Homeಕರ್ನಾಟಕಮೈಸೂರು ವಿವಿ: ಸಂಶೋಧಕರಿಗಿಲ್ಲ ಹಾಸ್ಟೆಲ್‌; ಚಾಪೆ, ದಿಂಬಿನೊಂದಿಗೆ ಪ್ರತಿಭಟನೆ

ಮೈಸೂರು ವಿವಿ: ಸಂಶೋಧಕರಿಗಿಲ್ಲ ಹಾಸ್ಟೆಲ್‌; ಚಾಪೆ, ದಿಂಬಿನೊಂದಿಗೆ ಪ್ರತಿಭಟನೆ

ಸಿಸ್ಟ್‌ಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ ವ್ಯವಸ್ಥೆ ಇಲ್ಲವಾಗಿದೆ. ಹಾಸ್ಟೆಲ್‌ನಲ್ಲಿ ಕೊಠಡಿ ಕೊರತೆ ಇರುವುದೇ ಸಮಸ್ಯೆಗೆ ಕಾರಣ ಎಂದು ಡೀನ್ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

“ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಸಿಸ್ಟ್‌ ಪ್ರವೇಶಾತಿ ಪಡೆದವರಿಗೆ ಹಾಸ್ಟೆಲ್‌ ಸೌಲಭ್ಯ ನೀಡಿಲ್ಲ” ಎಂದು ಮೈಸೂರು ವಿವಿ ಸಂಶೋಧನಾರ್ಥಿಗಳು ಹಾಗೂ ಸಿಸ್ಟ್‌ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

ಚಾಪೆ, ದಿಂಬಿನೊಂದಿಗೆ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಎದುರು ಸೇರಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಡಾ.ಎಸ್‌.ಟಿ.ರಾಮಚಂದ್ರ ವಿರುದ್ಧ ಘೋಷಣೆ ಕೂಗಿದ್ದಾರೆ.

ಸಂಶೋಧಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್‌.ಮರಿದೇವಯ್ಯ ಮಾತನಾಡಿ, “ಸಿಸ್ಟ್‌ಗೆ ಪ್ರವೇಶಾತಿ ಪಡೆದಿರುವ 150 ವಿದ್ಯಾರ್ಥಿಗಳಿಗೆ, ಸಂಶೋಧನಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ಡೀನ್‌‌ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ.

“ಹಾಸ್ಟೆಲ್‌ ಪ್ರವೇಶಾತಿಗಾಗಿ ಕಳೆದ ನಾಲ್ಕೈದು ತಿಂಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾಗಿರುವ ಡಾ.ರಾಮಚಂದ್ರ ಅವರೇ ಈ ಅವಾಂತರಗಳಿಗೆ ಕಾರಣ. ಹೀಗಾಗಿ ರಾಮಚಂದ್ರ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಹಲವು ಭಾರಿ ಪ್ರತಿಭಟನೆ ಮಾಡಲಾಗಿದೆ.  ಆದರೆ ಯಾವುದೇ ಕ್ರಮ ಜರುಗಿಸಿಲ್ಲ” ಎಂದು ದೂರಿದರು.

“ಮೈಸೂರು ವಿಶ್ವವಿದ್ಯಾನಿಲಯ ಆಡಳಿತ ದುರ್ಬಲವಾಗಿದೆ. ಎಲ್ಲರನ್ನು ಹೆದರಿಸುವ ಗೂಂಡಾಗಿರಿಯನ್ನು ರಾಮಚಂದ್ರ ಅವರು ಮಾಡುತ್ತಿದ್ದಾರೆ. ಈಗಲೂ ಕೂಡ ಹೀಗೆಯೇ ವರ್ತಿಸಿದ್ದಾರೆ. ಅವರನ್ನು ಸೇವೆಯಿಂದ ಕೂಡಲೇ ವಜಾಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಭ್ರಷ್ಟ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗೆ ಹಾಗೂ ಭ್ರಷ್ಟ ವಿವಿಗೆ ಧಿಕ್ಕಾರ” ಎಂದು ಹಾಸ್ಟೆಲ್‌ ವಂಚಿತ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ.

ವಿದ್ಯಾರ್ಥಿಕ್ಷೇಮಪಾಲನ ನಿರ್ದೇಶಕರಾದ ಡಾ.ಎಸ್‌.ಟಿ.ರಾಮಚಂದ್ರ ಅವರು, ನಾನುಗೌರಿ.ಕಾಂ ಜೊತೆಗೆ ಮಾತನಾಡಿ, “ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಈಗ ಹೆಚ್ಚಾಗಿದೆ. ಸಿಸ್ಟ್‌ನವರಿಗೆ ಪ್ರವೇಶಾತಿ ನೀಡಲು ಕೊಠಡಿಗಳ ಕೊರತೆ ಇದೆ. ಈಗ ಇರುವ ಕೊಠಡಿಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಲಾಗಿದೆ” ಎಂದು ತಿಳಿಸಿದರು.

“ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿದ್ಧವಾಗುತ್ತಿದೆ. ಹೊಸ ಹಾಸ್ಟೆಲ್‌ ಮುಂದಿನ ತಿಂಗಳು ಆರಂಭವಾಗುವ ಸಾಧ್ಯತೆ ಇದೆ. ಆದರೆ ಸಿಸ್ಟ್‌ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕೊಡಲು ಕೊಠಡಿಗಳಿಲ್ಲ. ಹಿಂದಿನ ವರ್ಷಗಳಲ್ಲಿ ಮಾಸ್ಟರ್‌ ಡಿಗ್ರಿ ಪ್ರವೇಶಾತಿ ಕಡಿಮೆ ಇತ್ತು. ಹೀಗಾಗಿ ಸಿಸ್ಟ್‌ನವರಿಗೆ ಪ್ರವೇಶಾತಿಯನ್ನು ನೀಡಲಾಗಿತ್ತು” ಎಂದರು.

“ಬಹುತೇಕರು ಮಾಸ್ಟರ್ ಡಿಗ್ರಿ ಮುಗಿಸಿಕೊಂಡು ಡಿಪ್ಲೊಮೊ ಸೇರಿದ್ದಾರೆ. ಆದರೆ ಸ್ನಾತಕೋತ್ತರ ಪದವಿ ಸೇರುತ್ತಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಪ್ರವೇಶಾತಿ ಹೆಚ್ಚಿದಂತೆ ಹಾಸ್ಟೆಲ್‌ಗಳ ಮೇಲೆ ಒತ್ತಡವೂ ಹೆಚ್ಚುತ್ತದೆ. ಹೊಸ ಹಾಸ್ಟೆಲ್‌ಗಳ ಅಗತ್ಯವಿದೆ. ಇರುವ ಹಾಸ್ಟೆಲ್‌ನಲ್ಲಿಯೇ ಪ್ರವೇಶಾತಿ ನೀಡುವುದು ಕಷ್ಟವಾಗುತ್ತದೆ” ಎಂದು ಹೇಳಿದರು.

ಹಾಸ್ಟೆಲ್‌ಗಳ ಸಾಮಾರ್ಥ್ಯದ ಕುರಿತು ಮಾಹಿತಿ ನೀಡಿದ ಅವರು, “ಬಾಯ್ಸ್‌ ಹಾಸ್ಟೆಲ್‌ಗಳ ಪೈಕಿ ಬ್ಲಾಕ್‌-1ರಲ್ಲಿ 232 ಕೊಠಡಿ ಇದೆ. 270 ಜನರಿಗೆ ಪ್ರವೇಶಾತಿ ನೀಡಬಹುದು. 427 ಜನರಿಗೆ ನೀಡಲಾಗಿದೆ. ಬ್ಲಾಕ್‌ 2ರಲ್ಲಿ 228 ಕೊಠಡಿಗಳಿವೆ. ಕಚೇರಿ ಉಪಯೋಗಕ್ಕೆ ಕೆಲವು ಕೊಠಡಿ ಬಳಸಲಾಗುತ್ತಿದೆ. 220 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಬಹುದು. ಆದರೆ 330 ಜನರನ್ನು ತುಂಬಿದ್ದೇವೆ. ಬ್ಲಾಕ್‌ 3ರಲ್ಲಿ 38 ರೂಮ್‌ಗಳಿವೆ. ಆರು ಜನರನ್ನು ಒಂದು ಕೊಠಡಿಗೆ ತುಂಬಬಹುದು. ಒಟ್ಟು 180 ಜನರಿಗೆ ಪ್ರವೇಶಾತಿ ನೀಡಬೇಕು. ನಾವು 232 ಜನರಿಗೆ ನೀಡಿದ್ದೇವೆ. ಗರ್ಲ್ಸ್ ಹಾಸ್ಟೆಲ್‌ಗಳ ಪೈಕಿ ಬ್ಲಾಕ್‌ 1ರಲ್ಲಿ 146 ಕೊಠಡಿಗಳಿವೆ. 420 ಜನರಿಗೆ ಪ್ರವೇಶಾತಿ ನೀಡಬಹುದು, 455 ಪ್ರವೇಶಾತಿ ನೀಡಿದ್ದೇವೆ. ಬ್ಲಾಕ್‌ 2ರಲ್ಲಿ 120 ರೂಮ್‌ಗಳಿವೆ. 275 ಜನರಿಗೆ ಪ್ರವೇಶಾತಿ ನೀಡಬಹುದು, 375 ವಿದ್ಯಾರ್ಥಿನಿಯರಿಗೆ ಪ್ರವೇಶಾತಿ ನೀಡಿದ್ದೇವೆ. ಬ್ಲಾಕ್‌ 3ರಲ್ಲಿ  46 ಕೊಠಡಿಗಳಿವೆ. ಆರು ಜನರು ಒಂದು ಕೊಠಡಿಯಲ್ಲಿ ಇರಬಹುದು. 280 ಜನರಿಗೆ ಪ್ರವೇಶ ನೀಡುವಲ್ಲಿ 323 ಜನರಿಗೆ ನೀಡಿದ್ದೇವೆ. ಇನ್ನು ಸಿಸ್ಟ್‌ನವರರನ್ನು ಎಲ್ಲಿಗೆ ತುಂಬಲಿ?” ಎಂದು ಪ್ರಶ್ನಿಸಿದರು.

“ಕಳೆದ ವರ್ಷ ಎಷ್ಟು ಪ್ರವೇಶಾತಿ ನೀಡಲಾಗಿದೆ” ಎಂಬುದನ್ನು ನಾನುಗೌರಿ.ಕಾಂ ಪರಿಶೀಲಿಸಲು ಯತ್ನಿಸಿದೆ. ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿರಿ: ಬೈಂದೂರು ಬಿಜೆಪಿ ಶಾಸಕನ ಒಡೆತನದ ಕಾಲೇಜಿನ ಸಿಬ್ಬಂದಿಯಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ- ಕಿರುಕುಳ ಆರೋಪ: ವಿದ್ಯಾರ್ಥಿಗಳಿಂದ ಧರಣಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...