Homeದಲಿತ್ ಫೈಲ್ಸ್ಹತ್ರಾಸ್ ದಲಿತೆಗೊಂದು ನ್ಯಾಯ ನಿರ್ಭಯಾಗೊಂದು ನ್ಯಾಯ

ಹತ್ರಾಸ್ ದಲಿತೆಗೊಂದು ನ್ಯಾಯ ನಿರ್ಭಯಾಗೊಂದು ನ್ಯಾಯ

- Advertisement -
- Advertisement -

ಹತ್ರಾಸ್ ಮತ್ತೆ ಸೂತಕದಲ್ಲಿದೆ. ದಲಿತ ಯುವತಿಯನ್ನು ಅತ್ಯಾಚಾರಗೈದ ಠಾಕೂರ್ ಯುವಕರು ಕೊಲೆಗೈಯ್ಯಲು ಹೋಗಿ ಅದಾಗದೇ ಎಸೆದುಹೋಗಿದ್ದ ಕಾರಣ ಆ ಯುವತಿ ಆಸ್ಪತ್ರೆಯಲ್ಲಿ ದಾಖಲಾಗಿ ಎರಡು ವಾರ ಜೀವನ್ಮರಣದ ನಡುವೆ ಹೋರಾಡಿ ಕೊನೆಗೆ ಅಸು ನೀಗಿದ ನಂತರ, ಕುಟುಂಬಕ್ಕೂ ತಿಳಿಸದೇ ಸ್ವತಃ ಪೊಲೀಸರೇ ರಾತ್ರೋರಾತ್ರಿ 2:30ಕ್ಕೆ ಸುಟ್ಟುಹಾಕಿದ್ದರು. ಈಗ ಆ ಪ್ರಕರಣದ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ನಾಲ್ವರು ಆರೋಪಿಗಳಲ್ಲಿ ಮೂವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯ, ಒಬ್ಬನನ್ನು ಆರೋಪಿ ಎಂದು ತೀರ್ಪಿಟ್ಟಿದೆ. ಆಶ್ಚರ್ಯ ಮತ್ತು ದುರಂತವೆಂದರೆ, ದಲಿತ ಯುವತಿಯ ಮೇಲೆ ಅತ್ಯಾಚಾರವಾಗಿಲ್ಲವೆಂದು ಆ ತೀರ್ಪು ಹೇಳುತ್ತಿದೆ. ಮತ್ತೆ ದಲಿತರಿಗೆ ನ್ಯಾಯಾಲಯದಲ್ಲಿ ಸೋಲಾಗಿದೆ. ದಲಿತ ಯುವತಿಯ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.

ಏನಿದು ಹತ್ರಾಸ್ ಪ್ರಕರಣ

ಅಂದು ಸೆಪ್ಟೆಂಬರ್ 14, 2020. ಹತ್ರಾಸ್ ಜಿಲ್ಲೆಯ ಭೂಮಿಗರ್‍ಹಿ ಎಂಬ ಹಳ್ಳಿಯಲ್ಲಿನ ಸಾಮಾನ್ಯ ದಲಿತ (ವಾಲ್ಮೀಕಿ ಜಾತಿ) ಕುಟುಂಬವೊಂದರ ತಾಯಿ ಮತ್ತು ಮಗಳು (19 ವರ್ಷ ವಯಸ್ಸು) ಬೆಳಿಗ್ಗೆ 9:30ಕ್ಕೆ ತಮ್ಮ ಮನೆಯ ಹಸುವಿಗೆ ಮೇವು ತರಲು ಹೊಲಕ್ಕೆ ಹೋಗಿದ್ದರು. ಕೆಲಸ ಮುಗಿದು ಮನೆಗೆ ತೆರಳಬೇಕೆಂದು ತಾಯಿ ತನ್ನ ಮಗಳಿಗಾಗಿ ಹುಡುಕಿದಾಗ ಆಕೆ ಅಲ್ಲಿರಲಿಲ್ಲ. ಗಾಬರಿಗೊಂಡ ತಾಯಿ ಹೊಲದಲ್ಲೆಲ್ಲಾ ಹುಡುಕಿದಾಗ ದೂರದಲ್ಲಿ ನರಳುತ್ತಿದ್ದ ದನಿಯೊಂದು ಕೇಳುತ್ತಿತ್ತು. ಅಲ್ಲಿಗೆ ಧಾವಿಸಿದ ತಾಯಿಗೆ ಭಯಾನಕವಾದ ದೃಶ್ಯವೊಂದು ಕಾಣುತ್ತದೆ. ತನ್ನ ಮಗಳು ಅರೆಬೆತ್ತಲೆ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮಲಗಿರುವುದು ಕಂಡುಬರುತ್ತದೆ. ಆಕೆಯ ನಾಲಿಗೆಯ ತುದಿಯೂ ಕತ್ತರಿಸಿಹೋಗಿರುತ್ತದೆ. ಏನು ಮಾಡಬೇಕೆಂದು ತಿಳಿಯದ ತಾಯಿ ಗೋಳಾಡುತ್ತ ಸಹಾಯಕ್ಕಾಗಿ ಕೂಗಿಕೊಂಡರೂ ಅದು ಯಾರ ಕಿವಿಗೂ ಬೀಳದ ಕಾರಣ ತನ್ನ ಮಗನಿಗೆ ಕರೆಮಾಡಿ ಆತನನ್ನು ಕರೆಸಿಕೊಂಡು ಆಸ್ಪತ್ರೆಗಿಂತಲೂ ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಧಾವಿಸುತ್ತಾರೆ. ಅಲ್ಲಿ ಎಂದಿನಂತೆ ದೂರು ದಾಖಲಿಸಿಕೊಳ್ಳಲು ಹಿಂದುಮುಂದು ಯೋಚಿಸಿದ ಪೊಲೀಸರು ತಡವಾಗಿ ಸ್ಥಳೀಯ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ಕಳುಹಿಸುತ್ತಾರೆ. ಅಷ್ಟರಲ್ಲಿ ಈ ಸುದ್ದಿ ಹಳ್ಳಿಯನ್ನು ಬೇರೆ ರೀತಿಯಲ್ಲಿ ಮುಟ್ಟಿರುತ್ತದೆ. ವಾಲ್ಮೀಕಿ ಸಮುದಾಯದ ಯುವತಿ ತನ್ನ ಹೊಲದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂಬ ಸುಳ್ಳು ಹರಡಲಾಗುತ್ತದೆ. ಆರಂಭದಲ್ಲಿ ಪೊಲೀಸರೂ ಸಹ ಇದನ್ನೇ ಹೇಳಿದ್ದರು. ಆದರೆ ಆ ದಲಿತ ಹೆಣ್ಣು ಮಗಳು ಆಸ್ಪತ್ರೆಯಲ್ಲಿ ಪೊಲೀಸರಿಗೆ ಹಾಗೂ ಮ್ಯಾಜಿಸ್ಟ್ರೇಟರಿಗೆ ನೀಡಿದ್ದ ಹೇಳಿಕೆಯು ದಿಟ್ಟ ಪತ್ರಕರ್ತರ ಪ್ರಯತ್ನದಿಂದ ಬಹಿರಂಗಗೊಂಡಾಗ ಇಡೀ ಭಾರತಕ್ಕೆ ಸತ್ಯ ತಿಳಿದಿತ್ತು.

ಅಂದು ತಾಯಿ ಮತ್ತು ಮಗಳು ಹೊಲಕ್ಕೆ ತೆರಳಿದಾಗ ಅವರನ್ನು ಹಿಂಬಾಲಿಸಿದ್ದ ಠಾಕೂರ್ ಸಮುದಾಯದ ಸಂದೀಪ್, ರಾಮು, ಲವಕುಶ ಹಾಗೂ ರವಿ, ಈ ನಾಲ್ವರೂ ಹೊಂಚು ಹಾಕಿ ದಲಿತ ಮಗಳ ಬಾಯಿಮುಚ್ಚಿ ಹೊತ್ತೊಯ್ದಿದ್ದರು. ನಿರಾಕರಿಸಿದ್ದಕ್ಕೆ ಅವಳ ದುಪ್ಪಟ್ಟಾವನ್ನೇ ಕತ್ತಿಗೆ ಹಾಕಿ ಎಳೆದೊಯ್ದಿದ್ದರು. ಈ ಸಂದರ್ಭದಲ್ಲಿ ಆದ ಹಿಂಸೆಯಲ್ಲಿ ತನ್ನ ನಾಲಿಗೆಯನ್ನು ಕಚ್ಚಿಕೊಂಡಿದ್ದರಿಂದ ಅದು ಕತ್ತರಿಸಿತ್ತು. ಅವರು ನಡೆಸಿದ ದಾಳಿಗೆ ಆಕೆಯ ಕುತ್ತಿಗೆ ಬಳಿಯ ಬೆನ್ನುಹುರಿ ಮುರಿದಿತ್ತು. ಆಕೆಯ ದೇಹದ ಎಡ ಭಾಗ ಪ್ಯಾರಾಲಿಸಿಸ್‌ಗೆ ಈಡಾಗಿತ್ತು. ಈ ಸಮಯದಲ್ಲಿ ಆ ನಾಲ್ವರು ನೀಚರೂ ಆಕೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಹಲ್ಲೆಮಾಡಿ ಎಸೆದುಹೋಗಿದ್ದರು. ಅವಳ ಕುತ್ತಿಗೆಯಲ್ಲಿದ್ದ ದುಪ್ಪಟ್ಟಾದಿಂದ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದರಾದರೂ ಬದುಕುಳಿದಿದ್ದಳು.

ಈ ಭಯಾನಕ ಕೃತ್ಯವನ್ನು ಸ್ವತಃ ಆ ದಲಿತ ಹೆಣ್ಣು ಮಗಳು ಬಾಯಿಬಿಡುತ್ತಿದ್ದಂತೆ ಸದಾ ಮೇಲ್ಜಾತಿಯ ಪರವಾಗಿ ಕಾರ್ಯನಿರ್ವಹಿಸುವ ಯೋಗಿ ಆದಿತ್ಯನಾಥ್ ಅಥವಾ ಅಜಯ್ ಸಿಂಗ್ ಭಿಷ್ಟ್ ಸರ್ಕಾರ ಮೂಗುತೂರಿಸಲು ಆರಂಭಿಸಿತು. ಪೊಲೀಸರು ಅಲ್ಲಿಯವರೆಗೆ ದೂರು ದಾಖಲಿಸಿಕೊಳ್ಳದವರು ಸೆಪ್ಟೆಂಬರ್ 20ರಂದು ದೂರು ದಾಖಲಿಸಿಕೊಂಡರು. ಸೆಪ್ಟೆಂಬರ್ 22ಕ್ಕೆ ದಲಿತ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡರು. ಆರಂಭದಲ್ಲಿ ಆಕೆಯನ್ನು ಅಲಿಘರ್‌ನ ಜವಾಹರ್‌ಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ತದನಂತರ ಪರಿಸ್ಥಿತಿ ಗಂಭೀರವಾಯಿತೆಂದು ಅಲ್ಲಿನ ವೈದ್ಯರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದರಾದರೂ ಪೊಲೀಸರು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದರು. ಸುಮಾರು 15 ದಿನಗಳವರೆಗೆ ಜೀವನ್ಮರಣದ ನಡುವೆ ತೊಳಲಾಡಿದ ಆ ಜೀವ ಸೆಪ್ಟೆಂಬರ್ 29ಕ್ಕೆ ಅಸುನೀಗಿತು. ಉತ್ತಮ ಚಿಕಿತ್ಸೆ ದೊರೆತಿದ್ದರೆ ಬಹುಶಃ ಆ ದಲಿತ ಯುವತಿ ಉಳಿಯುತ್ತಿದ್ದಳೋ ಏನೋ. ಅಥವಾ ಉದ್ದೇಶಪೂರ್ವಕವಾಗಿಯೇ ಕೊಲ್ಲಲಾಯಿತೇ? ಗೊತ್ತಿಲ್ಲ.

ಇಡೀ ದಲಿತ ಕುಟುಂಬ ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದಾಗ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ಬೇರೆಯೇ ದುರಾಲೋಚನೆಯಲ್ಲಿ ಮುಳುಗಿತ್ತು. ದಲಿತ ಕುಟುಂಬ ತಮ್ಮ ಮಗಳ ಅಂತ್ಯಸಂಸ್ಕಾರವನ್ನು ಮರುದಿನ ಮಾಡುವುದಾಗಿ ತೀರ್ಮಾನಿಸಿ ಶೋಕದಲ್ಲಿ ಮುಳುಗಿರುವಾಗ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಂದ ಪೊಲೀಸರು ದಲಿತ ಯುವತಿಯ ಶವವನ್ನು ಭೂಮಿಗರ್‍ಹಿಗೆ ಸಾಗಿಸುವುದಾಗಿ ತಿಳಿಸಿ ಪೋಷಕರನ್ನು ಜೊತೆಯಲ್ಲಿಯೇ ಕರೆದೊಯ್ದರು. ಆದರೆ ಭೂಮಿಗರ್‍ಹಿಯಲ್ಲಿ ನಡೆದದ್ದೇ ಬೇರೆ. ಈ ಚಿತ್ರಣವನ್ನು ಬದ್ಧತೆಯುಳ್ಳ ಖಾಸಗಿ ವಾಹಿನಿಯೊಂದರ ಪತ್ರಕರ್ತೆಯ ತಂಡ ಇಡೀ ಭಾರತಕ್ಕೆ ತೋರಿಸಿತು. ಅಂದು ರಾತ್ರಿ 2:30ಕ್ಕೆ ದಲಿತ ಯುವತಿಯ ಕುಟುಂಬವನ್ನು ಒಂದು ಮನೆಯಲ್ಲಿ ಕೂಡಿ ಹಾಕಿದ ಉತ್ತರಪ್ರದೇಶದ ಪೊಲೀಸರು ಸತ್ತ ನಾಯಿಯನ್ನು ಸುಡುವಂತೆ ಒಂದಷ್ಟು ಕಟ್ಟಿಗೆಗಳನ್ನು ಗುಡ್ಡೆಹಾಕಿ ಪೆಟ್ರೋಲ್ ಸುರಿದು ಕಿಂಚಿತ್ತೂ ಅಳುಕಿಲ್ಲದಂತೆ ಆ ದಲಿತ ಹೆಣ್ಣು ಮಗಳ ಶವವನ್ನು ಕದ್ದುಮುಚ್ಚಿ ಆತುರಾತುರವಾಗಿ ಸುಟ್ಟು ಹಾಕಿದರು. ಆಕೆಯ ಕುಟುಂಬ ದಲಿತ ಸಂಪ್ರದಾಯದಂತೆ ಶವಸಂಸ್ಕಾರ ನಡೆಸುವುದಾಗಿ ಅದೆಷ್ಟೇ ಗೋಳಾಡಿದರು ಪೊಲೀಸರ ಹೃದಯ ಕರಗಲಿಲ್ಲ. ಏಕೆಂದರೆ ಆದಿತ್ಯನಾಥನ ’ಆರ್ಡರ್’ ಹಾಗಿತ್ತು. ಈ ರೀತಿ ಆ ದಲಿತ ಯುವತಿಯನ್ನು ಸುಟ್ಟುಹಾಕುವುದರೊಂದಿಗೆ ಮುಂದೆ ದೊರೆಯಬಹುದಾಗಿದ್ದ ಸಾಕ್ಷಿಗಳೆಲ್ಲವನ್ನೂ ನಾಶಗೊಳಿಸಿದ್ದರು ಪೊಲೀಸರು. ಮುಂದೆ ತನಿಖೆ ನಡೆಸಿದ ಸಿಬಿಐ ತಂಡವೂ ಸಹ ಪೊಲೀಸರ ಈ ಕೃತ್ಯವನ್ನು ವರದಿ ಮಾಡಿದೆ. ಯಾವುದೇ ಅತ್ಯಾಚಾರ ಪ್ರಕರಣದಲ್ಲಿ ಶವವನ್ನು ಹೂಳುವುದು ವೈಜ್ಞಾನಿಕವಾಗಿರುತ್ತದೆ. ಏಕೆಂದರೆ ಮುಂದೆ ಮತ್ತೆ ಆ ಶವಪರೀಕ್ಷೆ ಮಾಡುವ ಪರಿಸ್ಥಿತಿ ಬರಬಹುದಾಗಿರುತ್ತದೆ. ಮುಂದೆ ಈ ಕ್ರೌರ್ಯದ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಕೋರ್ಟಿನೆದುರು ಆದಿತ್ಯನಾಥ್ ಬಿಜೆಪಿ ಸರ್ಕಾರ ’ಜಾತಿ ಗಲಭೆ ನಡೆಯದಂತೆ ನಿರ್ಬಂಧಿಸಲು ಈ ಕೃತ್ಯವನ್ನು ಎಸಗಿದೆವು’ ಎಂದು ಸಮರ್ಥಿಸಿಕೊಂಡಿತು.

ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಬರ್ಬರ ಅತ್ಯಾಚಾರ-ಕೊಲೆ: ಪ್ರಕರಣ ನಡೆದುಬಂದು ಹಾದಿ

ಈ ಹತ್ರಾಸ್ ಫೈಲ್‌ನಲ್ಲಿ ಉತ್ತರಪ್ರದೇಶದ ಪೊಲೀಸರ ಪಾತ್ರವನ್ನು ಹೇಳದೇ ಇರಲಾಗದು. ಈ ಅಮಾನವೀಯ ಅಂತ್ಯಸಂಸ್ಕಾರ ನಡೆಸಿದ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡುತ್ತಿದ್ದಂತೆ ಪೊಲೀಸರು ಅದನ್ನು ಫೇಕ್‌ನ್ಯೂಸ್ ಎಂದರು. ಆದರೆ ಪತ್ರಕರ್ತರ ಬಳಿ ವಿಡಿಯೋ ಸಾಕ್ಷಿಗಳಿದ್ದವು. ದಿನಬೆಳಗಾಗುವುದರೊಳಗೆ ಇಡೀ ದೇಶಕ್ಕೆ ದೇಶವೇ ಈ ಕ್ರೂರತನದ ವಿರುದ್ಧ ಕೆಂಡಾಮಂಡಲವಾಯಿತು. ಆದಿತ್ಯನಾಥ್ ಸರ್ಕಾರದ ವಿರುದ್ಧ ಜನ ಬೀದಿಗಿಳಿಯುತ್ತಿದ್ದಂತೆ ಎಸ್‌ಐಟಿಯನ್ನು ರಚಿಸಲಾಯಿತು. ಆದರೂ ಪೊಲೀಸ್ ವರಿಷ್ಠಾಧಿಕಾರಿಯೇ ಬಾಯಿಗೆ ಬಂದಂತೆ ಮಾತಾಡುತ್ತಿದ್ದನು. ಸ್ವತಃ ಆ ದಲಿತ ಯುವತಿಯ ಪೋಷಕರೇ ಮರ್‍ಯಾದಾ ಹತ್ಯೆ ನಡೆಸಿದ್ದಾರೆ; ಆರೋಪಿ ಸಂದೀಪ್ ಜೊತೆಗೆ ದಲಿತ ಯುವತಿಗೆ ಸಂಬಂಧವಿತ್ತು; ಆಕೆ ಮತ್ತು ಸಂದೀಪ್ ಫೋನಿನಲ್ಲಿ ಮಾತಾಡಿದ್ದಾರೆ; ಅತ್ಯಾಚಾರ ನಡೆದೇ ಇಲ್ಲ ಎಂದರು. ಹೀಗೆ ಹಲವು ಸುಳ್ಳುಗಳನ್ನು ಹರಿಯಬಿಡಲಾಯಿತು. ಆದರೆ ಜನಾಂದೋಲನಕ್ಕೆ ಬೆದರಿದ ಆದಿತ್ಯನಾಥ್ ಬಿಜೆಪಿ ಸರ್ಕಾರ ಐವರು ಪೊಲೀಸರನ್ನು ಅಮಾನತುಗೊಳಿಸಿ ಪ್ರಕರಣವನ್ನು ಸಿಬಿಐಗೆ ನೀಡಿತು. ಇದಕ್ಕೆ ಪ್ರಮುಖ ಕಾರಣ ಮುಂದೆ ಬರುತ್ತಿದ್ದ ವಿಧಾನಸಭೆಯ ಚುನಾವಣೆಯಾಗಿತ್ತು.

ಈ ಪ್ರಕರಣದಲ್ಲಿ ಉತ್ತರಪ್ರದೇಶದ ಬಿಜೆಪಿ ಶಾಸಕರೇನು ಕಡಿಮೆ ಅನ್ಯಾಯವೆಸಗಿಲ್ಲ. ಹಲವರು ಬಹಿರಂಗವಾಗಿಯೇ ಆ ನಾಲ್ವರು ಆರೋಪಿಗಳ ಪರವಾಗಿ ನಿಂತಿದ್ದರು. ಅಕ್ಟೋಬರ್ 4ರಂದು ಬಿಜೆಪಿಯ ಮಾಜಿ ಶಾಸಕ ರಾಜವೀರ್ ಸಿಂಗ್ ಪೆಹಲ್ವಾಲಾ ನೇತೃತ್ವದಲ್ಲಿ ನೂರಾರು ಜನ ಹತ್ರಾಸಿನಲ್ಲಿ ಸೇರಿ ಆರೋಪಿಗಳ ಪರವಾಗಿ ರ್‍ಯಾಲಿ ಕೈಗೊಂಡರು. ಅಂದು ಏರ್ಪಡಿಸಿದ ಸಭೆಯಲ್ಲಿ ಬಲಪಂಥಿಯ ಸಂಘಟನೆಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಕರಣಿ ಸೇನಾ ಮತ್ತು ಭಜರಂಗ ದಳದ ಸದಸ್ಯರುಗಳು ಹಾಜರಾಗಿ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದರು. ಇವರೊಂದಿಗೆ ಆರೋಪಿಗಳ ಪರವಾಗಿ ನಿಂತ ಸಂಘಟನೆಗಳೆಂದರೆ ಕ್ಷತ್ರಿಯ ಮಹಾಸಭಾ, ರಾಷ್ಟ್ರೀಯ ಸವರ್ಣ ಸಂಘಟನೆ ಇತ್ಯಾದಿ. ಬಿಜೆಪಿಯ ಶಾಸಕ ರಂಜಿತ್ ಶ್ರೀವಾತ್ಸವ ಆರೋಪಿಗಳನ್ನು ನಿರಪರಾಧಿಗಳು ಎಂದು ಸರ್ಟಿಫಿಕೇಟ್ ನೀಡಿದನಲ್ಲದೇ ’ಇಂತಹ ಹುಡುಗಿಯರ ಶವ ಕಬ್ಬಿನ ಗದ್ದೆ, ಜೋಳದ ಹೊಲ ಅಥವಾ ಪೊದೆಗಳಲ್ಲಿಯೇ ದೊರಕುತ್ತದೆ ಏಕೆ? ಭತ್ತ ಅಥವಾ ಗೋಧಿ ಗದ್ದೆಗಳಲ್ಲಿ ಏಕೆ ದೊರಕಲಾರದು’ ಎಂಬ ನೀಚತನದ ಹಾಗೂ ಜಾತೀವಾದಿ ಹೇಳಿಕೆಯನ್ನು ನೀಡಿ ಕೃತ್ಯವನ್ನು ಸಮರ್ಥಿಸಿಕೊಂಡಿದ್ದನು. ಮತ್ತೊಬ್ಬ ಬಿಜೆಪಿ ಶಾಸಕ ಸುರೇಂದ್ರನಾಥ ಸಿಂಗ್ ’ಇಂತಹ ಕೃತ್ಯಗಳನ್ನು ತಡೆಗಟ್ಟಬೇಕಾದರೆ ಇಂತಹ ಹುಡುಗಿಯರಿಗೆ ಸಂಸ್ಕಾರ ಕಲಿಸಬೇಕು’ ಎಂದಿದ್ದನು. ಹೀಗೆ ಹತ್ರಾಸಿನ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಕೊಂದುಹಾಕಿದ ಠಾಕೂರ್ ಯುವಕರ ಪರವಾಗಿ ಆದಿತ್ಯನಾಥ ಸರ್ಕಾರ ನಿಲ್ಲಲು ಕಾರಣ ಸ್ವತಃ ಆದಿತ್ಯನಾಥ್ ಒಬ್ಬ ಠಾಕೂರ್ ಆಗಿದ್ದದ್ದೂ ಒಂದು ಕಾರಣವಾಗಿತ್ತು. ಜೊತೆಗೆ ಬಿಜೆಪಿಯದ್ದು ಇಲ್ಲಿಯವರೆಗೆ ಮೇಲ್ಜಾತಿ ಪರ ರಾಜಕಾರಣವೇ ಆಗಿರುವುದೂ ಇದಕ್ಕೇ ಕಾರಣವೇ.

ಯೋಗಿ ಆದಿತ್ಯನಾಥ್

ನಂತರದಲ್ಲಿ ಹಲವು ವಿರೋಧ ಪಕ್ಷಗಳ ನಾಯಕರು, ನಾಯಕಿಯರು ಹತ್ರಾಸ್‌ಗೆ ಭೇಟಿ ನೀಡಲು ಬಯಸಿದರಾದರೂ ಅವರಿಗೆ ಸಂತ್ರಸ್ತರನ್ನು ಸಂಪರ್ಕಿಸಲು ಆದಿತ್ಯನಾಥ್ ಸರ್ಕಾರ ಅನುವು ಮಾಡಿಕೊಡಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಕೊಲೆಯಾದಾಗ ಸಾಲುಸಾಲಾಗಿ ಮುಖ್ಯಮಂತ್ರಿಯೂ ಸೇರಿದಂತೆ ಹಲವು ಬಿಜೆಪಿ ಮಂತ್ರಿ-ಶಾಸಕರು ಭೇಟಿ ನೀಡಿ ಸಾಂತ್ವನ ಹೇಳುತ್ತಾರೆ. ಆದರೆ ಇದೇ ನ್ಯಾಯವನ್ನು ದಲಿತರಿಗೆ ಆದಿತ್ಯನಾಥ ಸರ್ಕಾರ ನೀಡಲಿಲ್ಲ. ಏಕೆಂದರೆ ಹತ್ರಾಸಿನಲ್ಲಿ ಅನ್ಯಾಯಕ್ಕೊಳಗಾದದ್ದು ದಲಿತ ಕುಟುಂಬ. ಇದೇ ಬಿಜೆಪಿಯ ನ್ಯಾಯ. ಬಿಜೆಪಿಗೆ ದಲಿತರು ಚಡ್ಡಿ ಹೊರಲು ಮಾತ್ರ ಬೇಕಲ್ಲವೇ? ನಾಚಿಕೆಗೇಡಿನ ಸಂಗತಿ ಎಂದರೆ 2022ರ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಹತ್ರಾಸಿನಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾನೆ. ಅಲ್ಲಿ ಠಾಕೂರ್ ಸಮುದಾಯದ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಇಡೀ ಮೇಲ್ಜಾತಿಗಳು ಠಾಕೂರರೊಂದಿಗೆ ಸೇರಿ, ದಲಿತ ಯುವತಿಯನ್ನು ಅತ್ಯಾಚಾರಗೈದು ಕೊಲೆ ಮಾಡಿ ಸಾಕ್ಷಿನಾಶಕ್ಕಾಗಿ ಅಮಾನವೀಯವಾಗಿ ಶವಸಂಸ್ಕಾರ ಮಾಡಿದ ಬಿಜೆಪಿಯ ಆದಿತ್ಯನಾಥ್ ಸರ್ಕಾರದ ಪರವಾಗಿ ಓಟು ಚಲಾಯಿಸಿ ದಲಿತರನ್ನು ಮತ್ತೆ ಸೋಲಿಸಿದ್ದಾರೆ. ಒಂದು ಕಾಲದಲ್ಲಿ ದಲಿತ ರಾಜಕಾರಣವನ್ನು ಇಡೀ ದೇಶಕ್ಕೆ ಪರಿಚಯಿಸಿದ್ದ ಉತ್ತರಪ್ರದೇಶ ಇಂದು ದಲಿತರ ವಿರುದ್ಧ ಮೇಲ್ಜಾತಿ ರಾಜಕಾರಣದ ಕೆಟ್ಟ ನಡೆಯನ್ನೂ ಬಹಿರಂಗಗೊಳಿಸಿದೆ.

ನ್ಯಾಯಾಲಯದ ತೀರ್ಪು ಏನು ಹೇಳುತ್ತಿದೆ?

ಹತ್ರಾಸ್ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಲಿಲ್ಲ ಹಾಗೂ ಕೊಲೆ ಮಾಡಲೇಬೇಕೆಂಬ ಉದ್ದೇಶ ಆರೋಪಿಗೆ ಇರಲಿಲ್ಲ. ಸಂದೀಪ್ ಎಂಬ ಮೃಗಕ್ಕೆ ಕೊಲೆಯ ಉದ್ದೇಶವಿಲ್ಲದೆ ಮಾಡಿದ ಕೃತ್ಯವೆಂದು ಪರಿಗಣಿಸಿ ಘಟನೆ ನಡೆದ ಎರಡು ವರ್ಷಗಳ ನಂತರ ಮಾರ್ಚ್ 2, 2023ರಂದು ಹತ್ರಾಸ್ ನ್ಯಾಯಾಲಯ ಶಿಕ್ಷೆ ನೀಡಿದೆ.

ಇದು ಹೇಗೆ ಸಾಧ್ಯವಾಯಿತು? ಸಿಬಿಐ ತನಿಖೆ ಇಷ್ಟು ಬಹಿರಂಗವಾಗಿ ಠಾಕೂರ್ ಯುವಕರ ಪರ ನಿಲ್ಲುತ್ತದೆಯೇ? ಈ ಪ್ರಶ್ನೆಗಳಿಗೆಲ್ಲ ಉತ್ತರ ಸ್ಪಷ್ಟ. ಹೌದು ಉತ್ತರಪ್ರದೇಶದ ಆದಿತ್ಯನಾಥನ ’ಹಿಂದೂ ರಾಜ್ಯ’ದಲ್ಲಿ ದಲಿತರ ಪಾಲಿಗೆ ಇದು ಸರ್ವೇ ಸಾಮಾನ್ಯದ ಸಂಗತಿ.

ಇದು ಆಗಿದ್ದಾದರೂ ಹೇಗೆ? ಸೆಪ್ಟೆಂಬರ್ 14, 2020ರಂದು ನಿತ್ರಾಣಳಾಗಿದ್ದ ತನ್ನ ಮಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದ ತಾಯಿಗೆ ಏನು ನಡೆದಿದೆ ಎಂಬ ವಿಚಾರವೇ ತಿಳಿದಿರಲಿಲ್ಲ. ಹಾಗಾಗಿ ಸಹಜವಾಗಿ ದೂರು ನೀಡಬೇಕಾದರೆ ಅತ್ಯಾಚಾರದ ಬಗ್ಗೆ ಹೇಳಿಲ್ಲ. ಇನ್ನು ಸಂತ್ರಸ್ತೆ ರಕ್ತಸ್ರಾವದಿಂದಾಗಿ ಪದೇಪದೇ ಪ್ರಜ್ಞೆ ತಪ್ಪುತ್ತಿದ್ದ ಕಾರಣ, ಆಗ ಇದ್ದ ಸ್ಥಿತಿಯಲ್ಲಿಯೇ ನಡೆದ ಘಟನೆಯನ್ನು ಹೇಳಿದ್ದಳು. ಈ ವಿಡಿಯೋ ಸಹ ವೈರಲ್ ಆಗಿದೆ. ಪೊಲೀಸರ ಪ್ರಶ್ನೆಗೆ ಆ ಸಂತ್ರಸ್ತೆ ’ಗಲಾ ದಬಾ ದಿಯ’ (ಕುತ್ತಿಗೆಯನ್ನು ಅದುಮಿದರು) ಹಾಗೂ ಯಾಕೆ ಎಂಬ ಪ್ರಶ್ನೆಗೆ ’ಜಬರ್‌ದಸ್ತಿ ನ ಕರ್‍ನೆ ದೇ ರಹಿ ತೈಕು’ (ಏಕೆಂದರೆ ಅವರು ನನ್ನ ಮೇಲೆ ಬಲಾತ್ಕಾರ ಮಾಡದಂತೆ ತಡೆಯುತ್ತಿದ್ದೆ) ಎಂದಿದ್ದಳು. ಈ ಹೇಳಿಕೆಯಲ್ಲಿ ’ಅತ್ಯಾಚಾರ’ ಎಂಬ ನೇರವಾದ ಪದ ಬಳಕೆ ಆಗಿಲ್ಲದಿರುವುದಕ್ಕೆ ಪೊಲೀಸರು ಅತ್ಯಾಚಾರಕ್ಕೆ ಸಂಬಂಧಿಸಿದ ತನಿಖೆ ಮಾಡಲಿಲ್ಲವಂತೆ! ಏನು ಮಾಡಲು ಬಲಾತ್ಕರಿಸುತ್ತಿದ್ದರು ಎಂದು ಪೊಲೀಸ್ ಮರುಪ್ರಶ್ನೆ ಹಾಕಿದ್ದರೆ ಉತ್ತರ ಸಿಕ್ಕಿಬಿಡುತ್ತಿತ್ತು ಅಥವಾ ’ಜಬರ್‌ದಸ್ತ್’ ಏನಕ್ಕೆ ಮಾಡುತ್ತಿದ್ದರು ಎಂಬ ಕನಿಷ್ಠ ಪ್ರಜ್ಞೆಯಿಂದ ಯೋಚಿಸಿದರೆ ಸಾಕಾಗಿತ್ತು. ಆದರೆ ಪೊಲೀಸರಿಗೆ ಠಾಕೂರ್ ಯುವಕರನ್ನು ಬಚಾವು ಮಾಡುವ ತುರ್ತಿರುತ್ತದೆಯಲ್ಲ?

ಇದನ್ನೂ ಓದಿ: ನನ್ನ ಸಹೋದರಿಯ ಆತ್ಮಕ್ಕೆ ವಿಶ್ರಾಂತಿ ಸಿಕ್ಕಿಲ್ಲ; ಆರೋಪಿಗಳ ಖುಲಾಸೆ ಬಳಿಕ ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯ ಸಹೋದರ ಹೇಳಿಕೆ

ಹಾಗಾಗಿ ಸೆಪ್ಟೆಂಬರ್ 22ರಂದು ಸಂತ್ರಸ್ತ ದಲಿತ ಯುವತಿ ಪ್ರಜ್ಞೆಗೆ ಮರಳುವವರೆಗೆ ನೇರವಾಗಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಿಲ್ಲ. ಅತ್ಯಾಚಾರವಾದ ಮೂರು ದಿನದ ಒಳಗಾಗಿ ಯೋನಿಯಲ್ಲಿರುವ ವೀರ್‍ಯಾಣುವಿನ ಸ್ಯಾಂಪಲ್ ಸಿಗುತ್ತದೆ. ಈ ನಡುವೆ ಸ್ನಾನ ಮಾಡಿದರೂ, ಪದೇ ಪದೇ ಮೂತ್ರ ವಿಸರ್ಜನೆ ಮಾಡಿದ್ದರೂ ವೀರ್‍ಯಾಣು ಸ್ಯಾಂಪಲ್ ಸಿಗುವುದು ಕಷ್ಟಸಾಧ್ಯ. ಹೀಗಿರುವಾಗ 11 ದಿನಗಳ ಬಳಿಕ ವಿಧಿವಿಜ್ಞಾನದವರು ಸ್ಯಾಂಪಲ್ ಶೇಖರಣೆ ಮಾಡಿದರೆ ಅತ್ಯಾಚಾರದ ಕುರುಹು ಸಿಗಲು ಸಾಧ್ಯವೇ? ಹಾಗಾಗಿ ವಿಧಿವಿಜ್ಞಾನ ವರದಿಯಲ್ಲಿ ಅತ್ಯಾಚಾರದ ಕುರುಹು ಸಿಗಲಿಲ್ಲ. ಇಲ್ಲಿ ಮತ್ತೊಂದು ಅನ್ಯಾಯವಿದೆ ಗಮನಿಸಿ. ಅತ್ಯಾಚಾರ ಪತ್ತೆ ಹಚ್ಚಲು ಸಂತ್ರಸ್ತೆಯ ಉಗುರಿನ ಸ್ಯಾಂಪಲ್, ಆಕೆಯ ಗಾಯದ ಸ್ಯಾಂಪಲ್ ಸಂಗ್ರಹಿಸಬೇಕು. ಹತ್ರಾಸಿನ ಪೊಲೀಸ್ ಎಂಬ ದುರುಳರು ಆರೋಪಿಗಳನ್ನು ಬಚಾವು ಮಾಡಲು ಆ ಸ್ಯಾಂಪಲ್‌ಗಳನ್ನೂ ಸಹ ಶೇಖರಣೆ ಮಾಡಿಲ್ಲ. ಮೊದಲ ಎಫ್‌ಐಆರ್‌ನಲ್ಲಿ ಅತ್ಯಾಚಾರ ಆಗಿರಬಹುದು ಎಂಬ ಅನುಮಾನವನ್ನೂ ಸಹ ದಾಖಲಿಸಿಲ್ಲ. ಒಂದು ಹೆಣ್ಣು ಪೊದೆಯೊಂದರಲ್ಲಿ ಬೆನ್ನುಹುರಿ ಮುರಿದು, ನಾಲಿಗೆ ಕತ್ತರಿಸಿ ರಕ್ತ ಸೋರುತ್ತಿರುವ ಹಾಗೂ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ದೊರಕಿದರೆ ಪೊಲೀಸರಿಗೆ ಅನುಮಾನ ಬಾರದೇ ಇರಲು ಹೇಗೆ ಸಾಧ್ಯ? ಅನುಮಾನ ಬಂದಿದೆ, ದಲಿತ ಯುವತಿಯಲ್ಲವೇ ’ಉತ್ತರಪ್ರದೇಶದ ಆದಿತ್ಯನಾಥನ ಸರ್ಕಾರದಲ್ಲಿ ದಲಿತ ಯುವತಿಯರಿಗೆ ಇದೆಲ್ಲ ಮಾಮೂಲು’ ಎಂದು ಮುಚ್ಚಿಹಾಕಿದ್ದಾರೆ.

ರಾಜವೀರ್ ಸಿಂಗ್ ಪೆಹಲ್ವಾಲಾ

ದಲಿತ ಯುವತಿ ಅಸುನೀಗಿದ ಬಳಿಕ ಕಳ್ಳತನದಿಂದ ಕುಟುಂಬಕ್ಕೆ ತಿಳಿಸದೇ ಶವವನ್ನು ಸುಟ್ಟುಹಾಕಿದ ಪೊಲೀಸರು ಮಾರನೇ ದಿನದಿಂದಲೇ ’ಅತ್ಯಾಚಾರ ಆಗಿಲ್ಲ’ ಎಂಬ ಸುದ್ದಿ ಹರಡಿದರು. ಬಿಜೆಪಿ ಶಾಸಕರು ಹಾಗೂ ಮುಖಂಡರು ಬೀದಿಗಿಳಿದು ಠಾಕೂರ್ ಯುವಕರ ಪರ ಪ್ರತಿಭಟನೆ ಮಾಡಿದರು. ಹೀಗೆ 19 ವರ್ಷದ ಅಮಾಯಕ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ, ಅತ್ಯಾಚಾರದಿಂದಾಗಿ ಸಾವು ಹಾಗೂ ಸತ್ತ ನಂತರ ಕಳ್ಳತನದಿಂದ ಸುಟ್ಟುಹಾಕಿದ್ದರ ಪರಿಣಾಮ ನ್ಯಾಯ ದೊರಕದಾಗಿದೆ. ಇಂತಹ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸದೇ ಇದ್ದರೆ ದಲಿತರಿಗೆ ನ್ಯಾಯ ಮರೀಚಿಕೆಯಾಗಿಯೇ ಉಳಿಯುತ್ತದೆ.

ಇಲ್ಲಿ ನಿರ್ಭಯಾಳಿಗೊಂದು ನ್ಯಾಯ ಹತ್ರಾಸಿನ ದಲಿತ ಯುವತಿಗೊಂದು ನ್ಯಾಯವಾಗುತ್ತಿದೆ. ಈಗ ಬೀದಿಯಲ್ಲಿ ಕ್ಯಾಂಡಲ್ ಹಿಡಿಯುವವರು ಕಣ್ಣಿಗೆ ಬೀಳಲಾರರು. ಅವರ ಹೃದಯ ಮತ್ತು ಬಾಯಿಯ ನಡುವೆ ಜಾತಿ ಅಡ್ಡ ಬಂದು ನಿಲ್ಲುತ್ತದೆ.

ಹತ್ರಾಸ್ ಪ್ರಕರಣದ ತೀರ್ಪನ್ನು ಅಲಹಾಬಾದ್ ಕೋರ್ಟಿನಲ್ಲಿ ಪ್ರಶ್ನಿಸಲು ತಯಾರಿ ನಡೆದಿದೆ. ಇನ್ನೊಂದಿಷ್ಟು ವರ್ಷ ದಲಿತರು ಉಸಿರು ಬಿಗಿಹಿಡಿದು ತೀರ್ಪಿಗಾಗಿ ಕಾಯಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...