Homeಮುಖಪುಟಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ದಾಳಿಗೆ ನಾಲ್ವರು ಬಲಿ, 5 ಜಿಲ್ಲೆಗಳಲ್ಲಿ ಕರ್ಫ್ಯೂ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ದಾಳಿಗೆ ನಾಲ್ವರು ಬಲಿ, 5 ಜಿಲ್ಲೆಗಳಲ್ಲಿ ಕರ್ಫ್ಯೂ

- Advertisement -
- Advertisement -

ಸುದೀರ್ಘ ಜನಾಂಗೀಯ ಸಂಘರ್ಷದ ಬಳಿಕ ಶಾಂತತೆಗೆ ಮರಳುತ್ತಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದೆ. ಜನವರಿ 1ರಂದು, ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಾಲ್ಕು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತೆ ಹಿಂಸಾಚಾರದ ಘಟನೆಯ ಹಿನ್ನೆಲೆ ರಾಜ್ಯದ ಐದು ಕಣಿವೆ ಜಿಲ್ಲೆಗಳಾದ ತೌಬಾಲ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಕರ್ಫ್ಯೂ ಸಡಿಲಿಕೆ ಆದೇಶವನ್ನು ರದ್ದುಪಡಿಸಲಾಗಿದೆ ಮತ್ತು ತೌಬಲ್ ಜಿಲ್ಲಾ ವ್ಯಾಪ್ತಿಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಜಿಲ್ಲಾದ್ಯಂತ ಅಲ್ಲಿನ ನಿವಾಸಿಗಳು ಹೊರತು, ಹೊರಗಿನವರ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎ ಸುಭಾಷ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಆರೋಗ್ಯ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ನ್ಯಾಯಾಲಯಗಳ ಸಿಬ್ಬಂದಿ ಸೇರಿದಂತೆ ಅತ್ಯಗತ್ಯ ಸೇವೆ ಮತ್ತು ವ್ಯಕ್ತಿಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ತೌಬಲ್‌ ಜಿಲ್ಲೆಯ ಲಿಲಾಂಗ್‌ನಲ್ಲಿ ಗುಂಡಿನ ದಾಳಿ ನಡೆದು ಐವರು ಮೃತಪಟ್ಟಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಪರಿಚಿತ ಮುಸುಕುಧಾರಿಗಳು ಲಿಲಾಂಗ್ ಚಿಂಗ್ಜಾವೊ ಪ್ರದೇಶದಲ್ಲಿ ಏಕಾಏಕಿ ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

ವರದಿಗಳ ಪ್ರಕಾರ, ದಾಳಿಕೋರರು ಸ್ಥಳೀಯ ವ್ಯಕ್ತಿಯಿಂದ ಹಣ ವಸೂಲಿ ಮಾಡಲು ಬಂದಿದ್ದರು. ಈ ವೇಳೆ ಸ್ಥಳೀಯರು ಅವರನ್ನು ಓಡಿಸಿದ್ದಾರೆ. ಹಿಂದಿರುಗಿ ಹೋಗುವ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ನಾಲ್ವವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ದಾಳಿಕೋರರು ಆಗಮಿಸಿದ್ದ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅವು ಯಾರಿಗೆ ಸೇರಿದ್ದು ಎಂಬುದು ತಿಳಿದುಬಂದಿಲ್ಲ.

ಹಿಂಸಾಚಾರದ ಮರುಕಳಿಸಿರುವ ಬಗ್ಗೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಜನರು, ವಿಶೇಷವಾಗಿ ಲಿಲಾಂಗ್ ನಿವಾಸಿಗಳಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಲಿಲಾಂಗ್‌ನಲ್ಲಿ ಗುಂಡಿನ ದಾಳಿ ಘಟನೆಯ ಹಿಂದಿರುವವರನ್ನು ಬಂಧಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಲಿಲಾಂಗ್ ಕ್ಷೇತ್ರದ ಶಾಸಕ ಅಬ್ದುಲ್ ನಾಸಿರ್ ಅವರು ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಗೆ ತಿಳಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಈ ಪ್ರದೇಶದಲ್ಲಿ ಭದ್ರತೆ ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 30,2023ರಂದು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೈತೇಯಿ ಮತ್ತು ಕುಕಿ ಗುಂಪುಗಳ ನಡುವೆ ಹಿಂಸಾಚಾರ ನಡೆದಿತ್ತು. ಇದರಲ್ಲಿ ಮೈತೇಯಿ ಗುಂಪಿನ ಒಬ್ಬರು ಮೃತಪಟ್ಟಿದ್ದರು. ಮತ್ತೊಂದು ಕಲಹ ಗಡಿ ಪಟ್ಟಣವಾದ ಮೋರೆಯಲ್ಲಿ ಮಣಿಪುರ ಪೊಲೀಸ್ ಕಮಾಂಡೋಗಳು ಮತ್ತು ಬಂಡುಕೋರರ ನಡುವೆ ನಡೆದಿತ್ತು. ಇದರಲ್ಲಿ ಒಬ್ಬರು ಕಮಾಂಡೋ ಸಿಬ್ಬಂದಿ ಗುಂಡಿನ ದಾಳಿಯಿಂದ ಗಾಯಗೊಂಡಿದ್ದರು.

ತಂಬ್‌ನೈಲ್ ಫೈಲ್ ಫೋಟೋ

ಇದನ್ನೂ ಓದಿ: 1992ರ ಹುಬ್ಬಳ್ಳಿ ಹಿಂಸಾಚಾರ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read