ಇಡೀ ದೇಶ ಅಸಾಧಾರಣ ಬಿಕ್ಕಟ್ಟಿನಲ್ಲಿದೆ. ಬಹುತೇಕ ಜನರು ಹಿಂದೆಂದೂ ಕಂಡರಿಯದಂತಹ ಯಾತನೆಯಲ್ಲಿ ಇದ್ದಾರೆ. ಈ ದಿನಕ್ಕೆ ತಮಗೆ ಹತ್ತಿರದವರು ಅಥವಾ ತಮಗೆ ತಿಳಿದವರಲ್ಲಿ ಒಬ್ಬರಾದರೂ ಆಸ್ಪತ್ರೆಯಲ್ಲಿ ನರಳದಿರುವ ಅಥವಾ ಹಾಸಿಗೆ ಸಿಗದೆಯೋ, ಆಕ್ಸಿಜನ್ ಸಿಗದೆಯೋ, ತುರ್ತು ಚಿಕಿತ್ಸೆ ಸಿಗದೆಯೋ ಒದ್ದಾಡದಿರುವ ಯಾರೂ ಈ ದೇಶದಲ್ಲಿ ಇರಲಾರರು. ಅಂತಹ ಚಿಂತಾಜನಕ ಪರಿಸ್ಥಿತಿ ಇದೆ. ಭಾರತ ವಿಭಜನೆಯಾದ ನಂತರ ಇಡೀ ದೇಶ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟಿನಲ್ಲಿ ಇದು ಕೂಡ ಒಂದು ಅಥವಾ ಇದೇ ದೊಡ್ಡದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಭಾರತ ದೇಶದ ಈ ಚಿಂತಾಜನಕ ಸ್ಥಿತಿ, ಮತ್ತೊಬ್ಬರಿಗೆ ಆಗಿಬರಬೇಕೆನ್ನುವ ಭಾವನೆಯನ್ನು ನಾಗರಿಕರಲ್ಲಿ ಕೆರಳಿಸಿದೆ. ಎಷ್ಟೋ ಜನ ಈ ಯಾತನೆಯನ್ನು ಸ್ವಲ್ಪವಾದರೂ ತಗ್ಗಿಸಲು ತಮ್ಮ ಅಳಿಲುಸೇವೆಯನ್ನು ಸಲ್ಲಿಸುತ್ತಿದ್ದಾರೆ. ಎಷ್ಟೋ ಜನ ತಮ್ಮ ಭಾಷೆ ಜಾತಿ ಧರ್ಮಗಳ ಐಡೆಂಟಿಟಿಗಳನ್ನು ಬದಿಗೊತ್ತಿ ಮತ್ತೊಬ್ಬರಿಗೆ ನೆರವಾಗಲು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.

ಇವೆಲ್ಲವುದರ ನಡುವೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿರುವ ಸರ್ಕಾರಗಳನ್ನು ಪ್ರಶ್ನಿಸುವುದು, ಅವುಗಳ ಉತ್ತರದಾಯಿತ್ವದ ಬಗ್ಗೆ ಎಚ್ಚರಿಸುವುದು, ಈ ಜವಾಬ್ದಾರಿಗಳಿಂದ ಅವುಗಳು ತಪ್ಪಿಸಿಕೊಳ್ಳದಂತೆ ಕಾಯುವ ಕೆಲಸ ಕೂಡ ಅಷ್ಟೇ ಮುಖ್ಯ. ಆ ಕೆಲಸವನ್ನು ಕೂಡ ಕೆಲವೇ ಕೆಲವರಾದರೂ ಸ್ವತಂತ್ರ ವ್ಯಕ್ತಿಗಳು, ಸ್ವತಂತ್ರ ಮಾಧ್ಯಮಗಳು ಮಾಡುತ್ತಿವೆ. ಆದರೆ ಕೆಲವರಿಗೆ ಅದು ’ಋಣಾತ್ಮಕವಾಗಿ’, ಮತ್ತೆ ಕೆಲವರಿಗೆ ಇವರೆಲ್ಲ ’ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿಸುತ್ತಿರುವವರಂತೆ’ ಇನ್ನೂ ಕೆಲವರಿಗೆ ’ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ’ಭಾರತ-ವಿರೋಧಿ ಪಡೆ’ಗಳಂತೆ’ ಕಾಣುತ್ತಿರುವುದು ನಿರೀಕ್ಷಿತವೇ! ಆಕ್ಸಿಜನ್ ಕೊರತೆಯ ಬಗ್ಗೆ ಅರಿವು ಮೂಡಿಸಲು ಹಲವು ವರ್ಷಗಳ ಹಿಂದೆಯೇ ಪ್ರಯತ್ನಿಸಿದ್ದ ಡಾ. ಕಫೀಲ್ ಖಾನ್ ಅವರನ್ನು ಅಕ್ರಮವಾಗಿ ಬಂಧಿಸಿದ್ದ ಗೆಳೆಯರ ಬಳಗವಲ್ಲವೇ ಇದು!

ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರು ಪ್ರತಿನಿಧಿಸುತ್ತಿದ್ದ ಗೋರಖ್‌ಪುರದ ದುರ್ಗಾವತಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದ್ದು, ಕೋವಿಡ್ ರೋಗಿಗಳಿಗೆ ನೀಡುತ್ತಿದ್ದ ಆಕ್ಸಿಜನ್‌ನ ಫೋರ್ಸ್ ತಗ್ಗಿಸಬೇಕಾಗಿ ಬಂದದ್ದನ್ನು ಅಲ್ಲಿ ಸರ್ಜನ್ ಒಬ್ಬರು ತಿಳಿಸಿದ್ದಾರೆಂದು ’ದ ಹಿಂದೂ’ ಪತ್ರಿಕೆ ವರದಿ ಮಾಡಿತ್ತು. ಇನ್ನೂ ಹಲವು ಆಸ್ಪತ್ರೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆಯೂ ಆ ವರದಿ ಬೆಳಕು ಚೆಲ್ಲಿತ್ತು. ಆದರೆ ಅದರ ಮುಂದಿನ ದಿನವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಕ್ಸಿಜನ್‌ನ ಯಾವುದೇ ಕೊರತೆ ಇಲ್ಲ. ಇಂತಹ ವದಂತಿ ಹಬ್ಬುವವರ ಆಸ್ತಿ ವಶಪಡಿಸಿಕೊಳ್ಳಿ ಎಂಬ ಕರೆ ನೀಡುತ್ತಾರೆ. ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ನ್ಯಾಯಬದ್ಧವಾದ ಯಾವುದೇ ಕ್ರಮ ಅವರ ಸರ್ಕಾರ ತೆಗೆದುಕೊಳ್ಳಲಿ. ಆದರೆ ಹತ್ರಾಸ್ ಪ್ರಕರಣ ವರದಿ ಮಾಡಲು ಹೋಗಿದ್ದ ಕೇರಳ ಮೂಲದ ದಿಟ್ಟ ಪತ್ರಕರ್ತ ರಶೀದ್ ಕಪ್ಪನ್ ಅವರಿಗೆ ಮಾಡಿದಂತೆ ಮಾಡಿ ಎಂಬ ಕರೆಯೇ ಇದು ಎಂಬ ಸಂಶಯವಂತೂ ನಾಗರಿಕರಿಗೆ ಮೂಡದೆ ಇರದು.

ಉತ್ತರ ಪ್ರದೇಶ: ಮತಾಂತರ ನಿಷೇಧ ಕಾಯ್ದೆಯಡಿ ಮತ್ತೊಬ್ಬರ ಬಂಧನ
PC : The Indian Express

ಇನ್ನು ಲಕ್ನೋವಿನ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿರುವ ಶವಗಳ ಪ್ರಮಾಣಕ್ಕೂ ಉತ್ತರಪ್ರದೇಶ ಸರ್ಕಾರ ಅಧಿಕೃತವಾಗಿ ನೀಡುತ್ತಿರುವ ಕೋವಿಡ್ ಸಾವಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿರುವುದನ್ನ ಹಲವು ಪತ್ರಿಕೆಗಳು ವರದಿ ಮಾಡಿವೆ. ಲಕ್ನೋನಲ್ಲಿ ಯುಪಿ ಹೇಳುತ್ತಿರುವ ಅಧಿಕೃತ ಸಾವುಗಳಿಗೆ ಹೋಲಿಸಿದರೆ ಅಂತ್ಯಕ್ರಿಯೆ ಮಾಡಲಾಗುತ್ತಿರುವ ಶವಗಳ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಿದೆ ಎನ್ನುವುದು ಆತಂಕಕಾರಿಯಾದ ವಿಷಯವಾಗಿದೆ.

https://www.covid19india.org/ ಅಂಕಿಅಂಶಗಳು ಹೇಳುವಂತೆ ದಿನಕ್ಕೆ ಸುಮಾರು 25-35 ಸಾವಿರ ಹೊಸ ಕೋವಿಡ್ ಪ್ರಕರಣಗಳು ಉತ್ತರ ಪ್ರದೇಶ ರಾಜ್ಯದಲ್ಲಿ ಹೆಚ್ಚುತ್ತಿವೆ. ಆ ರಾಜ್ಯ ಇಲ್ಲಿಯವರೆಗೂ ಮಾಡಿರುವುದು ಸುಮಾರು 4 ಕೋಟಿ ಟೆಸ್ಟ್‌ಗಳು. ಇದು ಉಳಿದ ರಾಜ್ಯಗಳ ಟೆಸ್ಟ್ ಸಂಖ್ಯೆಗಳಿಗೆ ಹೋಲಿಸಿದರೆ ದೊಡ್ಡ ಸಂಖ್ಯೆಯಂತೆ ಕಾಣಬಹುದು. ಆದರೆ ಆ ರಾಜ್ಯದ ಜನಸಂಖ್ಯೆ ಸುಮಾರು 20 ಕೋಟಿ. ಅಂದರೆ ಅಲ್ಲಿ ಮಾಡಲಾಗಿರುವ ಟೆಸ್ಟ್‌ಗಳು ಜನಸಂಖ್ಯೆಯ ಕಾಲು ಭಾಗಕ್ಕಿಂತಲೂ ಕಡಿಮೆ. ಕರ್ನಾಟಕದ ಜನಸಂಖ್ಯೆ ಸುಮಾರು 6.5 ಕೋಟಿಯಾದರೆ ಸುಮಾರು 2.4 ಕೋಟಿ ಟೆಸ್ಟ್‌ಗಳನ್ನು ಮಾಡಲಾಗಿದೆ. ಕೇರಳದ ಜನಸಂಖ್ಯೆ ಮೂರುವರೆ ಕೋಟಿ. ಅಲ್ಲಿ ಮಾಡಿರುವ ಟೆಸ್ಟ್‌ಗಳ ಸಂಖ್ಯೆ ಸುಮಾರು 1.5 ಕೋಟಿ. ಭಾರತದಲ್ಲಿ ಟೆಸ್ಟ್ ಪಾಸಿಟಿವಿಟಿ ದರ ಸರಾಸರಿ ಸುಮಾರು 18% ಇದೆ. ಅಂದರೆ 100 ಜನರನ್ನು ಟೆಸ್ಟ್ ಮಾಡಿದರೆ ಸುಮಾರು 18 ಜನ ಕೋವಿಡ್ ಪಾಸಿಟಿವ್ ಆಗಿರುತ್ತಾರೆ. ಇದು 10%ಗಿಂತ ಹೆಚ್ಚಾಗುವುದು ಅಪಾಯಕಾರಿ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಆದುದರಿಂದ ಟೆಸ್ಟ್‌ಗಳನ್ನು ಹೆಚ್ಚೆಚ್ಚು ಮಾಡುವುದು ಮತ್ತು ಅದನ್ನು ನಿಖರವಾಗಿ ವರದಿ ಮಾಡುವುದು ಕೋವಿಡ್‌ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಪ್ರಾಥಮಿಕ ಹಂತ. ಇದರ ಬಗ್ಗೆ ಗಮನಹರಿಸುವುದನ್ನು ಬಿಟ್ಟು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರ ಬಗ್ಗೆ ಅನಾವಶ್ಯಕ ದಾರಿತಪ್ಪಿಸುವ ಮಾತುಗಳನ್ನಾಡುವುದು ಇಂದಿನ ಯಾತನಾಮಯ ದಿನಕ್ಕೆ-ಪರಿಸ್ಥಿತಿಗೆ ತಕ್ಕನಾದುದಲ್ಲ.

ಯುಪಿ ಮಾಡೆಲ್ ಕಟ್ಟುವುದಕ್ಕೆ ಮುಂಚೆಯೇ ಕುಸಿದು ಬೀಳುತ್ತಿದ್ದರೂ, ’ಪೋಸ್ಟ್‌ಕಾರ್ಡ್’ ನಂತಹ ವಿಷ ಬಿತ್ತುವ ಸಂಘಗಳು ಇವತ್ತಿಗೂ ಅಲ್ಲಿನ ಆಡಳಿತದ ಬಗ್ಗೆ ಸುಳ್ಳುಗಳ ಸರಮಾಲೆಯನ್ನೇ ಕಟ್ಟಿ ಪ್ರಶಂಸೆಯ ಮಳೆಗೈಯ್ಯುತ್ತಿದ್ದಾರೆ. ಅಲ್ಲಿ ಯೋಗಿ ಆಕ್ಸಿಜನ್ ಪ್ಲಾಂಟ್‌ಅನ್ನೇ ಹಾಕಿಬಿಟ್ಟರು, ಬೇರೆ ರಾಜ್ಯಗಳು ಇನ್ನೂ ಕಣ್ ಕಣ್ ಬಿಡುತ್ತಿವೆ ಎಂಬ ಸುಳ್ಳುಗಳನ್ನು ಯಥೇಚ್ಛವಾಗಿ ಹಬ್ಬುತ್ತಿದ್ದಾರೆ. ಈ ಬಳಗಕ್ಕೆ ಸುಳ್ಳು ಹೇಳುವುದೇ ಪಾಸಿಟಿವಿಟಿಯಾಗಿದ್ದು, ಕಣ್ಣುಕುಕ್ಕುವ ಸತ್ಯ ನಕಾರಾತ್ಮಕವಾಗಿ ಕಾಣುತ್ತಿದೆ. ’ಇಡೀ ಸಾಮ್ರಾಜ್ಯದ ಜನ ಇನ್ನು ಮುಂದೆ ಯಾವ ಸುದ್ದಿ ಬಂದರೂ ನಗಬೇಕು’ ಎಂದು ದೊರೆಯೊಬ್ಬ ಆದೇಶಿಸಿ ಢಂಗುರ ಹೊಡೆಸಿದ ಮಕ್ಕಳ ಕಥೆಯಂತೆ ಪ್ರಜಾಪ್ರಭುತ್ವ ಭಾರತ ಆಗಬಾರದಲ್ಲವೇ!

ಪ್ರೊಪೊಗಾಂಡದ ಮೂಲಕ ಇನ್ನೂ ಕಟ್ಟಬೇಕಿದ್ದ ಯುಪಿ ಮಾಡೆಲ್ ಮುಂಚೆಯೇ ಕುಸಿತ ಕಂಡಿರುವುದು ಒಂದು ಕಡೆಯಾದರೆ, ಈಗಾಗಲೇ ಕಟ್ಟಿರುವ ಗಾಳಿಗೋಪುರ ’ಗುಜರಾತ್ ಮಾಡೆಲ್ ಕಥೆ ಇನ್ನೂ ಭೀಕರವಾಗಿದೆ. ಒಕ್ಕೂಟ ಸರ್ಕಾರ ಬೇರೆ ರಾಜ್ಯಗಳನ್ನು ಅನುಲಕ್ಷಿಸಿ ಈ ರಾಜ್ಯಕ್ಕೆ ಹೆಚ್ಚು ಸಹಾಯ ಮಾಡುತ್ತಿದ್ದರೂ ಕೋವಿಡ್‌ಅನ್ನು ತಹಬದಿಗೆ ತರಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ವ್ಯಾಪಕವಾಗಿ ಹರಡಿದ ಒಂದು ಮಾಹಿತಿಯೊಂದು ’ಗುಜರಾತ್ ಮಾಡೆಲ್ನ ನಿಜರೂಪವನ್ನು ಬಿಚ್ಚಿಟ್ಟಿತ್ತು. ಆಸ್ಪತ್ರೆಯ ಬೆಡ್‌ಗಳ ಲಭ್ಯತೆಯ ಸೂಚ್ಯಂಕ ಅದಾಗಿತ್ತು. 1 ಲಕ್ಷ ಜನರಿಗೆ ಕರ್ನಾಟಕದಲ್ಲಿ 398, ಕೇರಳದಲ್ಲಿ 282, ತಮಿಳುನಾಡಿನಲ್ಲಿ 205 ಆಸ್ಪತ್ರೆಯ ಬೆಡ್‌ಗಳು ಲಭ್ಯವಿದ್ದರೆ ಗುಜರಾತ್‌ನಲ್ಲಿ ಆ ಸಂಖ್ಯೆ 95! ಗುಜರಾತ್ ಮಾಡೆಲ್‌ನ ಮೂಲ ಸೌಕರ್ಯದ ಬಗ್ಗೆ ಈ ಅಂಕಿಸಂಖ್ಯೆಗಳು ’ಪಾಸಿಟಿವಿಟಿ’ಯನ್ನು ನುಡಿಯುತ್ತಿಲ್ಲ. ಇದಕ್ಕೆ ಅಲ್ಲಿ ಎರಡು ದಶಕಗಳಿಂದ ಆಡಳಿತ ನಡೆಸಿರುವವರೇ ಸಮಸ್ಯೆ ಎಂದು ಹೇಳುವುದು ಕೂಡ ಸಕಾರಾತ್ಮಕ ಅಲ್ಲ!

ಇದು ಆರೋಪ ಮಾಡುವುದಕ್ಕೆ ಹೇಳುತ್ತಿರುವ ಮಾತುಗಳು ಅಲ್ಲ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಕರ್ನಾಟಕ ಮತ್ತು ಕೇರಳ ರಾಜ್ಯಗಳು ಹೆಚ್ಚುವರಿಯಾಗಿ ಉತ್ಪಾದಿಸುವ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ನೀಡಿವೆ. ಇಂತಹ ಮಾನವೀಯತೆಯನ್ನು ಕರ್ನಾಟಕದ ಜನ ಒಕ್ಕೊರಲಿನಿಂದ ಸ್ವಾಗತಿಸಿದ್ದಾರೆ. ಇಂತಹ ’ಹ್ಯುಮ್ಯಾನಿಟೇರಿಯನ್ ಬಿಕ್ಕಟ್ಟಿನ’ ಸಮಯದಲ್ಲಿ ಆರ್‌ಎಸ್‌ಎಸ್ ನೇತಾರ ದತ್ತಾತ್ರೇಯ ಹೊಸಬಾಳೆ ಮತ್ತದೆ ಹಳೇ ಕ್ಯಾಸೆಟ್ ಹಾಕಿ ಕರ್ಕಶ ಶಬ್ದವನ್ನು ಕೇಳಿಸುತ್ತಿದ್ದಾರೆ. ಈ ಬಿಕ್ಕಟ್ಟನ್ನು ಭಾರತ ವಿರೋಧಿ ಪಡೆಗಳು ಉಪಯೋಗಿಸಿಕೊಳ್ಳುತ್ತವೆ ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಸುಳ್ಳು ಸಾಕ್ಷ್ಯಗಳನ್ನು ಕಂಪ್ಯೂಟರ್‌ನಲ್ಲಿ ಸೇರಿಸಿ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಸಿಕ್ಕಿಸಲಾಗಿರುವ ಚಿಂತಕರಂತೆ ಇನ್ನೊಂದಷ್ಟು ಜನರ ಮೇಲೆ ಈ ಸಮಯದಲ್ಲಿ ದಾಳಿ ಮಾಡಬೇಕು ಎಂಬ ಪರೋಕ್ಷ ಕರೆಯೇ ಅದು? ಇಂತಹ ಸಮಯದಲ್ಲಿ ಇದೇ ’ಪಾಸಿಟಿವಿಟಿ’ ಜನರು ಶತ್ರು ರಾಷ್ಟ್ರಗಳು ಎಂದು ಬಿಂಬಿಸುವ ಪಾಕಿಸ್ತಾನ ಮತ್ತು ಚೀನಾ ಕೂಡ ಭಾರತಕ್ಕೆ ನೆರವಿನ ಹಸ್ತವನ್ನು ಚಾಚಿವೆ. ಆ ದೇಶಗಳ ಆಳುವವರ ಲೆಕ್ಕಾಚಾರಗಳೇನೇ ಇರಲಿ, ಬಿಕ್ಕಟ್ಟು ಬೇಗ ನಿವಾರಣೆಯಾಗಲೆಂದು ಪ್ರಾರ್ಥಿಸುತ್ತಿದ್ದೇವೆ ಎಂದು ಆ ದೇಶದ ಜನ ಟ್ವೀಟ್‌ಗಳನ್ನು ಮಾಡಿ ಹೇಳುತ್ತಿದ್ದಾರೆ. ದ್ವೇಷವನ್ನೇ ಕುಡಿದು ಅದನ್ನೇ ಉಸಿರಾಡುವ ಜನಕ್ಕೆ ಯಾವ ಆಕ್ಸಿಜನ್ ತಾನೇ ಸರಿದಾರಿಗೆ ತಂದೀತು!

ಇನ್ನು ಒಕ್ಕೂಟ ಸರ್ಕಾರ ಇಷ್ಟು ದಿನ ವ್ಯಾಕ್ಸಿನ್ ಡ್ರೈವ್‌ಅನ್ನು ಕೇಂದ್ರೀಕೃತಗೊಳಿಸಿಕೊಂಡು ಕಾರ್ಯ ನಿರ್ವಹಿಸುತ್ತಿತ್ತು. ಈಗಷ್ಟೇ ಮೇ 1ರಿಂದ ರಾಜ್ಯಗಳು ನೇರವಾಗಿ ಜನರಿಗೆ ಲಸಿಕೆ ನೀಡಬಹುದು ಎಂದು ಹೇಳಿದೆ. ವ್ಯಾಕ್ಸಿನೇಶನ್ ಬಗ್ಗೆ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಇಲ್ಲಸಲ್ಲದ ವಾಗ್ದಾನಗಳನ್ನು ನೀಡಿಕೊಂಡು ಬರುತ್ತಲೇ ಇದೆ. ಒಕ್ಕೂಟ ಸರ್ಕಾರವೂ ವ್ಯಾಕ್ಸಿನ್ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುವುದಕ್ಕಿಂತ ಅದನ್ನು ಪ್ರಚಾರವಾಗಿ ಬಳಸಿಕೊಂಡದ್ದೇ ಹೆಚ್ಚು. ಅದರ ಸಚಿವರುಗಳು ವ್ಯಾಕ್ಸಿನ್ ಕೊರತೆಯಿಲ್ಲ ಎಂದು ಟ್ವೀಟ್ ಮಾಡುವುದರಲ್ಲಿ ಅತಿ ವೀರರು. ಆದರೆ ಎಷ್ಟೋ ವ್ಯಾಕ್ಸಿನ್ ಕೇಂದ್ರಗಳ ಮುಂದೆ ಸ್ಟಾಕ್ ಲಭ್ಯವಿಲ್ಲ ಎಂಬ ಬೋರ್ಡ್ ರಾರಾಜಿಸುತ್ತಿದ್ದುದು ಅತಿ ಸಾಮಾನ್ಯವಾದ ಸಂಗತಿಯಾಗಿತ್ತು.

ಏಪ್ರಿಲ್ 22ರವರೆಗೆ ಮಾಹಿತಿಯಿರುವ ವ್ಯಾಕ್ಸಿನೇಶನ್ ಚಾರ್ಟ್ ಗಮನಿಸಿ. ಹಲವು ದೇಶಗಳು ತಮ್ಮ ದೇಶದ ಜನಸಂಖ್ಯೆಯ ಎಷ್ಟು ಭಾಗಕ್ಕೆ ವ್ಯಾಕ್ಸಿನ್ ನೀಡಿದೆ (ಕನಿಷ್ಠ ಮೊದಲನೇ ಡೋಸ್) ಎಂಬುದರ ಹೋಲಿಕೆ ಇದೆ. ಇಸ್ರೇಲ್ ಸುಮಾರು 20% ಜನಸಂಖ್ಯೆಗೆ ಏಪ್ರಿಲ್ 22ರ ಹೊತ್ತಿಗೆ ವ್ಯಾಕ್ಸಿನ್ ನೀಡಿ ಮೊದಲ ಸ್ಥಾನದಲ್ಲಿದ್ದರೆ ಭಾರತ ಇನ್ನೂ 10% ಜನಸಂಖ್ಯೆಗೂ ನೀಡಲು ಸಾಧ್ಯವಾಗದೆ ಕೊನೆಯಲ್ಲಿದೆ. ಈ ಪರಿಸ್ಥಿತಿಯನ್ನು ಒಪ್ಪಿಕೊಂಡು, ಪರಿಣಿತರ ಮತ್ತು ಹಲವು ರಾಜ್ಯಗಳ ಪ್ರತಿನಿಧಿಗಳ ತಂಡ ರಚಿಸಿಕೊಂಡು, ಒಳಗೊಳ್ಳುವ ವಿಧಾನದಲ್ಲಿ ಹೋರಾಟ ನಡೆಸಬೇಕಿರುವ ಸಮಯದಲ್ಲಿ, ಈಗಲೂ ಪ್ರಚಾರವನ್ನೇ ಕೇಂದ್ರವಾಗಿರಿಸಿಕೊಂಡು ಕೆಲಸ ಮಾಡುವ ವಿಧಾನ ಯಶಸ್ಸು ನೀಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಸರ್ಕಾರ ಮತ್ತು ಅಧಿಕಾರಿಗಳ ಜೊತೆಗೆ ಕೈಜೋಡಿಸಿ ಹೋರಾಡಲು ಎಲ್ಲ ನಾಗರಿಕರು ಸಿದ್ಧರಾಗಿದ್ದಾರೆ. ಮುಕ್ತ, ಒಳಗೊಳ್ಳುವ, ಪಾರದರ್ಶಕತೆಯ ಹೋರಾಟಕ್ಕೆ ಸರ್ಕಾರಗಳು ಈಗಲಾದರೂ ಸಜ್ಜಾಗಲಿ.

ಗುರುಪ್ರಸಾದ್ ಡಿ ಎನ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ ಎನ್
+ posts

LEAVE A REPLY

Please enter your comment!
Please enter your name here