ರಿಯಲ್ ಎಸ್ಟೇಟ್ ಉತ್ತೇಜನಕ್ಕೆ ಸ್ಟಾಂಪ್ ಶುಲ್ಕ ಕಡಿತಗೊಳಿಸಿದ ಮಹಾರಾಷ್ಟ್ರ ಸರ್ಕಾರ!
Photo Courtesy: Realty Plus Magazine

ಕೊರೊನಾ ಲಾಕ್‌ಡೌನ್‌ ಕಾರಣದಿಂದ ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಉತ್ತೇಜಿಸಲು, ಮಹಾರಾಷ್ಟ್ರ ಸರ್ಕಾರ 2020 ರ ಡಿಸೆಂಬರ್ 31 ರವರೆಗೆ ವಸತಿ ಘಟಕಗಳ ಮೇಲಿನ ಸ್ಟಾಂಪ್ ಶುಲ್ಕವನ್ನು ಶೇ. 5 ರಿಂದ ಶೇ. 2 ಕ್ಕೆ ತಾತ್ಕಾಲಿಕವಾಗಿ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 26 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2021 ರ ಜನವರಿ 1 ರಿಂದ ಮಾರ್ಚ್ 31, 2021 ರವರೆಗೆ ಮೂರು ತಿಂಗಳ ಕಾಲ ಸ್ಟಾಂಪ್ ಶುಲ್ಕ ಶೇ. 3 ರಷ್ಟು ಇರುತ್ತದೆ ಎಂದು ತಿಳಿದು ಬಂದಿದೆ.

ಸಾಂಕ್ರಾಮಿಕ ಸಮಯದಲ್ಲಿ ಆಸ್ತಿ ಖರೀದಿಸಲು ಮನೆ ಕೊಳ್ಳುವವರನ್ನು ಉತ್ತೇಜಿಸುವ ಸಲುವಾಗಿ ಸ್ಟಾಂಪ್ ಶುಲ್ಕವನ್ನು ಕಡಿತಗೊಳಿಸುವಂತೆ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಸರ್ಕಾರವನ್ನು ಈ ಹಿಂದೆ ಒತ್ತಾಯಿಸಿದ್ದರು.

“ಈ ಕ್ರಮವು ಗ್ರಾಹಕರಿಗೆ ಅನುಕೂಲವಾಗಲಿದೆ ಮತ್ತು ಉದ್ಯೋಗ ಸೃಷ್ಟಿಯೊಂದಿಗೆ ಹಲವು ಕೈಗಾರಿಕೆಗಳಿಗೆ ಉತ್ತೇಜನವನ್ನು ನೀಡುತ್ತದೆ. ಈ ಹಿಂದೆ ಸ್ಟಾಂಪ್ ಶುಲ್ಕವನ್ನು ಕಡಿಮೆ ಮಾಡಿದಾಗಲೆಲ್ಲಾ, ಇದು ಸರ್ಕಾರಿ ಖಜಾನೆಯ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಕ್ರೆಡೈ ನ್ಯಾಷನಲ್ ನ ಅಧ್ಯಕ್ಷ ಜಾಕ್ಸೆ ಷಾ ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

“ಇದು ಸರ್ಕಾರವು ತೆಗೆದುಕೊಂಡ ಪೂರ್ವಭಾವಿ ಕ್ರಮವಾಗಿದೆ. ಇದು ಖಂಡಿತ ಅಗತ್ಯವಾಗಿದ್ದು, ಖರೀದಿದಾರರಿಗೆ ಮನೆಗಳನ್ನು ಖರೀದಿಸಲು ಪ್ರೋತ್ಸಾಹವನ್ನು ನೀಡುತ್ತದೆ” ಎಂದು ಕಾನ್ಫಿಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಮಗರ್ ತಿಳಿಸಿದರು.

ಇದನ್ನೂ ಓದಿ: ಬೇಹುಗಾರಿಕಾ ಬಂಡವಾಳಶಾಹಿಗಳು ಕೂತಲ್ಲೇ ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆ – ಭಾಗ 1

ಕರ್ನಾಟಕದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಟ್ವೀಟ್ ಮಾಡಿ “ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಇದು ಸರಿಯಾದ ನಿರ್ಧಾರವಾಗಿದೆ. ಕರ್ನಾಟಕ ಸರ್ಕಾರವೂ ಸಹ ಸ್ಟಾಂಪ್ ಶುಲ್ಕವನ್ನು ಕಡಿಮೆ ಮಾಡಿ ಆರ್ಥಿಕತೆಯನ್ನು ಉತ್ತೇಜಿಸಬೇಕು” ಎಂದಿದ್ದಾರೆ.

“ಡಿಸೆಂಬರ್ 31 ರವರೆಗೆ ಸ್ಟಾಂಪ್ ಶುಲ್ಕವನ್ನು 5% ರಿಂದ 2% ಕ್ಕೆ ಇಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಎಂಎಂಆರ್ ರಿಯಾಲ್ಟಿಯ ಪುನರುಜ್ಜೀವನಕ್ಕೆ ಸಹಕಾರಿಯಾಗಿದೆ. ಕೊರೊನಾ ರೋಗದ ಮಧ್ಯೆ ಕುಂಠಿತಗೊಂಡಿರುವ ವಲಯಕ್ಕೆ ಇದು ಹೆಚ್ಚು ಅಗತ್ಯವಾಗಿದೆ. ಸ್ಟಾಂಪ್ ಶುಲ್ಕದ ಕಡಿಮೆ ವೆಚ್ಚವು ಮೊದಲ ಬಾರಿಗೆ ವ್ಯವಹರಿಸುವ ಮನೆ ಕೊಳ್ಳುವವರು ಮತ್ತು ಮರುಮಾರಾಟ ಮಾಡುವ ಫ್ಲಾಟ್ ಖರೀದಿದಾರರನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ” ಎಂದು ಕ್ರೆಡೈ-ಎಂಸಿಐಐ ಅಧ್ಯಕ್ಷ ನಯನ್ ಷಾ ಹೇಳಿದರು.

ಆಗಸ್ಟ್ 15 ರಂದು ರಾಜ್ಯ ಕಂದಾಯ ಸಚಿವ ಬಾಲಾಸಾಹೇಬ್ ಥೋರತ್ ಅವರು ರಾಜ್ಯದಲ್ಲಿ ಆಸ್ತಿ ನೋಂದಣಿಯ ಮೇಲಿನ ಸ್ಟಾಂಪ್ ಶುಲ್ಕವನ್ನು 2 ರಿಂದ 3 ಪ್ರತಿಶತದಷ್ಟು ಕಡಿತಗೊಳಿಸುವ ಸುಳಿವು ನೀಡಿದ್ದರು.

ಮುಂಬೈ, ಎಂಎಂಆರ್‌ಡಿಎ ಪ್ರದೇಶ ಮತ್ತು ಪುಣೆಗೆ ಎರಡು ವರ್ಷಗಳ ಅವಧಿಗೆ ಆಸ್ತಿಗಳ ಸ್ಟಾಂಪ್ ಶುಲ್ಕವನ್ನು 1% ರಷ್ಟು ಕಡಿಮೆಗೊಳಿಸುವುದಾಗಿ ಮಾರ್ಚ್ 6 ರಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು.

ಇತರ ಪ್ರಮುಖ ರಾಜ್ಯಗಳಲ್ಲಿನ ಸ್ಟಾಂಪ್ ಡ್ಯೂಟಿ ದರಗಳು ಹೆಚ್ಚಾಗಿ 5-8 ಪ್ರತಿಶತದ ನಡುವೆ ಇದೆ. ಆದರೆ ಕೆಲವು ರಾಜ್ಯಗಳಲ್ಲಿ ಮಹಿಳೆಯರ ಹೆಸರಿನಲ್ಲಿ ಆಸ್ತಿ ನೋಂದಣಿಯನ್ನು ಮಾಡಿಸಿದರೆ ಸ್ಟಾಂಪ್ ಶುಲ್ಕ ಕಡಿಮೆ ಇದೆ.

ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಮಹಿಳಾ ಖರೀದಿದಾರರಿಗೆ ಸ್ಟಾಂಪ್ ಶುಲ್ಕದಲ್ಲಿ ವಿನಾಯತಿ ನೀಡಿವೆ.


ಇದನ್ನೂ ಓದಿ: ರಿಯಲ್ ಎಸ್ಟೇಟ್ ಹಗರಣದ ಕೇಸಿನಿಂದ ಬಚಾವಾಗಲು ಬಿಜೆಪಿ ಸೇರಿದರಾ ಗೌತಮ್ ಗಂಭೀರ್

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts