದೇಶ ಅವರದಾಗಿದೆ. ಆದ ಕಾರಣ ಆರ್‌ಎಸ್‌ಎಸ್‌ನ ಕಾನೂನು ಬಾಹಿರ ಒಳವ್ಯವಹಾರಗಳನ್ನು ಎಳೆಎಳೆಯಾಗಿ ಹೊರಹಾಕುತ್ತಿದ್ದಾರೆ. ಸಾರ್ವಜನಿಕರಿಗೆ ಸಂಘಪರಿವಾರದ ಮುಖವಾಡವನ್ನು ತೆಗೆದು ನಿಜವಾದ ಮುಖವನ್ನು ಅನಾವರಣ ಮಾಡಿದ್ದಾರೆ.

ದೇಶಭಕ್ತಿ, ಹಿಂದುತ್ವ, ಶಿಸ್ತು-ತ್ಯಾಗ-ಸೇವೆ, ನಿಸ್ವಾರ್ಥ, ಪ್ರಾಮಾಣಿಕತೆ, ಶುದ್ಧತೆ-ಬದ್ಧತೆ, ಗೋಭಕ್ತಿ ಸಂಸ್ಕೃತಿಯ ಸಂಸ್ಕಾರಗಳ ಪಡೆದಿದ್ದೇವೆಂದು, ನಿಜ ದೇಶಭಕ್ತರು ತಾವೇ ಎನ್ನುತ್ತಾ ಪರಮ ವೈಭವದ ಸ್ಥಿತಿಗೆ ಭಾರತವನ್ನು ಕೊಂಡೊಯ್ದು ರಾಮರಾಜ್ಯ ನಿರ್ಮಾಣ ಮಾಡುತ್ತೇವೆಂದು ಹೊರಟ ದೇಶೋದ್ಧಾರಕ ಭಕ್ತರು-ದೇಶದ ನಿಜ ಬೆಳವಣಿಗೆಗೆ ಕಟಿಬದ್ಧರಾದ ನಾಯಕರಿಂದ ನಿರೀಕ್ಷಿತ ಫಲ ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಬದುಕಿಗೆ ಬೇಕಾದ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಗಳಿಗೆ ಕಾರಣರಾದವರಿಂದಲೇ ರೈಲು, ವಿಮಾನ, ಬ್ಯಾಂಕು, ಮುಂತಾದ ದೇಶದ ಸ್ವತ್ತುಗಳ ಮಾರಾಟದ ಕೆಲಸಗಳನ್ನು ನೋಡುತ್ತಾ, ಇವರ ಸುಳ್ಳು ಭಾಷಣಗಳ ಕೇಳುತ್ತಾ ಅಂಧಭಕ್ತಿಯಲ್ಲಿ ಮೈಮರೆತಿದ್ದಾರೆ. ಯಾವುದೇ ’ಸಂಸ್ಕಾರವಂತರು’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದ, ಭರವಸೆಗಳ ಪೊಳ್ಳು ಭಾಷಣಗಳ ಮಾಡದ, ಅನ್ಯಪಕ್ಷದ ನಾಯಕರನ್ನ ನಿಂದಿಸುತ್ತಾ ಆತ್ಮವಂಚನೆಗೆ ಮುಂದಾಗಿದ್ದಾರೆ. ಆದರೆ, ನಿಷ್ಪಕ್ಷಪಾತಿಯಾದ ಮತ್ತು ವಿಚಾರವಂತಿಕೆಗೆ ತೆರೆದುಕೊಳ್ಳಲು ಸಾಧ್ಯವಾದ ಕೆಲವು ಸ್ವಯಂಸೇವಕರು ಈಗ ವಿಮರ್ಶೆ ಮಾಡಲು ಮುಂದಾಗಿದ್ದಾರೆ.

ಆರ್‌ಎಸ್‌ಎಸ್ ಜನತೆಗೆ ನಂಬಿಕೆ ದ್ರೋಹ ಮಾಡಿ, ಹಿಂದುತ್ವವಾದಿ ಹೆಸರಿನಲ್ಲಿ ಬಿಜೆಪಿ ಮುಖವಾಡ ಧರಿಸಿ ರಾಜ್ಯದ ಯುವಕರ ದಾರಿ ತಪ್ಪಿಸಿ, ಬಾಲಕರನ್ನು ಸೆಳೆದು ಅವರ ಚಿಂತನಾ ಶಕ್ತಿಯನ್ನು ಕುಗ್ಗಿಸಿ, ಅವರ ತಲೆಗೆ ಸುಳ್ಳಿನ ಕಂತೆಗಳನ್ನು ತುಂಬಿ, ಯುವಶಕ್ತಿಯನ್ನು ಬಳಸಿ ಬಿಸಾಡುತ್ತಿದೆ. ಕಪಟ ಗೋಭಕ್ತಿಯ ನಾಟಕ ಮಾಡುತ್ತಿದೆ. ಸಂವಿಧಾನ ವಿರೋಧಿ ಮನುಧರ್ಮವಾದಿ ಕುತಂತ್ರದ ರೂಪವಾಗಿದೆ ಆರ್‌ಎಸ್‌ಎಸ್ ಎಂದೆನ್ನುವ ಹನುಮೇಗೌಡರು ’ನಾನೇಕೆ ಈ ಪುಸ್ತಕ ಬರೆದೆ’ ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

’ಆರ್‌ಎಸ್‌ಎಸ್‌ನ ಸ್ವಯಂಸೇವಕರು ಶಿಸ್ತು-ತ್ಯಾಗ-ಸೇವೆಗೆ ಸದಾ ಸಿದ್ಧರು. ನಂಬಿಕೆ ಪ್ರಾಮಾಣಿಕತೆಗೆ ಯೋಗ್ಯರು. ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥಿಗಳಾಗಿ ಬದ್ಧತೆ-ಶುದ್ಧತೆಗಳಿಂದ ದೇಶ ಧರ್ಮಕ್ಕಾಗಿ ದುಡಿಯುತ್ತಾರೆ’ ಎಂಬುದಾಗಿ ನಮ್ಮ ಜನ ಮೆಚ್ಚುತ್ತಾರೆ. ಅದೇ ಕಾರಣಕ್ಕೆ ಸಂಘದ ವಿರೋಧಿಗಳೂ ಸಹ ಸಂಘದ ಕಾರ್ಯಶೈಲಿ, ಶಿಸ್ತು ಬದ್ಧತೆಗಳನ್ನು ಒಪ್ಪುತ್ತಾರೆ. ಇಂತಹ ಸಂಘಟನೆಯಲ್ಲಿರುವ ಶೇ.95ರಷ್ಟು ಕೆಳಹಂತದ ಸ್ವಯಂಸೇವಕರು ಇಂದಿಗೂ ಪ್ರಾಮಾಣಿಕರು ಮತ್ತು ಅಮಾಯಕರು. ಹಣವಿಲ್ಲ, ಹಣದ ಹಂಬಲವಿಲ್ಲ, ಅಧಿಕಾರದ ಅಂದಣವಿಲ್ಲ, ಜನವಿಲ್ಲ, ಜನದ ಬೆಂಬಲವಿಲ್ಲ, ಅನುಕೂಲತೆಗಳ ಸುಳಿವಿಲ್ಲ ಎಂಬ ಹಾಡಿನೊಂದಿಗೆ ಮೈಮರೆಯುವವರು ಇವರು. ಆದರೆ ಈ ಶೇ.95ರಷ್ಟಿರುವ ಸ್ವಯಂಸೇವಕರೆಲ್ಲ ಹಿಂದುಳಿದ ವರ್ಗದವರು ಮತ್ತು ಶೂದ್ರ ಜನಾಂಗದವರು ಎಂಬುದು ಇಲ್ಲಿ ಮುಖ್ಯ. ಇವರೆಲ್ಲರೂ ಸಂಘದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಸಂಘದ ಪ್ರಮುಖರನ್ನು ಪ್ರಶ್ನಿಸಬಾರದು. ಇದೊಂದು ಸರ್ವಾಧಿಕಾರಿ ಧೋರಣೆ. ಪ್ರಮುಖರ ಮಾತಿಗೆ ಮರುಮಾತಿಲ್ಲದೆ ಕೆಲಸ ಮಾಡಬೇಕು. ಒಂದು ರೀತಿಯಲ್ಲಿ ಗುಲಾಮಿ ಮನೋಭಾವನೆಗೆ ಹೊಂದಿಕೊಂಡಿರಬೇಕು. ಇದನ್ನು ಹಿಟ್ಲರ್‌ನ ಸರ್ವಾಧಿಕಾರ ಮತ್ತು ಫ್ಯಾಸಿಸಂ ಎಂದು ಕರೆಯಬಹುದು. ಇಂತಹ ಸೂಕ್ಷ್ಮತೆ ಗಮನಿಸಿದವರು ಪ್ರಾರಂಭದಲ್ಲಿಯೇ ಸಂಘಟನೆಯಿಂದ ದೂರ ಸರಿಯುತ್ತಾರೆ. ಧರ್ಮ, ದೇಶ, ಹಿಂದುತ್ವ ಎಂದು ಮುಂತಾಗಿ ಕೆಲವರು ಹಲವು ವರ್ಷಗಳ ಕಾಲ ಸಹಿಸಿಕೊಂಡು ಮುಂದುವರಿಯುತ್ತಾರೆ. ಮತ್ತೆ ಕೆಲವರು ಸಂಘದ ಪ್ರಮುಖರ ಮಾತಿನ ಮೋಡಿಗೆ ಒಳಗಾಗಿ ಭಕ್ತರಾಗುತ್ತಾರೆ. ಆದರೆ ಹಿಡನ್ ಅಜೆಂಡಾ ಹೊಂದಿದ ಶೇ.5ರಷ್ಟು ಸ್ವಯಂಸೇವಕರು, ಪ್ರಮುಖರು, ಕಾರ್ಯಕರ್ತರು ಮತ್ತು ಪ್ರಚಾರಕರು ಶೇ.95ರಷ್ಟು ಸ್ವಯಂಸೇವಕರನ್ನು ದುರ್ಬಳಕೆ ಮಾಡಿಕೊಂಡು ಬಳಸಿ ಬಿಸಾಡುತ್ತಿದ್ದಾರೆ. ಆ ರೀತಿ ಬಳಸಿ ಬಿಸಾಕಿದ ಕಾರ್ಯಕರ್ತರಲ್ಲಿ ನಾನೂ ಒಬ್ಬ- ಎಂದು ತಮ್ಮ ನೋವನ್ನು ವ್ಯಕ್ತಪಡಿಸಿರುತ್ತಾರೆ- ಹನುಮೇಗೌಡರು. ಹಾಗೆಯೇ ಬೃಹದಾಕಾರವಾಗಿ ಬೆಳೆದು ನಿಂತಿರುವ ಆರ್‌ಎಸ್‌ಎಸ್ ಸಂಘಟನೆಯು ಯಾವ ದಾಖಲೆಯೂ ಇಲ್ಲದ ಬೇನಾಮಿ ಸಂಘಟನೆಯಾಗಿದೆ ಎಂಬುದನ್ನು ಮನಗಾಣಿಸುತ್ತಾರೆ.

ಇದನ್ನೂ ಓದಿ: ಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

ನಾನು ಈ ಸಂಘಟನೆಗೆ ಸದಸ್ಯ ಎಂದು ದಾಖಲೆ ಒದಗಿಸಲು ಯಾವ ಕಾರ್ಯಕರ್ತನಿಗೂ ಸಾಧ್ಯವಾಗದು. ಈ ಪರಿಸ್ಥಿತಿಯಲ್ಲಿ ನಾನು ಅನುಭವಿಸಿದ ನೋವು, ಅವಮಾನ ಮತ್ತ್ಯಾರೂ ಅನುಭವಿಸಬಾರದು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೇನೆ. ಆದ್ದರಿಂದ ನಾನು ಮೌನಕ್ಕೆ ಶರಣಾಗದೆ, ದೇಶದ ಜನತೆಗೆ ಸತ್ಯ ದರ್ಶನ ಮಾಡಿಸಬೇಕು ಎಂದು ನಿರ್ಧರಿಸಿದ್ದೇನೆ. ಭವಿಷ್ಯದಲ್ಲಿ ದೇಶದ ಮಕ್ಕಳು, ಯುವಕರು ಆರ್‌ಎಸ್‌ಎಸ್ ಸಂಘಟನೆಯ ವಂಚನೆಯ ಜಾಲಕ್ಕೆ ಸಿಲುಕದೆ, ಮೋಸದ ಕೂಪಕ್ಕೆ ಬೀಳದೆ, ಬೀದಿ ಹೆಣವಾಗದೆ, ತಂದೆ ತಾಯಿಗಳ ಋಣ ತೀರಿಸಿ, ಧನ್ಯತೆ ಪಡೆಯುವಂತಾಗಲಿ ಎನ್ನುವ ಕಳಕಳಿ ನನ್ನದು. ನಾನು ಮತ್ತು ನನ್ನಂತೆ ದಾರಿ ತಪ್ಪಿದವರು ತಂದೆ ತಾಯಿಯರಿಗೆ ನೋವು ಕೊಡುವುದೂ ಬೇಡ; ಮಕ್ಕಳು ಬೀದಿ ಹೆಣವಾಗುವುದೂ ಬೇಡ; ಕೋಮು ದಳ್ಳುರಿಯಲ್ಲಿ ಸಿಲುಕಿ ಜೈಲುಪಾಲಾದ ಮಕ್ಕಳ ತಂದೆ ತಾಯಂದಿರಂತೆ ಮತ್ತ್ಯಾರೂ ನೋವಿಗೆ ಸಿಗಬಾರದೆಂಬುದು ನನ್ನ ದೃಢ ನಿಲುವಾಗಿದೆ. ಈಗಾಗಲೇ ಬೀದಿ ಹೆಣವಾಗಿ, ಜೈಲು ಪಾಲಾಗಿ, ಬಳಸಿ ಬಿಸಾಡಿದ ಮಕ್ಕಳ ನೋವಿನಲ್ಲಿ ಕೊರಗಿ ಸೊರಗಿ ಸ್ವರ್ಗವಾಸಿ ಆದವರಿಗೂ ಮುಕ್ತಿ ಸಿಗುವಂತಾಗಲಿ ಎಂಬ ಆಶಾಭಾವನೆ ನನ್ನದಾಗಿದೆ. ನನ್ನಂತೆ ನೋವುಂಡವರು, ತುಳಿತಕ್ಕೆ ಒಳಗಾದವರು, ಧ್ವನಿಕಳೆದುಕೊಂಡು ಅಸಹಾಯಕರಾಗಿರುವ ಸ್ವಯಂಸೇವಕರು ನನಗೆ ತಿಳಿಸಿದ ಒಂದಷ್ಟು ವಿಷಯಗಳನ್ನೂ ಈ ಹೊತ್ತಿಗೆಯಲ್ಲಿ ಸೇರಿಸಿರುತ್ತೇನೆ. ಅವರಿಗೂ ನ್ಯಾಯ ಸಿಗುವಂತಾಗಲಿ.

ಕುವೆಂಪು

ಹೀಗೆ ಇವತ್ತಿಗೂ ದೇಶದಲ್ಲಿ ಇದೇ ಪರಿಸ್ಥಿತಿ ಇದೆ. ಆಡಿಸುವಾತ ಬೀಳಿಸುವಾತ ’ರಿಮೋಟ್ ಕಂಟ್ರೊಲ್’ ಹಿಡಿದು ಎಲ್ಲೋ ಕುಳಿತಿರುತ್ತಾನೆ. ಅವನ ಒಂದು ಕೂದಲೂ ಕೊಂಕುವುದಿಲ್ಲ. ಆದರೆ ಸಂಘಕ್ಕೆ ಸೇರ್ಪಡೆಯಾಗಿ ಬ್ರೈನ್‌ವಾಷ್ ಆದ ಶೂದ್ರವರ್ಗದ ಕಾರ್ಯಕರ್ತರು ಹಿಂದುತ್ವ-ಬಿಜೆಪಿ ಎಂದು ತಮ್ಮ ತಮ್ಮಲ್ಲೇ ಬಡಿದಾಡಿ ಹೊಡೆದಾಡಿ ಸಾಯುತ್ತಾರೆ. ಕಾರ್ಯಕರ್ತರನ್ನು ಪ್ರಚೋದಿಸುವುದೇ ಆರ್‌ಎಸ್‌ಎಸ್‌ನ ಹುಟ್ಟುಗುಣ ಎನ್ನುತ್ತಾರೆ ಗೌಡರು. ಹೀಗೆ ಕಾರ್ಯಕರ್ತರನ್ನು ಬಲಿಗೊಟ್ಟು ಅಧಿಕಾರ ಹಿಡಿವ ಹಿಂದುತ್ವವಾದಿಗಳು ಆಮೇಲೆ ಏರಿದ ಏಣಿಯನ್ನು ಒದ್ದು ಅವರ ಕಷ್ಟನಷ್ಟದತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಈ ಕಾರಣಕ್ಕಾಗಿಯೇ ಪತ್ರಕರ್ತೆ ಗೌರಿ ಲಂಕೇಶ್ ಅವರು ’ನೀವು ಸಂಘಪರಿವಾರದ ಕೈ ಹತಾರಗಳಾಗಬೇಡಿ; ಏಳಿ, ಎಚ್ಚರಗೊಳ್ಳಿ ನಿಮ್ಮ ಹಕ್ಕುಗಳನ್ನು ಮರೆಯದಿರಿ’ ಎಂದು ಎಚ್ಚರಿಸುತ್ತಿದ್ದರು. ಅದೇ ಕಾರಣಕ್ಕೆ ಅವರು ಹಂತಕನ ಗುಂಡಿಗೆ ಬಲಿಯಾದರು. ಕೊಲೆಗಾರ ಯಾರೆಂಬುದಕ್ಕೆ ಇನ್ನೂ ವಿಚಾರಣೆಯಾಗುತ್ತಿದೆ!

ಹನುಮೇಗೌಡರು ಬಿಚ್ಚಿಡುವಂತೆ ಪ್ರತಿಪಕ್ಷದ ಹಲವಾರು ರಾಜಕಾರಣಿಗಳಿಗೂ ಕೂಡ ನಿಜವಾದ ಸಾಮಾನ್ಯ ಕಾರ್ಯಕರ್ತರ ಶುದ್ಧತೆ ಬದ್ಧತೆ ಏನೇನೂ ಇರುವುದಿಲ್ಲ; ವಿರೋಧಪಕ್ಷದಲ್ಲಿರುವಾಗ ಸಂಘಪರಿವಾರವನ್ನು ಬಾಯಿಗೆ ಬಂದಂತೆ ಅವರು ದೂಷಿಸುತ್ತಾರೆ; ಆದರೆ ಅಂಥವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಒಳಬರಮಾಡಿಕೊಂಡ ಕೂಡಲೇ ಅವರೆಲ್ಲರೂ ಸಂಪನ್ನರೂ ಶುದ್ಧರೂ ಬದ್ಧರೂ ಪ್ರಾಮಾಣಿಕರೂ ಆಗಿಬಿಡುತ್ತಾರೆ. ಇದೇ ವ್ಯಂಗ್ಯ! ಬಿಜೆಪಿಗೆ ಬಹುಮತ ಒಂದಿದ್ದರೆ ಸಾಕು; ಸಿದ್ಧಾಂತಕ್ಕೆ ತಿಲಾಂಜಲಿ ಕೊಟ್ಟರೂ ಪರವಾಗಿಲ್ಲ. ಹೀಗಾಗಿ ನಿಜವಾಗಿ ದುಡಿವ ಸ್ವಯಂಸೇವಕರನ್ನು ಆರ್‌ಎಸ್‌ಎಸ್ ಮೂಲೆಗುಂಪಾಗಿಸುತ್ತದೆ. ಇಂಥ ಕಠೋರ ಸತ್ಯಗಳಿಗೆ ಈ ಕಿರು ಪುಸ್ತಕ ಕನ್ನಡಿಯಾಗಿದೆ.

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

ಕೊನೆಯದಾಗಿ, ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬ ಪುಸ್ತಕವನ್ನು ಓದುತ್ತಿದ್ದರೆ ರಾಷ್ಟ್ರಕವಿ ಕುವಂಪು ಅವರು 1967ರಲ್ಲಿ ಬರೆದ ಪ್ರೇತ-ಕ್ಯೂ ಕವನ ಸಂಕಲನದ ’ಬ್ರಾಹ್ಮ ನಾಯಿ-ಶೂದ್ರ ಕೋಳಿ’ ಎಂಬ ಪದ್ಯ ನೆನಪಾಗುತ್ತದೆ. ’ವರ್ಣೋತ್ಪತ್ತೀಯ, ವರ್ಣ ಸ್ಪರ್ಧೆಯ, ವರ್ಣ ಸಂಘರ್ಷಗಳ ಹಾಗೂ ಅವುಗಳ ದುಷ್ಪರಿಣಾಮದ ಕತೆಯೇ ಭರತಖಂಡದ ಇತಿಹಾಸ. ಬ್ರಾಹ್ಮಣ್ಯದವರ ಕುತಂತ್ರಕ್ಕೆ ಮುಗ್ಧ ಶೂದ್ರರು ಹೇಗೆ ಬಲಿಯಾಗುತ್ತಿದ್ದಾರೆಂಬುದೇ ’ಬ್ರಾಹ್ಮ ನಾಯಿ-ಶೂದ್ರ ಕೋಳಿ’ ಕವನದ ವಸ್ತು. ನಡೆದೊಂದು ಘಟನೆಯಿಂದ ಈ ಕವಿತೆ ಪ್ರೇರಿತವಾಯಿತೆಂದು ಕವಿಗಳೇ ಅಡಿ ಟಿಪ್ಪಣಿಯಲ್ಲಿ ಹೇಳಿದ್ದಾರೆ:

1

ಶೂದ್ರ ಕೋಳಿ ಮೇಯುತ್ತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮ ನಾಯಿ ಹೊಂಚುತ್ತಿತ್ತು
ಅಲ್ಲಿ ಇಲ್ಲಿ.
ಶೂದ್ರ ಕೋಳಿಗೇನು ಗೊತ್ತು
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮನೆ ಮೇಯುತ್ತಿತ್ತು

2

ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಿನಲ್ಲಿ ಖಾಲಿ ಹೊಟ್ಟೆ
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು
ಸಾಧು ಎಂದು ಶೂದ್ರ ಕೋಳಿ
ನೋಡೆ ನಿಂತು.
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್‍ವವೀಡನೊಂದು ಗೋಡೆ
ರಕ್ಷೆಯಾಯ್ತು;
ಪಾರ್ವನಾಯ್ಗೆ ಶೂದ್ರ ಕೋಳಿ
ಭಕ್ಷ್ಯವಾಯ್ತು!

ಪ್ರಸ್ತುತ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬೀ ಪುಸ್ತಕವು ಕುವೆಂಪು ಅವರ ’ಬ್ರಾಹ್ಮ ನಾಯಿ – ಶೂದ್ರ ಕೋಳಿ’ ಎಂಬ ಕವಿತೆಗೆ ಬರೆದ ಆಧುನಿಕ ಭಾಷ್ಯವೊ ಎಂಬಂತಿದೆ.

***

(ಇಲ್ಲಿ ಬರುವ ಬ್ರಾಹ್ಮ ಎಂಬ ಮಾತು ಸಂಕುಚಿತ ಮನೋಧರ್ಮದ ಬ್ರಾಹ್ಮಣತನಕ್ಕೆ ಅನ್ವಯವಾಗುತ್ತದೆಯೇ ಹೊರತು ಬ್ರಾಹ್ಮಣ ಜಾತಿಗಲ್ಲ ಎಂದು ತಿಳಿಯಬೇಕಾಗುತ್ತದೆ ಎಂದು ಕುವೆಂಪು ಟಿಪ್ಪಣಿ ಹಾಕಿದ್ದಾರೆ.)

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...