Homeಮುಖಪುಟಮೂಡಿಗೆರೆ: ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ - ವಿಜಯ ಸಂಕಲ್ಪ ಯಾತ್ರೆ ರದ್ದು

ಮೂಡಿಗೆರೆ: ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ – ವಿಜಯ ಸಂಕಲ್ಪ ಯಾತ್ರೆ ರದ್ದು

- Advertisement -
- Advertisement -

ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಯವರ ಪರ ಮತ್ತು ವಿರೋಧಿ ಬಣದ ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ ತಳ್ಳಾಟ-ನೂಕಾಟ ನಡೆಸಿದ ಪರಿಣಾಮ ಇಂದು ಮೂಡಿಗೆರೆಯಲ್ಲಿ ನಡೆಯಬೇಕಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ರದ್ದಾಗಿದೆ.

ಇಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಆಗಮಿಸಿದ್ದರು. ಅವರು ಶೃಂಗೇರಿಯಿಂದ ಮೂಡಿಗೆರೆ ತಲುಪಿದೊಡನೆ ಕಾರ್ಯಕರ್ತರ ಗುಂಪೊಂದು ಬೇಡ ಬೇಡ ಕುಮಾರಸ್ವಾಮಿ ಬೇಡ, ಬೇಕು ಬೇಕು ಬಿಜೆಪಿ ಬೇಕು ಎಂಬ ಘೋಷಣೆಗಳನ್ನು ಕೂಗಿದರು. ಕುಮಾರಸ್ವಾಮಿ ವಿರುದ್ಧ ಫ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿ, ಕಾರಿಗೆ ಮುತ್ತಿಗೆ ಹಾಕಿದರು. ಕೂಡಲೇ ಮತ್ತೊಂದು ಗುಂಪು ‘ಬೇಕೇ ಬೇಕು ಕುಮಾರಸ್ವಾಮಿ ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಇದರಿಂದ ಬಿಗುವಿನ ವಾತವಾರಣ ನಿರ್ಮಾಣವಾಯಿತು.

ಸ್ಥಳದಲ್ಲಿ ತಳ್ಳಾಟ, ನೂಕಾಟ ನಡೆಯಿತು. ನೂಕು ನುಗ್ಗಲು  ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಯಡಿಯೂರಪ್ಪನವರು ಕಾರಿನಿಂದ ಇಳಿಯದೆ ಅಲ್ಲಿಂದ ಚಿಕ್ಕಮಗಳೂರಿಗೆ ತೆರಳಿದರು. ಸಂಕಲ್ಪ ಯಾತ್ರೆ ಮೊಟಕುಗೊಂಡಿತು. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ಎಂ.ಕೆ.ಪ್ರಾಣೇಶ್‌ ಮೊದಲಾದವರು ಇದ್ದರು ಸಹ ಪರಿಸ್ಥಿತಿ ತಿಳಿಗೊಳಿಸಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ಕೋಲಾರದಲ್ಲಿಯೂ ಸಹ ನಿರೀಕ್ಷಿತ ಜನ ಸೇರದ ಕಾರಣ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ರದ್ದಾಗಿತ್ತು. ಆ ಪಟ್ಟಿಗೆ ಮೂಡಿಗೆರೆ ಸಹ ಸೇರಿಕೊಂಡಿದೆ.

ತದನಂತರ ಪತ್ರಿಕಾ ಗೋಷ್ಟಿ ನಡೆಸಿದ ಎಂ.ಪಿ ಕುಮಾರಸ್ವಾಮಿಯವರು “ನಾನೊಬ್ಬ ದಲಿತ ಎನ್ನುವ ಕಾರಣದಿಂದ ಪಕ್ಷದಲ್ಲಿ ನನ್ನ ವಿರುದ್ದ ಕೆಲಸವರು ಪಿತೂರಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ನನ್ನಿಂದಾಗಿ ಪಕ್ಷದ ನಾಯಕರಿಗೆ ಮುಜುಗರ ಆಗಿದ್ದಕ್ಕೆ ಕ್ಷಮೆ ಯಾಚಿಸಿರುವ ಅವರು, ಕ್ಷೇತ್ರದಲ್ಲಿ ಬಹುತೇಕ ವಿಶ್ವಾಸ ನನಗಿದೆ. ಆದರೆ ಕೆಲವರು ಸೋಲಿಸಬೇಕೆಂದು ಪಿತೂರಿ ಮಾಡುತ್ತಿದ್ದಾರೆ ಎಂದರು.

ಘಟನೆಯ ನಂತರವೂ ಬಿ.ಎಸ್ ಯಡಿಯೂರಪ್ಪನವರು ನನ್ನನ್ನು ಹತ್ತಿರಕ್ಕೆ ಕರೆದು ನೀನೆ ಕ್ಷೇತ್ರದ ಅಭ್ಯರ್ಥಿ ಮತ್ತು ನೀನು ಗೆಲ್ಲುತ್ತೀಯ ಎಂದು ಅಭಯ ನೀಡಿದ್ದಾರೆ ಎಂದರು.

ಶಾಸಕ ಎಂ.ಪಿ ಕುಮಾರಸ್ವಾಮಿಯವರ ವಿರುದ್ಧ ಬಿಜೆಪಿಯ ಬಣವೊಂದು ಬಹಳ ಹಿಂದಿನಿಂದಲೂ ಕೆಲಸ ಮಾಡುತ್ತಿದ್ದು, ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಬಾರದೆಂದು ಆಗ್ರಹಿಸಿದೆ. ಇನ್ನು ಎಂ.ಪಿ ಕುಮಾರಸ್ವಾಮಿಯವರು ಸಹ ಬಿಜೆಪಿ ಪಕ್ಷದೊಂದಿಗೆ ಅಷ್ಟಕಷ್ಟೆ ಎನ್ನುವ ಸಂಬಂಧ ಹೊಂದಿದ್ದಾರೆ.

ಎಂ.ಪಿ ಕುಮಾರಸ್ವಾಮಿಯವರು 2021ರಲ್ಲಿ ‘ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ವ್ಯಾಪ್ತಿಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ, ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ’ ಎಂದು ಒತ್ತಾಯಿಸಿ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಎದುರು ತಮ್ಮದೇ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಧರಣಿ ನಡೆಸಿ ಗಮನ ಸೆಳೆದಿದ್ದರು.

ಅಲ್ಲದೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಪತ್ರಿಕಾ ಹೇಳಿಕೆ ನೀಡಿ ಖಂಡಿಸಿದ್ದರು. “ಇತ್ತೀಚೆಗೆ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷಗಳು ಹೇಗಿರಬೇಕೆಂದು ಹಿಂದಿನ ನಾಯಕರು ಮಾದರಿ ಹಾಕಿಕೊಟ್ಟಿದ್ದಾರೆ. ಅಂತಹ ನಾಯಕರನ್ನು ಟೀಕಿಸುವುದು ಸರಿಯಲ್ಲ” ಎಂದಿದ್ದರು.

ಎಂ.ಪಿ ಕುಮಾರಸ್ವಾಮಿಯವರ ಕಳೆದ ವರ್ಷ ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದರು. ಆನೆ ನಿಗ್ರಹ ಕೆಲಸದಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕೆಲ ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದರು. ಹಾಗಾಗಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನೆಹರು ಕುರಿತು ಸಿ.ಟಿ ರವಿ ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪರೋಕ್ಷ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...