Homeಕರ್ನಾಟಕಕುಕ್ಕೆಸುಬ್ರಮಣ್ಯ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ, ಬಿಜೆಪಿ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ

ಕುಕ್ಕೆಸುಬ್ರಮಣ್ಯ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ, ಬಿಜೆಪಿ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ

ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಕುಕ್ಕೆ ಸುಬ್ರಮಣ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.

- Advertisement -
- Advertisement -

ಸುಳ್ಯ: ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಬೆಂಬಲಿತರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಸಂಬಂಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀವ್ರಗಾಯಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಹಲ್ಲೆನಡೆಸಿದವರೇ ಆಸ್ಪತ್ರೆಗೆ ದಾಖಲಿಸಿ, “ಬೈಕ್‌ನಲ್ಲಿ ಬಿದ್ದು ಗಾಯಗೊಂಡಿದ್ದರು. ಮಾನವೀಯತೆಯ ಆಧಾರದಲ್ಲಿ ಇವರನ್ನು ಆಸ್ಪತ್ರೆಗೆ ಕರೆತಂದಿದ್ದೇವೆ” ಎಂದು ಸುಳ್ಳು ಹೇಳಿದ್ದಾರೆಂಬ ಆರೋಪ ಬಂದಿದೆ.

ಕೊಲ್ಲಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್.ಸತೀಶ್, ಮಾಜಿ ಉಪಾಧ್ಯಕ್ಷ ಮಣಿಕಂಠ ಮತ್ತು ಇವರ ಬೆಂಬಲಿಗರಾದ ದುರ್ಗಾದಾಸ್ ಬಂಬಿಲ, ಸುಂದರ ಗುಡ್ಡನ ಮನೆ ಎಂಬವರು ಕಾಂಗ್ರೆಸ್ ಕಾರ್ಯಕರ್ತರಾದ ಕುಮಾರ್‌ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.

ಹತ್ತು ದಿನಗಳ ಹಿಂದೆ ಬಿಜೆಪಿಯ ಬೆಂಬಲಿತ ಮಣಿಕಂಠ ಮತ್ತು ಕಾಂಗ್ರೆಸ್ ಕಾರ್ಯಕರ್ತ ಕುಮಾರ್‌ ಎಂಬವರ ನಡುವೆ ಕೌಟುಂಬಿಕ ವಿಚಾರಗಳಿಗೆ ಘರ್ಷಣೆಯಾಗಿತ್ತು. ನಂತರದಲ್ಲಿ ಕುಮಾರ್‌ ಅವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಮನೆಗೆ ಬಂದ ಬಳಿಕ ಈ ಘಟನೆ ನಡೆದಿದೆ.

ಹತ್ತು ದಿನಗಳ ಹಿಂದೆ ನಡೆದಿದ್ದ ಗಲಾಟೆಯ ಸಂಬಂಧ ಸಂಧಾನಕ್ಕಾಗಿ ಕುಮಾರ್‌ ಅವರನ್ನು ಬಿಜೆಪಿ ಮುಖಂಡರಾದ ದುರ್ಗಾದಾಸ್ ಬಂಬಿಲ, ಟಿ.ಎನ್.ಸತೀಶ್ ಮಾತುಕತೆಗೆ ಕರೆದಿದ್ದರು. “ಊರಿನಲ್ಲಿ ನಮ್ಮೆಲ್ಲರ ಹೆಸರು ಹಾಳಾಗುತ್ತಿದೆ. ಕೂತು ಬಗೆಹರಿಸಿಕೊಳ್ಳೋಣ, ರಾಜಿಯಾಗೋಣ” ಎಂದು ಕುಮಾರ್‌ ಅವರನ್ನು ನಂಬಿಸಿದ್ದರು.

ಹತ್ತಿರದಲ್ಲೇ ಇದ್ದ ಮನೆಗೆ ತೆರಳಿದಾಗ ಸತೀಶ್ ಮತ್ತು ಮಣಿಕಂಠ ಇಬ್ಬರೇ ಇದ್ದರು. ಹೋಗಿ ಮಾತನಾಡುತ್ತಿರುವಾಗ ದುರ್ಗಾದಾಸ್ ಬಂಬಿಲ ಮತ್ತು ಸುಂದರ ಗುಡ್ಡನ ಮನೆ ಎಂಬವರು ಹಿಂದಿನಿಂದ ಬಂದು ರಾಡಿನಲ್ಲಿ ಹೊಡೆದಿದ್ದಾರೆ. ಹೊಡೆತದ ರಭಸಕ್ಕೆ ಕುಮಾರ್‌ ಅವರು ಪ್ರಜ್ಞೆ ಕಳೆದುಕೊಂಡಿದ್ದರು.

ಆನಂತರ ಆಂಬುಲೆನ್ಸ್‌ಗೆ ಕರೆ ಮಾಡಿರುವ ಆರೋಪಿಗಳು, “ಮದ್ಯ ಸೇವನೆ ಮಾಡಿ ಬೈಕ್‌ನಲ್ಲಿ ಬರುವಾಗ ಒಬ್ಬಾತ ಬಿದ್ದಿದ್ದಾನೆ. ನಾವು ಸ್ಥಳೀಯವಾಗಿ ಮಾಡಿಕೊಂಡಿರುವ ವಿಪತ್ತು ನಿರ್ವಹಣಾ ತಂಡದ ಭಾಗವಾಗಿ, ಮಾನವೀಯತೆಯ ಆಧಾರದಲ್ಲಿ ಇವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದೇವೆ. ನೀವು ತುರ್ತಾಗಿ ಬನ್ನಿ” ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲೂ ಹಾಗೆಯೇ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಗಾಯಗೊಂಡ ವ್ಯಕ್ತಿ ಸುಳ್ಯ ಕೆ.ವಿ.ಜಿ. ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕುಮಾರ್‌ ಅವರ ಮನೆಯಲ್ಲಿ ವಿಚಾರ ಗೊತ್ತಿರಲಿಲ್ಲ. ನಂತರ ಪ್ರಕರಣ ಕುಕ್ಕೆಸುಬ್ರಮಣ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಗಂಭೀರವಾಗಿ ಗಾಯಗೊಂಡಿರುವುದು ಊರಿಗೆಲ್ಲ ಗೊತ್ತಾಗಿದೆ. ಇದರ ಹಿಂದೆ ಬಿಜೆಪಿ ಕಾರ್ಯಕರ್ತರು ಇದ್ದಾರೆಂಬುದು ಚರ್ಚೆಯಾಗುತ್ತಿದೆ. ಪ್ರಕರಣ ದಾಖಲಾದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಕುಮಾರ್ ಅವರ ಹೇಳಿಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌’ ಯಾರು? ಆತನ ಹಿನ್ನಲೆ, ಪ್ರಭಾವವೇನು?

“ಹಲ್ಲೆಗೊಳಗಾದ ಕುಮಾರ್‌ ಅವರಿಗೆ ಬೈಕ್‌ ಓಡಿಸಲು ಬರುವುದಿಲ್ಲ” ಎಂದು ಕುಮಾರ್‌ ಅವರ ಆಪ್ತರು ಹೇಳಿಕೊಂಡಿದ್ದಾರೆ.

ಘಟನೆಯ ಸಂಬಂಧ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಕುಕ್ಕೆಸುಬ್ರಮಣ್ಯ ಪೊಲೀಸ್ ಠಾಣೆಯ ಅಧಿಕಾರಿ ಮಂಜುನಾಥ್‌, “ರಾಜಕೀಯ ಪ್ರೇರಿತ ಎಂಬುದಕ್ಕಿಂತ ಕೌಟುಂಬಿಕ ಕಲಹದ ವಿಚಾರ ಇಲ್ಲಿದೆ. ಮಣಿಕಂಠ ಮತ್ತು ಕುಮಾರ್‌ ಕುಟುಂಬಗಳ ನಡುವೆ ಜಗಳವಾಗಿತ್ತು. ಇದರಲ್ಲಿ ಇನ್ನುಳಿದವರು ಯಾಕೆ ಭಾಗಿಯಾಗಿದ್ದಾರೆಂಬುದು ತನಿಖೆಯಿಂದ ಬಯಲಾಗುತ್ತದೆ. ಹಲ್ಲೆ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 324, 323, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...