ಉತ್ತರ ಪ್ರದೇಶದ ಬುಲಂದ್‌ಶಹರ್‌ನ ದೇವಸ್ಥಾನವೊಂದರಲ್ಲಿ ಸೋಮವಾರ ರಾತ್ರಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಲಾಗಿದೆ.
55 ಮತ್ತು 35 ವರ್ಷದ ಸಾಧುಗಳನ್ನು ತಾತ್ಕಾಲಿಕವಾಗಿ ತಂಗಿದ್ದ ಸಣ್ಣ ದೇವಸ್ಥಾನವೊಂದರಲ್ಲಿ ನಿನ್ನೆ ಸಂಜೆ ಕತ್ತಿಯಿಂದ ಕೊಲ್ಲಲಾಯಿತು. ರಾಜು ಎಂಬ ವ್ಯಕ್ತಿಯನ್ನು ಬಂಧಿಸಿ ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಕೊಲೆಗಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೋರಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರು ಸಾಧುಗಳನ್ನು ಕೊಂದಾಗ ಆರೋಪಿ “ಹೆಚ್ಚು ಮಾದಕ ವಸ್ತುಗಳನ್ನು ಸೇವಿಸಿದ್ದನು”. ಈಗಲೂ ಆತ ಡ್ರಗ್ಸ್ ಅಮಲಿನಲ್ಲಿದ್ದು ಅದು ಇಳಿದ ತಕ್ಷಣ ಆತನನ್ನು ಪ್ರಶ್ನಿಸಲಾಗುವುದು. ಆದರೆ ಇದರಲ್ಲಿ ಯಾವುದೇ ಕೋಮುವಾದದ ಅಂಶಗಳಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಇಬ್ಬರು ಸಾಧುಗಳು ಇಲ್ಲಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ಮುರೈ ಅಲಿಯಾಸ್ ರಾಜು ಎಂಬ ವ್ಯಕ್ತಿಯು ಇಕ್ಕುಳವನ್ನು ತೆಗೆದುಕೊಂಡು ಹೋಗಿದ್ದನು. ಇದಕ್ಕಾಗಿ ಅವನನ್ನು ಪುರೋಹಿತರು ಗದರಿಸಿದರು ಮತ್ತು ನಿಂದಿಸಿದರು. ಕೊಲೆಯ ನಂತರ, ಗ್ರಾಮಸ್ಥರು ಆತನನ್ನು ಹುಡುಕುತ್ತಿದ್ದರು. ಆತ ಕನಿಷ್ಠ ಬಟ್ಟೆ ಧರಿಸಿ, ತೀವ್ರ ಮಾದಕ ದ್ರವ್ಯವನ್ನು ಸೇವಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಪುರೋಹಿತರು ಕಳ್ಳತನದ ಆರೋಪ ಮಾಡಿದಾಗಿನಿಂದ ಆ ವ್ಯಕ್ತಿ ಕೆರಳಿದನೆಂದು ಆರೋಪಿಸಲಾಗಿದೆ. ಹಾಗಾಗಿ ಆತ ಗಾಂಜಾ ತೆಗೆದುಕೊಂಡ ನಂತರ, ದೇವಸ್ಥಾನಕ್ಕೆ ಹೋಗಿ ಇಬ್ಬರನ್ನು ಕತ್ತಿಯಿಂದ ಕೊಂದಿದ್ದಾನೆ ಎನ್ನಲಾಗಿದೆ.
ಮಹಾರಾಷ್ಟ್ರದ ಪಾಲ್ಘರ್‌ನಲ್ಲಿಯೂ ಸಹ ಇಬ್ಬರು ಸಾಧುಗಳನ್ನು ಮತ್ತು ಅವರ ಕಾರಿನ ಡ್ರೈವರ್‌ನನ್ನು ಮಕ್ಕಳ ಕಳ್ಳರೆಂಬ ಆರೋಪದಲ್ಲಿ ಗುಂಪು ಥಳಿತ ಮಾಡಿ ಹತ್ಯೆ ಮಾಡಲಾಗಿತ್ತು. ಇದನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಕೋಮುವಾದಿ ಆಯಾಮ ನೀಡಲು ಬಿಜೆಪಿ ಮುಖಂಡರು ಪ್ರಯತ್ನಿಸಿದ್ದರು. ಆದರೆ ಅಲ್ಲಿನ ಬುಡಕಟ್ಟು ಜನರೇ ಕೊಂದಿದ್ದರು ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: ಪಾಲ್ಘರ್ ಘಟನೆಗೆ ಕೋಮು ಆಯಾಮವಿಲ್ಲ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸ್ಪಷ್ಟನೆ