Homeಮುಖಪುಟಭರೂಚ್ ಕ್ಷೇತ್ರ ಎಎಪಿಗೆ ಬಿಟ್ಟುಕೊಟ್ಟ ಕಾಂಗ್ರೆಸ್: ಕ್ಷಮೆ ಕೋರಿದ ಅಹ್ಮದ್ ಪಟೇಲ್ ಪುತ್ರಿ

ಭರೂಚ್ ಕ್ಷೇತ್ರ ಎಎಪಿಗೆ ಬಿಟ್ಟುಕೊಟ್ಟ ಕಾಂಗ್ರೆಸ್: ಕ್ಷಮೆ ಕೋರಿದ ಅಹ್ಮದ್ ಪಟೇಲ್ ಪುತ್ರಿ

- Advertisement -
- Advertisement -

ಮುಂಬರುವ ಲೋಕಸಭೆ ಚುನಾವಣೆಗೆ ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡಿದ್ದು, ಗುಜರಾತ್‌ನ ಭರೂಚ್ ಲೋಕಸಭಾ ಕ್ಷೇತ್ರವನ್ನು ಎಎಪಿಗೆ ಬಿಟ್ಟು ಕೊಡಲಾಗಿದೆ. ಇದಕ್ಕಾಗಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪುತ್ರಿ ಮುಮ್ತಾಝ್ ಪಟೇಲ್ ಕ್ಷೇತ್ರದ ಜನರ ಕ್ಷಮೆ ಕೋರಿದ್ದಾರೆ.

ಒಟ್ಟು 26 ಲೋಕಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಭರೂಚ್ ಮತ್ತು ಭಾವನಗರಲ್ಲಿ ಎಎಪಿ ಸ್ಪರ್ಧಿಸಲಿದೆ. ಉಳಿದ 24 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲಾಗಿದೆ.

ಭರೂಚ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅಹ್ಮದ್ ಪಟೇಲ್ ಅವರ ನಿಧನದ ನಂತರ ಅವರ ಪುತ್ರಿ ಮುಮ್ತಾಝ್ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಿರಿಯ ಕಾಂಗ್ರೆಸ್‌ ನಾಯಕನ ಪುತ್ರಿಯಾಗಿರುವುದರಿಂದ ಟಿಕೆಟ್ ಸಿಗುವ ಎಲ್ಲಾ ನಿರೀಕ್ಷೆಯಲ್ಲಿ ಇದ್ದರು. ಅದಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದರು. ಆದರೆ, ಹೈಕಮಾಂಡ್ ನಾಯಕರು ಕ್ಷೇತ್ರವನ್ನು ಎಎಪಿಗೆ ನೀಡಿದ್ದಾರೆ. ಇದು ಮುಮ್ತಾಝ್ ಅವರ ಬೇಸರಕ್ಕೆ ಕಾರಣವಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ಮೈತ್ರಿಯ ನಂತರವೂ ಭರೂಚ್ ಕ್ಷೇತ್ರವನ್ನು ಉಳಿಸಿಕೊಳ್ಳಲಾರದ್ದಕ್ಕೆ ಜಿಲ್ಲಾ ಮಟ್ಟದ ಪಕ್ಷದ ಮುಖಂಡರಲ್ಲಿ ಕ್ಷಮೆ ಕೋರುತ್ತೇನೆ. ನಿಮ್ಮ ಅಸಮಾಧಾನವನ್ನು ನಾನು ವರಿಷ್ಠರಿಗೆ ತಿಳಿಸುತ್ತೇನೆ. ಆದರೆ ಎಲ್ಲರೂ ಜೊತೆಗೂಡಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ. ಅಹ್ಮದ್ ಪಟೇಲ್ ಅವರು 45 ವರ್ಷಗಳ ಕಾಲ ಹಾಕಿಕೊಟ್ಟ ಪರಂಪರೆಯನ್ನು ಮುಂದುವರಿಸೋಣ” ಎಂದಿದ್ದಾರೆ.

ಅಹ್ಮದ್ ಪಟೇಲ್ ಬಳಿಕ ಭರೂಚ್ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬಂದಿದೆ. ಬಿಜೆಪಿಯ ಈ ಪ್ರಾಬಲ್ಯಕ್ಕೆ ಸವಾಲೆಸೆಯಲು ಅಹ್ಮದ್ ಪಟೇಲ್ ಅವರ ಮಕ್ಕಳಾದ ಫೈಝಲ್ ಪಟೇಲ್ ಅಥವಾ ಮುಮ್ತಾಝ್ ಪಟೇಲ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿತ್ತು. ಮುಮ್ತಾಝ್ ಪಟೇಲ್ ಮತ್ತು ಫೈಝಲ್ ಪಟೇಲ್ ಇಬ್ಬರೂ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು.

ಭರೂಚ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅಹ್ಮದ್ ಪಟೇಲ್ ಅವರು 1977, 1980, 1984, 1989ರಲ್ಲಿ ಜಯ ಸಾಧಿಸಿದ್ದರು. ನಂತರ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಿತು. 1998ರಿಂದ ಮುನ್ಸುಕ್‌ಭಾಯ್‌ ವಾಸವ ಅವರು ಈ ಕ್ಷೇತ್ರದ ಸಂಸದರಾಗಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಸೀಟು ಹಂಚಿಕೆ ಮಾಡಿಕೊಂಡ ಎಎಪಿ-ಕಾಂಗ್ರೆಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read