Homeಮುಖಪುಟಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದಾಗ ದೇಶದ ಹೆಚ್ಚಿನ ಶಾಲೆಗಳಲ್ಲಿ ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕವಿರಲಿಲ್ಲ: ವರದಿ

ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದಾಗ ದೇಶದ ಹೆಚ್ಚಿನ ಶಾಲೆಗಳಲ್ಲಿ ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕವಿರಲಿಲ್ಲ: ವರದಿ

- Advertisement -
- Advertisement -

ದೇಶದ ಒಟ್ಟು 14,89,115 ಶಾಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶಾಲೆಗಳು (55.5% ರಷ್ಟು) ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿಲ್ಲ ಮತ್ತು 2021-22 ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಕಾರಣದಿಂದ ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದಾಗ ಸುಮಾರು 66% ಶಾಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಇರಲಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ವರದಿ ತಿಳಿಸಿದೆ.

ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ (UIDSE+) ವರದಿಯು ಗುರುವಾರ ಬಿಡುಗಡೆಯಾಗಿದ್ದು, ಇದು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸ್ವಯಂಪ್ರೇರಿತ ಡೇಟಾವನ್ನು ಆಧರಿಸಿದೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 6,82,566 ಶಾಲೆಗಳು ಕಂಪ್ಯೂಟರ್‌ಗಳನ್ನು ಹೊಂದಿದ್ದರೆ, ಅವುಗಳಲ್ಲಿ 5, 04, 989 ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ ಎಂದು ವರದಿ ಹೇಳಿದೆ.

ವರ್ಷವಿಡಿ ಲಾಕ್‌ಡೌನ್ ಕಾರಣಕ್ಕೆ, ಕೊರೊನಾ ಹರಡುವ ಭೀತಿಯಿಂದ ಶಾಲೆಗಳು ಮುಚ್ಚಿದ್ದಾಗ ಆನ್‌ಲೈನ್ ತರಗತಿ ನಡೆಸುತ್ತಿದ್ದೆವು ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿತ್ತು. ಆದರೆ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕ ಇಲ್ಲದೆ ಹೇಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ.

ಇಂದಿಗೂ ದೇಶದ ಕೇವಲ 2.2% ಶಾಲೆಗಳು ಮಾತ್ರ ಡಿಜಿಟಲ್ ಲೈಬ್ರರಿಗಳನ್ನು ಹೊಂದಿವೆ ಮತ್ತು ಅವುಗಳಲ್ಲಿ 14.9% ರಷ್ಟು ಮಾತ್ರ “ಸ್ಮಾರ್ಟ್ ಕ್ಲಾಸ್‌ರೂಮ್‌ಗಳನ್ನು” ಹೊಂದಿದ್ದು, ಡಿಜಿಟಲ್ ಬೋರ್ಡ್‌ಗಳು, ಸ್ಮಾರ್ಟ್ ಬೋರ್ಡ್‌ಗಳು ಮತ್ತು ಸ್ಮಾರ್ಟ್ ಟಿವಿಗಳೊಂದಿಗೆ ಬೋಧನೆಗಾಗಿ ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.

ಆಘಾತಕಾರಿ ವಿಷಯವೆಂದರೆ ದೇಶದ ಸುಮಾರು 10.6% ಶಾಲೆಗಳು ವಿದ್ಯುತ್ ಹೊಂದಿಲ್ಲ ಮತ್ತು 23.04% ಶಾಲೆಗಳಿಗೆ ಆಟದ ಮೈದಾನಗಳಿಲ್ಲ. ಸುಮಾರು 12.7% ರಷ್ಟು ಶಾಲೆಗಳಲ್ಲಿ ಗ್ರಂಥಾಲಯಗಳು ಮತ್ತು ವಾಚನಾಲಯಗಳಿಲ್ಲ ಎಂದು ತಿಳಿದುಬಂದಿದೆ.

2021-22ರಲ್ಲಿ ಕೇವಲ 26.96% ಶಾಲೆಗಳು ವಿಶೇಷ ಅಗತ್ಯತೆಯುಳ್ಳ ಮಕ್ಕಳ ಸ್ನೇಹಿ ಶೌಚಾಲಯಗಳನ್ನು ಹೊಂದಿವೆ. ಮೆಟ್ಟಿಲುಗಳು ಮಾತ್ರವಲ್ಲದೆ ಇಳಿಜಾರಿನ ವ್ಯವಸ್ಥೆಯು ಕೇವಲ ಅರ್ಧದಷ್ಟು ಶಾಲೆಗಳಲ್ಲಿ ಮಾತ್ರ ಇದೆ ಎನ್ನಲಾಗಿದೆ.

ಆದರೆ ಈ ಎಲ್ಲಾ ಕೊರತೆಗಳ ನಡುವೆಯು ಶಾಲೆಗೆ ಸೇರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ವರದಿ ಗುರುತಿಸಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಸಂಖ್ಯೆಯು 2020-21ರಲ್ಲಿ 4.78 ಕೋಟಿಯಿಂದ 4.83 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ 2.49 ಕೋಟಿಯಿಂದ 2.51 ಕೋಟಿಗೆ ಮತ್ತು ಇತರ ಹಿಂದುಳಿದ ಜಾತಿ (ಒಬಿಸಿ) ವಿದ್ಯಾರ್ಥಿಗಳು 11.35 ಕೋಟಿಯಿಂದ 11.49 ಕೋಟಿಗೆ ಏರಿದ್ದಾರೆ ”ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ದೇಶದ ಪ್ರತಿಯೊಬ್ಬ ಮಕ್ಕಳಿಗೂ ಗುಣಮಟ್ಟದ ಉಚಿತ ಶಿಕ್ಷಣ ಒದಗಿಸಬೇಕೆಂದು ನಮ್ಮ ಸಂವಿಧಾನ ಹೇಳುತ್ತದೆ. 2009ರ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಬೇಕಿದೆ. ಆದರೆ ಶಾಲೆಗಳ ಮೂಲಸೌಕರ್ಯ, ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಮ್ಮ ಶಾಲೆಗಳು ತೀವ್ರ ಹಿಂದುಳಿದಿವೆ. ಅದರಲ್ಲಿಯೂ ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿರುವುದನ್ನು ಈ ವರದಿ ಒತ್ತಿ ಹೇಳುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಾಲೆಗಳ ಅಭಿವೃದ್ಧಿಯತ್ತ ಸರ್ಕಾರ ಗಮನವಹಿಸಬೇಕಿದೆ.

ಇದನ್ನೂ ಓದಿ; ‘ಶಿಕ್ಷಣ ಇಲಾಖೆ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ’: ಪ್ರಧಾನಿಗೆ ಪತ್ರ ಬರೆದ ರಾಜ್ಯದ 13 ಸಾವಿರ ಶಾಲೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ: ನೆಮ್ಮದಿಯ ಬದುಕಿಗಾಗಿ ಇನ್ನೂ ಹೆಣಗಾಡುತ್ತಿರುವ ಜನರು

0
ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭಗೊಂಡು ಇಂದಿಗೆ (ಮೇ 3, 2024) ಒಂದು ವರ್ಷ ಪೂರ್ಣಗೊಂಡಿದೆ. ಭಾರತದ ಈಶಾನ್ಯದಲ್ಲಿರುವ ಪ್ರಶಾಂತವಾದ ಬೆಟ್ಟ ಗುಡ್ಡಗಳಾವೃತ ಪುಟ್ಟ ರಾಜ್ಯದ ಮೇ 3, 2023ರಿಂದ ಹಿಂಸಾಚಾರದ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿದೆ....