Homeಮುಖಪುಟದಲಿತ ಹೋರಾಟಗಾರ್ತಿಯ ಭಾಷಣ ರದ್ದು: ಗೂಗಲ್ ಸಿಇಓ ಸುಂದರ್‌ ಪಿಚ್ಚೈಗೆ ತೇನ್‌ಮೋಳಿ ಸೌಂದರರಾಜನ್ ಬರೆದ ಪತ್ರ

ದಲಿತ ಹೋರಾಟಗಾರ್ತಿಯ ಭಾಷಣ ರದ್ದು: ಗೂಗಲ್ ಸಿಇಓ ಸುಂದರ್‌ ಪಿಚ್ಚೈಗೆ ತೇನ್‌ಮೋಳಿ ಸೌಂದರರಾಜನ್ ಬರೆದ ಪತ್ರ

ಅಮೇರಿಕದಲ್ಲಿ ನಾಲ್ವರಲ್ಲಿ ಒಬ್ಬರು ದಲಿತರು ಮೌಖಿಕ ಮತ್ತು ದೈಹಿಕ ದಾಳಿ ಎದುರಿಸುತ್ತಾರೆ, ಮೂವರಲ್ಲಿ ಒಬ್ಬರು ಶೈಕ್ಷಣಿಕ ತಾರತಮ್ಯ ಮತ್ತು ಮೂವರಲ್ಲಿ ಇಬ್ಬರು ಕೆಲಸದ ಸ್ಥಳದಲ್ಲಿ ತಾರತಮ್ಯ ಅನುಭವಿಸುತ್ತಾರೆ.

- Advertisement -
- Advertisement -

ಇವರಿಗೆ

ಸುಂದರ್ ಪಿಚ್ಚೈ– ಸಿಇಓ
ಮೆಲನಿ ಪಾರ್ಕರ್- ಚೀಫ್ ಡೈವರ್ಸಿಟಿ ಆಫೀಸರ್,
ಗೂಗಲ್
16110, ಮತ್ತು

ಮಿಸ್ ಪಾರ್ಕರ್
ಆಂಫಿಥಿಯೇಟರ್ ಪಾರ್ಕ್‌ವೇ,
ಮೌಂಟನ್ ವ್ಯೂ,
ಕ್ಯಾಲಿಫೋರ್ನಿಯಾ 94043

ಪ್ರಿಯ ಮಿಸ್ಟರ್ ಪಿಚ್ಚೈ ಮತ್ತು ಮಿಸ್ ಪಾರ್ಕರ್, ನನ್ನ ಹೆಸರು ತೇನ್‌ಮೋಳಿ ಸೌಂದರರಾಜನ್. ನಾನು ಇಕ್ವಾಲಿಟಿ ಲ್ಯಾಬ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದೇನೆ. ನಮ್ಮದು ಯುಎಸ್‌ಎಯಲ್ಲಿ ಜಾತಿ ದಮನಿತರ ಸಶಕ್ತೀಕರಣಕ್ಕಾಗಿ ರಾಷ್ಟ್ರೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಕೆಲಸಮಾಡುವ ಸಂಘಟನೆಯಾಗಿದೆ. ನಮ್ಮ ಉದ್ದೇಶ ಸಂಶೋಧನೆ, ಪ್ರತಿಪಾದನೆ, ತರಬೇತಿ ಮತ್ತು ಶಿಕ್ಷಣದ ಮೂಲಕ ಜಾತಿ ಸಮಾನತೆಯನ್ನು ಉತ್ತೇಜಿಸುವುದಾಗಿದೆ. ನಾವು ನಮ್ಮ ಎಲ್ಲಾ ವೇದಿಕೆಗಳಲ್ಲಿ ಒಟ್ಟಾಗಿ 1,50,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದೇವೆ. ನಾವು ಜಾತಿ ವಿಷಯದ ಸುತ್ತಲೂ ಹಲವಾರು ಸಂಸ್ಥೆ, ಸಂಘಟನೆಗಳ ಜೊತೆ ಕೆಲಸ ಮಾಡಿದ್ದೇವೆ. ಇವುಗಳಲ್ಲಿ ಯುಎಸ್ ಕಾಂಗ್ರೆಸ್, ಸ್ಮಿತ್ ಸೋನಿಯನ್ ಏಶಿಯಾ ಪೆಸಿಫಿಕ್ ಅಮೇರಿಕನ್ ಸೆಂಟರ್, ದಿ ವರ್ಲ್ಡ್ ಬ್ಯಾಂಕ್ ಗ್ರೂಪ್, ಕ್ಯಾಲಿಫೋರ್ನಿಯಾ ಡೆಮೋಕ್ರಾಟಿಕ್ ಪಾರ್ಟಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಹಾರ್ವರ್ಡ್ ವಿಶ್ವವಿದ್ಯಾಲಯ, ಬ್ರಾಂಡೀಸ್ ವಿಶ್ವವಿದ್ಯಾಲಯ ಮತ್ತು ನೂರಾರು ಇತರ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಸೇರಿವೆ.

ಯುಎಸ್ಎಯಲ್ಲಿ ಜಾತಿ ಕುರಿತ ನಮ್ಮ ಸಂಶೋಧನೆಗಳು ಜಾತಿ ಸಮಾನತೆಯ ವಿಷಯಗಳನ್ನು ನಿರ್ವಹಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ದಕ್ಷಿಣ ಏಶ್ಯಾದ ಅಮೆರಿಕನ್ನರ ನಡುವೆ ಜಾತಿ ಕುರಿತ ಅರ್ಥಪೂರ್ಣ ಜಾಗೃತಿ ಮೂಡಿಸಲು ಮತ್ತು ದೇಶಾದ್ಯಂತ ಭಾರೀ ಪ್ರಮಾಣದ ಸಾಂಸ್ಥಿಕ ಸುಧಾರಣೆಗಳಿಗೆ ಕಾರಣವಾಗಿದೆ. ಅಮೇರಿಕದಲ್ಲಿ ಜಾತಿ ಕುರಿತ ನಮ್ಮ ಮುಂಚೂಣಿ ಸಮೀಕ್ಷೆಯು ನಾಲ್ವರಲ್ಲಿ ಒಬ್ಬರು ದಲಿತರು (ಅಮೇರಿಕನ್ ದಮನಿತರು) ಮೌಖಿಕ ಮತ್ತು ದೈಹಿಕ ದಾಳಿ ಎದುರಿಸುತ್ತಾರೆ, ಮೂವರಲ್ಲಿ ಒಬ್ಬರು ಶೈಕ್ಷಣಿಕ ತಾರತಮ್ಯ ಮತ್ತು ಮೂವರಲ್ಲಿ ಇಬ್ಬರು ಕೆಲಸದ ಸ್ಥಳದಲ್ಲಿ ತಾರತಮ್ಯ ಅನುಭವಿಸುತ್ತಾರೆ ಎಂದು ತೋರಿಸಿಕೊಟ್ಟಿದೆ. ದಕ್ಷಿಣ ಏಶ್ಯಾದಲ್ಲಿ ಜಾತಿ ದಮನಿತ ಜನರ ಸಂಕಷ್ಟಗಳು ಇನ್ನಷ್ಟು ಗಂಭೀರವಾದ ಅಂಕಿಅಂಶಗಳನ್ನು ತೋರಿಸುತ್ತವೆ.

* ಭಾರತದಲ್ಲಿ ಸರಾಸರಿಯಾಗಿ ಪ್ರತೀದಿನ ಮೂವರು ದಲಿತರ ಹತ್ಯೆಯಾಗುತ್ತದೆ, ಇಬ್ಬರನ್ನು ಅತ್ಯಾಚಾರ ಮಾಡಲಾಗುತ್ತದೆ ಮತ್ತು ಹಲವಾರು ಮನೆಗಳನ್ನು ಸುಡಲಾಗುತ್ತದೆ. ಪ್ರತೀ ಹದಿನೈದು ನಿಮಿಷಗಳಲ್ಲಿ ದಲಿತರ ವಿರುದ್ಧ ಏನಾದರೊಂದು ಅಪರಾಧ ನಡೆಯುತ್ತದೆ.

* ಭಾರತದಲ್ಲಿ 45 ಶೇಕಡಾ ದಲಿತರಿಗೆ ಓದಲು ಬರೆಯಲು ಗೊತ್ತಿಲ್ಲ.

* ಭಾರತದಲ್ಲಿ 37 ಶೇಕಡಾ ದಲಿತರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ.

* ನೇಪಾಳದ ದಲಿತರಲ್ಲಿ 50 ಶೇಕಡಾ ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ.

* ನೇಪಾಳದಲ್ಲಿ 200ಕ್ಕೂ ಹೆಚ್ಚು ರೀತಿಯ ಜಾತಿ ಆಧರಿತ ತಾರತಮ್ಯಗಳನ್ನು ಗುರುತಿಸಲಾಗಿದೆ.

* ಬಾಂಗ್ಲಾದೇಶದಲ್ಲಿ 60 ಶೇಕಡಾಕ್ಕೂ ಹೆಚ್ಚು ದಲಿತರು ಕೆಲಸದ ಸ್ಥಳದಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ.

* ಪಾಕಿಸ್ತಾನದಲ್ಲಿ 90 ಶೇಕಡಾಕ್ಕೂ ಹೆಚ್ಚು ದಲಿತ ಹುಡುಗಿಯರು ಶಾಲೆಗೇ ಹೋಗುವುದಿಲ್ಲ.

* ಪಾಕಿಸ್ಥಾನದಲ್ಲಿ 84 ಶೇಕಡಾ ದಲಿತರು ಭೂರಹಿತರು.

* ಪಾಕಿಸ್ಥಾನದಲ್ಲಿ 74 ಶೇಕಡಾ ದಲಿತರು ಅನಕ್ಷರಸ್ಥರು.

ಕ್ಯಾಲಿಫೋರ್ನಿಯಾದ ಸಿಸ್ಕೋ (Cisco) ಪ್ರಕರಣ ಇರಲಿ ಅಥವಾ ನ್ಯೂಜೆರ್ಸಿಯ ಬಿಎಪಿಎಸ್ ದೇವಾಲಯದ ಪ್ರಕರಣ ಇರಲಿ, ಜಾತಿ ಸಮಾನತೆಯು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ ಮತ್ತು ತುರ್ತಿನ ಪ್ರಶ್ನೆಯಾಗಿದೆ.

ಜಾತಿ ಸಮಾನತೆಯ ಚಳವಳಿಯು ಸುರಕ್ಷಿತವಾದ ಕೆಲಸದ ಸ್ಥಳದ ಖಾತರಿ ನೀಡುತ್ತದೆ; ಐತಿಹಾಸಿಕವಾಗಿ ಬದಿಗೆ ಸರಿಸಲ್ಪಟ್ಟ ಸಮುದಾಯಗಳ ನಾಗರಿಕ ಹಕ್ಕುಗಳ ಖಾತರಿಯನ್ನೂ ನೀಡುತ್ತದೆ. ಜಾರ್ಜ್ ಫ್ಲೋಯ್ದ್ ಕೊಲೆಯ ಬೆನ್ನಲ್ಲೇ ಗೂಗಲ್ ರೂಪಿಸಿದ ಬಹುತ್ವದ ಗುರಿಗಳಿಗೆ ಈ ಚಳವಳಿಯು ಸರಿಹೊಂದುತ್ತದೆ. ಆದುದರಿಂದಲೇ ಜಾತಿ ಸಮಾನತೆ ಮತ್ತು ಸುದ್ದಿಮನೆಗಳ ಕುರಿತು ಕಳೆದ ಮೂರು ತಿಂಗಳುಗಳಿಂದ ಗೂಗಲ್ ಸುದ್ದಿ ವಿಭಾಗದ ಸಿಬ್ಬಂದಿಗಳ ಜೊತೆ ನಾನು ಕೆಲಸ ಮಾಡುತ್ತಿದ್ದ ಸಕಾಲಿಕವಾದ ಉಪನ್ಯಾಸವನ್ನು ಗೂಗಲ್ ಮುಂದೂಡಿರುವುದು ನನಗೆ ಅಸಮಾಧಾನವನ್ನು ಉಂಟುಮಾಡಿದೆ. ಈ ಕಾರ್ಯಕ್ರಮವು ನಿಮ್ಮ ಸಿಬ್ಬಂದಿ ಮತ್ತು ಹಲವಾರು ಜಾಗತಿಕ ವರದಿಗಾರರಿಗೆ ದಕ್ಷಿಣ ಏಶ್ಯಾದ ಈ ರಾಚನಿಕವಾದ ಸಾಮಾಜಿಕ ವಿಷಯವನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ತನ್ನ ಜಾತಿ ದಮನಿತ ಪತ್ರಕರ್ತರಿಗೆ ಒಂದು ಅರ್ಥಪೂರ್ಣ ರೀತಿಯಲ್ಲಿ ಹೆಚ್ಚಿನ ಬೆಂಬಲ ನೀಡಲು ಗೂಗಲ್‌ಗೆ ಅನುಕೂಲವಾಗುತ್ತದೆ; ಅದೂ ಕೂಡಾ ಅವರು ಈ ವಿಷಯದ ಕುರಿತು ವರದಿ ಮಾಡುವಾಗ ಇಷ್ಟೊಂದು ಹಿಂಸಾಚಾರವನ್ನು ಎದುರಿಸಬೇಕಾಗಿರುವ ಸಂದರ್ಭದಲ್ಲಿ.

ಈ ಮುಂದೂಡಿಕೆಯು ಒಂದಲ್ಲ, ಎರಡು ಹಿಂದಿನ ಉಪನ್ಯಾಸಗಳ ನಂತರ ನಡೆದಿದೆ: ಒಂದು ನಾನು 2021ರ ಅಕ್ಟೋಬರ್ 12-14ರ ನಡುವೆ ಗೂಗಲ್‌ನ ನೆಕ್ಸ್ಟ್‌‌ಕ್ಲೌಡ್ ಶೃಂಗಸಭೆಯಲ್ಲಿ ಜಾತಿ ಸಮಾನತೆ ಕುರಿತು ನೀಡಿದಂತದ್ದು. ಇನ್ನೊಂದು ನನ್ನ ಸಹ ದಲಿತ ಪತ್ರಕರ್ತ ಸುದೀಪ್ತೊ ಮಂಡಲ್ ನೀಡಿದಂತದ್ದು. ಅವರೀಗ ಒಬ್ಬ ಪ್ರಶಸ್ತಿ ವಿಜೇತ ಪತ್ರಕರ್ತರು ಮಾತ್ರವಲ್ಲ; ದಕ್ಷಿಣ ಭಾರತದ ಜನಪ್ರಿಯ ಡಿಜಿಟಲ್ ಮಾಧ್ಯಮವಾಗಿರುವ ನ್ಯೂಸ್ ಮಿನಿಟ್‌ನ ಸಂಪಾದಕರೂ ಆಗಿದ್ದಾರೆ.

ಸುದೀಪ್ತೋ ಮಂಡಲ್

ನೀವೇ ನೋಡಬಹುದಾದಂತೆ ಗೂಗಲ್ ಈಗಾಗಲೇ ಜಾತಿ ಸಮಾನತೆ ಕುರಿತ ನನ್ನ ನೇತೃತ್ವದಲ್ಲಿ ನಡೆದ ಮತ್ತು ಗೂಗಲ್‌ನ ಪರಿಶೀಲನಾ ಪ್ರಕ್ರಿಯೆಯೂ ಅಂಗೀಕರಿಸಿದ ಇಂತಾ ಅರ್ಥಪೂರ್ಣ ಚರ್ಚೆಗಳನ್ನು ಬೆಂಬಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದುದರಿಂದ ನನ್ನ ಉಪನ್ಯಾಸವನ್ನು ದಿಡೀರನೆ ಮುಂದೂಡಿರುವುದು- ಅದೂ ನನ್ನೊಂದಿಗೆ ಯಾವುದೇ ಚರ್ಚೆ ಇಲ್ಲದೇ ಮುಂದೂಡಿರುವುದು- ಆಘಾತಕಾರಿಯಾಗಿದೆ. ನನ್ನ ಒಬ್ಬರು ಸಹಕೆಲಸಗಾರರು/ ನೌಕರರನ್ನು ಈ ಚರ್ಚೆಯಲ್ಲಿ ಭಾಗವಹಿಸದಂತೆ ತಡೆಯುವ ಸಲುವಾಗಿ ನಿಷೇಧಿಸಲಾಯಿತು ಎಂಬುದು ಇನ್ನಷ್ಟು ತಳಮಳಕಾರಿ ವಿಷಯವಾಗಿದೆ. ಅವರು ಈ ಚರ್ಚೆಯನ್ನು ಜಾತಿಯ ಸುತ್ತಮುತ್ತ ವಿಸ್ತರಿಸಬಹುದು ಎಂಬುದು ಜನಾಂಗೀಯ ಚರ್ಚೆಗೆ ಅನುಗುಣವಾಗಿಯೇ ಇದೆ. ಅವರು ಈ ಚರ್ಚೆಯಲ್ಲಿ ಐತಿಹಾಸಿಕವಾದ ತೀವ್ರ ನೋವನ್ನು ಮತ್ತು ಮೊದಲ ಬಾರಿಗೆ ಜಾತಿಯ ಸುತ್ತಮುತ್ತ ಇರುವ ನೀಚತನವನ್ನು ಮತ್ತು ಜಾತಿ ತಾರತಮ್ಯದ ಪರಿಣಾಮಗಳನ್ನು ಅರ್ಥೈಸಿಕೊಂಡು ಬರೆಯಲು ಸಾಧ್ಯವಾಗುತ್ತದೆ. ಜಾತಿ ಸಮಾನತೆ ಕುರಿತ ತರಬೇತಿಯ ತಜ್ಞಳಾಗಿ ಮತ್ತು ಸ್ವತಃ ಜಾತಿ ತಾರತಮ್ಯವನ್ನು ಎದುರಿಸಿದವಳಾಗಿ ಈ ಚರ್ಚೆಯಲ್ಲಿ ನನ್ನ ನಿಲುವು ಎಂದರೆ, ಅದನ್ನು ದಯೆ, ಸಾಂತ್ವನ ಮತ್ತು ಕಾಳಜಿಯಿಂದ ನೋಡುವುದು. ನಾನು ಜಾತಿ ಸಮಾನತೆ ಮತ್ತು ಕಾಳಜಿಯ ನಮ್ಮ ದಾರಿಯನ್ನು ಕರಿಯ ಬೌದ್ಧ ಚಿಂತಕರಾದ ರುತ್ ಕೆಲ್ಲಿ ಮತ್ತು ರೋಂಡಾ ಮೇಯರ್ಸ್ ಅವರ ಅಭೂತಪೂರ್ವ ಕೃತಿಗಳ ಮೇಲೆ ಮತ್ತು ಕರಿಯ ಸೋಮಾಟಿಕ್ (ದೇಹ ಮನಸ್ಸುಗಳ ಅನುಸಂಧಾನ- somatics) ಪದ್ಧತಿಯನ್ನು ಅನುಸರಿಸುವ ರೆಸ್ಮಾ ಮೆನಾಕೆಮ್, ಪ್ರೆಂಟಿಸ್ ಹೆಂಫಿಲ್ ಮತ್ತು ಅಡ್ರಿಕೋನ್ ಮೇರ್ಸ್ ಬ್ರೌನ್ ವಿಧಾನಗಳ ಮೇಲೆ ನೆಲೆಗೊಳಿಸಿದ್ದೇನೆ. ಜಾತಿಗೆ ಸಂಬಂಧಿಸಿದಂತೆ ಅವರ ಪ್ರಕ್ರಿಯೆಯನ್ನು ಅಳವಡಿಸಿರುವುದರಿಂದ ನಾವು ಹೇಗೆ ತಮ್ಮ ನರಮಂಡಲವನ್ನೇ ಅಸಮಾನತೆಗೆ ಜೋಡಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಭಾಗವಹಿಸುವವರಿಗೆ ನೆರವಾಗುವ ಹೊಸ ವಿಧಾನಗಳನ್ನು ಆವಿಷ್ಕಾರ ಮಾಡಿದ್ದೇವೆ ಮತ್ತು ಜಾತಿ ಮತ್ತು ಜನಾಂಗೀಯ ಒತ್ತಡಗಳ ಸುತ್ತ ಹೆಚ್ಚು ಸ್ಥಿತಿಸ್ಥಾಪಕತ್ವ ಅಥವಾ ತಾಳ್ಮೆಯನ್ನು ಉಂಟುಮಾಡಲು ಸಾವಧಾನತೆಯನ್ನು ಬಳಸುವುದಕ್ಕೆ ಇದು ನೆರವಾಗುತ್ತದೆ.

ಇದು ಹಿಂದೆಂದಿಗಿಂತಲೂ ಈಗ ಅತೀ ಮುಖ್ಯವಾಗಿದೆ ಏಕೆಂದರೆ, ತಂತ್ರಜ್ಞಾನದಲ್ಲಿ ಜಾತಿ ತಾರತಮ್ಯವು ಈಗ ಒಂದು ಗಂಭೀರ ಸಮಸ್ಯೆಯಾಗಿದೆ. ಜಾತೀಯತೆಯು ಗೂಗಲ್‌ನಂತಾ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ವಾಷಿಂಗ್ಟನ್ ಪೋಸ್ಟ್, ವೈಸ್, ವಯರ್ಡ್, ರೆಸ್ಟ್ ಆಫ್ ದಿ ವರ್ಲ್ಡ್ ಮುಂತಾದ ವೇದಿಕೆಗಳ ವರದಿಗಳಿಂದ ಸಾಬೀತಾಗಿದೆ. ಸಿಸ್ಕೋ ಪ್ರಕರಣದ ಬಳಿಕ ಜಾತಿ ತಾರತಮ್ಯ ಅನುಭವಿಸಿದ ಗೂಗಲ್ ಸಿಬ್ಬಂದಿ ಸೇರಿದಂತೆ 250ಕ್ಕೂ ಹೆಚ್ಚು ತಂತ್ರಜ್ಞಾನ ಕ್ಷೇತ್ರದ ವ್ಯಕ್ತಿಗಳು ನಮ್ಮನ್ನು ಸಂಪರ್ಕಿಸಿದ್ದಾರೆ. ಗುರುತಿಸಲಾಗದೇ ಇದ್ದರೂ ಜಾತಿ ತಾರತಮ್ಯವು ವ್ಯಾಪಾರಕ್ಕೆ ಒಳ್ಳೆಯದಲ್ಲ. ಅದು ಅಸುರಕ್ಷಿತ ಮತ್ತು ಶತ್ರುತ್ವದ ಕೆಲಸದ ಸ್ಥಳಗಳನ್ನು ಉಂಟುಮಾಡುತ್ತದೆ. ಗೂಗಲ್‌ನ ಅತ್ಯಂತ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತವು ಕನಿಷ್ಟ 25ರಿಂದ 30 ಶೇಕಡಾ ಜಾತಿ ದಮನಿತ ಜನರನ್ನು ಒಳಗೊಂಡಿದ್ದು, ಮುಂದಿನ ನೂರು ಕೋಟಿ ಬಳಕೆದಾರರನ್ನು ಪಡೆಯುವುದಕ್ಕೆ ಅವರು ಅತೀ ಮುಖ್ಯವಾಗುತ್ತಾರೆ.

ಆದುದರಿಂದ ಜಾತಿ ಕುರಿತ ಚರ್ಚೆಗಳಿಗೆ ವಿರೋಧವನ್ನು ನಾವು ನೇರನೇರವಾಗಿ ಎದುರಿಸುವ ಅಗತ್ಯವಿದೆ. ಜಾತಿಯನ್ನು ಒಪ್ಪಿಕೊಳ್ಳುವುದರಿಂದ ಉಂಟಾಗುವ ಅಸ್ವಸ್ಥತೆಯನ್ನು ಸಾಂಸ್ಥಿಕವಾದ ತಾರತಮ್ಯದ ಜೊತೆ ಹೋಲಿಸಲು ಸಾಧ್ಯವಿಲ್ಲ. ಆದುದರಿಂದ ನಿಮ್ಮ ನೌಕರರನ್ನು ಜನಾಂಗೀಯ ಮತ್ತು ಜಾತೀಯ ನಾಗರಿಕ ಹಕ್ಕುಗಳ ನಿಯಮಗಳಿಗೆ ತೆರೆದುಕೊಳ್ಳುವಂತೆ ಸಿದ್ಧಗೊಳಿಸುವುದು ಕ್ಯಾಲಿಫೋರ್ನಿಯಾ ಮತ್ತು ಯುಎಸ್ಎಯ ಈಗಿನ ನಾಗರಿಕ ಹಕ್ಕುಗಳ ಕಾನೂನುಗಳಂತೆ ಒಂದು ಕರ್ತವ್ಯವೂ ಆಗಿದೆ. ವಾಸ್ತವಿಕವಾಗಿ ಗೂಗಲ್ ಈಗಾಗಲೇ ಇದನ್ನು ಆರಂಭಿಸಿದೆ. ಆದುದರಿಂದ ನಿಮ್ಮ ನೌಕರರಿಗೆ ಈ ಕುರಿತ ಶಿಕ್ಷಣ ನೀಡುವುದನ್ನು ಮತ್ತು ನಿಮ್ಮ ಜಾತಿ ದಮನಿತ ನೌಕರರ ರಕ್ಷಣೆಯನ್ನು ಮುಂದುವರಿಸೋಣ.

ಅದಕ್ಕಿಂತ ಹೆಚ್ಚಾಗಿ, ಮಿಸ್ಟರ್ ಪಿಚ್ಚೈಯವರೇ, ಇದು ಒಂದು ನೈತಿಕ ಕರ್ತವ್ಯವೂ ಹೌದು ಎಂಬುದನ್ನು ನೆನಪಿಸಲು ನಾನು ನಿಮಗೆ ನೇರವಾಗಿ ಬರೆಯುತ್ತಿದ್ದೇನೆ. ನಾನು ಮತ್ತು ನೀವು ತಮಿಳರು. ನೀವು ಬ್ರಾಹ್ಮಣ ಕುಟುಂಬದವರು; ನಾನು ದಲಿತ ಕುಟುಂಬದವಳು. ನೀವು ಬಂದಿರುವ ಮದುರೈಯಂತಾ ಸ್ಥಳದಲ್ಲಿ ನನ್ನಂತಾ ದಲಿತರು ಭಯಾನಕವಾದ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ. 1997ರ ಮೇಳವಳವು ಹತ್ಯಾಕಾಂಡದಲ್ಲಿ ಗ್ರಾಮದ ಚುನಾಯಿತ ದಲಿತ ಅಧ್ಯಕ್ಷ ಮತ್ತು ಇತರ ಆರು ಮಂದಿ ದಲಿತರನ್ನು ಕೊಚ್ಚಿ ಕೊಲ್ಲಲಾಯಿತು. ಯಾಕೆಂದರೆ ದಲಿತ ಅಧ್ಯಕ್ಷರು ತನ್ನ ಅಧಿಕಾರವಧಿ ಪೂರೈಸುವುದು ಪ್ರಬಲ ಜಾತಿಯ ಜನರಿಗೆ ಬೇಕಾಗಿರಲಿಲ್ಲ. ಅದಕ್ಕೆ ಬದಲಾಗಿ ಅವರು ಅವರನ್ನು ಮತ್ತು ಅವರ ಬೆಂಬಲಿಗರನ್ನು ಕೊಲೆಮಾಡುವುದೇ ಸರಿ ಎಂದು ಅವರು ಭಾವಿಸಿದರು. ಇದು ಒಂದು ಬಿಡಿ ಘಟನೆಯಲ್ಲ; ನಿಯಮವೇ ಆಗಿಬಿಟ್ಟಿದೆ.

ಮದುರೈಯ ಹಲವಾರು ಜಾತಿ ವಿರೋಧಿ ಕಾರ್ಯಕರ್ತರು ತಮ್ಮ ದೇಹದಲ್ಲಿ ಗಾಯದ ಕಲೆಗಳನ್ನು ಹೊಂದಿದ್ದಾರೆ. ಯಾಕೆಂದರೆ, ಜಾತಿ ಗಡಿಗಳನ್ನು ದಾಟಿದ್ದಕ್ಕಾಗಿ ಪ್ರಬಲ ಜಾತಿಯವರು ಅವರ ಮುಖ ಮತ್ತು ಕೈಗಳನ್ನು ಚೂರಿಯಿಂದ ಸೀಳಿದ್ದಾರೆ. ಎವಿಡೆನ್ಸಸ್‌ನಂತಹ ಸಂಘಟನೆಗಳು ಇಂತಾ ಪ್ರತಿಯೊಂದು ಪ್ರಕರಣವನ್ನು ದಾಖಲಿಸಿ, ಇಂತಾ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿವೆ. ಮದುರೈ ಮಾತ್ರವಲ್ಲ; ಇಡೀ ದಕ್ಷಿಣ ಏಷ್ಯಾದಲ್ಲಿ ಜಾತಿ ತಾರತಮ್ಯ ವ್ಯಾಪಕವಾಗಿರುವುದರಿಂದ ಇದು ಕಷ್ಟದ ಕೆಲಸ. ನಾವೀಗ ನಮ್ಮ ತಾಯಿನಾಡಿನಿಂದ ದೂರವಿರುವುದರ ಹೊರತಾಗಿಯೂ ಜಾತಿಯ ಭಯಾನಕತೆಗಳು ನಮ್ಮಿಬ್ಬರನ್ನೂ ರೂಪಿಸಿವೆ. ಆದುದರಿಂದ ಆತ್ಮಸಾಕ್ಷಿ ಇರುವ ಜನರಾಗಿ, ಇಂತಾ ಜಾತಿ ತಾರತಮ್ಯವು ನಮ್ಮ ಜನರನ್ನು ಅವ್ಯಾಹತವಾಗಿ ಹಿಡಿತದಲ್ಲಿ ಇಟ್ಟುಕೊಂಡಿರುವಾಗ ನಾವು ಬೇರೆ ಕಡೆ ಮುಖ ತಿರುಗಿಸಲು ಸಾಧ್ಯವಿಲ್ಲ.

ಜಾತಿ ಅನುಕೂಲತೆ ಇರುವ ವ್ಯಕ್ತಿಯಾಗಿ ನೀವೀಗ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಈ ಸಮಸ್ಯೆಯ ಪರಿಹಾರಕ್ಕಾಗಿ ಸರಿಯಾದುದನ್ನು ಮಾಡಬಲ್ಲ ಮತ್ತು ಈ ಕುರಿತ ಚರ್ಚೆಯನ್ನು ಗೌರವಾರ್ಹವಾಗಿ ಮುನ್ನಡೆಸಬಲ್ಲ ಸ್ಥಾನದಲ್ಲಿದ್ದೀರಿ. ಜಾತಿಯ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದೇ ಇರಬಹುದಾದ ಮಿಸ್ ಪಾರ್ಕರ್ ಅವರಿಗೆ ವ್ಯತಿರಿಕ್ತವಾಗಿ ನೀವಂತೂ ಜಾತಿ ಮತ್ತು ಅದು ತಮಿಳುನಾಡಿನಾದ್ಯಂತ ಮಾಡುತ್ತಿರುವ ಪರಿಣಾಮಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿದ್ದೀರಿ.

ಇಲ್ಲಿ ನೀಡಲಾದ ಅಂಕಿಅಂಶಗಳು ಕನಿಷ್ಟ ಅಂದಾಜು ಮಾತ್ರ. ದಕ್ಷಿಣ ಏಷ್ಯಾದಲ್ಲಿ ಈ ಶೇಕಡಾವಾರು ಹೆಚ್ಚಾಗಿರುವ ಸಾಧ್ಯತೆಯಿದೆ. ಈ ಲೇಖನಗಳಲ್ಲಿ ಇದನ್ನು ನೋಡಬಹುದು.

ನಿಮ್ಮ ಹಿನ್ನೆಲೆಯು ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿ, ಅಂತಿಮವಾಗಿ ಈಗ ಗೂಗಲ್‌ನ ಸಿಇಓ ಆಗಲು ನಿಮಗೆ ದಾರಿಮಾಡಿಕೊಟ್ಟಿದೆ. ಪ್ರತೀ ಜಾತಿ ದಮನಿತ ವ್ಯಕ್ತಿಗೆ ಇಂತದ್ದೇ ಅವಕಾಶ ಸಿಗಬೇಕು. ಆದರದು ಸಿಗುತ್ತಿಲ್ಲ. ನನ್ನಂತಹ ಸಲಹಾಗಾರ್ತಿ ಕೂಡಾ ನೀವು ನೇತೃತ್ವ ವಹಿಸಿರುವ ಸಂಸ್ಥೆಯಲ್ಲಿ ಕೆಟ್ಟ ಜಾತಿ ಅಪಮಾನಗಳನ್ನು ಎದುರಿಸಬೇಕಾಗಿದೆ. ಹೀಗಿರುವಾಗ ಗೂಗಲ್‌ನ ಜಾತಿ ದಮನಿತ ನೌಕರರು ಮುಂದೆ ಬಂದಲ್ಲಿ ಅವರು ಏನನ್ನು ಎದುರಿಸಬೇಕಾಗಬಹುದು ಎಂದು ಊಹಿಸಿ ನೋಡಿ.

ಇದನ್ನೂ ಓದಿ: ‘ಜಾತಿ ಸಮಾನತೆ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯ’ ಎಂದ ಉದ್ಯೋಗಿಗಳು: ದಲಿತ ಹೋರಾಟಗಾರ್ತಿಯ ಭಾಷಣ ರದ್ದು ಮಾಡಿದ ಗೂಗಲ್!

ಆದುದರಿಂದಲೇ ಕ್ಯಾಲಿಫೋರ್ನಿಯಾ ಫ್ಯಾಕಲ್ಟಿ ಅಸೋಸಿಯೇಶನ್, ಕ್ಯಾಲಿಫೋರ್ನಿಯಾ ಟ್ರೇಡ್ ಜಸ್ಟಿಸ್ ಕೊಲೇಶನ್, ಏಶ್ಯನ್ ಪೆಸಿಫಿಕ್ ಅಮೇರಿಕನ್ ಲೇಬರ್ ಅಲಯೆನ್ಸ್, ಎಎಫ್‌ಎಲ್-ಸಿಐಓ ಮುಂತಾದ ಸಂಸ್ಥೆಗಳು ಜಾತಿ ಸಮಾನತೆಯ ಪರವಾಗಿ ಜೊತೆಸೇರಿವೆ ಮತ್ತು ನಿತ್ಯವೆಂಬಂತೆ ಹಿಂಸೆ, ತಾರತಮ್ಯ ಎದುರಿಸುತ್ತಿರುವ ನೌಕರರು ಮತ್ತು ನನ್ನಂತ ಸಲಹೆಗಾರರ ಹಕ್ಕುಗಳ ರಕ್ಷಣೆಗಾಗಿ ಜಾತಿಯನ್ನು ರಕ್ಷಿತ ವಿಭಾಗವಾಗಿ ಸೇರಿಸಿಕೊಳ್ಳಬೇಕು ಎಂದು ಗೂಗಲ್‌ನಂತಹ ಸಂಸ್ಥೆಗಳನ್ನು ಕೇಳಿಕೊಳ್ಳುತ್ತಿವೆ.

ನೀವಿಬ್ಬರೂ ನಿಮ್ಮ ಕರ್ತವ್ಯಗಳನ್ನು ಪರಿಗಣಿಸಬೇಕು ಮತ್ತು  ಸಮಾನತೆಯ ಪ್ರಗತಿಯನ್ನು ನಿಲ್ಲಿಸಲು ಕರ್ಮಠ ಶಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಕೇಳಿಕೊಳ್ಳುತ್ತೇನೆ. ಈ ವಿಷಯಗಳ ಕುರಿತು ನಿಮ್ಮ ತಂಡದೊಂದಿಗೆ ನೇರವಾಗಿ ಮಾತುಕತೆ ನಡೆಸಲು ಸಂತೋಷಪಡುತ್ತೇನೆ. ಜೊತೆಗೆ ಜಾತಿಯ ಕುರಿತ ಚರ್ಚೆಯನ್ನು ಒಪ್ಪದಿರಬಹುದಾದ ಜನರ ಮಾತುಗಳನ್ನು ಆಲಿಸುವುದನ್ನು ಮುಂದುವರಿಸಬೇಕೆಂದೂ ಕೇಳಿಕೊಳ್ಳುತ್ತೇನೆ. ಆದರೆ, ಅವರ ಅಲ್ಪ ಸಂಖ್ಯಾತ ಮತ್ತು ಅಮುಖ್ಯ ಅಭಿಪ್ರಾಯಗಳು ಜಾತಿ ತಾರತಮ್ಯದ ಕುರಿತ ಚರ್ಚೆಯ ಮುಂದುವರಿಕೆಗೆ ಅಡ್ಡಿಯಾಗಲು ಬಿಡಬಾರದು. ದಲಿತರೂ ಸೇರಿದಂತೆ ತಮ್ಮ ಸಹೋದ್ಯೋಗಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅವರು ಉದ್ದೇಶಪೂರ್ವಕವಾಗಿ ಕಲಿತುಕೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಅವರು ಒಪ್ಪದೆ ಇದ್ದರೆ, ಒಪ್ಪದೇ ಇರುವುದು- ತಾರತಮ್ಯ ಮಾಡುವುದಕ್ಕೆ ಸಮನಲ್ಲ ಎಂಬುದನ್ನು ತಿಳಿದುಕೊಳ್ಳಲಿ. ಇದುವೇ ನಾವು ನಮ್ಮ ಸಮುದಾಯಗಳಲ್ಲಿ ಪರಿಹರಿಸಲು ಆಶಿಸುವ ವಿಷಯವಾಗಿದೆ.

ನಿಮ್ಮ ತಂಡಗಳ ಜೊತೆ ಇನ್ನಷ್ಟು ಕೆಲಸ ಮಾಡುವುದನ್ನು ಎದುರುನೋಡುತ್ತಿದ್ದೇನೆ ಮತ್ತು ನಿಮ್ಮ ಮುಂದಿನ ಕ್ರಮಗಳಿಗಾಗಿ ಕಾಯುತ್ತಿದ್ದೇನೆ.

ತೇನ್‌ಮೋಳಿ ಸೌಂದರರಾಜನ್,

ಎಕ್ಸಿಕ್ಯೂಟಿವ್ ಡೈರೆಕ್ಟರ್, ಇಕ್ವಾಲಿಟಿ ಲ್ಯಾಬ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...