Homeಮುಖಪುಟಮೋದಿ ಸರಕಾರದ 89 ಕಾರ್ಯದರ್ಶಿಗಳಲ್ಲಿ ಕೇವಲ ಮೂವರು ಎಸ್‌ಟಿ, ಒಬ್ಬ ದಲಿತ, ಒಬಿಸಿ ಇಲ್ಲವೇ ಇಲ್ಲ

ಮೋದಿ ಸರಕಾರದ 89 ಕಾರ್ಯದರ್ಶಿಗಳಲ್ಲಿ ಕೇವಲ ಮೂವರು ಎಸ್‌ಟಿ, ಒಬ್ಬ ದಲಿತ, ಒಬಿಸಿ ಇಲ್ಲವೇ ಇಲ್ಲ

- Advertisement -
- Advertisement -

ದೇಶದಲ್ಲಿ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ಜಾತಿಗಳವರ ಪ್ರಾತಿನಿಧ್ಯ ಕೇಂದ್ರ ಸರಕಾರದ ಉನ್ನತ ಹುದ್ದೆಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ನಗಣ್ಯವಾಗಿದ್ದು, ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿಯ ಅಧಿಕಾರಿಗಳದ್ದೇ ಕಾರುಬಾರು ನಡೆಯುತ್ತಿರುವುದು ದೇಶದ ಸಾಮಾಜಿಕ ಅಸಮಾನತೆಗೆ ಹಿಡಿದ ಕನ್ನಡಿಯಾಗಿದೆ.

ಕೇಂದ್ರ ಸರಕಾರದ 89 ಕಾರ್ಯದರ್ಶಿಗಳಲ್ಲಿ ಪರಿಶಿಷ್ಟ ಜಾತಿಯ ಒಬ್ಬರೇ ಒಬ್ಬರು ಇದ್ದಾರೆ. ಕೇವಲ ಮೂವರು ಪರಿಶಿಷ್ಟ ಬುಡಕಟ್ಟುಗಳವರಿದ್ದು, ಇತರ ಹಿಂದುಳಿದ ಜಾತಿಗಳ ಒಬ್ಬರೇ ಒಬ್ಬರು ಇಲ್ಲ! ಇದು ಸಂಸತ್ತಿನಲ್ಲಿ ಮಂಡಿಸಲಾದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆಯ ಇತ್ತೀಚಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಈ ಕಾರ್ಯದರ್ಶಿಗಳಲ್ಲಿ ಬಹುತೇಕರು ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್)ಗೆ ಸೇರಿದವರು. ಎಸ್‌ಸಿ, ಎಸ್‌ಟಿ, ಒಬಿಸಿ ಪ್ರಾತಿನಿಧ್ಯವು ಕೇಂದ್ರ ಸರಕಾರಿ ಇಲಾಖೆ/ಸಚಿವಾಲಯಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರ ಮಟ್ಟದಲ್ಲಿಯೂ ತೀರಾ ನಗಣ್ಯವಾಗಿದೆ.

ಉದಾಹರಣೆಗೆ 93 ಮಂದಿ ಹೆಚ್ಚುವರಿ ಕಾರ್ಯದರ್ಶಿಗಳ ಪೈಕಿ ಕೇವಲ ಆರು ಮಂದಿ ಎಸ್‌ಸಿಯವರಿದ್ದಾರೆ ಐವರು ಎಸ್‌ಟಿಯವರು ಇಲ್ಲಿಯೂ ಒಬ್ಬರೇ ಒಬ್ಬರು ಒಬಿಸಿಯವರಿಲ್ಲ. ಒಟ್ಟು 275 ಜಂಟಿ ಕಾರ್ಯದರ್ಶಿಗಳಲ್ಲಿ 13 ( 4.73 ಶೇಕಡಾ) ಎಸ್‌ಸಿಗಳಿದ್ದರೆ, ಒಂಬತ್ತು ಮಂದಿ (3.27 ಶೇಕಡಾ) ಎಸ್‌ಟಿಯವರಿದ್ದು, ಕೇವಲ 19 ಮಂದಿ ಮಾತ್ರ ಒಬಿಸಿಯವರಿದ್ದಾರೆ.

ಎಸ್‌ಸಿ, ಎಸ್‌ಟಿ, ಒಬಿಸಿಯವರು ಸೇವೆಗೆ ಪ್ರವೇಶಿಸುವ ವಯಸ್ಸಿನ ಸರಾಸರಿ ಹೆಚ್ಚಾಗಿರುವುದರಿಂದ ಅವರ ಬ್ಯಾಚ್ ಕೇಂದ್ರ ಸರಕಾರದ ಕಾರ್ಯದರ್ಶಿ ಹುದ್ದೆಯ ಪರಿಗಣನೆಗೆ ಬರುವ ಮೊದಲೇ ಅವರು ನಿವೃತ್ತರಾಗುತ್ತಾರೆ ಎಂದು ಕೇಂದ್ರ ಮಂತ್ರಿ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ಸಚಿವಾಲಯವು 1993ರಿಂದ ಅಂದರೆ ಒಬಿಸಿ ಮೀಸಲಾತಿಯನ್ನು ಆರಂಭಿಸಿದಂದಿನಿಂದ ಒಬಿಸಿ ಕುರಿತ ಅಂಕಿಅಂಶಗಳನ್ನು ಇಟ್ಟುಕೊಳ್ಳುತ್ತಿದೆ. ಮಂಡಲ್ ಆಯೋಗದ ಶಿಫಾರಸಿನ ಪ್ರಕಾರ ಸರಕಾರಿ ಉದ್ಯೋಗಗಳಲ್ಲಿ ಒಬಿಸಿಯವರಿಗೆ 27.5 ಶೇಕಡಾ, ಎಸ್‌ಸಿಯವರಿಗೆ 15 ಶೇಕಡಾ ಮತ್ತು ಎಸ್‌ಟಿಯವರಿಗೆ 7.5 ಶೇಕಡಾ ಮೀಸಲಾತಿ ಕಡ್ಡಾಯವಾಗಿದೆ. ಈ ಕುರಿತು ‘ದಿ ಪ್ರಿಂಟ್’ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು ಅಧಿಕೃತ ಹೇಳಿಕೆಗಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಪ್ರವೇಶದ ವಯಸ್ಸು ಹೆಚ್ಚು

ತೃಣಮೂಲ ಕಾಂಗ್ರೆಸ್‌ನ ನಾಯಕ ದಿಬ್ಯೇಂದು ಅಧಿಕಾರಿಯವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಸಚಿವಾಲದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮೀಸಲಾತಿ ವಿಭಾಗಗಳಿಗೆ ಸೇರಿದವರಲ್ಲಿ ಹೆಚ್ಚಿನವರು ಸೇವೆಯನ್ನು ಪ್ರವೇಶಿಸುವಾಗಲೇ ಹೆಚ್ಚು ವಯಸ್ಸಾಗಿರುವುದರಿಂದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುವ ಮೊದಲೇ ನಿವೃತ್ತರಾಗುತ್ತಾರೆ ಎಂದು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಭಾರತ ಸರಕಾರದ ಉನ್ನತ ಸ್ಥಾನಗಳಲ್ಲಿ ಅವರ ಪ್ರಾತಿನಿಧ್ಯ ಹೋಲಿಕೆಯಲ್ಲಿ ಕಡಿಮೆಯಾಗಿದೆ. ಆದರೆ, ಪರಿಗಣನೆಗೆ ಬರುವ ಮೀಸಲಾತಿ ವಿಭಾಗದ ಅಧಿಕಾರಿಗಳಲ್ಲಿ ಸಾಧ್ಯವಿದ್ದಷ್ಟು ಹೆಚ್ಚಿನ ಪ್ರಾತಿನಿಧ್ಯ ನೀಡಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

‘ಮೇಲೇರಲು ಅವಕಾಶ ನಿರಾಕರಣೆ’ 
ಆದರೆ ಪರಿಶಿಷ್ಟ ಜಾತಿಗೆ ಸೇರಿದ, ಹಿಂದೆ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಿಂದೆ ಬಿಜೆಪಿಯಲ್ಲಿದ್ದ ಸಂಸದ ಉದಿತ್ ರಾಜ್ ಅವರು ಮಾತನಾಡಿ, ಎಸ್‌ಸಿ ಮತ್ತು ಎಸ್‌ಟಿ ವಿಭಾಗಗಳಿಗೆ ಸೇರಿದ ಅಧಿಕಾರಿಗಳನ್ನು ಬಹುತೇಕ ಸಲ ಗುರಿಮಾಡಿಕೊಂಡು ಅವರು ಮೇಲಿನ ಹುದ್ದೆಗಳಿಗೆ ಬರದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿದರು.

“ದಲಿತನಾದ ಮಾಜಿ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿ ನಾನು ನನ್ನ ಅನುಭವದಿಂದ ಹೇಳಬಲ್ಲೆ. ಚಿಕ್ಕಪುಟ್ಟ ಕಾರಣಗಳಿಗಾಗಿ ಎಸ್‌ಸಿ/ಎಸ್‌ಟಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುತ್ತದೆ ಮತ್ತು ಮೇಲಾಧಿಕಾರಿಗಳು ಅವರ ಸೇವಾದಾಖಲೆಯನ್ನು ಬೇಕೆಂದೇ ಹಾಳುಗೆಡವುತ್ತಾರೆ” ಎಂದು ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಉದಿತ್ ರಾಜ್ ಹೇಳಿದರು.

“ನಾನು ಹಿಂದೆ ಬಿಜೆಪಿಯಲ್ಲಿದ್ದಾಗ ಹಿರಿಯ ಅಧಿಕಾರಿವರ್ಗದಲ್ಲಿ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯ ಕಡಿಮೆ ಇರುವುದರ ಬಗ್ಗೆ ಪ್ರತಿಭಟಿಸಿದ್ದೆ. ಆದರೆ, ಯಾರೂ ಅದಕ್ಕೆ ಯಾವುದೇ ಗಮನ ಕೊಡಲಿಲ್ಲ. ಆದರೆ, ಈ ಪ್ರಶ್ನೆ  ಎತ್ತಿದ್ದಕ್ಕಾಗಿ ನಾನು ಬೆಲೆ ತೆರಬೇಕಾಯಿತು” ಎಂದು ಅವರು ಹೇಳಿದರು.
ಇತರ ಕಾರಣಗಳು ಈ ತಾರತಮ್ಯದ ಪ್ರಾತಿನಿಧ್ಯ್ಯಕ್ಕೆ ಮುಖ್ಯ ಕಾರಣವೆಂದರೆ ಕೇಂದ್ರ ನಿಯೋಜನೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ಮೀಸಲಾತಿಯನ್ನು ಪರಿಗಣನೆಗೆ ಬರದೇ ಇರುವುದು ಎಂದು ಮಾಜಿ ಐಎಎಸ್ ಅಧಿಕಾರಿಯೊಬ್ಬರು ‘ದಿ ಪ್ರಿಂಟ್’ಗೆ ತಿಳಿಸಿದರು.

“ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಅಧಿಕಾರಿಗಳ ವೃಂದದಿಂದ ಆಯ್ಕೆ ಮಾಡಲಾಗುತ್ತದೆ. ಆ ವೃಂದದಲ್ಲಿ ಎಸ್‌ಸಿ/ಎಸ್‌ಟಿ/ ಒಬಿಸಿ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಸಹಜವಾಗಿಯೇ ಅವರ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಈ ಅಧಿಕಾರಿ ಹೇಳಿದರು.

“ಕೆಲವು ಸಲ ಐಎಎಸ್ ಅಧಿಕಾರಿಗಳು ನಿಯೋಜನೆ ಮೇರೆಗೆ ಕೇಂದ್ರ ಸರಕಾರದ ಸೇವೆಗೆ ಬರಲು ಇಚ್ಛಿಸುವುದಿಲ್ಲ ಇಲ್ಲವೇ ರಾಜ್ಯ ಸರಕಾರಗಳು ಅವರನ್ನು ಸೇವೆಯಿಂದ ಬಿಡುಗಡೆ ಮಾಡುವುದಿಲ್ಲವಾದುದರಿಂದ ಕೇಂದ್ರ ಸರಕಾರದ ಉನ್ನತ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ/ ಒಬಿಸಿ ಪ್ರಾತಿನಿಧ್ಯ ಕಡಿಮೆ ಇದೆ ಎಂದು ಸದ್ಯ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಯೊಬ್ಬರು ಹೇಳಿದರು.

ಆಧಾರ; ದಿ ಪ್ರಿಂಟ್

ಮರುನಿರೂಪನೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...