Homeಕರ್ನಾಟಕಹಿಜಾಬ್ ವಿವಾದದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು ಸಾಮಾಜಿಕ ಪ್ರತ್ಯೇಕತೆ ಅನುಭವಿಸುತ್ತಿದ್ದಾರೆ: ಪಿಯುಸಿಎಲ್ ವರದಿ

ಹಿಜಾಬ್ ವಿವಾದದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು ಸಾಮಾಜಿಕ ಪ್ರತ್ಯೇಕತೆ ಅನುಭವಿಸುತ್ತಿದ್ದಾರೆ: ಪಿಯುಸಿಎಲ್ ವರದಿ

- Advertisement -
- Advertisement -

ರಾಜ್ಯದಲ್ಲಿ ನಡೆದ ಹಿಬಾಬ್ ವಿವಾದದಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜುಗಳು ಅವರಿಗೆ ಪರೀಕ್ಷೆಗೆ ಹಾಜರಾಗುವ ಅವಕಾಶವನ್ನು ನಿರಾಕರಿಸಿದ್ದು ಮಾತ್ರವಲ್ಲದೆ, ಅವರಿಗೆ ನೀಡಬೇಕಾದ ವಿವಿಧ ಪ್ರಮಾಣ ಪತ್ರಗಳನ್ನೂ ನೀಡುತ್ತಿಲ್ಲ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಕರ್ನಾಟಕ (PUCL-K) ಗುರುವಾರ ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ. ಹಿಜಾಬ್‌‌ ವಿವಾದ ಪ್ರಾರಂಭವಾದಾಗಿನಿಂದ ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಸಾಮಾಜಿಕ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

‘PUCL ಕರ್ನಾಟಕ’ದ ತಂಡವು ರಾಜ್ಯದಲ್ಲಿ ಹಿಜಾಬ್ ವಿವಾದ ತಳಮಟ್ಟದಲ್ಲಿ ಯಾವ ಪರಿಣಾಮ ಬೀರಿದೆ ಎಂದು ಅಧ್ಯಯನ ನಡೆಸಿದ್ದು, ‘ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಪರಿಣಾಮ: ಅಧ್ಯಯನದ ಮಧ್ಯಂತರ ವರದಿ’ ಎಂಬ ಹೆಸರಿನಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಅಧ್ಯಯನದ ಭಾಗವಾಗಿ ಪಿಯುಸಿಎಲ್ ರಾಜ್ಯದ ಹಾಸನ ಗ್ರಾಮಾಂತರ ಜಿಲ್ಲೆಯ ಒಂದು ಗ್ರಾಮ, ಹಾಸನ ಪಟ್ಟಣ, ಮಂಗಳೂರು ನಗರ, ಉಳ್ಳಾಲ , ಹೂಡೆ , ಉಡುಪಿ ಪಟ್ಟಣ ಮತ್ತು ರಾಯಚೂರು ಪಟ್ಟಣಗಳಿಗೆ ಭೇಟಿ ನೀಡಿ ಮಹಿಳಾ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಈ ವರದಿಯನ್ನು ಸಿದ್ದಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಧ್ಯಯನ ನಿರತ ಪಿಯುಸಿಎಲ್‌ ತಂಡವು ಕಾಲೇಜುಗಳ ಆಡಳಿತಾಧಿಕಾರಿಗಳನ್ನೂ, ಸಂಬಂಧಿತ ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನೂ, ಸ್ಥಳೀಯ ಪೊಲೀಸ್‌ ಅಧಿಕಾರಿಗಳನ್ನೂ ಮತ್ತು ಮುಸ್ಲಿಂ ನಾಗರಿಕ ಸಮಾಜದ ಸದಸ್ಯರನ್ನು ಭೇಟಿ ಮಾಡಿದೆ. ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆ.

ಇದನ್ನೂ ಓದಿ: ಹಿಜಾಬ್ ವಿಚಾರಣೆ ಮುಂದೂಡಲು ಒಪ್ಪದ ಸುಪ್ರೀಂ: ರಾಜ್ಯ ಸರ್ಕಾರಕ್ಕೆ ನೋಟಿಸ್

ಪಿಯುಸಿಎಲ್‌ ವರದಿಯು ಹಿಜಾಬ್ ಸಮಸ್ಯೆಯನ್ನು ಉಲ್ಬಣಗೊಳಿಸಿದ ಮಾಧ್ಯಮದ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದೆ. ಜೊತೆಗೆ ಬಿಕ್ಕಟ್ಟಿಗೆ ಅಧಿಕಾರಶಾಹಿಯ ಪ್ರತಿಕ್ರಿಯೆ ಹಾಗೂ ರಾಜ್ಯ ಹೈಕೋರ್ಟ್‌ನ ಆದೇಶದ ಪರಿಣಾಮವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಮಾನಸಿಕ ದೃಷ್ಟಿಕೋನಗಳಿಂದ ಅರ್ಥೈಸಿ ವಿಶ್ಲೇಷಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣವು ಅವರನ್ನು ಸಾಮಾಜಿಕ ಚಲನಶೀಲತೆಯತ್ತ, ಉದ್ಯೋಗದತ್ತ ಮತ್ತು ಸಬಲೀಕರಣದತ್ತ ಕೊಂಡೊಯ್ಯುವ ಹಾದಿಯೂ ಆಗಿದೆ ಎಂದು ಪಿಯುಸಿಎಲ್‌ ಹೇಳಿದೆ.

ಹಿಜಾಬ್‌ನ ಸುತ್ತಲಿನ ಸಮಸ್ಯೆಯು ಪ್ರಾರಂಭವಾದಾಗಿನಿಂದಲೂ, ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ಸಾಮಾಜಿಕ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ. ಇಷ್ಟೆ ಅಲ್ಲದೆ, ಇತರ ಸಮುದಾಯಗಳ ವಿದ್ಯಾರ್ಥಿಗಳ ಜೊತೆಗಿನ ಅವರ ಸ್ನೇಹ ಮತ್ತು ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದು, ಇದು ತೀವ್ರವಾದ ಪ್ರತ್ಯೇಕತೆ ಮತ್ತು ಖಿನ್ನತೆಯ ಭಾವನೆಯನ್ನು ಮೂಡಿಸಿದೆ ಎಂದು ಪಿಯುಸಿಎಲ್ ವರದಿ ಹೇಳಿದೆ.

ರಾಜ್ಯ ಹೈಕೋರ್ಟ್‌ನ ಆದೇಶದ ಜೊತೆಗೆ ರಾಜ್ಯ ಸರ್ಕಾರದ ನಿಷ್ಕ್ರಿಯತೆಯೂ ಸೇರಿ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕುಗಳಾದ ತಾರತಮ್ಯ ರಹಿತ ಶಿಕ್ಷಣ ಪಡೆಯುವ ಹಕ್ಕು, ಸಮಾನತೆಯ ಹಕ್ಕು, ಘನತೆಯ ಹಕ್ಕು, ಖಾಸಗಿತನದ ಹಕ್ಕು, ಅಭಿವ್ಯಕ್ತಿಯ ಹಕ್ಕು, ತಾರತಮ್ಯ ರಹಿತವಾಗಿ ಜೀವಿಸುವ ಹಕ್ಕುಗಳು ಸೇರಿದಂತೆ ಅನೇಕ ಹಕ್ಕುಗಳು, ಪ್ರಭುತ್ವದ ಸ್ವೇಚ್ಛಾಚಾರದ ನಡೆಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಪಿಯುಸಿಎಲ್‌ ಹೇಳಿದೆ.

ಇದನ್ನೂ ಓದಿ: ಖಿನ್ನತೆಯ ನಂತರ ಹಿಜಾಬ್ ಧರಿಸಲು ನಿರ್ಧಾರ: ಕಾರಣ ಬಿಚ್ಚಿಟ್ಟ ನಟಿ ಸನಾ ಖಾನ್

“ಶಿಕ್ಷಣವು, ಮೂಲಭೂತ ಹಕ್ಕು ಮಾತ್ರವಾಗಿರದೆ, ರಾಜ್ಯ ನೀತಿಯ ನಿರ್ದೇಶನ ತತ್ವಗಳ (Directive Principles of State Policy) ಅಡಿಯಲ್ಲಿ ರಾಜ್ಯದ ಬಾಧ್ಯತೆಯೂ ಆಗಿದೆ. ಅನುಚ್ಛೇದ 41ರ ಅಡಿಯಲ್ಲಿ, ರಾಜ್ಯವು ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮಿತಿಯೊಳಗೆ, ಇತರ ಹಕ್ಕುಗಳೊಂದಿಗೆಯೇ ಶಿಕ್ಷಣದ ಹಕ್ಕನ್ನು ಕೂಡ ಖಚಿತ ಪಡಿಸಿಕೊಳ್ಳಬೇಕಿದೆ” ಎಂದು ಪಿಯುಸಿಎಲ್‌ ತಿಳಿಸಿದೆ.

“ಹಿಜಾಬ್ ಧರಿಸುವ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳನ್ನು ಕೃತಕವಾಗಿಯೇ ಬೇರ್ಪಡಿಸಿ ಅವೆರಡರಲ್ಲಿ ಒಂದನ್ನು ಮಾತ್ರ ಆಯ್ದು ಕೊಳ್ಳಲು ದೂಡುವ ಮೂಲಕ ಮುಸ್ಲಿಂ ಮಹಿಳೆಯರೇನಾದರು ಹಿಜಾಬ್ ಅನ್ನು ಆಯ್ದುಕೊಂಡರೆ ಅವರ ಕನಸು ಹಾಗೂ ಅಕಾಂಕ್ಷೆಗಳು ನುಚ್ಚು ನೂರಾಗುವ ರೀತ್ಯ ಪರಿಸ್ಥಿತಿಯನ್ನು ಸೃಷ್ಠಿಸಲಾಗಿದೆ” ಎಂದು ಪಿಯುಸಿಎಲ್‌ ಆರೋಪ ಮಾಡಿದೆ.

“ಸರ್ಕಾರಿ ಸಮೀಕ್ಷೆಗಳು ಪದೇ ಪದೇ ಶಾಲೆ ಮತ್ತು ಕಾಲೇಜಿಗೆ ಸೇರುವ ಮುಸ್ಲಿಂ ಮಹಿಳೆಯರ ಶೇಕಡಾವಾರು ಪ್ರಮಾಣವು ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ. ಆದರೂ ಪ್ರಸ್ತುತ ಹಿಜಾಬ್ ಮೇಲಿನ ನಿರ್ಬಂಧಗಳು ಹೇಗೆ ಶಾಲೆ ಮತ್ತು ಕಾಲೇಜಿಗೆ ಹೋಗುವ ಮುಸ್ಲಿಂ ಮಹಿಳೆಯರ ಶಿಕ್ಷಣದ ಕಾರಣಕ್ಕೆ ಹಾನಿಯುಂಟುಮಾಡಬಹುದು” ಎಂದು ಪಿಯುಸಿಎಲ್‌‌ ಆತಂಕ ವ್ಯಕ್ತಪಡಿಸಿದೆ. ಹಿಜಾಬ್ ವಿವಾದವೂ ಸಚಾರ್ ಸಮಿತಿಯ ವರದಿಯ ನಂತರ ಉಂಟಾಗಿರುವ ಅಲ್ಪ ಪ್ರಗತಿಯನ್ನೂ ಇಲ್ಲವಾಗಿಸುವುದಕ್ಕೆ ಕಾರಣವಾಗುತ್ತದೆ ಎಂದು ಶಿಕ್ಷಣ ತಜ್ಞರು ಎಚ್ಚರಿಸಿದ್ದಾರೆ ಎಂಬುವುದನ್ನು ಪಿಯುಸಿಎಲ್ ಒತ್ತಿ ಹೇಳಿದೆ.

ಇದನ್ನೂ ಓದಿ: ಬುಲ್ಡೋಜರ್‌‌, ಹಿಜಾಬ್‌, ಬಾಬ್ರಿ ಮಸೀದಿ ಪ್ರಕರಣ: ಲಂಡನ್‌ನಲ್ಲಿ ಜಸ್ಟೀಸ್ ಚಂದ್ರಚೂಡ್‌ ಹೇಳಿದ್ದೇನು?

ಪಿಯುಸಿಎಲ್‌-ಕರ್ನಾಟಕ ಬಿಡುಗಡೆ ಮಾಡಿರುವ ವರದಿಯು ಕೆಲವು ಶಿಫಾರಸುಗಳು ಮಾಡಿವೆ:

  1. 2022 ಫೆಬ್ರವರಿ 5ರ ಸರ್ಕಾರಿ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
  2. ಈ ಆದೇಶದ ಪರಿಣಾಮವಾಗಿ ಮುಸ್ಲಿಂ ಮಹಿಳೆಯರು ಮತ್ತವರ ಕುಟುಂಬವು ಭರಿಸಿದ ನಷ್ಟಗಳ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಿ ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಬೇಕು.
  3. ಸರಕಾರ ಕೂಡಲೇ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶಿಸಲು ಅವಕಾಶ ನೀಡಬೇಕು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಅವರಿಗೆ ಸೂಕ್ತವೆನಿಸುವ ರೀತಿಯಲ್ಲಿ ವಿಶೇಷ ತರಗತಿಗಳನ್ನು ಏರ್ಪಡಿಸಬೇಕು.
  4. ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತ ಆಯೋಗವು ಸಂಬಂಧಪಟ್ಟ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳ ವಿರುದ್ಧ ಸ್ವಯಂ-ಪ್ರೇರಿತ ದೂರುಗಳನ್ನು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕ್ರಮವನ್ನು ಜರುಗಿಸಬೇಕು.
  5. ಕೆಳಗೆ ನೀಡಲಾಗಿರುವ ಎರಡೂ ರೀತಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗಳನ್ನು ಉತ್ತರದಾಯಿಯಾಗಿಸಲು ನ್ಯಾಯಾಲಯವು ನಿರ್ದೇಶನಗಳನ್ನು ನೀಡಬೇಕು:
    a. ಎಲ್ಲಾ ಸಮುದಾಯಗಳ ಸದಸ್ಯರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಸದಸ್ಯರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರ ಪ್ರತಿನಿಧಿತ್ವವನ್ನು ಹೊಂದಿರುವ ರೀತಿಯಲ್ಲಿ ಮತ್ತು ಅವರೆಲ್ಲರಿಗೂ ಕಾಲೇಜು ಅಭಿವೃದ್ಧಿ ಸಮಿತಿಗಳು ಉತ್ತರದಾಯಿಯಾಗಿಸಬೇಕು.
    b. ಕಾಲೇಜು ಅಭಿವೃದ್ಧಿ ಸಮಿತಿಗಳು ತನ್ನ ಆದೇಶವನ್ನು ಮೀರಿದ ಮತ್ತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಲಿಖಿತ ರೂಪದಲ್ಲಿ ಸೂಕ್ತ ಪರಿಹಾರವನ್ನು ಒದಗಿಸದಿರುವ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ಕಾನೂನು ರೀತಿಯಾಗಿ ಸೂಕ್ತ ಕ್ರಮವನ್ನು ಜರುಗಿಸಬೇಕು
  6. ಕರ್ನಾಟಕ ಸರ್ಕಾರವು ಕಾಲೇಜುಗಳಲ್ಲಿ ಜಾತ್ಯತೀತ ಮತ್ತು ತಾರತಮ್ಯವಿಲ್ಲದ ಕಲಿಕೆಯ ವಾತಾವರಣವನ್ನು ಖಾತ್ರಿಪಡಿಸಲು ಸೂಕ್ತ ರೀತಿಯ ಮತ್ತು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ನಂಬಿಕೆ ಮತ್ತು ಅಸ್ಮಿತೆಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು ಮತ್ತು ಈ ರೀತಿಯ ಹಕ್ಕುಗಳ ಉಲ್ಲಂಘನೆಗಳು ಮರುಕಳಿಸದಂತೆ ಕ್ರಮವಹಿಸಬೇಕು.

ಪಿಯುಸಿಎಲ್-ಕರ್ನಾಟಕ ತಂಡವು ಬಿಡುಗಡೆ ಮಾಡಿರುವ ವರದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಉಪ್ಪಿನಂಗಡಿ: ಹಿಜಾಬ್‌ಗೆ ಅವಕಾಶ ನೀಡಿ ಎಂದು ಪ್ರತಿಭಟಿಸಿದ್ದ 23 ವಿದ್ಯಾರ್ಥಿನಿಯರ ಅಮಾನತು

2021ರ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಜಾಬ್ ಧರಿಸಿ ಬಂದ ಕಾರಣಕ್ಕೆ ಆರು ಹುಡುಗಿಯರನ್ನು ತರಗತಿಗಳಿಂದ ನಿಷೇಧಿಸಿತ್ತು. ಇದರ ಬೆನ್ನಲ್ಲಿಯೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಇತರೆ ಕಾಲೇಜುಗಳೂ ಕೂಡ ಈ ರೀತಿ ನಿರ್ಬಂಧಗಳನ್ನು ಹೇರಲು ಪ್ರಾರಂಭಿಸಿದವು. ಪ್ರಕರಣಗಳು ಉಲ್ಬಣಗೊಂಡು ರಾಜ್ಯದಾದ್ಯಂತ ವ್ಯಾಪಿಸಿ ವ್ಯಾಪಕ ಹಿಂಸಾಚಾರವನ್ನೂ ಹುಟ್ಟು ಹಾಕಿತ್ತು.

ಈ ನಡುವೆ 2022ರ ಫೆಬ್ರವರಿ 5 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ಶಿಕ್ಷಣ ಸಂಸ್ಥೆಗಳಲ್ಲಿ ತಲೆಗೆ ಸ್ಕಾರ್ಫ್‌ ಧರಿಸುವುದರ ಬಗ್ಗೆ ನಿರ್ಬಂಧ ಹೇರಿತ್ತು. ಜೊತೆಗೆ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ವಾದಿಸಿ ಈ ನಿರ್ಬಂಧಗಳನ್ನು ಸಮರ್ಥಿಸಿತ್ತು.

ಇದಾದ ಐದು ದಿನಗಳ ನಂತರ ಅಂದರೆ 2022 ಫೆಬ್ರವತಿ 10 ರಂದು ರಾಜ್ಯ ಹೈಕೋರ್ಟ್‌ ವಿಶ್ವವಿದ್ಯಾನಿಲಯಗಳನ್ನು ಪುನಃ ತೆರೆಯುವಂತೆ ನಿರ್ದೇಶಿಸಿ ಮುಂದಿನ ಆದೇಶದವರೆಗೆ ಯಾವುದೇ ಧರ್ಮವನ್ನು ಆಚರಿಸುವ ವಿದ್ಯಾರ್ಥಿಗಳು ಕೇಸರಿ ಶಾಲುಗಳು, ಸ್ಕಾರ್ಫ್‌ಗಳು, ಹಿಜಾಬ್, ಧಾರ್ಮಿಕ ಧ್ವಜಗಳು ಅಥವಾ ಇನ್ನಿತರೆ ಧಾರ್ಮಿಕ ನಂಬಿಕೆಗಳನ್ನು ತರಗತಿಯೊಳಗೆ ಧರಿಸಬಾರದೆಂದು ನಿರ್ದೇಶಿಸಿತು. 2022ರ ಮಾರ್ಚ್ 15ರಂದು ಪ್ರಕರಣದ ಬಗ್ಗೆ ತೀರ್ಪು ನೀಡಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿರ್ಬಂಧವನ್ನು ಎತ್ತಿಹಿಡಿಯಿತು.

ಇದನ್ನೂ ಓದಿ: ಶಾಲೆಗಳಲ್ಲಿ ಹಿಜಾಬ್‌‌‌‌ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಇಡೀ ರಾಜ್ಯವನ್ನೇ ಇಕ್ಕಟ್ಟಿಗೆ ದೂಡಿದ ಈ ಸರಣಿ ಘಟನಾವಳಿಗಳ ಹಿನ್ನಲೆಯಲ್ಲಿ ಪಿಯುಸಿಎಲ್‌-ಕರ್ನಾಟಕ ತಂಡವು, ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ ತೀರ್ಪು ತಳಮಟ್ಟದಲ್ಲಿ ಯಾವ ರೀತಿಯ ಪರಿಣಾಮವನ್ನು ಉಂಟುಮಾಡಿದೆ ಎಂಬುದನ್ನು ಅರಿಯಲು ಈ ಅಧ್ಯಯನ ನಡೆಸಲು ತೀರ್ಮಾನಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...